ಏಪ್ರಿಲ್ 17 – ಅಂತಾರಾಷ್ಟ್ರೀಯ ರೈತ ಹೋರಾಟ ದಿನ” ಲಾ ವಯಾಕ್ಯಾಂಪೆಸಿನಾ

ಏಪ್ರಿಲ್ 17 – ಅಂತಾರಾಷ್ಟ್ರೀಯ ರೈತ ಹೋರಾಟ ದಿನ” ಲಾ ವಯಾಕ್ಯಾಂಪೆಸಿನಾ
Spread the love

ನಾಗೇಶ್ ಕೆ.ಎನ್.

ಬದುಕು, ಅಸ್ಥಿತ್ವ, ಊರುಕೇರಿ, ಭೂಮಿ, ನೀರು ಮತ್ತು ಬೀಜದ ಹಕ್ಕು ಪ್ರತಿಪಾದಿಸಲು ಅಥವಾ ಪುನಃ ಸ್ಥಾಪಿಸಲು ರೈತರ ಹೋರಾಟ ಜಗತ್ತಿನಾದ್ಯಂತ ನಡೆದಿದೆ. ಮುಂದುವರೆದಿದೆ. ವಿಶ್ವದಾದ್ಯಂತ ಎಲ್ಲಾ ರೈತ ಚಳವಳಿಗಳಿಗೆ ಏಪ್ರಿಲ್ 17 ಮಹತ್ವದ ಹೋರಾಟದ ದಿನ. ಅಂದು ಅಂತಾರಾಷ್ಟ್ರೀಯ ರೈತ ಹೋರಾಟ ದಿನಾಚರಣೆ.

ಇದೀಗ ನಿಮ್ಮೊಂದಿಗೆ ಈ ವಿಚಾರ ಹಂಚಿಕೊಳ್ಳುವ ಹೊತ್ತಿಗೆ  ಇಪ್ಪತ್ತು  ವರ್ಷಗಳ ಹಿಂದೆ ನಾನು ಅಂತಾರಾಷ್ಟ್ರೀಯ ರೈತ ಹೋರಾಟ ದಿನಾಚರಣೆ ಘೋಷಿಸಿದ್ದು ಯಾರು, ಯಾವ ಕಾರಣಕ್ಕಾಗಿ ಎಂದು ಬರೆದು ಬಿತ್ತಿಗಳನ್ನು ಮಾಡಿಸಿ ಹಂಚಿದ್ದ ನೆನಪಾಗುತ್ತಿದೆ.

1994. ದಕ್ಷಿಣಅಮೇರಿಕಾದ ಭೂರಹಿತ ಕಾರ್ಮಿಕರ ಚಳವಳಿ (ಎಂ.ಎಸ್.ಟಿ)ಯ ಸುಮಾರು 1500 ಚಳವಳಿಕಾರರು ದೊಡ್ಡ ಜಮೀನ್ದಾರರಿಗೆ ಸೇರಿದ ಯಾವುದೇ ಕೃಷಿ ಚಟುವಟಿಕೆ ಇಲ್ಲದ ಬರಡು ಭೂಮಿಯನ್ನು ತಮ್ಮ ವಶಕ್ಕೆ ತೆಗೆದುಕೊಂಡು ಉತ್ತು ಬಿತ್ತು ಬದುಕಲು ತಯಾರಿ ನಡೆಸಿಕೊಂಡರು. ಎಂದಿನಂತೆ ಸರ್ಕಾರ, ಪೊಲೀಸು, ಮಿಲಿಟರಿ, ಜಮೀನ್ದಾರರು ಕಾರ್ಮಿಕರನ್ನು ಗದರಿಸಿ ಒದ್ದೋಡಿಸಿದರು. ಅಂದಿನಿಂದ ಭೂಮಿಗಾಗಿ ಕಾರ್ಮಿಕರ ಹೋರಾಟ ನಿತ್ಯ ನಡೆಯುತ್ತಾ ಸಾಗಿತು. 1996 ರಲ್ಲಿ ಅಲ್ಲಿನ ರಾಜಧಾನಿಯಾದ ಪ್ಯಾರಾ ನಗರಕ್ಕೆ ಜಾಥಾ ಹೊರಟಿತು. ನಮ್ಮಲ್ಲಿ ವಿಧಾನ ಸೌಧ ಚಲೋ ಮಾದರಿಯ ಜಾಥಾ. ಈ ಚಳವಳಿಯಲ್ಲಿ ಹೆಂಗಸರು, ಮಕ್ಕಳು, ಗರ್ಭಿಣಿಯರು ಮತ್ತು ಹಿರಿಯರು ಇದ್ದ ಕಾರಣ ಮಾರ್ಗ ಮದ್ಯೆ ಎಲ್ಡೋರಡೋ ಡೆ ಕಾರಾಜಾಸೆ ಎಂಬ ಜಾಗದಲ್ಲಿ ಜಾಥಾ ವಿಶ್ರಾಂತಿ ಪಡೆಯಿತು.

ಅಲ್ಲಿ ನಡೆದದ್ದೇನು: ಅಂದು ಏಪ್ರಿಲ್ 17, 1996. ಕಾರ್ಮಿಕರ ಜಾಥಾ ವಿಶ್ರಾಂತಿಯಲ್ಲಿದೆ. ಸಂಜೆ ಸುಮಾರು ನಾಲ್ಕು ಗಂಟೆ. ಮಿಲಿಟರಿ ಪಡೆ ಜಾಥಾ ಬಳಿ ಜಮಾಸಿತು. ಮತ್ತೊಂದು ದಿಕ್ಕಿನಿಂದ ಪೊಲೀಸರು ಬಂದರು. ಏಕಾಏಕಿ ಟಿಯರ್‌ಗ್ಯಾಸ್ ಸಿಡಿಸಿದರು. ಸಾಲದು ಎಂಬಂತೆ ತಮ್ಮ ಮೆಷಿನ್ ಗನ್‌ಗಳಿಗೂ ಕೆಲಸ ಕೊಟ್ಟರು. ಬೆದರಿಸಲು ಸಿಡಿಸುತ್ತಿರುವ ರಬ್ಬರ ಬುಲೆಟ್ ಇರಬೇಕು ಅಂದುಕೊಳ್ಳುವಷ್ಟರಲ್ಲಿ ಅನೇಕರು ಉರುಳಿಬಿದ್ದಿದ್ದರು. ಚಳವಳಿಕಾರರು ಚದುರಿದರು. ಆ ಗುಂಪಿನಲ್ಲೊಬ್ಬ ಅಮಾನ್ಸಿಯೋಡೋಸ್ ಸಂಟೋಸ್ ಸಿಲ್ವಾ ಎಂಬ ಕಾರ್ಮಿಕನಿಗೆ ಕಣ್ಣು, ಕಿವಿ ಮೂಗು, ಬಾಯಿ, ಸಕಲ ಅಂಗಗಳೂ ಐಬು. ಅವ ಇಲ್ಲೇನು ನಡೆಯುತ್ತಿದೆ ಎಂದು ಅರಿಯುವಷ್ಟರಲ್ಲಿ ಪೊಲೀಸರ ಕಾಡತೂಸುಗಳು ಅವನ ಎದೆ ಸೀಳಿದ್ದವು. ಸಿಲ್ವಾ ನೆಲಕ್ಕುರುಳಿದ. ಅಂದು 19  ಕಾರ್ಮಿಕರನ್ನು ನಿರ್ಧಯವಾಗಿ ಕೊಲ್ಲಲಾಯಿತು. 69 ಮಂದಿ ಗಂಭೀರ ಪರಿಸ್ಥಿತಿಗೆ ತಲುಪಿದರು. ನೂರಾರು ಮಂದಿ ಮುಂದೆಂದೂ ಕೃಷಿ ಕೂಲಿ ಕೆಲಸ ಮಾಡಲೂ ಸಾಧ್ಯವಾಗದಂತೆ ಅಂಗಾಗಳನ್ನೇ ಕಳೆದುಕೊಂಡರು.

ಈ ಘಟನೆ ನಡೆದ ದಿನದಂದು ಅಂತಾರಾಷ್ಟ್ರೀಯ ರೈತ ಸಂಘಟನೆಗಳ ಒಕ್ಕೂಟ ಲಾ ವಯಾಕ್ಯಾಂಪೆಸಿನಾದ ಸಮಾವೇಶವೊಂದು ಮೆಕ್ಸಿಕೋದಲ್ಲಿ ನಡೆಯುತ್ತಿತ್ತು. ಬ್ರೆಜ಼ಿಲ್  ನಲ್ಲಿ ನಡೆದ ಕಾರ್ಮಿಕರ ಮಾರಣ ಹೋಮದ ಬಗ್ಗೆ ವಿಷಾದ ವ್ಯಕ್ತಪಡಿಸಿದ ಸಂಘಟನೆ ಪ್ರಭುತ್ವಕ್ಕೆ ದಿಕ್ಕಾರ ಕೂಗಿ ರೈತರು ಮತ್ತು ರೈತಕಾರ್ಮಿಕರ ಮೇಲೆ ವಿಶ್ವದಾದ್ಯಂತ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿ ಹೋರಾಟ ತೀವ್ರಗೊಳಿಸುವಲ್ಲಿ ಸಂಘಟನೆ ಸನ್ನದ್ದವಾಯಿತು. ಅಂದು ಬ್ರೆಜ಼ಿಲ್ ನಲ್ಲಾದ ಘಟನೆಯ ಕಹಿ ನೆನಪಿಗೆ ಹಾಗೂ ಹೋರಾಟದ ಕಿಚ್ಚು ಆರದಿರಲಿ ಎಂದು ಏಪ್ರಿಲ್ 17 ನ್ನು ಅಂತಾರಾಷ್ಟ್ರೀಯ ರೈತ ಹೋರಾಟ ದಿನಾಚರಣೆ ಎಂದು ಘೋಷಿಸಿತು. ಅಲ್ಲಿಂದಾಚೆಗೆ ಪ್ರತಿ ಏಪ್ರಿಲ್ 17 ರಂದು ಅಂತಾರಾಷ್ಟೀಯ ರೈತ ಹೋರಾಟ ದಿನಾಚರಣೆ ಅಂಗವಾಗಿ ಜಗತ್ತಿನಾದ್ಯಂತ ನಡೆಯುವ ರೈತ ಹೋರಾಟದ ವಿಭಿನ್ನ ಮಾದರಿಗಳನ್ನು ಲಾ ವಯಾಕ್ಯಾಂಪೆಸಿನಾ ದಾಖಲಿಸುತ್ತಿದೆ.


Spread the love