-ಕವಿತಾ ಕುರುಗಂಟಿ
ಭಾರತೀಯ ಕೃಷಿಯ ವಿಚಾರ ಬಂದಾಗ ಇತ್ತೀಚೆಗೆ ಎಂದಾದರೂ ನೀವು ಮಹಿಳಾ
ಕೃಷಿಕರ ಬಗ್ಗೆ ಕೇಳಿರುವ ಅಥವಾ ಓದಿರುವ ನೆನಪಿದೆಯಾ? ಎಂದಾಕ್ಷಣ ನಮ್ಮ ಕಣ್ಣ
ಮುಂದೆ ಬರುವ ಚಿತ್ರಣ ಪುರುಷ ರೈತರದ್ದೆ. ನಾವು ಓದಿರಬಹುದಾದ ಬರಹಗಳು,
ನೋಡಿರಬಹುದಾದ ಚಿತ್ರಗಳು, ರೈತ ಎಂಬ ಪದ ಬಳಕೆ ಎಲ್ಲವೂ ಪುರುಷ ಕೃಷಿಕರ
ಸೂಚಕವೇ. ಅಸಲು ಖುದ್ದು ಮಹಿಳಾ ಕೃಷಿಕರಿಗೇ ತಾವು ಕೂಡಾ ಕೃಷಿಕರು ಎಂಬ
ತಮ್ಮ ಅಸ್ಥಿತ್ವದ ಅರಿವಿಲ್ಲ.
ನಮ್ಮ ರಾಷ್ಟ್ರೀಯ ಖಾತೆಗಳ ವ್ಯವಸ್ಥೆಯಲ್ಲಿ ಕೂಡಾ, ಆರ್ಥಿಕತೆಯಲ್ಲಿ ಮಹಿಳಾ ಕೃಷಿಕರ
ಭಾಗವಹಿಸುವಿಕೆಯನ್ನ ನಿರ್ಲಕ್ಷಿಸಿದೆ. ತಮ್ಮ ಕಾರ್ಯ ಕ್ಷೇತ್ರದ ಮೂಲಕ ಭಾರತೀಯ
ಆರ್ಥಿಕತೆಗೆ ಕೊಡುಗೆ ನೀಡುತ್ತಿರುವ ಮಹಿಳೆಯರನ್ನ ಗಣನೆಗೆ ತೆಗೆದುಕೊಂಡಾಗ ಶೇ
62.8 ರಷ್ಟು ಮಂದಿ ಕಾರ್ಯನಿರ್ವಹಿಸುತ್ತಿರುವುದು ಕೃಷಿ ವಲಯದಲ್ಲಿ. ಗ್ರಾಮೀಣ
ಪ್ರದೇಶಗಳಲ್ಲಿ ಇದರ ಪ್ರಮಾಣ ಶೇ 75 ರಷ್ಟಿದ್ದೆ. ಇದು ನಮ್ಮ ದೇಶದ ಬಹುತೇಕ
ಮಹಿಳೆಯರ ಜೀವನದಲ್ಲಿ ಕೃಷಿ ವಹಿಸುತ್ತಿರುವ ಪ್ರಮುಖ ಪಾತ್ರವನ್ನ ಸೂಚಿಸುತ್ತದೆ.
2011-2012 ರಲ್ಲಿ ನಡೆದ 68 ನೇ ರಾಷ್ಟ್ರೀಯ ಮಾದರಿ ಸಮೀಕ್ಷೆ ಸಂಸ್ಥೆ ನೀಡಿರುವ ಈ
ಅಂಕಿ ಅಂಶಗಳನ್ನು 2011 ರ ಜನಗಣತಿ ಕೂಡಾ ಧೃಡಪಡಿಸಿದೆ. ಈ ಜನಗಣತಿಯು,
ಭಾರತದಲ್ಲಿ ಮಹಿಳಾ ಕೆಲಸಗಾರರ ಸಂಖ್ಯೆ ಬರೋಬ್ಬರಿ 15 ಕೋಟಿಯಷ್ಟಿದ್ದು ಅದರಲ್ಲಿ
12.18 ಕೋಟಿಯಷ್ಟು ಜನರು ಗಾಮೀಣ ಪ್ರದೇಶದವರು ಎಂದು ವರದಿ ನೀಡಿದೆ.
ಇದರಲ್ಲಿ ಶೇ 65.1 ರಷ್ಟು ಅಂದರೆ 3.6 ಕೋಟಿಯಷ್ಟು ಮಂದಿ ಮಹಿಳೆಯರು ಕೃಷಿ
ಬೆಳೆಗಾರರಾಗಿ ಹಾಗೂ 6.2 ಕೋಟಿಯಷ್ಟು ಮಂದಿ ಕೃಷಿ ಭೂಮಿಗಳಲ್ಲಿ ಕಾರ್ಮಿಕರಾಗಿ
ಕಾರ್ಯ ನಿರ್ವಹಿಸುತ್ತಾ ಇದ್ದಾರೆ.
ಇದೇ ವೇಳೆ ಈ ಕುರಿತಾಗಿ ಕೈಗೊಂಡಿದ್ದ ಸೂಕ್ಷ್ಮ ಅಧ್ಯಯನದ ಪ್ರಕಾರ ಶೇ 70 ರಷ್ಟು
ಕೃಷಿ ಚಟುವಟಿಕೆಗಳನ್ನ ಕೈಗೊಳ್ಳುತ್ತಿರುವವರು ಮಹಿಳಾ ಕೃಷಿಕರು. ಬಹುತೇಕ ಬೆಳೆ
ಹಾಗೂ ಪ್ರದೇಶಗಳನ್ನ ಗಣನೆಗೆ ತೆಗೆದುಕೊಂಡಾಗ ಎಲ್ಲಾ ಕಾರ್ಮಿಕ ದಿನಗಳು
ಮಹಿಳೆಯರಿಗೆ ಮೀಸಲು. ಇದು ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಕೃಷಿ ಎಷ್ಟು
ಮುಖ್ಯವೋ ಕೃಷಿ ಕ್ಷೇತ್ರಕ್ಕೂ ಮಹಿಳೆಯರ ಕೊಡುಗೆ ಅತ್ಯಗತ್ಯ ಅನ್ನೋದನ್ನ ಎತ್ತಿ
ತೋರಿಸುತ್ತದೆ. ಇಂಥಹ ಪರಿಸ್ಥಿತಿಯ ನಡುವೆಯೂ , ಇಷ್ಟೊಂದು ಸಂಖ್ಯೆಯಲ್ಲಿ ಮಹಿಳಾ
ಕೃಷಿಕರಿದ್ದರೂ ಈ ಕ್ಷೇತ್ರಕ್ಕೆ ಅವರು ನೀಡಿರುವ ಅಪಾರ ಕೊಡುಗೆಯನ್ನ
ಕಡೆಗಣಿಸಿರೋದು ನಿಜಕ್ಕೂ ಹತಾಶೆ ಮೂಡಿಸುವಂತಹ ಸಂಗತಿ.
ಇದಕ್ಕೆ ಪ್ರಮುಖ ಕಾರಣ ಕೃಷಿ ಸಂಸ್ಥಾಪನೆಗಳು ರೈತರೇ ಭೂ ಮಾಲೀಕರು ಅನ್ನುವ
ಕಲ್ಪನೆಯಲ್ಲಿವೆ. ಆದರೆ 2007 ರಾಷ್ಟ್ರೀಯ ರೈತ ನೀತಿಯು ರೈತನೇ
ಭೂಮಾಲೀಕನಾಗಿರಬೇಕು ಎಂದೇನಿಲ್ಲ ಎಂದು ಸ್ಪಷ್ಟಪಡಿಸಿದೆ. ಇದರಲ್ಲಿ ರೈತ ಎಂದರೆ
ಯಾರು ಎಂಬ ಬಗ್ಗೆ ಕೂಡಾ ಸವಿಸ್ತಾರವಾಗಿ ವಿವರಿಸಲಾಗಿದೆ. ಇದರಲ್ಲಿ ಮಹಿಳಾ
ಕೃಷಿಕರೂ ಒಳಗೊಂಡಿದ್ದಾರೆ. ಇಷ್ಟರ ಮೇಲಾಗಿ ಈ ನೀತಿಯಲ್ಲಿ ಭಾರತೀಯ ಕೃಷಿ
ಕ್ಷೇತ್ರದಲ್ಲಿ ಮಹಿಳೆಯರ ಅನಿವಾರ್ಯತೆ ಬಗ್ಗೆಯೂ ಕೆಲ ವಿಭಾಗಗಳಲ್ಲಿ ಕೂಲಂಕಷವಾಗಿ
ವಿವರಿಸಲಾಗಿದೆ. ಇದರ ಹೊರತಾಗಿಯೂ ಮಹಿಳೆಯರನ್ನ, ಅವರ ಕಾರ್ಯಗಳನ್ನ
ಕಡೆಗಣಿಸಲಾಗುತ್ತಿದೆ.
ಭಾರತದ ಅನೇಕ ಭಾಗಗಳಲ್ಲಿ ಎರಡು ಬಗೆಯ ಪ್ರವೃತ್ತಿ ಚಾಲ್ತಿಯಲ್ಲಿದೆ.
1. ಮಹಿಳಾ ಕೇಂದ್ರಿತ ಕೃಷಿ. ಇಲ್ಲಿ ಪುರುಷ ರೈತರು ಕೃಷಿಯನ್ನ ಕೈಬಿಟ್ಟು ಬೇರೆ
ಕೆಲಸಗಳನ್ನ ಅರಸಿ ನಗರ ಪ್ರದೇಶಗಳಿಗೆ ವಲಸೆ ಹೋಗುತ್ತಿದ್ದಾರೆ.
2. ಪುರುಷ ಪ್ರಧಾನ ಕೃಷಿ : ಇಲ್ಲಿ ಈಗಾಗಲೇ ಪುರುಷ ಪ್ರಧಾನ ಸಮಾಜದ
ಶೋಷಣೆಯಿಂದ ಹಾಗೂ ಸಂಪನ್ಮೂಲ ಮಾಲೀಕತ್ವದ ವಿಷಯಗಳ ಅನುಗುಣವಾಗಿ
ಕಡೆಗಣಿಸಲ್ಪಟ್ಟಿರುವ ಮಹಿಳೆಯರನ್ನ ವಾಣಿಜ್ಯ ಬೆಳೆಗಳ ಆಧಾರಿತ ಮಾರುಕಟ್ಟೆ
ಮಾದರಿ ನೀತಿಗಳು ಮೂಲೆಗುಂಪಾಗಿಸುತ್ತಿವೆ.
ಮಹಿಳಾ ಕೇಂದ್ರಿತ ಕೃಷಿ ಪ್ರವೃತ್ತಿ ಮಹಿಳೆಯರಿಗೆ ಸ್ವಂತ ನಿರ್ಣಯಗಳನ್ನ
ಕೈಗೊಳ್ಳುವಂತೆ ಸಬಲೀಕರಣಗೊಳಿಸುತ್ತದೆ. ಆದರೆ ಬಾಹ್ಯ ಸಂಸ್ಥೆಗಳು ಭೂಮಿ
ಮಹಿಳೆಯ ಹೆಸರಿನಲ್ಲಿ ಇಲ್ಲ ಎನ್ನುವ ಒಂದೇ ಕಾರಣಕ್ಕೆ ಅವಳನ್ನ ಕೃಷಿಕಳು ಎಂದು
ಗುರುತಿಸಲು ನಿರಾಕರಿಸುತ್ತವೆ. ಇದು ಅವಳ ಕುಟುಂಬ ನಿರ್ವಹಣೆ ಹಾಗು ಕೃಷಿ
ಉದ್ಯಮ ನಿರ್ವಣೆಯನ್ನ ಕಠಿಣಗೊಳಿಸಿ, ಹೊರೆಯಾಗುವಂತೆ ಮಾಡುತ್ತದೆ. ಪುರುಷ
ಪ್ರಧಾನ ಕೃಷಿಯಲ್ಲಿ ಮಹಿಳೆಗೆ ಶಿಕ್ಷಣ ಹಾಗೂ ಸ್ವಾತಂತ್ರ್ಯದ ಮೆಲಿನ ನಿರ್ಭಂಧದಿಂದಾಗಿ,
ಕೃಷಿ ಮಾರುಕಟ್ಟೆಯಲ್ಲೂ ಪುರುಷರಿಗೆ ಹೋಲಿಸಿದರೆ ಮಹಿಳೆಯರಿಗೆ ಸೀಮಿತ ಪ್ರವೇಶ
ಹಾಗೂ ಅವಕಾಶ. ಇದು ಮಹಿಳೆಯರು ಪ್ರಮುಖ ನಿರ್ಣಯಗಳನ್ನ ತೆಗೆದುಕೊಳ್ಳುವ
ನಿಟ್ಟಿನಲ್ಲಿ ಅಡ್ಡಿಯುಂಟುಮಾಡುತ್ತಿದೆ ಹಾಗೂ ಅವರನ್ನ ಮೂಲೆಗುಂಪಾಗಿಸುತ್ತಿದೆ.
ಪುರುಷ ಕೃಷಿಕರಿಗೆ ಲಭಿಸುತ್ತಿರುವ ಯೋಜನೆಗಳು, ಹಾಗೂ ಸೌಕರ್ಯಗಳು ಮಹಿಳಾ
ಕೃಷಿಕರಿಗೂ ಲಭ್ಯವಾದರೆ, ಉತ್ಪಾದನಾ ಮಟ್ಟ ಶೇ 40 ರಷ್ಟು ಹೆಚ್ಚಾಗುತ್ತದೆ ಎಂದು
ಅಧ್ಯಯನಗಳ ಮೂಲಕ ತಿಳಿದುಬಂದಿದೆ. ಮಹಿಳೆಯರಿಗೆ ಈ ನಿಟ್ಟಿನಲ್ಲಿ ಸಹಕಾರ
ದೊರೆತರೆ ತಮ್ಮ ಕುಟುಂಬ ಹಾಗೂ ಸಮುದಾಯಕ್ಕೆ ಲಾಭದಾಯಕವಾಗಿಯೂ
ಪರಿಣಮಿಸುತ್ತದೆ, ಇದರಿಂದಾಗಿ ಮಹಿಳೆಯರ ಸಬಲೀಕರಣದ ಜೊತೆಗೆ
ಕೃಷಿಯಲ್ಲಿಯೂ ಸಾಕಷ್ಟು ಸಕಾರಾತ್ಮಕ ಬದಲಾವಣೆಯನ್ನು ತರಲು
ಸಹಕಾರಿಯಾಗುತ್ತದೆ.
ಮಹಿಳಾ ಕೃಷಿಕರೊಂದಿಗೆ ನಡೆಸಿದ ಹಲವಾರು ಸಂವಾದದಿಂದ ಬೆಳಕಿಗೆ ಬಂದ
ಅಂಶವೇನೆಂದರೆ, ಅವರಿಗೆ ಕೆಲವು ಕೃಷಿ ಮಾದರಿಯ ಬಗ್ಗೆ ವಿಶಿಷ್ಟವಾದ ಒಲವಿದೆ.
ಸರ್ಕಾರ ಹೆಚ್ಚಾಗಿ ಸಂಪನ್ಮೂಲ ಬಳಕೆಯ, ಹಾಗೂ ಸಂಪನ್ಮೂಲವನ್ನ ಹಾಳು
ಮಾಡುವಂತಹ (ಸಾಂದ್ರ ಹಾಗೂ ವ್ಯಾಪಕ ಕೃಷಿಗಿಂತ) ರಾಸಾಯನಿಕ ಆಧಾರಿತ ಕೃಷಿ
ಪದ್ಧತಿಗಿಂತ ಪರಿಸರ ಸ್ನೇಹಿ ಕೃಷಿ ಮಾದರಿಯನ್ನ ಬೆಂಬಲಿಸಬೇಕು ಎನ್ನವುದು ಅವರ
ಬಿನ್ನಹ. ಅವರಿಗೆ ಹೆಚ್ಚಾಗಿ ಸಿರಿಧಾನ್ಯದಂತಹ ಆಹಾರ ಕೃಷಿ ಪದ್ಧತಿಯ ಬಗ್ಗೆ ಒಲವು
ಹೆಚ್ಚು, ಇದಕ್ಕೆ ಕಾರಣ ಆಹಾರ ಭದ್ರತೆಗೆ ಸಂಬಂಧಿಸಿದಂತೆ ಕೌಟುಂಬಿಕ ಚೌಕಟ್ಟಿನಲ್ಲಿ
ಅವರು ನಿಭಾಯಿಸಬೇಕಾದ ಪಾತ್ರ ಹಾಗೂ ಜವಾಬ್ದಾರಿಗಳು.
ಇತ್ತೀಚಿನ ದಿನಗಳಲ್ಲಿ ರೈತ ಉತ್ಪಾದಕ (ಉತ್ಪಾದನಾ) ಸಂಸ್ಥೆಯೊಂದಿಗೆ ತಮ್ಮನ್ನ
ತಾವು ಗುರುತಿಸಿಕೊಂಡಿರುವ ಮಹಿಳಾ ಕೃಷಿಕರು ತಮಗೆ ಆದಾಯ ತೆರಿಗೆ ಹಾಗೂ ಜಿ
ಎಸ್ ಟಿ ಪಾವತಿಯಿಂದ ವಿನಾಯಿತಿ ನೀಡಬೇಕೆಂದು ಆಗ್ರಹಿಸುತ್ತಿದ್ದಾರೆ. ದೊಡ್ಡ ದೊಡ್ಡ
ಕೈಗಾರಿಕೆಗಳಿಗೆ ಹಾಗೂ ಕಾರ್ಪೋರೇಟ್ ಕಂಪನಿಗಳಿಗೆ ತೆರಿಗೆ ವಿನಾಯಿತಿ ನೀಡಿರುವ
ಸರ್ಕಾರ ಮಹಿಳಾ ಕೃಷಿಕರಿಗೆ ತೆರಿಗೆ ಮನ್ನಾ ಮಾಡಿ ಉತ್ತೇಜನ ನೀಡುವ ನಿಟ್ಟಿನಲ್ಲಿ
ಇನ್ನೂ ಯಾವುದೇ ನಿರ್ಧಾರ ಕೈಗೊಳ್ಳುವ ಬಗ್ಗೆ ಯೋಚಿಸುತ್ತಲೇ ಇದೆ.
ಮಹಿಳಾ ಕೃಷಿಕರನ್ನ ನಿರಂತರವಾಗಿ ಕಾಡುತ್ತಿರುವ ಸಮಸ್ಯೆಯೆಂದರೆ ಭೂ ಹಕ್ಕು
ವಿಚಾರ. ಮತ್ತೊಂದು ಪ್ರಮುಖ ಸಮಸ್ಯೆ ಲಿಂಗ ದತ್ತಾಂಶವನ್ನ ವಿಂಗಡಿಸಲ್ಪಡುವ
ಮಾಹಿತಿಯ ಕೊರತೆ ಹಾಗೂ ಭೂಮಿ ಪತ್ರಗಳಲ್ಲಿ ಇದುವರೆಗೂ ಭೂ ಮಾಲೀಕರ
ಲಿಂಗವನ್ನ ನಮೂದಿಸುವಂತಹ ಕಾಲಂ ಇಲ್ಲದಿರುವುದು. ಇಂತಹ ಮಾಹಿತಿ 2005 ರ
ಹಿಂದೂ ಅನುಕ್ರಮ ಕಾಯಿದೆ (ಹಿಂದೂ ಸಕ್ಸೆಶನ್ ಆಕ್ಟ್) ಕಾರ್ಯಗತವಾಗೋದನ್ನ
ಮಾನಿಟರ್ ಮಾಡಲು ಬಹಳ ಅವಶ್ಯಕ. ಈ ಕಾಯಿದೆಯ ಅಡಿಯಲ್ಲಿ ಪ್ರತಿ ಹಿಂದು
ಹೆಣ್ಣುಮಗಳಿಗೆ ಆಸ್ತಿಯಲ್ಲಿ ಸಮಾನ ಶಾಸನ ಬದ್ಧ ಹಕ್ಕು ಕಲ್ಪಿಸಲಾಗಿದೆ. ಭಾರತದಲ್ಲಿ
ಬಹುಪಾಲು ಆಸ್ತಿ ಖಾಸಗಿ ಒಡೆತನದ್ದಾಗಿದ್ದು ಹಾಗೂ ಬಹುಪಾಲು ಪ್ರಜೆಗಳು
ಹಿಂದುಗಳಾಗಿರೋದ್ರಿಂದ ಈ ಕಾಯಿದೆ ಮಹಿಳೆಯರು ಹಾಗೂ ಅವರ ಸ್ವತ್ತುಗಳ
ಮಾಲೀಕತ್ವಕ್ಕೆ ರಚನಾತ್ಮಕ ವ್ಯತ್ಯಾಸ ಕಲ್ಪಿಸತ್ತೆ ಎಂದು ಊಹಿಸಲಾಗಿತ್ತು. ಆದರೆ
ಇದನ್ನ ಕಾರ್ಯಗತಗೊಳಿಸುವಂತಹ ಕಾರ್ಯ ಇನ್ನೂ ಮಂದಗತಿಯಲ್ಲಿ ಸಾಗುತ್ತಿದೆ.
ಭೂ ಹಕ್ಕುಗಳ ವಿಚಾರಕ್ಕೆ ಬಂದಾಗ, ಕೇವಲ ಮಹಿಳೆಯರ ಹೆಸರಿನಲ್ಲಿರುವ ಖಾಸಗಿ
ಭೂ ಮಾಲೀಕತ್ವದ ವಿಷಯವಷ್ಟೆ ಅಲ್ಲದೆ, ಸಾಮುದಾಯಿಕ(ಕಾಮನ್)ಆಸ್ತಿಯ ಹಕ್ಕನ್ನ
ರಕ್ಷಿಸುವ ಬಗ್ಗೆಯೂ ಚರ್ಚೆ ನಡೆಸಲಾಗುತ್ತಿದೆ. ಕಡುಬಡತನದ ಹಿನ್ನಲೆಯಿಂದ
ಬಂದಿರುವ ಬಹುತೇಕ ಹೆಣ್ಣುಮಕ್ಕಳು ಗುಂಡುತೋಪುಗಳಲ್ಲಿ ಜಾನುವಾರು ಸಾಕಣೆ
ಮೂಲಕ ತಮ್ಮ ಜೀವನೋಪಾಯ ಕಂಡುಕೊಳ್ಳುತ್ತಿದ್ದಾರೆ. ಇದನ್ನ ಕಡಿತಗೊಳಿಸಿದರೆ
ಇಂತಹ ಹೆಣ್ಣುಮಕ್ಕಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ದಲಿತ
ಸಮುದಾಯದಲ್ಲಿ ಖಾಸಗಿ ಭೂ ಮಾಲೀಕತ್ವವನ್ನು ಗುರುತಿಸುವುದೇ ಸಮಸ್ಯೆ. ಈ
ಹಿನ್ನಲೆಯಲ್ಲಿ ಮಹಿಳೆಯರ ಹೆಸರಿನಲ್ಲಿ ಸಾರ್ವಜನಿಕ ಭೂ ವಿತರಣೆ ಮಾಡಬೇಕು ಎಂಬ
ಬೇಡಿಕೆ ಕೂಡಾ ಇದೆ, ಆದರೆ ಇವೆಲ್ಲವೂ ಕಾರ್ಯರೂಪಕ್ಕೆ ಬರಬೇಕಾದರೆ ಭೂ
ಸಂಪನ್ಮೂಲ ಹಾಗೂ ಭೂ ಬಳಕೆ ಜೊತೆಗೆ ಭೂಮಿ ರಹಿತ ಮಹಿಳೆಯರ ಬಗ್ಗೆ ಸರ್ಕಾರ
ಸಮಗ್ರ ಸಮೀಕ್ಷೆ ನಡೆಸಬೇಕಿದೆ.
2015 ರಲ್ಲಿ ಮಹಿಳಾ ಕಿಸಾನ್ ಅಧಿಕಾರ್ ಮಂಚ್(ಮಕಾನ್) ಆರಂಭಗೊಂಡಿದ್ದು, ಇದರ
ಮೂಲಕ ದೇಶಾದ್ಯಂತ ಮಹಿಳಾ ಕೃಷಿಕರು ಅನುಭವಿಸತ್ತಿರುವ ಸಮಸ್ಯೆಗಳನ್ನ ಬೆಳಕಿಗೆ
ತರುವ ಪ್ರಯತ್ನ ನಡೆಯುತ್ತಿದೆ. ಇದರಡಿಯಲ್ಲಿ ಮಹಿಳೆಯರನ್ನ
ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಮಕಾನ್ ನ ನಾಲಕ್ಕು ಪ್ರಮುಖ ಬೇಡಿಕೆಗಳಿವೆ.
ಮೊದಲ ಹಂತದಲ್ಲಿ ಮಹಿಳಾ ಕೃಷಿಕರಿಗೆ ಅಸ್ತಿತ್ವವನ್ನು ಕಲ್ಪಿಸುವುದು, ಭೂಮಿ, ಜಲ,
ಕೃಷಿ ಬೀಜಗಳ ಸಂಪನ್ಮೂಲ ಹಕ್ಕುಗಳನ್ನ ಮಹಿಳಾ ಕೃಷಿಕರಿಗೆ ಕಲ್ಪಿಸುವುದು, ಕೃಷಿ
ಸಾಲ, ವಿಮೆ, ಕೃಷಿ ಮಾರುಕಟ್ಟೆ ಸೇರಿದಂತೆ ಪುರುಷ ಕೃಷಿಕರಿಗೆ ಸಿಗುತ್ತಿರುವಂಥ ಎಲ್ಲಾ
ಸವಲತ್ತುಗಳು ಮಹಿಳೆಯರಿಗೂ ಸಿಗುವಂತೆ ಮಾಡುವುದು. ಹಾಗೂ ಕೃಷಿ ಕ್ಷೇತ್ರಕ್ಕೆ
ಸಂಬಂಧಪಟ್ಟ ಎಲ್ಲಾ ಸಂಸ್ಥೆಗಳಲ್ಲೂ ನಿರ್ಣಾಯಕ ಜಾಗಗಳಲ್ಲಿ ಕಾರ್ಯನಿರ್ವಸುವ
ಹಾಗೆ ಮಹಿಳೆಯರಿಗೂ ಅವಕಾಶ ಕಲ್ಪಸಿಕೊಡುವುದು.
ಇವೆಲ್ಲದರ ನಡುವೆ ನಮ್ಮ ದೇಶ, ಮಹಿಳಾ ಕೃಷಿಕರ ಪ್ರಾಮುಖ್ಯತೆ ಹಾಗೂ ಈ
ಕ್ಷೇತ್ರದಲ್ಲಿ ಅವರ ಕೊಡುಗೆಗಳನ್ನ ಗುರುತಿಸಿ, ತಲೆಮಾರುಗಳಿಂದ ಮಹಿಳೆಯರ ಮೇಲೆ
ನಡೆದುಕೊಂಡು ಬಂದಿರುವ ಅನ್ಯಾಯವನ್ನ ಇನ್ನಾದರೂ ಸರಿಪಡಿಸಿ, ಈ ಮೂಲಕ
ಮಹಿಳಾ ಕೃಷಿಕರ ಸಬಲೀಕರಣಗೊಳಿಸಿ ಕೃಷಿ ಕ್ಷೇತ್ರವನ್ನ ಸುಧಾರಿಸುವ ವಿಶ್ವಾಸ
ವ್ಯಕ್ತಪಡಿಸಿದೆ.