ಕೆ.ಎನ್. ನಾಗೇಶ್
ಇದೇ ಜೂನ್ 28 ರಂದು ಕಿಬ್ಬನಹಳ್ಳಿ ಕ್ರಾಸ್ (ಕೆ.ಬಿ.ಕ್ರಾಸ್) ನ ಮಾತಾ ರೆಸಿಡೆನ್ಸಿ ಮೈದಾನದಲ್ಲಿ ವತೇರೆ ಎಂಟುಗಂಟೆಯಿಂದ ಬೈಗು ದಾಟಿ ರಾತ್ರೆ 8 ಗಂಟೆಯವರೆಗೆ ಹಲಸಿನಕಾಯಿ ಮೇಳ ಆಯೋಜಿಸಿಲಾಗಿದೆ. ಲೇಖಕ, ಕವಿ ಹಾಗೂ ಕೃಷಿ ಪಂಡಿತರಾದ ಕೃಷ್ಣಮೂರ್ತಿ ಬೆಳೆಗೆರೆ ಮತ್ತು ಬಳಗದವರು ಊರು, ಮನೆ, ಕೇರಿ, ಸಂಘ, ಸಂಸ್ಥೆಗಳು,ಸರ್ಕಾರಿ ಇಲಾಖೆಗಳು, ಸ್ಥಳೀಯ ಮುಖಂಡರು ಹೀಗೆ ಎಲ್ಲರನ್ನೂ ಜೊತೆಮಾಡಿಕೊಂಡು ಹಲಸಿನ ಮೇಳವನ್ನು ಹಬ್ಬಿಸುತ್ತಿದ್ದಾರೆ. ಅವರೇ ಹೇಳುವಂತೆ ಹಬ್ಬುವುದೆಂದರೆ ಎಲ್ಲರನ್ನೂ ಒಳಗೊಂಡು ಬದುಕುವುದು ಬೆಳೆಯುವುದು ಮತ್ತು ಕ್ರಿಯಾಶೀಲರಾಗಿರುವುದು. ಈ ಕಾರ್ಯಕ್ರಮವನ್ನು ನಮ್ಮೆಲ್ಲರ ಅಭಿಮಾನದ ಸಹಜ ಸಮೃದ್ಧ ಸಂಸ್ಥೆಯ ಸಂಸ್ಥಾಪಕರಾದ ಕೃಷ್ಣಪ್ರಸಾದ್ ಉದ್ಘಾಟಿಸುತ್ತಿದ್ದಾರೆ. ಸ್ಥಳೀಯವಾಗಿ ಅನೇಕ ಮುಖಂಡರು ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ. ನೀವೂ ಜೊತೆಯಾಗಿ. ಮೇಳಕ್ಕೆ ಮೆರುಗು ತನ್ನಿ.
ಮೇಳದಲ್ಲೇನಿದೆ…!
ಹಲಸಿನಕಾಯಿ ಮೇಳದಲ್ಲಿ ದೋಸೆ, ಇಡ್ಲಿ, ವಡೆ, ಹಪ್ಪಳ, ಚಿಪ್ಸ್, ಪಾಯಸ ಇನ್ನಿತರ ವಿಶಿಷ್ಟ ತಿನಿಸುಗಳಿರಲಿವೆ. ಅವುಗಳನ್ನು ತಯಾರಿಸುವ ಸರಳ-ಸುಲಭ ವಿಧಾನವನ್ನು ತಾವೂ ತಿಳಿದು ನಿಮ್ಮ ಮನೆಗಳಲ್ಲಿ ತಯಾರಿಸಿಕೊಳ್ಳಬಹುದು. ನಿಮ್ಮ ಕುಟುಂಬದ ಆರೋಗ್ಯ ವೃದ್ಧಿಗೆ ಇದೊಂದು ಸುಲಭ ಮಾರ್ಗ.
ಮೇಳದಲ್ಲಿ ಉತ್ತಮ ತಳಿಯ ಹಲಸಿನ ಬೀಜಗಳು, ಸಸಿಗಳು ಮತ್ತು ವಿಶ್ವದಲ್ಲಿಯೇ ವೈವಿದ್ಯಮಯ ಸಿಹಿ ಮತ್ತು ಬಣ್ಣಗಳಿಂದ ಕೂಡಿದ ಹಲಸಿನ ಹಣ್ಣುಗಳಿರಲಿವೆ. ಇದು ನಮ್ಮ ಹಲಸಿನ ಹೆಚ್ಚುಗಾರಿಕೆ. ಅದನ್ನು ಜಗತ್ತಿಗೆ ಸಾರಿ ಹೇಳುವ ಕೆಲಸ ಈ ಮೇಳದ್ದು.
ಹಲಸು ಎಂಬ ಈ ಮಹತ್ವದ ಹಣ್ಣಿನಲ್ಲಿ ಕ್ಯಾನ್ಸರ್ ಆದಿಯಾಗಿ ಹಲವು ರೋಗಗಳ ವಿರುದ್ಧ ಸೆಣಸಬಲ್ಲ ಆಂಟಿ ಆಕ್ಸಿಡೆಂಟ್ಸ್ ಪ್ರಮಾಣ ಹೆಚ್ಚಿರುತ್ತದೆ, ಹಾಗಾಗಿ ಅದರ ಔಷಧೀಯ ಗುಣಗಳ ವಾರಸುದಾರಿಕೆ ನಮ್ಮಲೇ ಉಳಿಸಿಕೊಳ್ಳುವ ಸಂಕಲ್ಪವೂ ಈ ಮೇಳದಲ್ಲಿ ಮಾಡಲಾಗುತ್ತದೆ.
ಇಷ್ಟೆಲ್ಲಾ ವಿಶೇಷಣಗಳನ್ನೊಳಗೊಂಡ ಹಲಸು ಯಾವ ಉಪಚಾರವನ್ನೂ ಕೇಳದೆ ತಂತಾನೆ ಬೆಳೆದು ಲೋಡುಗಟ್ಟಲೆ ಹಣ್ಣುಗಳನ್ನು ನೀಡುತ್ತಾ ಕೃಷಿ ಕುಟುಂಬಗಳ ಪರ್ಯಾಯ ಆದಾಯದ ಮಾರ್ಗವಾಗಿದೆ ಕೂಡಾ…
ನನ್ನ ನೆನಪು
ಕೃಷ್ಣಮೂರ್ತಿ ಬಿಳಿಗೆರೆ ಅವರೊಂದಿಗೆ ಮೇಳದ ಕುರಿತು ಮಾತನಾಡುವಾಗ ನನ್ನ ಶಾಲಾ ದಿನಗಳಲ್ಲಿ (80 ರ ದಶಕ) ಕೊರಟಗೆರೆ ತಾಲ್ಲೂಕಿನಲ್ಲಿ ಹಲಸು ಹೇಗೆಲ್ಲಾ ಬಳಕೆಯಾಗುತ್ತಿತ್ತು ಎಂಬುದು ನೆನಪಾಯಿತು. ನನ್ನ ಸೋದರಮಾವನ ಮದುವೆ. ಬೆಳಿಗ್ಗೆ ತಿಂಡಿಗೆ ಉಪ್ಪಿಟ್ಟು. ಉಪ್ಪಿಟ್ಟಿನ ಜೊತೆಗೆ ಪುಟ್ಟಬಾಳೆ ಹಣ್ಣು ಮತ್ತು ಹಲಸಿನ ತೊಳೆ ಕೊಟ್ಟರು. ಇಡೀ ಮದುವೆ ಜನಕ್ಕೆ ಉಪ್ಪಿಟ್ಟಿನ ಜೊತೆ ಹಲಸಿನ ತೊಳೆ ಒದಗಿಸಲು ಏಳೆಂಟು ಮಂದಿ ಹಲಸಿನ ಹಣ್ಣು ಬಿಚ್ಚಲಿಕ್ಕೇ ಕುಳಿತಿದ್ದರು.
ಇದು ಬಿಟ್ಟರೆ ದೋಸೆ ಹಿಟ್ಟಿನ ಜೊತೆಗೆ ರುಬ್ಬಿದ ಹಲಸಿನ ತೊಳೆ ಸೇರಿಸಿ ಸಿಹಿ ದೋಸೆ ಮಾಡುತ್ತಿದ್ದರು. ಇಷ್ಟಾಗಿ ಕೆತ್ತಲಸಿನ ಸಾರು. ಹಲಸಿನ ಬೀಜ ಒಲೆಗೆ ಎಸೆದು ಸುಟ್ಟು ತಿನ್ನುವುದು. ಸಾರಿಗೆ ಹಲಸಿನ ಬೀಜ ಬಳಸುವುದು ರೂಢಿಯಲ್ಲಿತ್ತು. ಆದರೀಗ ಹಲಸಿನಲ್ಲಿ ವೈನ್, ಚಿಪ್ಸ್ ನಿಂದ ಹಿಡಿದು ನೂರಾರು ಬಗೆಯ ತಿನಿಸುಗಳನ್ನು ತಯಾರಿಸುವ ದೇಸಿ ಸಂಶೋಧನೆಗಳು ನಡೆದಿವೆ. ಜೊತೆಗೆ ಅಂಥ ಎಲ್ಲಾ ಆವಿಷ್ಕಾರಗಳನ್ನೂ ಊರೂರಿಗೆ ತಲುಪಿಸಲು ಕನ್ನಡ ನೆಲದ ಹೆಮ್ಮೆಯ ಕೃಷ್ಣಪ್ರಸಾದ್, ಕೃಷ್ಣಮೂರ್ತಿ ಬಿಳಿಗೆರೆ, ಮಲ್ಲಿಕಾರ್ಜುನ ಹೊಸಪಾಳ್ಯ, ಗಾಣದಾಳು ಶ್ರೀಕಂಠ, ಆನಂದ ತೀರ್ಥ ಪ್ಯಾಟಿ, ವಿಶ್ವನಾಥ ಅಣೇಕಟ್ಟೆ ಹೀಗೆ ಅನೇಕ ಕಿಂದರಜೋಗಿಗಳಿದ್ದಾರೆ.