-ನಾಗೇಶ್ ಕೆ.ಎನ್.
ನೀನು ಕೆಡುಕನ್ನು ಪ್ರಶ್ನಿಸದೇ ಇದ್ದರೆ ಪಾಪ ಮಾಡಿದಂತೆ. If you do not resist evil you are committing
sin. ಎಂ.ಕೆ. ಗಾಂಧಿಹೌದು. ಇದೀಗ ದೇಶದಲ್ಲಿ ಅನೇಕಾನೇಕ ಕೇಡುಗಳು ಘಟಿಸುತ್ತಿವೆ. ಸಂವಿಧಾನ ವಿರೋಧಿ ಚಟುವಟಿಕೆಗಳು
ಜಾರಿಯಲ್ಲಿವೆ. ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಇಂಥಃ ಸಂದಿಗ್ದ ಪರಿಸ್ಥಿತಿಯಲ್ಲಿ ಮೌನವಾಗಿರುವುದು ಸಲ್ಲ. ಅದನ್ನೇ
ಗಾಂಧಿ ಹೇಳಿದ್ದು. ಚೆಗುವೆರಾ ಮಾತೊಂದು ಹೀಗಿದೆ, “ಜಗತ್ತಿನ ಯಾವುದೇ ಮೂಲೆಯಲ್ಲಿ ನೀನು ಅನ್ಯಾಯವನ್ನು
ಪ್ರಶ್ನಿಸುತ್ತಿದ್ದರೆ ನೀನು ನನ್ನ ಸಂಗಾತಿ”
ಬಹುತ್ವವೇ ಭಾರತದ ಅಸ್ಮಿತೆ. ಇಂದು ಬಹುತ್ವಕ್ಕೆ ಧಕ್ಕೆ ಬಂದಿದೆ. ಪ್ರಭುತ್ವವೇ ಮುಂದೆ ನಿಂತು ಬಹುತ್ವಕ್ಕೆ ಕೊಳ್ಳಿ
ಇಟ್ಟಿದೆ. ಕೋಮು ದ್ವೇಷ ಭಾವ ಕಾಡ್ಗಿಚ್ಚಿನಂತೆ ಹಬ್ಬಿದೆ. ಅದಕ್ಕೆ “ದೇಶಪ್ರೇಮ” ವೆಂದು ನಾಮಕರಣ ಮಾಡಲಾಗಿದೆ.
ಇದು ನೈಜ ಬೆಳವಣಿಗೆ ಅಲ್ಲ. ಬದಲಿಗೆ ಇದೊಂದು ಅಫೀಮು. ಈ “ಮದ್ದು” ಸೇವಿಸಿದ ಜನ ಸಾಮಾನ್ಯರು “
ದೇಶಪ್ರೇಮ” ವೆಂಬ ಅಂಧಕಾರದಲ್ಲಿ ಸಿಲುಕಿದ್ದಾರೆ. ಇದರಿಂದ ನಮ್ಮ ಜನರನ್ನು ರಕ್ಷಿಸಿಕೊಳ್ಳಬೇಕಿದೆ.
ಹತ್ತು ವರ್ಷಗಳ ಹಿಂದೆ ರೈತರ ಆದಾಯ ದ್ವಿಗುಣಗೊಳಿಸುವುದೂ ಸೇರಿದಂತೆ ಗ್ರಾಮೀಣ ಯುವಕರಿಗೆ ಕೃಷಿಯತ್ತ
ಒಲವು ಬೆಳೆಸಿಕೊಳ್ಳುವ ಯೋಜನೆಗಳನ್ನು ತರುತ್ತೇವೆಂದರು. ರೈತರು ಬೆಳೆದ ಬೆಳೆಗಳಿಗೆ ಸ್ವಾಮಿನಾಥನ್ ಸಮಿತಿ
ವರದಿಯಂತೆ C2+ 50% ಎಂ.ಎಸ್.ಪಿ ಕೊಡುವುದಾಗಿ ಹೇಳಿದ್ದರು. ಅದೆಲ್ಲವೂ ಭಾಷಗಳಿಗಷ್ಟೇ ಸೀಮಿತವಾಗಿದೆ..
ಯಾವುದೂ ನೈಜವಾಗಿ ಊರ್ಜಿತವಾಗಲಿಲ್ಲ.
ದುಡಿವ ಕೈಗಳಿಗೆ ಕೆಲಸ ಕೊಡುವ ಭರವಸೆ ನೀಡಿದ್ದರು. ಇರುವ ಕೆಲಸಗಳಿಗೇ ಕುತ್ತು ಬಂತು. ಸಬ್ ಕಾ ಸಾತ್ ಸಬ್
ಕಾ ವಿಕಾಸ್ ಎಂದರು. ದೇಶದ ಸಂಪತ್ತೆಲ್ಲಾ ಕೆಲವೇ ಉದ್ಯಮಿಗಳ ಕೈಯಲ್ಲಿರುವಂತೆ ನೋಡಿಕೊಂಡರು.
ಉಳ್ಳವರು ಪ್ರಶ್ನಿಸಿದರೆ ಐಟಿ ಇಡಿ ದಾಳಿಯ ಮೂಲಕ ಬಾಯಿ ಮುಚ್ಚಿಸುತ್ತಾರೆ. ಶ್ರೀ ಸಾಮಾನ್ಯರು ಕೇಡು ಕಂಡರೂ
ಪ್ರಶ್ನಿಸುತ್ತಿಲ್ಲ. ಕಾರಣ ಅವರೆಲ್ಲ “ದೇಶಪ್ರೇಮ” ವೆಂಬ ಅಫೀಮಿನಲ್ಲಿ ಕಕರುಮಕರಾಗಿದ್ದಾರೆ. ಜನರನ್ನು ತಮ್ಮ ಹಿಂದೆ
ಇಟ್ಟುಕೊಳ್ಳಲು CONVINCE OR CONFUSE ಎಂಬ ಮಾರ್ಗವಿದೆ. ಜನ ಅವರ ಮಾತಿಗೆ ಕನ್ವಿನ್ಸ್ ಆದರೂ
ಅವರ ಜೊತೆಯಲ್ಲಿರುತ್ತಾರೆ. ಕನ್ಫ್ಯೂಸ್ ಆದರೂ ಅವರ ಹಿಂದೆಯೇ ಇರುತ್ತಾರೆ. ಈಗ ಪ್ರಭುತ್ವ ಮಾಡಿರುವುದು
ಅದನ್ನೇ. ಆ ಬಗ್ಗೆ ನಮಗೆ ಎಚ್ಚರವಿರಬೇಕು. ಯಾವುದು ಸರಿ ಯಾವುದು ತಪ್ಪು ಎಂಬುದು ನಮಗೆ ಅರಿವಿರಬೇಕು.
ಅರಿವೇ ಗುರು.
ಧರ್ಮ- ಧರ್ಮಗಳ, ಜಾತಿ-ಜಾತಿಗಳ ನಡುವೆ ಇದ್ದ ಸಣ್ಣದೊಂದು ಕಂದಕ ಕಳೆದ ಹತ್ತು ವರ್ಷಗಳಲ್ಲಿ ದೊಡ್ಡದಾಗಿದೆ.
ಒಬ್ಬರನ್ನೊಬ್ಬರು ಸಂಧಿಸದ, ಸಹಜೀವಿಗಳು ಮುಖಾಮುಖಿಯಾಗಿ ಮಾತನಾಡದ ಪರಿಸ್ಥಿತಿ ತಲುಪಿದೆ. ಇದೇ ಸರಿ
ಎಂದು ಒಪ್ಪಿಕೊಳ್ಳುವ “ಚಿಂತಕ”ರೂ ನಮ್ಮ ನಡುವೆ ಇದ್ದಾರೆ. ಹಾಗಾಗಿ ಎಡ-ಬಲ ಎರಡೂ ಅತಿರೇಕದ
ಕೂಪಗಳಾಗಿವೆ. ಈಗ ನಮಗೆ ಬೇಕಿರುವುದು ಎಡವೂ ಅಲ್ಲ ಬಲವೂ ಅಲ್ಲ ಮನುಷ್ಯ ಧರ್ಮ ಮಾತ್ರ. ಅದಕ್ಕಾಗಿ
ಸಮುದಾಯ “ಜನ-ಚಳುವಳಿ” ರೂಪಿಸಿದೆ. ಇದು ನಿಮ್ಮ ಚಳುವಳಿ, ನಮ್ಮ ಚಳುವಳಿ, ನಾವೆಲ್ಲರೂ ಸೇರಿ ನಮ್ಮ
ಉಳಿವಿಗಾಗಿ ಮಾಡಲೇಬೇಕಾದ “ಜನ-ಚಳುವಳಿ”.