ನಾಗೇಶ್ ಕೆ.ಎನ್.
ಕರ್ನಾಟಕ ಸಾಂಸ್ಕೃತಿಕ ಅಕಾಡೆಮಿಗಳು ಹಾಗೂ ಪ್ರಾಧಿಕಾರಗಳಿಗೆ ಅಧ್ಯಕ್ಷರು ಮತ್ತು ಸದಸ್ಯರುಗಳನ್ನು ನೇಮಕ ಮಾಡುವ ಪ್ರಕ್ರಿಯೆ ಆರಂಭದಿಂದಲೂ ಒಂದಿಲ್ಲೊಂದು ಕಾರಣಕ್ಕೆ ಸುದ್ಧಿಯಾಗುತ್ತಲೇ ಇತ್ತು. ಸರ್ಕಾರದಿಂದ ಯಾವುದೇ ಅಧಿಕೃತ ನೇಮಕಾತಿ ಆದೇಶವಿಲ್ಲದ ಆಯ್ಕೆ ಸಮಿತಿಯೊಂದು ವಿಧಾನ ಸೌಧದಲ್ಲಿ ಹಲವು ಬಾರಿ ಸಭೆ ಸೇರಿ ಅಭ್ಯರ್ಥಿಗಳ ಬಗ್ಗೆ ಚರ್ಚಿಸಿತ್ತು. ಆ ಸಮಿತಿಗೆ ಎಸ್.ಜಿ ಸಿದ್ದರಾಮಯ್ಯನವರ ನೇತೃತ್ವದ ಸಮಿತಿ ಎಂದೂ (ಅದರಲ್ಲಿ ಹಿರಿಯರಾದ ಕೆ.ಎಂ.ಎಸ್. ಕೂಡಾ ಇದ್ದರು, ಒಂದೆರಡು ಸಭೆಗಳ ನಂತರ ಅಲ್ಲಿನ ಮಾತುಕತೆಗಳ ಧಾಟಿ ನೋಡಿ ಅವರು ಸಭೆಗೆ ಮತ್ತೆ ಹೋಗಲಿಲ್ಲವೆಂಬ ಸುದ್ಧಿಯೂ ಹರಿದಾಡಿತು), ಮತ್ತೊಂದು ಕಾತ ಚಿಕ್ಕಣ್ಣನವರು ಸಿದ್ಧಪಡಿಸಿದ ಪಟ್ಟಿ ಎಂದೂ, ಇನ್ನೂ ಒಂದು ಹಿರಿಯರಾದ ಬರಗೂರು ರಾಮಚಂದ್ರಪ್ಪನವರು ಸಿದ್ಧಪಡಿಸಿದ ಪಟ್ಟಿ ಎಂಬುದಾಗಿಯೂ ಸಾಂಸ್ಕೃತಿಕ ವಲಯದಲ್ಲಿ ದೊಡ್ಡ ಚರ್ಚೆ ನಡಿದಿತ್ತು. ಎಸ್.ಜಿ. ಸಿದ್ದರಾಮಯ್ಯನವರ ನೇತೃತ್ವದ ಸಮಿತಿ ಸಂಸ್ಕೃತಿ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿದ್ದರಿಂದಾಗಿ ಸೆಮಿ ಅಧಿಕೃತ ಎನ್ನಬಹುದೇನೋ ! ಅದು ಬಿಟ್ಟು ಇನ್ನಾವ ಸಮಿತಿಗಳೂ ಅಧಿಕೃತ ಸಮಿತಿಗಳಾಗಿರಲಿಲ್ಲ.
ಆರಂಭದಿಂದಲೂ ಸಾಹಿತಿಗಳು, ಚಿಂತಕರು, ಕವಿಗಳು ತಮ್ಮ ಶಕ್ತಿಯಾನುಸಾರ-ಸಂಪರ್ಕಾನುಸಾರ ಮುಖ್ಯಮಂತ್ರಿಗಳಿಗೆ ಶಿಫಾರಸ್ಸು ಮಾಡುವ, ಮಾಡಿಸುವ ಕೆಲಸ ಮುಂದುವರೆದಿತ್ತು. ಇವೆಲ್ಲದರ ನಡುವೆ ಬಹಳ ದಟ್ಟವಾಗಿ ಕೇಳಿಬರುತ್ತಿದ್ದ ಒಂದು ಸಂಗತಿಯೆಂದರೆ ಈ ಹಿಂದೆ ಅಂದರೆ ಕಳೆದ ಭಾಜಪ ಆಡಳಿತದಲ್ಲಿ ಯಾವಾವ ಕವಿ, ಕಲಾವಿದ, ಚಿಂತಕರು ಭಾಜಪವನ್ನು ವಿರೋಧಿಸಿ ಮಾತನಾಡಿದರೋ ? ಯಾರಾರು ಕಾಂಗ್ರೆಸ್ ಪರವಾಗಿ ವಕಾಲತ್ತು ವಹಿಸಿದ್ದರೋ ಅವರನ್ನು ಈ ಬಾರಿ ಸಾಂಸ್ಕೃತಿಕ ಅಕಾಡೆಮಿ ಪ್ರಾಧಿಕಾರಗಳಿಗೆ ನೇಮಕ ಮಾಡಲಾಗುತ್ತದೆ, ಅದು ಹಾಗೇ ಆಗಬೇಕು ಎಂದು ಖುದ್ದು ಸಾಹಿತಿ ಚಿಂತಕರೇ ಮುಖ್ಯಮಂತ್ರಿಗಳಿಗೆ ಹೇಳಿ ಅವರಿಂದಲೂ ಹೌದೆಂಬ ಸಿಗ್ನಲ್ ಪಡೆದುಕೊಂಡಿದ್ದರು ಅಂಬ ಸುದ್ಧಿಯೂ ಇತ್ತು.
ಆಗ ಹಲವು ಚಿಂತಕರು “ಸಾಂಸ್ಕೃತಿಕ ಅಕಾಡೆಮಿ ಪ್ರಾಧಿಕಾರಿಗಳಲ್ಲಿ ಸ್ಥಾನ ಮಾನ ಪಡೆಯಲು ಕವಿಗಳು ಚಿಂತಕರು ಯಾವುದೋ ಒಂದು ಪಕ್ಷದ ಪರ ಇರಬೇಕೆ? ಅವರ ಅರ್ಹತೆಗಳನ್ನು ಈ ರೀತಿಯಾಗಿ ಪರಿಗಣಿಸಲಾಗುತ್ತದೆಯೇ ? ಎಂದೆಲ್ಲಾ ಚರ್ಚೆಗಳು ಬಂದರೂ ಈ ಮಾತುಗಳಿಗೆ ಸಿದ್ಧರಾಮಯ್ಯನವರ ಸುತ್ತಲಿನ ಮಂದಿ ಕಿವಿಗೊಡಲಿಲ್ಲ. ಅವರಿಗೇನು ಬೇಕೋ ಅದನ್ನೇ ಸೂಚಿಸಿದರು. ಮುಂದುವರೆದು ಮುಖ್ಯಮಂತ್ರಿ ಸಿದ್ಧರಾಮಯ್ಯನವರು ತಮಗೇನು ಬೇಕೋ ಅದನ್ನೇ ಮಾಡಿದ್ದಾರೆ. ಅದು ಪ್ರಭುತ್ವಕ್ಕಿರುವ ಪವರ್. ಬಹಳಷ್ಟು ಬಾರಿ ಪವರ್ ಗೆ ಕಣ್ಕಾಪಿರುತ್ತದೆ. ಅದರ ಫಲಿತಾಂಶ ನೇಮಕಗಳಲ್ಲಿ ಪ್ರಕಟಗೊಳ್ಳುತ್ತದೆ.
ಈಗ ನೇಮಕವಾಗಿರುವ ಅಕಾಡೆಮಿ ಪ್ರಾಧಿಕಾರಗಳ ಅಧ್ಯಕ್ಷರುಗಳು, ಸದಸ್ಯರು ಕೆಲವರನ್ನು ಹೊರತುಪಡಿಸಿ ಬಾಕಿ ಎಲ್ಲರೂ ಅರ್ಹರೇ ಇದ್ದಾರಾದರೂ ರೇಸಿನಲ್ಲಿದ್ದು ನಿಜಾರ್ಥದಲ್ಲಿ ಎಲ್ಲ ರೀತಿಯಲ್ಲೂ ಅರ್ಹರಾದ ಕೆಲವರು ಅವರ ಹುಟ್ಟಿನ ಜಾತಿಯ ಕಾರಣಕ್ಕೆ ಮತ್ತು ಕಾಂಗ್ರೆಸ್ ನ ಬಾವುಟ ಹಿಡಿದು ಬೀದಿಗಿಳಿಯಲಿಲ್ಲ ಎಂಬ ಕಾರಣಕ್ಕೆ ಅವಕಾಶವಂಚಿತರಾಗಿದ್ದು ಸುಳ್ಳಲ್ಲ.
ಅದೇನೇ ಇರಲಿ ಇದೀಗ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಾಂಸ್ಕೃತಿಕ ಅಕಾಡೆಮಿ ಪ್ರಾಧಿಕಾರಿಗಳ ಅಧ್ಯಕ್ಷರ ಸಭೆಯ ಐಡಿಯಾ ಕೊಟ್ಟ ಪುಣ್ಯಾತ್ಮ ಯಾರೋ ಗೊತ್ತಿಲ್ಲ. ಮೊದಲೇ ಕಾಂಗ್ರೆಸ್ ಪರ ಬ್ಯಾಟಿಂಗ್ ಮಾಡಿದವರಿಗೆ ಅವಕಾಶ ನೀಡಲಾಗುತ್ತದೆಂಬ ಮಾನದಂಡವನ್ನೇ ಪ್ರಶ್ನೆ ಮಾಡಿದ ಕನ್ನಡ ಸಾಂಸ್ಕೃತಿಕ ಲೋಕ ಇದೀಗ ಪಕ್ಷದ ಕಚೇರಿಯಲ್ಲಿ ಡಿ.ಕೆ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ನೀತಿ ಪಾಠ ಹೇಳಿಸುವ ಸಭೆ ನಡೆಸಿದ ಸುದ್ಧಿ ತೀವ್ರ ಚರ್ಚೆಗೆ ಈಡಾಗಿದೆ.
ಸಾಂಸ್ಕೃತಿಕ ಲೋಕಕ್ಕೂ ಕಾಂಗ್ರೆಸ್ ಪಕ್ಷಕ್ಕೂ ಸಂಬಂಧ ಬೆಸೆದು ರಾಜಕಾರಣ ಮಾಡುವ ಕಾಂಗ್ರೆಸಿಗರ ಐಡಿಯಾ ಸರ್ಕಸ್ ಪಿಸ್ತೂಲಾಗಿ ಪರಿಣಮಿಸಿ ಎಲ್ಲರನ್ನೂ ಪೇಚಿಗೆ ಸಿಲುಕಿಸಿದೆ.
ನೋಟ್: ಸರ್ಕಸ್ ಪಿಸ್ತೂಲ್ ನಲ್ಲಿ ಗುಂಡು ಹಿಂದಕ್ಕೂ ಮುಂದಕ್ಕೂ ಎರಡೂ ಕಡೆ ಹಾರುತ್ತದೆ. ಯಾವ ಗುಂಡ ಯಾವಾಗ ಎತ್ತ ಹಾರುತ್ತೋ ಗೊತ್ತಿರುವುದಿಲ್ಲ.