ಡಾ.ದೇವಿಂದರ್ ಶರ್ಮಾ
ಇಂದು ನಿಮಗೆ ವಿಕ್ರಮ ಮತ್ತು ಬೇತಾಳನ ಒಂದು ಕಥೆ ಹೇಳುತ್ತೇನೆ. ‘ಕೃಷಿ ಬಿಕ್ಕಟ್ಟಿ’ಗೆ ಇದು ಹೇಗೆ ಸಮಂಜಸವಾಗಿದೆ? ಎಂದು ನೀವು ಪ್ರಶ್ನಿಸುವ ಮುನ್ನ ಈ ಕಥೆಯನ್ನೊಮ್ಮೆ ಆಲಿಸಿ.
ವಿಕ್ರಮ ತನ್ನ ಬೆನ್ನ ಮೇಲೆ ಬೇತಾಳವನ್ನು ಹೊತ್ತು ನಡೆಯುತ್ತಿದ್ದ. ವಾಡಿಕೆಯಂತೆ ಬೇತಾಳ ವಿಕ್ರಮನಿಗೆ ಒಂದು ಪ್ರಶ್ನೆ ಕೇಳುತ್ತದೆ, “ಒಬ್ಬ ತಂದೆಗೆ ಮೂವರು ಮಕ್ಕಳು. ಮೊದಲನೆಯವನು ತುಂಬಾ ಬುದ್ಧಿವಂತ ಮತ್ತು ಪ್ರತಿಭಾವಂತ; ಎರಡನೆಯನು ಎಲ್ಲ ಸಾಮಾನ್ಯ ಜನರಂತೆ ಸಾಧಾರಣ ಬುದ್ಧಿಮತ್ತೆ ಉಳ್ಳವನು; ಮತ್ತು ಕೊನೆಯ ಮಗ ಅಂಗವಿಕಲತೆಯಿಂದ ಬಳಲುತ್ತಿದ್ದವನು. ಆ ತಂದೆಯ ಬಳಿ ಒಂದು ರೊಟ್ಟಿ ಇದ್ದು ಅದನ್ನು ಮೂರೂ ಮಕ್ಕಳಿಗೆ ಹಂಚಬೇಕಾದೆ. ಈಗ ಹೇಳು ಆ ರೊಟ್ಟಿಯನ್ನು ಯಾವ ಪ್ರಮಾಣದಲ್ಲಿ ತಂದೆಯು ತನ್ನ ಮಕ್ಕಳಿಗೆ ಹಂಚಬೇಕು?”
ಈ ಕಥೆಯನ್ನು ಹೇಳಿದ್ದು ದೇಶದ ಹೆಸರಾಂತ ಪುರಾಣಶಾಸ್ತ್ರಜ್ಞ ದೇವದತ್ತ ಪಟ್ನಾಯಕ್. ಕೆಲವು ದಿನಗಳ ಹಿಂದೆ ಗುರಗಾಂವ್‌ನಲ್ಲಿ ಪ್ರಸಿದ್ಧ ಪತ್ರಕರ್ತರಾದ ಶೋಮಾ ಚೌಧರಿ ಅವರೊಂದಿಗಿನ ಸಂದರ್ಶನದ ಸಂದರ್ಭದಲ್ಲಿ ಈ ಕಥೆಯನ್ನು ಹೇಳಿದರು. ಅಲ್ಲಿದ್ದ ಪ್ರೇಕ್ಷಕರಿಗೆ ಮನೆಗೆ ಹೋದ ಬಳಿಕ ಈ ಪ್ರಶ್ನೆಯ ಬಗ್ಗೆ ಚಿಂತಿಸಬೇಕೆಂದು ಅವರು ಹೇಳಿದರು. ಆದರೆ ಶೋಮಾ ಚೌಧರಿ ತಕ್ಷಣ ಉತ್ತರಿಸಿದರು: “ಸರ್ವೇ ಸಾಮಾನ್ಯವಾಗಿ, ತಂದೆಯು ತನ್ನಲ್ಲಿರುವ ರೊಟ್ಟಿಯನ್ನು ತನ್ನ ಮೂರೂ ಮಕ್ಕಳಿಗೂ ಸಮ ಪ್ರಮಾಣದಲ್ಲಿ ಹಂಚಬೇಕು. ಅಂದರೆ ಪ್ರತಿ ಮಗನೂ ರೊಟ್ಟಿಯ ಮೂರನೇ ಒಂದು ಭಾಗವನ್ನು ಪಡೆಯುತ್ತಾನೆ.” ಅದಕ್ಕೆ ಪಟ್ನಾಯಕ್ ಪ್ರತಿಕ್ರಿಯಿಸಿದ್ದು ಹೀಗೆ: “ಇಲ್ಲ, ನಾನು ಹಾಗೆ ಯೋಚಿಸುವುದಿಲ್ಲ, ಒಬ್ಬ ಅಂಗವಿಕಲ ಮಗ ರೊಟ್ಟಿಯ ಮೂರನೇ ಒಂದು ಭಾಗವನ್ನಷ್ಟೆ ಪಡೆದರೆ ಅದು ಅವನಿಗೆ ಅಗತ್ಯವಿರುವಷ್ಟು ಪೋಷಕಾಂಶಗಳನ್ನು ಪೂರೈಸಲು ಸಾಕಾಗುವುದಿಲ್ಲ. ಆದ್ದರಿಂದ ಈ ರೀತಿಯ ಹಂಚಿಕೆಯಿಂದ ಉಪಯೋಗವಿಲ್ಲ. ಹಾಗೆಯೇ, ಮೊದಲನೆಯ ಮಗ ಮೂರನೇ ಒಂದು ಭಾಗ ರೊಟ್ಟಿಯನ್ನು ಪಡೆದರೆ ಅದು ಅವನ ಮಾನಸಿಕ ಶಾರೀರಿಕ ಸಾಮರ್ಥ್ಯವನ್ನು ಪೋಷಿಸಲು ಸಾಕಾಗುವುದಿಲ್ಲ. ಆದ್ದರಿಂದ ಆ ತಂದೆಯು ತುಂಬಾ ಲೆಕ್ಕಾಚಾರದ ನಿರ್ಣಯವನ್ನು ತೆಗೆದುಕೊಳ್ಳಬೇಕಿದೆ.”
ನಾವು ಮಾಡುವ ತಾತ್ವಿಕ ಕಲ್ಪನೆ ನಿಜವಾಗಿಯೂ ಅದೇ ನಿಟ್ಟಿನಲ್ಲಿ ವಾಸ್ತವದಲ್ಲಿ ಕೆಲಸ ಮಾಡುವುದಿಲ್ಲ ಎಂದು ದೇವದತ್ತ ಪಟ್ನಾಯಕ್ ವಿವರಿಸುತ್ತಾರೆ. ಒಂದು ಕಾರಣವನ್ನು ಸಾಧಿಸಬೇಕಾದರೆ ಅಥವಾ ಒಂದು ಗುರಿಯನ್ನು ತಲುಪಬೇಕಾದರೆ ಕೆಲವೊಂದನ್ನು ತ್ಯಾಗ ಮಾಡಲೇಬೇಕು. “ಒಂದು ವೇಳೆ ನಮ್ಮ ಉದ್ದೇಶ ಕೈಗಾರಿಕೆಯನ್ನು ಉತ್ತೇಜಿಸುವುದಾಗಿದ್ದರೆ, ಕೃಷಿವಲಯ ತನ್ನನ್ನು ತಾನು ಅರ್ಪಿಸಿಕೊಳ್ಳಬೇಕಾಗುತ್ತದೆ” ಎಂಬ ನಿಷ್ಟುರವಾದ ವ್ಯಾಖ್ಯೆಯನ್ನು ಮಾಡುತ್ತಾರೆ. ನಾನು ಕೈಗಾರಿಕೆಯನ್ನು ಪ್ರೋತ್ಸಾಹಿಸಲು ಬಯಸುತ್ತೇನೆ ಮತ್ತು ಕೃಷಿಯನ್ನೂ ಸಹ ಬದುಕಿಸುತ್ತೇನೆ ಎಂದು ನೀವು ಹೇಳಲಾಗುವುದಿಲ್ಲ. ಅದು ಸಾಧ್ಯವಿಲ್ಲ. ಇವುಗಳಲ್ಲಿ ಯಾವುದಾದರೊಂದು ವಲಯ ಪೆಟ್ಟು ತಿನ್ನಲೇಬೇಕು ಎಂದೂ ಅವರು ಹೇಳುತ್ತಾರೆ.
ಅವರು ಹೇಳುವುದು ನಿಜ. 1991 ರಲ್ಲಿ ಆರ್ಥಿಕ ಸುಧಾರಣೆಗಳನ್ನು ಪ್ರಾರಂಭಿಸಿದಂದಿನಿಂದ ಕ್ರಮವಾಗಿ ಎಲ್ಲ ಸರ್ಕಾರಗಳೂ ಮಾಡುತ್ತಾ ಬಂದಿರುವುದು ಇದನ್ನೇ. ಅಂತಾರಾಷ್ಟ್ರೀಯ ಮಟ್ಟದಲ್ಲೂ ಸಹ ಕೈಗಾರಿಕೆಯನ್ನು ಬಲಗೊಳಿಸಲು ಕೃಷಿ ಬಲಿಯಾಗುತ್ತದೆ. ವಾಸ್ತವವಾಗಿ, ನಾನು ಹಲವು ಬಾರಿ ಹೇಳಿದ್ದೇನೆ- ಆರ್ಥಿಕ ಸುಧಾರಣೆಗಳನ್ನು ಪೋಷಿಸುವಲ್ಲಿ ಕೃಷಿ ವಲಯ ತನ್ನನ್ನು ತಾನೇ ಅರ್ಪಿಸಿಕೊಂಡಿದೆ. ಮತ್ತು ಆರ್ಥಿಕ ಸುಧಾರಣೆಗಳು ನೀವೇ ತಿಳಿದಿರುವಂತೆ ಕೈಗಾರಿಕೆಗಳಿಂದ ಚಲಾಯಿಸ್ಪಡುತ್ತವೆ. ಈ ನಿಟ್ಟಿನಲ್ಲಿ ಬಹುಕಾಲದಿಂದ ನಾನು ಹೇಳುತ್ತಾ ಬಂದಿರುವುದನ್ನು ದೇವದತ್ತ ಪಟ್ನಾಯಕ್ ಪುನಃ ದೃಢಪಡಿಸುತ್ತಾರೆ. ಕೈಗಾರಿಕೆಗೆ ಅಗ್ಗದ ಕಚ್ಚಾಸಾಮಗ್ರಿಗಳನ್ನು ಒದಗಿಸುವುದಕ್ಕೆ ಮಾತ್ರ ಕೃಷಿಯ ಪಾತ್ರ ಸೀಮಿತವಾಗಿದೆ. ಅಂದರೆ, ಮನೆ ನಿವೇಶನ ಮತ್ತು ಮೂಲಭೂತ ಸೌಲಭ್ಯಗಳು ಸೇರಿದಂತೆ ಕೈಗಾರಿಗೆ ಭೂಮಿಯು ಲಭ್ಯವಾಗುವಂತೆ ಮಾಡುವುದು; ಮತ್ತು ಕೈಗಾರಿಕೆಗೆ ಬೇಕಾದ ಅಗ್ಗದ ಕಾರ್ಮಿಕರನ್ನು ಒದಗಿಸುವುದು.
ನೀತಿ ರೂಪಿಸುವವರ ದೃಷ್ಠಿಯಲ್ಲಿ ರೈತರು ಕೇವಲ ಎರಡು ಪಾತ್ರವನ್ನಷ್ಟೆ ನಿರ್ವಹಿಸುತ್ತಾರೆ; ಒಂದು, ಚುನಾವಣೆಯಲ್ಲಿ ಮತ ಹಾಕುವ ಮತಬ್ಯಾಂಕ್ ಆಗಿ, ಇನ್ನೊಂದು ಭೂಮಿಯನ್ನು ಒದಗಿಸುವ ಭೂ ಬ್ಯಾಂಕ್ ಆಗಿ.
ಬೇತಾಳಕ್ಕೆ ವಿಕ್ರಮ ಏನು ಉತ್ತರ ಕೊಟ್ಟನೊ ನನಗೆ ತಿಳಿದಿಲ್ಲ. ಆದರೆ ನಿಮ್ಮ ಬಿಡುವಿನ ವೇಳೆಯಲ್ಲಿ ನೀವು ಈ ವಿಷಯದ ಸುತ್ತ ಚಿಂತಿಸಿದರೆ ದೇವದತ್ತ ಪಟ್ನಾಯಕ್ ಅವರು ನಿಜವಾಗಿಯೂ ಒಂದು ಬಹುದೊಡ್ಡ ಸಂದೇಶ ಕೊಟ್ಟಿರುವುದನ್ನು ನೀವು ಒಪ್ಪುತ್ತೀರಿ. ನಿಮ್ಮ ಮುಂದೆ ಎರಡು ಉದಾಹರಣೆಗಳನ್ನು ನೀಡುವ ಮೂಲಕ ಪಟ್ನಾಯಕ್ ಎಷ್ಟು ಸರಿ ಎಂದು ವಿಷದಪಡಿಸುತ್ತೇನೆ. 90 ರ ದಶಕದ ಆರಂಭದಲ್ಲಿ ನಾನು ‘ಇಂಡಿಯನ್ ಎಕ್ಸ್ ಪ್ರೆಸ್’ನ ವರದಿಗಾರನಾಗಿದ್ದೆ. ಆ ಸಮಯದಲ್ಲಿ ಕೃಷಿ ವೆಚ್ಚಗಳ ಮತ್ತು ಬೆಲೆಗಳ ಆಯೋಗ (CACP)) ಹೊರಡಿಸುತ್ತಿದ್ದ ಮುಂಗಾರು ವರದಿಯನ್ನು ಗಮನಿಸುತ್ತಿದ್ದೆ. ಪ್ರತಿ ಬೆಳೆಯ ಸಮಯ, ಆಯಾ ಬೆಳೆಗೆ ಕನಿಷ್ಠ ಬೆಂಬಲ ಬೆಲೆಗಾಗಿ CACP ಒಂದು ವರದಿಯನ್ನು ಹೊರತರುತ್ತದೆ. ವರ್ಷಗಳಾಚೆಗೆ ಟೆಕ್ಸ್ ಟೈಲ್ ಉದ್ಯಮವನ್ನು ಪೈಪೋಟಿಯಲ್ಲಿಡಲು ಹತ್ತಿ ಬೆಳೆಗಾರರು ಜಾಗತಿಕ ಮಾರುಕಟ್ಟೆ ಬೆಲೆಗಿಂತ 20% ಕಡಿಮೆ ಬೆಲೆಯನ್ನು ಪಡೆಯುತ್ತಿದ್ದರು ಎಂದು ಈ ವರದಿಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಅದೇ ನೀತಿಯನ್ನು ಇಂದಿಗೂ ಅನುಸರಿಸಲಾಗುತ್ತಿದೆ.
ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಬಟ್ಟೆ ಉದ್ಯಮವನ್ನು ಬದುಕಿಸಲು ಹತ್ತಿ ಬೆಳೆಗಾರರು 20% ಕಡಿಮೆ ಬೆಲೆಯನ್ನು ಪಡೆಯುತ್ತಿದ್ದಾರೆ. ಅಂತಾರಾಷ್ಟ್ರೀ ಮಟ್ಟದಲ್ಲಿಯೂ ಹತ್ತಿಯ ಬೆಲೆ ಕಡಿಮೆಯೇ ಇದೆ. ಏಕೆಂದರೆ ಅಮೆರಿಕಾ ತನ್ನ ದೇಶದ ಹತ್ತಿ ಬೆಳೆಗಾರರಿಗೆ ಸದೃಢವಾದ (ದೊಡ್ಡ ಮೊತ್ತದ) ಸಹಾಯಧನವನ್ನು ನೀಡುತ್ತದೆ. 2005 ರಲ್ಲಿ ನಡೆದ ಹಾಂಗ್ ಕಾಂಗ್ ನ WTO ಸಭೆಯ ಸಮಯದಲ್ಲಿ, ನಾನು ಮಾಡಿದ ಒಂದು ವಿವರಣಾತ್ಮಕ ಅಧ್ಯಯನದಲ್ಲಿ ‘ಯು.ಎಸ್ ಸಬ್ಸಿಡಿಗಳು ಹೇಗೆ ಅಂತಾರಾಷ್ಟ್ರೀಯ ಹತ್ತಿ ಬೆಲೆಯನ್ನು ಕುಸಿಯುವಂತೆ ಮಾಡಿವೆ, ಇದರ ಫಲವಾಗಿ ಭಾರತ ಮತ್ತು ಪಶ್ಚಿಮ ಆಫ್ರಿಕಾದ ಹತ್ತಿ ಬೆಳೆಗಾರರು ಅಸಮರ್ಥ ಉತ್ಪಾದಕರಂತೆ ಕಾಣುತ್ತಿದ್ದಾರೆ’ ಎಂಬುದನ್ನು ವಿವರಿಸಿದ್ದೆ. “ನಿಮ್ಮ ಸಬ್ಸಿಡಿಗಳು ನಮ್ಮ ರೈತರನ್ನು ಕೊಲ್ಲುತ್ತವೆ” ಎಂಬ ಶೀರ್ಷಿಕೆಯಡಿಯಲ್ಲಿ ‘ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆಯಲ್ಲಿ ಒಂದು ಪತ್ರ ಪ್ರಕಟಗೊಂಡಿತ್ತು. ಯು.ಎಸ್ ಸಬ್ಸಿಡಿಗಳು ಆಫ್ರಿಕಾದಲ್ಲಿನ ಹತ್ತಿ ಬೆಳೆಗಾರರನ್ನು ನಾಶಪಡಿಸಲು ಹೇಗೆ ಹವಣಿಸುತ್ತಿವೆ ಎಂಬುದನ್ನು ಪಶ್ಚಿಮ ಆಫ್ರಿಕಾದ 4 ದೇಶಗಳ ರಾಜ್ಯಕೇಂದ್ರಗಳು ವಿಫುಲವಾಗಿ ಸ್ಪಷ್ಟಪಡಿಸಿದವು. ಸಬ್ಸಿಡಿಯ ಮೊತ್ತದ ಬಗ್ಗೆಯೂ ಅಲ್ಲಿ ಮಾತನಾಡಲಾಗಿತ್ತು. 2005 ರಲ್ಲಿ ಯು.ಎಸ್ ಕೇವಲ ತನ್ನ 20,000 ಹತ್ತಿ ಬೆಳೆಗಾರರಿಗೆ 3.9 ಬಿಲಿಯನ್ ಡಾಲರ್ ಮೊತ್ತದ ಬೆಳೆಯನ್ನು ಉತ್ಪಾದಿಸಲು 4.7 ಬಿಲಿಯನ್ ಡಾಲರ್ ಮೊತ್ತದ ಹಣವನ್ನು ಒದಗಿಸಿತ್ತು.
ಅಷ್ಟೊಂದು ದೊಡ್ಡ ಮೊತ್ತದ ಹತ್ತಿ ಸಬ್ಸಿಡಿಯನ್ನು ಮೊದಲು ಒದಗಿಸಿದ್ದು ಯು.ಎಸ್ ಬಟ್ಟೆ ಉದ್ಯಮವನ್ನು ಬದುಕಿಸುವ ಸಲುವಾಗಿ. ವಾಸ್ತವದಲ್ಲಿ ರೈತರಿಗೆ ಸಹಾಯ ಮಾಡುವ ಉದ್ದೇಶವೇನೂ ಇರಲಿಲ್ಲ, ಆದರೆ ನಿಜಾರ್ಥದಲ್ಲಿ ಈ ಹಣವನ್ನು ಬಟ್ಟೆ ಉದ್ಯಮಕ್ಕೆ ಪ್ರೋತ್ಸಾಹಧನವೆಂಬಂತೆ ಉಪಯೋಗಿಸುವುದಾಗಿತ್ತು. ಈ ಹತ್ತಿ ಸಬ್ಸಿಡಿಗಳು ತನ್ನ ಸರಹದ್ದಿನಲ್ಲಿ ಜಾಗತಿಕ ಬೆಲೆಯನ್ನು ತಗ್ಗಿಸಿದವು, ಅದರಿಂದ ಭಾರತ ಮತ್ತು ಆಫ್ರಿಕಾ ದೇಶಗಳ ರೈತರು ಬೆಲೆಯನ್ನು ಕಳೆದುಕೊಳ್ಳಬೇಕಾಯಿತು. ಅಗ್ಗದ ಮತ್ತು ಅತಿ ಹೆಚ್ಚು ಸಹಾಯಧನ ಹೊಂದಿದ ಬಟ್ಟೆಗಳು ಭಾರತ, ಚೀನಾ ಮತ್ತು ಇತರೆ ಅಭಿವೃದ್ಧಿಶೀಲ ದೇಶಗಳಿಗೆ ಆಮದಾದವು. ಭಾರತದ ವಿಷಯಕ್ಕೆ ಬಂದರೆ, ಆತ್ಮಹತ್ಯೆ ಮಾಡಿಕೊಂಡ ರೈತರಲ್ಲಿ ಶೇ.70 ರಷ್ಟು ಹತ್ತಿ ಬೆಳೆಗಾರರೇ ಆಗಿದ್ದಾರೆ;. ಈ ರೈತರು ಬಟ್ಟೆ ಉದ್ಯಮವನ್ನು ತೇಲಿಸಲು ತಮ್ಮ ಹಕ್ಕುಬದ್ಧ ಆದಾಯವನ್ನು ನಿರಾಕರಿಸುವಂತೆ ಮಾಡಿದ ಉದ್ದೇಶಪೂರ್ವಕ ನೀತಿಯ ಬಲಿಪಶುಗಳಾಗಿದ್ದಾರೆ.
ಕೈಗಾರಿಕಾ ಅಭಿವೃದ್ಧಿಯ ಬಲಿಪೀಠದಲ್ಲಿ ರೈತರು ತಾವೇ ಆಹುತಿಯಾಗಿದ್ದಾರೆ. ಪ್ರತಿವರ್ಷ ಘೋಷಿಸುತ್ತಿರುವ ಕನಿಷ್ಠ ಬೆಂಬಲ ಬೆಲೆ (MSP) ನಿಜವಾಗಿ ಉಳುಮೆಯ ವೆಚ್ಚಕ್ಕಿಂತ ಕಡಿಮೆಯೇ ಇದೆ. CACP ಈ ಸತ್ಯಸಂಗತಿಯನ್ನು ಒಪ್ಪಿಕೊಳ್ಳುತ್ತದೆ, ಆದರೆ ಇದರ ಪಾತ್ರ ರೈತರು ಪಡೆದ ಮೊತ್ತ ಮತ್ತು ಗ್ರಾಹಕರು ನೀಡುವ ಬೆಲೆಯ ನಡುವೆ ಸಮತೋಲನ ಸಾಧಿಸುವುದಾಗಿದೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, MSP ಯನ್ನು ಕಡಿಮೆ ಇಡುವುದು ಗ್ರಾಹಕರು ಹೆಚ್ಚು ಪಾವತಿಸುವಂತಿಲ್ಲ ಎಂಬ ಭರವಸೆ ನೀಡಿದಂತೆ. ಇದರ ಅರ್ಥ ಗ್ರಾಹಕರನ್ನು ಸಂತೋಷವಾಗಿಡಲು ರೈತರನ್ನು ಉದ್ದೇಶಪೂರ್ವಕವಾಗಿ ಬಡವನನ್ನಾಗಿಸಲಾಗಿದೆ. ವರ್ಷದಿಂದ ವರ್ಷಕ್ಕೆ ನಿಜವಾಗಿಯೂ ರೈತರು ಗ್ರಾಹಕರಿಗೆ ಸಹಾಯಧನವನ್ನು ಕೊಡುತ್ತಿದ್ದಾರೆಂದಲ್ಲವೇ ಇದರ ಅರ್ಥ?
ನಾನು ಸಂಶೋಧಕರ ಒಂದು ತಂಡದೊಂದಿಗೆ ಮಾಡಿದ ಅಧ್ಯಯನದ ಅಂತಿಮ ಘಟ್ಟದಲ್ಲಿ, ಭಾರತೀಯ ರೈತರು ಪ್ರತಿವರ್ಷ 12.60 ಲಕ್ಷ ಕೋಟಿಗಳಷ್ಟು ಮೊತ್ತದ ಹಣವನ್ನು ಕಳೆದುಕೊಳ್ಳುವ ವ್ಯವಸ್ಥೆಗೆ ಹೊಂದಿಕೊಂಡಿದ್ದಾರೆ. ಕೈಗಾರಿಕೆ ಮತ್ತು ಗ್ರಾಹಕರನ್ನು ಸಂತೋಷವಾಗಿಡಲು ಪ್ರತಿವರ್ಷ ಇಷ್ಟು ಹಣವನ್ನು ರೈತರಿಂದ ಕಸಿದುಕೊಳ್ಳಲಾಗುತ್ತಿದೆ. ಇದು ಕೈಗಾರಿಕೆಯನ್ನು ಬದುಕಿಸಲು ಕೃಷಿ ಮಾಡುತ್ತಿರುವ ಆರ್ಥಿಕ ಬಲಿದಾನದ ವಿಸ್ತರಣೆ.