ಕೃಷ್ಣಪ್ರಸಾದ್
“ನಮ್ಮ ತೋಟದಲ್ಲಿ 350 ಹಲಸಿನ ಗಿಡಗಳಿವೆ. ದಕ್ಷಿಣ ಭಾರತವನ್ನೆಲ್ಲಾ ಸುತ್ತಿ , ಉತ್ತಮ ತಳಿಯ ಹಲಸಿನ ಮರ ಹುಡುಕಿ, ಅದರ ಹಣ್ಣಿನ ರುಚಿ ನೋಡಿ, ಬೀಜ ಸಂಗ್ರಹಿಸಿ ತಂದು ಬೆಳೆಸಿದ ಗಿಡಗಳು. ನೋಡಬನ್ನಿ’ ಎಂದು ಕೈಲಾಸಮೂರ್ತಿಯವರು ಆಹ್ವಾನಿಸಿದಾಗ, ನನಗೆ ಅದು ಹೊಸದು ಎನಿಸಲಿಲ್ಲ. ಹಲಸು ಎಂದರೆ ಹಲಸಷ್ಟೇ ಎಂಬುದು ನನ್ನ ಅಭಿಪ್ರಾಯವಾಗಿತ್ತು.
ಕೊಳ್ಳೇಗಾಲ ಸಮೀಪದ ದೊಡ್ಡಿಂದುವಾಡಿಯ ಅವರ ತೋಟದ ಅಡಿಕೆ ಗಿಡಗಳ ನಡುವೆ ತಲೆ ಎತ್ತಿ ನಿಂತ ಹಲಸಿನ ಮರಗಳ ಸೊಬಗು ಕಂಡ ಮೇಲೆ ‘ ಪ್ರತಿಯೊಬ್ಬ ಅಡಿಕೆ ಬೆಳೆಗಾರನೂ ಈ ತೋಟವನ್ನೊಮ್ಮೆ ನೋಡಬೇಕು’ ಎನಿಸಿತು.
ಹಲಸು ನೆಟ್ಟು, ಬರ ಅಟ್ಟು!
ಎಂ.ಕೆ. ಕೈಲಾಸಮೂರ್ತಿ ಹೆಸರಾಂತ ಸಹಜ ಕೃಷಿಕರು. ಕೊಳ್ಳೇಗಾಲ ಸಮೀಪದ ದೊಡ್ಡಿಂದುವಾಡಿಯ ತಮ್ಮ ಹನ್ನೊಂದು ಎಕರೆ ತೋಟದಲ್ಲಿ ಸಹಜ ಕೃಷಿ ಮಾಡಿ ಯಶಸ್ವಿಯಾಗಿದ್ದಾರೆ.
2012 ರಲ್ಲಿ ಕರ್ನಾಟಕವನ್ನು ಕಾಡಿದ ಬರಗಾಲಕ್ಕೆ ಕೈಲಾಸಮೂರ್ತಿಯವರ ಅಡಿಕೆ ತೋಟವೂ ತತ್ತರಿಸಿತು.ಎಂದೂ ತಳ ಕಾಣದ ಅವರ ತೋಟದ ತೆರೆದ ಬಾವಿ ಆ ವರ್ಷ ಬತ್ತಿತು. ಅಡಿಕೆ ಗಿಡಗಳನ್ನು ಉಳಿಸಿಕೊಳ್ಳಲು ಕೈಲಾಸ ಮೂರ್ತಿಯವರು ಇನ್ನಿಲ್ಲದ ಪ್ರಯತ್ನ ಮಾಡಬೇಕಾಯಿತು.
ತಾವೇ ನೆಟ್ಟಿದ್ದ ಎರಡು ಬೃಹದಾಕಾರದ ಹಲಸಿನ ಗಿಡಗಳು ನೀರಿನ ಕೊರತೆಯ ಪರಿವೆ ಇಲ್ಲದೆ ನಳನಳಿಸುತ್ತಿದ್ದವು. ‘ ದುಡ್ಡಿನ ಬೆಳೆ ಬದಲು ಅನ್ನದ ಬೆಳೆ ಹಾಕಬೇಕು ಎಂದು ಆ ಕ್ಷಣ ನನಗೆ ಅನಿಸಿತು.ಅಡಿಕೆಯ ನಡುವೆ ಹಲಸು ನೆಟ್ಟು ತೋಟವನ್ನು ಶಾಶ್ವತವಾಗಿ ಹಸಿರಾಗಿ ಇಡುವ ನಿರ್ಧಾರ ಮಾಡಿದೆ’ ಎಂದು ಕೈಲಾಸಮೂರ್ತಿ ಬದಲಾವಣೆಯ ಕ್ಷಣಗಳನ್ನು ನೆನಪಿಸಿಕೊಳ್ಳುತ್ತಾರೆ.
ಹಲಸಿನ ಬಗ್ಗೆ ಅಧ್ಯಯನ ಮಾಡಲು ಶುರು ಮಾಡಿದರು. ಸ್ಥಳೀಯ ಮಾರುಕಟ್ಟೆಯಲ್ಲಿ ಅಗ್ಗದ ಬೆಲೆಗೆ ಬಿಕರಿಯಾಗುವ ಹಲಸಿನ ಸೊಳೆಯನ್ನು ನಿರ್ಜಲೀಕರಣ ಮಾಡಿ ಮಾರಾಟ ಮಾಡುವುದು ಹೆಚ್ಚು ಲಾಭಕರ ಎಂಬ ಅಭಿಪ್ರಾಯಕ್ಕೆ ಬಂದರು.ಇದಕ್ಕೆ ಸೂಕ್ತವಾಗಬಲ್ಲ ನೀಳ ತೊಳೆಯ ಹಲಸಿನ ತಳಿಗಳ ಹುಡುಕಾಟಕ್ಕೆ ಮುಂದಾದರು.
ಹಲಸಿನ ತಳಿಗಳಿಗಾಗಿ ಹುಡುಕಾಟ
ಆ ಕಾಲಕ್ಕೆ ಅಡಿಕೆ ಪತ್ರಿಕೆ, ಶ್ರೀಪಡ್ರೆಯವರು ನೇತೃತ್ವದಲ್ಲಿ ‘ ಹಲಸಿನ ಪ್ರಚಾರ’ ಶುರುಮಾಡಿತ್ತು. ಅಪರೂಪದ ಹಲಸಿನ ತಳಿಗಳು ಬೆಳಕಿಗೆ ಬರುತ್ತಿದ್ದವು. ಆ ಮಾಹಿತಿಯ ಜಾಡು ಹಿಡಿದು ಹೊರಟ ಕೈಲಾಸಮೂರ್ತಿಯವರು ಜನಪ್ರಿಯ ತಳಿಗಳಿಗೆ ಮಾತ್ರ ಜೋತು ಬೀಳದೆ, ರಸ್ತೆ ಬದಿ ಕಂಡ ಗುಣಮಟ್ಟದ ಹಲಸಿನ ಹಣ್ಣು ಗಮನಿಸಲು ಆರಂಭಿಸಿದರು.
ಅರಸೀಕೆರೆ , ಚಿಕ್ಕನಾಯಕನಹಳ್ಳಿ , ಚನ್ನರಾಯಪಟ್ಟಣ,ಮೇಲಕೋಟೆ, ಸಕ್ಕರಾಯಪಟ್ಟಣ ಹೀಗೆ ಹಲಸಿಗೆ ಹೆಸರಾದ ಪ್ರದೇಶಗಳಿಗೆಲ್ಲಾ ಭೇಟಿ ಕೊಟ್ಟರು. ಹಲಸಿಗೆ ಹೆಸರಾದ ತಮಿಳುನಾಡಿನ ಪೊನ್ನರ್ತಿಗೂ ಹೋಗಿ ಬಂದರು.
ಮೈಸೂರು ವಿಶ್ವವಿದ್ಯಾಲಯದ ಸಿಬ್ಬಂದಿ ವಸತಿ ಗೃಹದಲ್ಲಿ ಕುವೆಂಪುರವರು ನೆಡೆಸಿದ ಹಳೆಯ ಹಲಸಿನ ಮರಗಳಿವೆ ಎಂದು ಯಾರೋ ಹೇಳಿದರು.ಗುಂಡನೆಯ ಗಾತ್ರದ ಹೆಚ್ಚು ತೊಳೆಯ ಈ ಹಲಸಿನ ತಳಿಗಳ ಬೀಜ ಸಂಗ್ರಹಿಸಿಕೊಂಡರು.
‘ ಉತ್ತಮ ತಳಿಯ ಹಲಸು ಸಿಗಬಹುದು ಎಂದು ಬಿಳಿಗಿರಿ ರಂಗನ ಬೆಟ್ಟದ ಪೋಡುಗಳನ್ನೆಲ್ಲಾ ಜಾಲಾಡಿದೆ. ನನಗೆ ಸಮಾಧಾನ ಎನಿಸುವ ಒಂದೂ ಹಲಸಿನ ತಳಿ ಸಿಗಲಿಲ್ಲ’ ಕೈಲಾಸಮೂರ್ತಿ ಹೇಳುತ್ತಾರೆ.
ನೀಳನಾದ ದಪ್ಪನಾದ ತೊಳೆ, ತೆಳು ಸಿಪ್ಪೆಯ ಹಣ್ಣು, ಸಣ್ಣ ಬೀಜ, ಉತ್ತಮ ರುಚಿ…ಹೀಗೆ ಗುಣಮಟ್ಟದ ಹಲಸಿನ ತಳಿಗಳನ್ನು ಹುಡುಕತೊಡಗಿದರು. ಉತ್ತಮ ಎನಿಸಿದ ಹಲಸಿನ ಹಣ್ಣು ತಿನ್ನುವುದು; ಸಮಾಧಾನ ಎನಿಸಿದರೆ ಅದರ ಬೀಜ ಸಂಗ್ರಹಿಸಿಕೊಳ್ಳುವುದು. ಸಂಗ್ರಹಿಸಿದ ಬೀಜಗಳನ್ನು ನರ್ಸರಿ ಕವರ್ ಗಳಲ್ಲಿ ಹಾಕಿ ಗಿಡ ಬೆಳೆಸುವುದೇ ಕಾಯಕವಾಯಿತು.
ಇತ್ತೀಚಿನ ವರ್ಷಗಳಲ್ಲಿ ಶೀಘ್ರ ಕಟಾವಿಗೆ ಬರುವ ಹಲಸಿನ ಕಸಿ ಗಿಡಗಳನ್ನು ನೆಡುವುದು ವಾಡಿಕೆ. ಆದರೆ ಕೈಲಾಸಮೂರ್ತಿಯವರು ಬೀಜದಿಂದ ಗಿಡಗಳನ್ನು ಮಾಡಿ, ಬೆಳೆಸಿರುವುದು ವಿಷೇಶ. ‘ಕಸಿ ಮಾಡಿದ ಗಿಡಗಳು ತಾಯಿ ಗಿಡದ ಗುಣವನ್ನು ಉಳಿಸಿಕೊಳ್ಳುತ್ತವೆ ಎಂಬ ಮಾತನ್ನು ಒಪ್ಪುತ್ತೇನೆ. ಆದರೆ ಬೀಜದಿಂದ ಹುಟ್ಟಿದ ಗಿಡ ಹೆಚ್ಚು ಆರೋಗ್ಯಕರವಾಗಿ, ಮತ್ತು ಮಳೆಗಾಳಿಯ ಹೊಡೆತಕ್ಕೆ ತಡೆದು ಬೆಳೆಯುವ ಶಕ್ತಿ ಹೊಂದಿರುತ್ತದೆ. ಹಾಗಾಗಿ ಬೀಜದಿಂದ ಗಿಡ ಬೆಳೆಸುವ ನಿರ್ಧಾರ ಕೈಗೊಂಡೆ’ ಎನ್ನುತ್ತಾರೆ.
ಹಲಸಿನ ಗಿಡಗಳನ್ನು ಬೆಳೆಸುವುದರಲ್ಲೂ ಕೈಲಾಸಮೂರ್ತಿಯವರು ಜಾಣ್ಮೆ ತೋರಿದ್ದಾರೆ. ಕೂಲಿಕಾರ್ಮಿಕರ ಕೊರತೆ ಇರುವುದರಿಂದ, ಮನೆಯವರೇ ಹಲಸು ಕಟಾವು ಮಾಡಲು ಅನುವಾಗುವಂತೆ, ಕಾಯಿಗಳು ಸುಲಭನಾಗಿ ಕೈಗೆ ಸಿಗುವಂತೆ ಹಲಸಿನ ಮರ ಅಡ್ಡನಾಗಿ ಬೆಳೆಸುವ ಪ್ರಯೋಗ ನಡೆಸುತ್ತಿದ್ದಾರೆ.
ಕಳೆದ ನಾಲ್ಕು ವರ್ಷಗಳಿಂದ ಹಲಸಿನ ಕೊಯ್ಲು ನಡೆಯುತ್ತಿದೆ. ವರ್ಷದಿಂದ ವರ್ಷಕ್ಕೆ ಇಳುವರಿಯೂ ಹೆಚ್ಚುತ್ತಿದೆ. ಉತ್ತಮ ರುಚಿಯ ಈ ಹಲಸಿನ ಹಣ್ಣಿಗಳಿಗೆ ಗ್ರಾಹಕರು ತಾವಾಗೇ ಬೇಡಿಕೆ ಸಲ್ಲಿಸುತ್ತಿದ್ದಾರೆ.
ಅಡಿಕೆಯ ನಡುವೆ ತಲೆ ಎತ್ತಿ ನಿಂತ ಹಲಸಿನ ಮರಗಳು ಕೈಲಾಸಮೂರ್ತಿಯವರ ತೋಟವನ್ನು ಹಸಿರಾಗಿಸಿವೆ.ಭವಿಷ್ಯದಲ್ಲಿ ಅಡಿಕೆ ಬರ, ಬೆಲೆ ಕುಸಿತಕ್ಕೆ ಸಿಕ್ಕಿ ಸೋತರೂ ಹಲಸು ಕೈ ಹಿಡಿಯುತ್ತದೆ ಎಂಬ ಆತ್ಮವಿಶ್ವಾಸ ಕೈಲಾಸಮೂರ್ತಿಯವರದು.ತೋಟದ ಪಕ್ಕದ ಖಾಲಿ ಜಾಗದಲ್ಲೂ ಹಲಸು ನೆಟ್ಟು ತೋಟವನ್ನು ವಿಸ್ತರಿಸಿದ್ದಾರೆ.
ಮಡದಿ ಭ್ರಮರಾಂಭ ಮತ್ತು ಮಗ ಶಿವಕೀರ್ತಿಯವರ ಬೆಂಬಲದಿಂದ ಹಲಸಿನ ತೋಟ ಕಟ್ಟುವ ಕನಸು ಸಾಕಾರವಾಗಿದೆ ಎನ್ನುತ್ತಾರೆ.