ಕೃಷಿ ಬಿಕ್ಕಟ್ಟಿನ ಆಳ ಅಗಲ ಮತ್ತು ಪರಿಹಾರ

ಕೃಷಿ ಬಿಕ್ಕಟ್ಟಿನ ಆಳ ಅಗಲ ಮತ್ತು ಪರಿಹಾರ
Spread the love

-ಡಾ. ವಂದನಾ ಶಿವ

ಹಸಿರುಕ್ರಾಂತಿಯ ಬಗೆಗಿನ ನನ್ನ ಕಲಿಕೆ ಆರಂಭವಾಗಿದ್ದು 1984 ರಲ್ಲಿ, ಪಂಜಾಬ್ ಗಲಬೆ ಹಾಗೂ
ಭೂಪಾಲ್ ದುರಂತದ ಸಂದರ್ಭದಲ್ಲಿ. ಹಸಿರುಕ್ರಾಂತಿಯೊಂದಿಗೆ ಆ ಮಟ್ಟದ ಹಿಂಸೆ ಯಾಕೆ
ಮೇಳೈಸಿದೆ ಎಂಬುದನ್ನು ನಾನು ಅರ್ಥಮಾಡಿಕೊಳ್ಳಬೇಕಿತ್ತು. ಆ ಅಧ್ಯಯನದ ಅವಧಿಯಲ್ಲಿ
ರಾಸಾಯನಿಕಗಳನ್ನು ಬಳಸಿ ಏಕ ಬೆಳೆ ಪದ್ಧತಿಗೆ ರೈತ ಅಡಿಯಾಳಾಗುವ ಹಸಿರುಕ್ರಾಂತಿಯ
ಪರಿಕಲ್ಪನೆ ಹಾಗೂ ಪರಿಕರಗಳಲ್ಲೇ ಹಿಂಸೆ ಅಡಗಿದೆ ಎಂಬುದನ್ನು ನಾನು ಅರಿತೆ.
ಹಸಿರುಕ್ರಾಂತಿ ಹಾಗೂ ಔದ್ಯಮಿಕ ಕೃಷಿಯಲ್ಲಿ ಬಳಕೆಯಾಗುತ್ತಿರುವ ರಾಸಾನಿಕಗಳ ಮೂಲ ಯುದ್ಧ.
ಕೇವಲ 100 ವರ್ಷಗಳಲ್ಲಿ, ಯುದ್ಧಾಧಾರಿತ ಉದ್ಯಮಗಳ ಗುಂಪುಗಳು ತಯಾರಿಸುವ ವಿಷಯುಕ್ತ
ರಾಸಾಯನಿಕಗಳು ಲಕ್ಷಗಟ್ಟಲೆ ಸಸ್ಯ ಪ್ರಭೇದಗಳನ್ನು ನಾಶಪಡಿಸಿದವು. ಇದೇ ರಾಸಾಯನಿಕ
ತಯಾರಕರ ಗುಂಪು ಈಗ ನಮ್ಮ ಭೂಮಿಯ ಪರಿಸರವನ್ನು ಹಾಗೂ ಇಡೀ ಆಹಾರ ಸರಪಳಿಗೆ ವಿಷ
ಉಣ್ಣಿಸುತ್ತಿದೆ ಮತ್ತು ನಮ್ಮ ಬದುಕಿನ ಪ್ರತಿಯೊಂದು ಆಯಾಮವನ್ನು ತನ್ನ ಹಿಡಿತಕ್ಕೆ
ತೆಗೆದುಕೊಳ್ಳುತ್ತಿದೆ. ಇಷ್ಟ್ಟೆಲ್ಲಾ ಸಾಹಸ ಆಗುತ್ತಿರುವುದು ಕೇವಲ ಆರ್ಥಿಕ ಲಾಭಕ್ಕಾಗಿ.
ಕಳೆದ ಒಂದು ಶತಮಾನದ ಅವಧಿಯಲ್ಲಿ ಔದ್ಯಮಿಕ ಕೃಷಿ ಹಾಗೂ ಹಸಿರು ಕ್ರಾಂತಿ ಹಾಗೂ ನಮ್ಮ
ಒಟ್ಟು ಆಹಾರ ವ್ಯವಸ್ಥೆಗೆ ಒಂದು ರೂಪ ಕೊಟ್ಟವರು ಕಳ್ಳಖದೀಮರು (ರಾಬರ್ ಬ್ಯಾರನ್ಸ್) ಹಾಗೂ
ಐಜಿ ಫಾರ್ಬೆನ್ ಪ್ರಯೋಗಾಲಯಗಳಲ್ಲಿ ಅಭಿವೃದ್ಧಿಗೊಂಡ ತಂತ್ರಜ್ಞಾನಗಳು.
ರಾಕ್ ಫೆಲ್ಲರ್ ಫೌಂಡೇಷನ್ ಹಸಿರುಕ್ರಾಂತಿಯ ಹೆಸರಿನಲ್ಲಿ ಕೃಷಿ ಕ್ಷೇತ್ರಕ್ಕೆ ಕಾಲಿಟ್ಟಾಗಲೇ
ಹಣದಾಹಿಗಳು ಹಾಗೂ ವಿಷಪ್ರಾಷನ ಮಾಡುವ ಸಂಸ್ಥೆಗಳು ಹಿಂದುಳಿದ ದೇಶಗಳಿಗೆ ಆ
ಫೌಂಡೇಷನ್ ಜೊತೆಜೊತೆಗೆ ಕಾಲಿಟ್ಟವು. ಕೋಟಿಗಟ್ಟಲೆ ಹಣ ಮಾಡಿದ್ದ ರಾಕ್ ಫೆಲ್ಲರ್ ಮತ್ತು
ಸ್ಟಾಂಡರ್ಡ್ ಆಯಿಲ್ ಜೊತೆಗೂಡಿ ಇ ರಾಕ್ ಫೆಲ್ಲರ್ ಫೌಂಡೇಷನ್ ಕಟ್ಟಿದವು. ರಾಕ್ ಫೆಲ್ಲರ್
ಕಳ್ಳಖದೀಮರ ಪೈಕಿಯವನೆಂದು ಮತ್ತೊಮ್ಮೆ ಹೇಳಬೇಕಿಲ್ಲ.

ಯುದ್ಧದ ಸಂದರ್ಭದಲ್ಲಿ ಜೊತೆಯಾದ, ತೈಲದೊರೆಗಳು ಮತ್ತು ವಿಷ ತಯಾರಿಸುವ ಚಾಂಡಾಳ
ದೊರೆಗಳ ಕೂಟವನ್ನು ಔದ್ಯಮಿಕ ಕೃಷಿಯೆಂದು ವ್ಯಾಖ್ಯಾನಿಸಬಹುದು. ಈಗ ಒಂದಾಗಿರುವ
ಮಾನ್ಸಾಂಟೊ ಮತ್ತು ಬೇಯರ್ ಕಂಪನಿಗಳಿಗೂ ದೀರ್ಘ ಇತಿಹಾಸವಿದೆ. ಅವು ತಂತ್ರಜ್ಞಾನಗಳನ್ನು
ವಿನಿಮಯ ಮಾಡಿಕೊಂಡು ಸಿಡಿಮದ್ದುಗಳನ್ನು ಮತ್ತು ಜೀವ ತೆಗೆವ ಅನಿಲಗಳನ್ನು ತಯಾರಿಸಿ ಯುದ್ಧ
ನಿರತ ಶತ್ರು ರಾಷ್ಟ್ರಗಳಿಗೆ ಮಾರಾಟ ಮಾಡುತ್ತಿದ್ದವು. ಅವುಗಳಿಗೆ ಹಿಟ್ಲರ್ ಕೂಡಾ ಗಿರಾಕಿಯಾಗಿದ್ದ
ಹಾಗೂ ಹಿಟ್ಲರ್ ವಿರುದ್ಧ ಒಂದಾಗಿದ್ದ ರಾಷ್ಟ್ರಗಲೂ ಗಿರಾಕಿಗಳಾಗಿದ್ದವು. ಮಾರಾಟ ಮಾಡುವವರಿಗೆ
ಯಾರಾದರೇನು. ದುಡ್ಡು ಕೊಟ್ಟರಾಯಿತು. ವಿಶ್ವಯುದ್ಧ ನಡೆಯುವ ಮೊದಲು ಹಿಟ್ಲರ್‌ನ ಆರ್ಥಿಕ
ಶಕ್ತಿಯಾಗಿದ್ದ ಐಜಿ ಫಾರ್ಬೆನ್ ಅತಿ ಹೆಚ್ಚು ವಿದೇಶಿ ವಿನಿಮಯ ಗಳಿಸುತ್ತಿದ್ದ ಸಂಸ್ಥೆಯಾಗಿತ್ತು. ಅಮೆರಿಕ
ಮತ್ತು ಸ್ವಿಟ್ಸರ್‌ಲೆಂಡ್ ದೇಶಗಳಲ್ಲಿ ಅದರ ಶಾಖೆಗಳಿದ್ದವು. ಬೇಯರ್ ಈ ಫಾರ್ಬೆನ್ ಕಂಪನಿಯ
ಪಾರ್ಟ್ನರ್.

Russia, antifascist war | 1941-45
Rocker projectors “Katyusha” near Viborg, Leningrad front, 1944

ಹಿಟ್ಲರ್ ನರಮೇಧಕ್ಕಾಗಿ ಬಳಸುತ್ತಿದ್ದ ಸೈನೈಡ್ ಮೂಲದ ಪೆಸ್ಟಿಸೈಡ್ ಝೈಕ್ ಲಾನ್ ಬಿ,
ಪೂರೈಸುತ್ತಿದ್ದ ಐಜಿ ಫಾರ್ಬೆನ್ ಜೊತೆ ಕೈಜೋಡಿಸಿದ್ದ ಸಂಸ್ಥೆ ಮಾನ್ಸಾಂಟೋ. ನೂರೆಂಬರ್ಗ್
ವಿಚಾರಣೆಗಳಲ್ಲಿ ಇದೇ ಝೈಕ್ ಲಾನ್ ಬಿ ಪೆಸ್ಟಿಸೈಡನ್ನು ಸಾಕ್ಷಿಯಾಗಿ ಬಳಸಲಾಗಿತ್ತು. ಆ
ವಿಚಾರಣೆಯಲ್ಲಿ ಐಜಿ ಫಾರ್ಬೆನ್ ಮತ್ತು ಅದರ ಪಾಲುದಾರರಾದ ಬೇಯರ್, ಬಿಎಎಸ್‌ಎಫ್ ಮತ್ತು
ಅವೆಂಟಿಸ್ ಕಂಪನಿಗಳು ಯುದ್ಧ ಸಂದರ್ಭದಲ್ಲಿ ಅಪರಾಧವೆಸಗಿದ್ದಕ್ಕಾಗಿ ಅಪರಾಧಿ ಸ್ಥಾನದಲ್ಲಿ
ನಿಂತವು.

ಮಾನ್ಸಾಂಟೊ ಮತ್ತು ಬೇಯರ್ ಕಂಪನಿಗಳಿಗೆ ಮೊಬೆ ಕಂಪನಿ ಜೊತೆಯೂ ಪಾಲುದಾರಿಕೆ ಇತ್ತು.
ವಿಯೆಟ್ನಾಮ್ ಯುದ್ಧದಲ್ಲಿ ಏಜೆಂಟ್ ಆರೆಂಜ್‌ಗೆ ಬೇಕಾದ ಸರಕನ್ನು ಪೂರೈಸಿದ ಸಂಸ್ಥೆ ಮೊಬೆ. ದಕ್ಷಿಣ
ವಿಯೆಟ್ನಾಮಿನ ಮೇಲೆ 20 ಮಿಲಿಯನ್ ಗ್ಯಾಲನ್ ಕಳೆ ನಾಶಕವನ್ನು ಮತ್ತು ಡೆಪೊಲಿಯಂಟ್
ಸಿಂಪಡಿಸಲಾಯಿತು. ಮೊಬೆಯ ರಾಸಾಯನಿಕಗಳ ಪರಿಣಾಮದಿಂದಾಗಿ ವಿಕಲಾಂಗ ಮಕ್ಕಳು
ಹುಟ್ಟಿದವು ಹಾಗೂ ವಯಸ್ಕರು ಕ್ಯಾನ್ಸರ್‌ನಂತಹ ಮಾರಕ ರೋಗಗಳಿಗೆ ತುತ್ತಾದರು.
ಗೊಬ್ಬರದಿಂದ ಕೀಟನಾಶಕದವರೆಗೆ ಇಡೀ ಹಸಿರುಕ್ರಾಂತಿ ನಿಂತದ್ದೇ ತೈಲೋದ್ಯಮದ ಮೇಲೆ. ಕೃಷಿ
ರಾಸಾಯನಿಕಗಳಾಗಿ ಬದಲಾದ ಈ ರಾಸಾಯನಿಕಗಳ ಮೂಲ ಐಜಿ ಫಾರ್ಬೆನ್ ಪ್ರಯೋಗಾಲಯ.

ಈ ರಾಸಾಯನಿಕಗಳು ಬಳಕೆಯಾಗಿದ್ದು ರಣರಂಗದಲ್ಲಿ ಕೊಲ್ಲುವುದಕ್ಕಾಗಿ ಹಾಗೂ ಹಿಟ್ಲರ್‌ನ
ನರಮೇಧದ ಕ್ಯಾಂಪುಗಳಲ್ಲಿ ಜನರನ್ನು ಸಾರಾಸಗಟಾಗಿ ಯಮಲೋಕಕ್ಕೆ ಅಟ್ಟುವುದಕ್ಕಾಗಿ. ಆ
ಕಂಪನಿಗಳ ಮೂಲ ಉದ್ದೇಶವೇ ಕೊಲ್ಲುವುದು. ಈಗಲೂ ಆ ರಾಸಾಯನಿಕಗಳು ಕೊಲ್ಲುವುದನ್ನು
ಮುಂದುವರೆಸಿದ್ದಾವೆ.

ಹಸಿರುಕ್ರಾಂತಿಯ ಮೂಲ ಉದ್ದೇಶವೇ ಈ ರಾಸಾನಿಕಗಳನ್ನು ಕೃಷಿಗೆ ಒಳಸುರಿಯಾಗಿ
ಪೂರೈಸುವುದಾಗಿತ್ತು. ಹಸಿರು ಬದುಕಿನ ವರ್ಣವಾಗಿದ್ದರೆ, ಆಳುವವರನ್ನು ಉರುಳಿಸಲು ಜನತೆ
ಒಂದಾಗುವುದನ್ನು ಕ್ರಾಂತಿ ಎಂದು ಕರೆಯುವುದಾದರೆ, ಹಸಿರುಕ್ರಾಂತಿಯಲ್ಲಿ ಹಸಿರೂ ಇರಲಿಲ್ಲ
ಕ್ರಾಂತಿಯೂ ಇರಲಿಲ್ಲ. ಅದು ಹಸಿರಲ್ಲ, ಯಾಕೆಂದರೆ ಅದು ಜೀವ ವೈವಿಧ್ಯವನ್ನು ನಾಶಪಡಿಸಿತು.
ಹಸಿರು ಒಣಗಿ ಭೂಮಿ ಬರಡಾಗುವುದನ್ನು ಪ್ರೇರೇಪಿಸಿತು. ಭೂಮಿಯನ್ನು ಕೊರೆದು ನೀರನ್ನು
ಕಲುಷಿತಗೊಳಿಸಿತು. ಇವೆಲ್ಲವನ್ನೂ ನಾನು ಪಂಜಾಬ್‌ನಲ್ಲಿ ಕಂಡಿದ್ದೇನೆ. ದಾಖಲಿಸಿದ್ದೇನೆ. ಪಂಜಾಬ್
ಹಸಿರು ಕ್ರಾಂತಿಯ ಮೊದಲ ಪ್ರಯೋಗಾಲಯ. 1960 ರ ದಶಕದಲ್ಲಿ ರಾಕ್ ಫೆಲ್ಲರ್ ಫೌಂಡೇಷನ್
ಮೊದಲು ಅಡಿಯಿಟ್ಟದ್ದೇ ಪಂಜಾಬಿಗೆ. ವಾತಾವರಣ ಬದಲಾವಣೆಗೆ ಮೂಲ ಕಾರಣಗಳಲ್ಲಿ ಒಂದಾದ
ಹಸಿರು ಮನೆ ಅನಿಲಗಳ ಬಿಡುಗಡೆಯಲ್ಲಿ ಹಸಿರು ಕ್ರಾಂತಿ ಅಥವಾ ಔದ್ಯಮಿಕ ಕೃಷಿಯ ಪಾಲು
ಶೇಕಡಾ 50 ರಷ್ಟು. ಅದು ಕ್ರಾಂತಿಯಲ್ಲ. ಯಾಕೆಂದರೆ, ಅದು ತೈಲೋದ್ಯಮ ಮತ್ತು ಕೃಷಿ ಮತ್ತು
ಆಹಾರ ವ್ಯವಸ್ಥೆಗೆ ವಿಷವುಣಿಸುವ ಚಾಂಡಾಳ ಚೌಡಿಕೆಯ ಗುಂಪುಗಳ ಶಕ್ತಿ ವರ್ಧನೆ ಮಾಡಿತು.
ಭೂಮಿ, ರೈತರು ಮತ್ತು ನಮ್ಮ ಆರೋಗ್ಯವನ್ನು ಪಣಕ್ಕಿಟ್ಟು ಆ ಕಂಪನಿಗಳು ಹಣ ಕೊಳ್ಳೆಹೊಡೆದವು.
ತೈಲವೇ ಈಗ ನಮ್ಮ ಕೃಷಿಯ ಮೂಲ ವಸ್ತುವಾಗಿದೆ. ಪೇಟೆಂಟ್ ಪಡೆದ ಯುದ್ಧದ
ರಾಸಾಯನಿಕಗಳಿಗಾಗಿ ಬೆಳೆಯುವ ಗೋಧಿ ಮತ್ತು ಅಕ್ಕಿಯ ಭಿತ್ತನೆ ಬೀಜವನ್ನು ರೈತರಿಗೆ
ಹಂಚುವಾಗ ಯಾರೂ ರೈತರನ್ನು ಇದು ನಿಮಗೆ ಬೇಕೇ, ಬೇಡವೇ ಎಂದು ಕೇಳಲಿಲ್ಲ. ಈ
ಬೆಳೆಗಳನ್ನು ಬೆಳೆಯಲು ನೀರಾವರಿ ಮಾಡಬೇಕಾಗುತ್ತದೆ ಎಂದು ಯಾರೂ ರೈತರಿಗೆ ಹೇಳುವ
ಗೊಡವೆಗೆ ಹೋಗಲಿಲ್ಲ. ತೈಲ ಕೃಷಿ ಅಥವಾ ಔದ್ಯಮಿಕ ಕೃಷಿ ವಿಜ್ಞಾನದ ವಿರೋಧಿ. ಬೀಜದ
ವಸಾಹತುಕರಣಕ್ಕಾಗಿ ಏಕಬೆಳೆ ಪದ್ಧತಿಯನ್ನು ಜಾರಿಗೆ ತಂದಿರುವುದು ಇಲ್ಲಿರುವಷ್ಟು ಢಾಳಾಗಿ
ಇನ್ನೆಲ್ಲೂ ಗೋಚರಿಸದು. ಬೀಜಕ್ಕಿದೆ ಸ್ವಯಂಬುದ್ಧಿ. ಅದು ಹುಟ್ಟುತ್ತದೆ, ಹೆಚ್ಚಾಗುತ್ತದೆ ಮತ್ತು

ಸತತವಾಗಿ ವಿಕಸನ ಹೊಂದುತ್ತಿರುತ್ತದೆ. ರೈತರು ವಿಶೇಷವಾಗಿ ರೈತ ಮಹಿಳೆಯರು ಬೀಜದ
ಬುದ್ಧಿಯೊಂದಿಗೆ ತಮ್ಮ ಬುದ್ಧಿಯನ್ನು ಮೇಳೈಸಿದ್ದಾರೆ. ಜನನ ಪ್ರಕ್ರಿಯೆಯ ಮೂಲಕ ಸಹ-ಸೃಷ್ಟಿಗೆ
ಕಾರಣರಾಗಿದ್ದಾರೆ. ಕಾಡ ಗಿಡಗಳನ್ನು ನಾಡಿಗೆ ಒಗ್ಗಿಸಿದ್ದಾರೆ. ಬೇರೆ ಬೇರೆ ಸಂಸ್ಕೃತಿಗಳು ಹಾಗೂ
ಭಿನ್ನ ಭಿನ್ನ ವಾತಾವರಣಗಳಿಗೆ ಹೊಂದಿಕೊಳ್ಳುವಂತೆ ವೈವಿಧ್ಯತೆಯನ್ನು ಹೆಚ್ಚಿಸಿದ್ದಾರೆ.
ಜೊತೆಜೊತೆಯಲಿ ಅವರು ಪೌಷ್ಠಿಕಾಂಶವನ್ನು ಹೆಚ್ಚಿಸಿದ್ದಾರೆ. ರುಚಿಯನ್ನು ಹೆಚ್ಚಿಸಿದ್ದಾರೆ,
ಸಹಿಷ್ಣುತೆಯನ್ನು ಹೆಚ್ಚಿಸಿದ್ದಾರೆ. ಇವೆಲ್ಲವೂ ಸಾಧ್ಯವಾಗಿರುವುದು ಬೀಜದೊಳಡಗಿರುವ ವಿಕಸನದ
ಶಕ್ತಿಯಿಂದ. ಪರಿಸರ ಹಾಗೂ ಸಾಮಾಜಿಕ ಬೇಡಿಕೆಗಳಿಗೆ ಅನುಗುಣವಾಗಿ ಬೀಜಗಳ ಗುಣಮಟ್ಟವನ್ನು
ಹೆಚ್ಚಿಸಲಾಗುತ್ತಿದೆ.

ಔದ್ಯಮಿಕ ಕೃಷಿ ಹಾಗೂ ಹಸಿರು ಕ್ರಾಂತಿ ತೈಲೋದ್ಯಮದ ಹಣದ ತೈಲಿ ಬಳಸಿಕೊಂಡು ಕೃಷಿಯನ್ನು
ಬದುಕಿನ ಬೇಸಾಯದಿಂದ ಸರ್ವಸ್ವವನ್ನು ನಾಶಪಡಿಸುವ ಯುದ್ಧಾಸ್ತ್ರಗಳ ಮಾರುಕಟ್ಟೆಯಾಗಿ
ಬದಲಾಯಿಸಲಾಗಿದೆ. ಯುದ್ಧೋಪಾದಿಯಾಗಿ ಯೋಚಿಸುವ ಏಕಬೆಳೆ ಸಂಸ್ಕೃತಿಯನ್ನು ಹೇರುವ
ಮನಸುಗಳು ನಮ್ಮ ಆಹಾರ ಪದ್ಧತಿಯ ಮೇಲೆ ಹಿಡಿತ ಸಾಧಿಸುವಂತೆ ಮಾಡಿದೆ.
ಭಾರತ ಮತ್ತು ಮೆಕ್ಸಿಕೋ ಮೇಲೆ ಹಸಿರುಕ್ರಾಂತಿಯನ್ನು ಹೇರಿದಾಗ, ರೈತರಿಂದ ಬಿತ್ತನೆ ಬೀಜ
ಪಡೆದು ಅಂತಾರಾಷ್ಟ್ರೀಯ ಸಂಸ್ಥೆಗಳಿಗೆ ರವಾನಿಸಲಾಯಿತು. ಆ ಸಂಸ್ಥೆಗಳು ಈ ಬೀಜಗಳನ್ನು
ಹಸಿರುಕ್ರಾಂತಿಯ ರಾಸಾಯನಿಕ ಒಳಸುರಿಗಳಿಗೆ ಸ್ಪಂದಿಸುವ ಬೀಜಗಳನ್ನು ಉತ್ಪತ್ತಿ ಮಾಡಲು
ಬಳಸಿದವು. ಫಿಲಿಪೀನ್ಸ್ನಲ್ಲಿರುವ ಭತ್ತ ಅಧ್ಯಯನ ಸಂಸ್ಥೆ ಮತ್ತು ಮೆಕ್ಸಿಕೋದಲ್ಲಿರುವ ಮೆಕ್ಕೆ ಜೋಳ
ಮತ್ತು ಗೋಧಿ ಅಧ್ಯಯನ ಸಂಸ್ಥೆಗಳಲ್ಲಿ ಈ ಪುನರ್ ಉತ್ಪತ್ತಿ ಕ್ರಿಯೆಗೆಳು ನಡೆದವು. ಈ ಸಂಸ್ಥೆಗಳು
ವೈವಿಧ್ಯತೆಯನ್ನು ರೈತರಿಂದ ಪಡೆದು ವೈವಿಧ್ಯತೆಯ ಜಾಗದಲ್ಲಿ ಏಕಬೆಳೆ ಸಂಸ್ಕೃತಿಯನ್ನು
ಉತ್ತೇಜಿಸುವ ರಾಸಾಯನಿಕಗಳಿಗೆ ಸ್ಪಂದಿಸುವ ಭತ್ತ, ಗೋದಿ ಹಾಗೂ ಜೋಳವನ್ನು
ಅಭಿವೃದ್ಧಿಪಡಿಸಿದವು.

1960 ಹಾಗೂ 70 ರ ದಶಕಗಳಲ್ಲಿ ಈ ಸಂಸ್ಥೆಗಳು ಏಷಿಯಾ ಹಾಗೂ ಲ್ಯಾಟಿನ್ ಅಮೆರಿಕ ರಾಷ್ಟ್ರಗಳಲ್ಲಿ
ವಿವಾದಾತ್ಮಕವಾದ ಹಸಿರುಕ್ರಾಂತಿಯ ಕೃಷಿ ಪದ್ಧತಿಯನ್ನು ಆರಂಭಿಸಿದವು ಹಾಗೂ ಅದು
ವ್ಯಾಪಕವಾಗಿ ವ್ಯಾಪಿಸುವಂತೆ ನೋಡಿಕೊಂಡವು. ರಸಾಯನಿಕಗಳಿಗೆ ಸ್ಪಂದಿಸುವ ಕೆಲವೇ ಕೆಲವು

ಬೀಜಗಳನ್ನು ಎಲ್ಲೆಡೆ ಹಂಚಿದವು. ಈ ವೆರೈಟಿಯನ್ನು ಅತಿ ಹೆಚ್ಚು ಇಳುವರಿ ಕೊಡುವ ವೆರೈಟಿ ಎಂದು
ಕರೆಯಲಾಯಿತು. ವಿಶ್ವ ಸಂಸ್ಥೆ ಗಮನಿಸಿ ದಾಖಲಿಸಿರುವಂತೆ ಅತಿ ಹೆಚ್ಚು ಇಳುವರಿ ಕೊಡುವ ವೆರೈಟಿ
ಎಂದು ಕರೆಯುವುದೇ ದಾರಿ ತಪ್ಪಿಸುವುದಾಗಿತ್ತು. ಕಾರಣ, ಅವುಗಳ ಇಳುವರಿ ಹೆಚ್ಚಿರಲಿಲ್ಲ. ಆ ಶಕ್ತಿ
ಆ ಬೀಜದೊಳಗೂ ಹುದುಗಿರಲಿಲ್ಲ. ಹೊರಗೂ ಇರಲಿಲ್ಲ. ಅತಿ ಹೆಚ್ಚು ಇಳುವರಿ ಕೊಡುವ ವೆರೈಟಿ
ಎಂದು ಕರೆಯುವ ಬದಲು ಅದನ್ನು ರಾಸಾಯನಿಕ ಗೊಬ್ಬರಗಳಿಗೆ ಅತಿ ಹೆಚ್ಚು ಪ್ರತಿಕ್ರಿಯಿಸುವ
ವೆರೈಟಿ ಎಂದು ಕರೆದಿದ್ದರೆ ಸರಿಯಾಗಿರುತ್ತಿತ್ತು.

ಏಕಬೆಳೆ ಪದ್ಧತಿಯನ್ನು ಆಧರಿಸಿದ ಹಸಿರು ಕ್ರಾಂತಿ ಒಟ್ಟು 12,000 ಪ್ರಭೇದಗಳನ್ನು ಮತ್ತು ನಾವು
ತಿನ್ನುವ ಸಾವಿರಾರು ಬಗೆಯ ಬೆಳೆಗಳನ್ನು ನಾಶಪಡಿಸಿ ಜಾಗತಿಕವಾಗಿ ಮಾರಾಟವಾಗುವ
ಪೌಷ್ಠಿಕಾಂಶವಿಲ್ಲದ ವಿಷಪೂರಿತವಾದ ಕೇವಲ ಹನ್ನೆರಡು ಬಗೆಯ ವೆರೈಟಿಗಳನ್ನು ಕೃಷಿಯ ಮೇಲೆ
ಹೇರಿತು. ಹಸಿರುಕ್ರಾಂತಿ ಹಾಗೂ ಜಾಗತಿಕ ಮಾರುಕಟ್ಟೆ ಎರಡೂ ಸೇರಿಕೊಂಡು ನೀರಿಲ್ಲದಂತೆ
ಮಾಡಿದವು ಮತ್ತು ಮಣ್ಣು ಬರಡಾಗುವಂತೆ ಮಾಡಿದವು.

ಹೌದು, ಒಂದು ಎಕರೆಗೆ ಇಳುವರಿ ಲೆಕ್ಕ ಹಾಕಿದರೆ ಅದು ಹೆಚ್ಚಾಗಿದೆ. ಆದರೆ ಅದಕ್ಕೆ ತೆತ್ತಿರುವ ಬೆಲೆ
ಏನು, ಹೆಚ್ಚಾಗಿರುವ ಖರ್ಚು, ಕಮ್ಮಿಯಾಗಿರುವ ರೈತನ ಆದಾಯ ಮತ್ತು ಪೌಷ್ಠಿಕಾಂಶದ ಕೊರತೆ,
ಒಳಸುರಿಗಳ ಅಗಾಧವಾದ ಬೆಲೆ, ಕೃಷಿ ಸಾಲಗಳು ಹೆಚ್ಚಾಗುವಂತೆ ಮಾಡಿದೆ ಮತ್ತು ರೈತರ
ಆತ್ಮಹತ್ಯೆಗಳು ಹೆಚ್ಚಾಗುವಂತೆ ಮಾಡಿದೆ. 1995 ರಿಂದ ಈಚೆಗೆ ಮೂರೂವರೆ ಲಕ್ಷಕ್ಕೂ ಹೆಚ್ಚು
ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಪೌಷ್ಠಿಕಾಂಶದ ಕೊರತೆ ಅಪೌಷ್ಠಿಕತೆಯನ್ನು ಹೆಚ್ಚಿಸಿದೆ.
ನಾಲ್ವರಲ್ಲಿ ಒಬ್ಬ ಭಾರತೀಯ ಹಸಿವಿನಿಂದ ನರಳುತ್ತಿದ್ದಾನೆ ಮತ್ತು ಇಬ್ಬರು ಮಕ್ಕಳಲ್ಲಿ ಒಂದು ಮಗು
ಅಪೌಷ್ಠಿಕತೆಯಿಂದ ಬಳಲುತ್ತಿದೆ. ಅಲ್ಲದೇ ರಾಸಾಯನಿಕ ಆಹಾರ ಅನೇಕ ರೋಗಗಳಿಗೆ ಕಾರಣವೂ
ಆಗಿದೆ.

ಈಗ ಆಹಾರ ಮತ್ತು ಕೃಷಿಯ ಭವಿಷ್ಯಕ್ಕೆ ಎರಡೇ ಎರಡು ಸಾಧ್ಯತೆಗಳಿವೆ. ಮೊದಲನೆಯದು ಡೆಡ್
ಎಂಡ್. ಸತ್ತ ಗ್ರಹ. ವಿಷ ಮತ್ತು ಏಕಬೆಳೆ ಪದ್ಧತಿ ಎಲ್ಲೆಡೆ ವ್ಯಾಪಿಸಿ, ಬಿತ್ತನೆ ಬೀಜಕ್ಕಾಗಿ
ರಾಸಾಯನಿಕಗಳಿಗಾಗಿ ರೈತರು ಸಾಲದ ಕೂಪದಲ್ಲಿ ಬಿದ್ದು ಏಳಲಾರದೇ ಆತ್ಮಹತ್ಯೆಗೆ
ಶರಣಾಗುವುದು. ಆಹಾರವಿಲ್ಲದೇ ಮಕ್ಕಳು ಸಾಯುವುದು. ವಿಷಮಯವಾದ, ಪೌಷ್ಠಿಕಾಂಶವಿಲ್ಲದ

ಪೊಳ್ಳು ಆಹಾರವೆಂಬ ಪದಾರ್ಥದ ಸೇವನೆಯಿಂದ ವಯಸ್ಕರು ರೋಗ ರುಜಿನಗಳಿಗೆ ತುತ್ತಾಗಿ
ಸಾಯುವುದು. ಕಟ್ಟ ಕಡೆಯದಾಗಿ ಮನುಷ್ಯ ಬದುಕಲು ಆಗದಷ್ಟು ವಾತಾವರಣದಲ್ಲಿ
ಏರುಪೇರಾಗುವುದು.

ಈ ಮೊದಲ ಹಾದಿ ಉದ್ಯಮದ್ದು. ಅದನ್ನು ನಿರ್ಮಿಸಿದ್ದು ವಿಷ ತಯಾರಿಸುವ ಚಾಂಡಾಳ
ಚೌಡಿಕೆಗಳು. ಯುದ್ಧ ಸಂದರ್ಭದಲ್ಲಿ ಮನುಷ್ಯರನ್ನು ಕೊಲ್ಲಲು ಬಳಸುವುದಕ್ಕಾಗಿಯೇ
ರಾಸಾಯನಿಕಗಳನ್ನು ತಯಾರಿಸುವ ಕಂಪನಿಗಳು ಯುದ್ಧ ಮುಗಿದ ನಂತರ ಮರಣ ಮೃದಂಗ
ಬಾರಿಸುವ ಅವೇ ರಾಸಾಯನಿಕಗಳನ್ನು ಕೃಷಿ ರಾಸಾನಿಕಗಳೆಂದು ಕರೆದು ಕೀಟನಾಶಕ ಮತ್ತು
ಗೊಬ್ಬರ ತಯಾರಿಸಿದವು. ವಿಷವಿಲ್ಲದೇ ಆಹಾರ ಸೇವಿಸುವಂತಿಲ್ಲವೆಂದು ಅವು ಹೇಳಿದವು, ನಾವು
ಕೇಳಿದೆವು.

ಕೃತಕ ಗೊಬ್ಬರಗಳ ಬಳಕೆಯಿಂದ ಆಹಾರದ ಉತ್ಪಾದನೆ ಹೆಚ್ಚಿಸಬಹುದು ಹಾಗೂ ಕೃಷಿಯ
ಮೇಲಿರುವ ಎಲ್ಲಾ ಪಾರಿಸರಿಕ ಮಿತಿಗಳನ್ನು ಮೀರಬಹುದೆಂಬ ವಾದವನ್ನು ಹಸಿರುಕ್ರಾಂತಿಯ
ಹರಿಕಾರರು ಮಂಡಿಸಿದ್ದರು. ಈಗದು ಪೊಳ್ಳೆಂದು ಸಾಭೀತಾಗಿದೆ. ಮಣ್ಣಿನ ಫಲವತ್ತತೆ
ಕಡಿಮೆಯಾಗಲು, ನೀರಿನ ಕ್ಷಾಮ ಹೆಚ್ಚಾಗಲು, ಭೂಮಿ ಬರಡಾಗಲು ಹಾಗೂ ವಾತಾವರಣ
ಬದಲಾಗಲು ಈ ಕೃತಕ ಗೊಬ್ಬರವೇ ಕಾರಣವೆಂದು ಸಾಭೀತಾಗಿದೆ.

1990 ರ ದಶಕದಲ್ಲಿ ಕುಲಾಂತರಿ ಜೀವಿಗಳಿಲ್ಲದೇ ನಾವು ಹಸಿವಿನಿಂದ ನರಳಿ ಸಾಯುತ್ತೇವೆ ಎಂದು
ಹೇಳಲಾಯಿತು. ಇವನ್ನು ತಂದದ್ದು ಅದೇ ವಿಷದ ಚಾಂಡಾಳ ಚೌಡಿಕೆ. ಆಗಲೂ ಸಹ, ಕುಲಾಂತರಿ
ತಳಿಗಳು ಪರಿಸರದ ಎಲ್ಲಾ ಮಿತಿಗಳನ್ನು ಮೀರುತ್ತವೆ, ಅವುಗಳನ್ನು ಮರಳುಗಾಡಿನಲ್ಲಿ ಬೇಕಾದರೂ
ಬೆಳೆಯಬಹುದು, ಅಷ್ಟೇ ಅಲ್ಲ ವಿಷಪೂರಿತ ತ್ಯಾಜ್ಯಗಳ ಮೇಲೂ ಇವು ಚಿಗುರೊಡೆದು ಫಸಲು
ಕೊಡಬಲ್ಲವು ಎಂದು ಘೋಷಿಸಿದವು ಅವೇ ಕಂಪನಿಗಳು. ಈಗ ನಮ್ಮ ಬಳಿ ಎರಡು ಕುಲಾಂತರಿ
ಉತ್ಪನ್ನಗಳಿವೆ. ಒಂದು ಕಳೆನಿರೋಧಕ ಮತ್ತೊಂದು ಬಿಟಿ ವಿಷವಿರುವ ಬೆಳೆ. ಕಳೆಗಳನ್ನು
ಕಂಟ್ರೋಲ್ ಮಾಡಬೇಕಿದ್ದ ತಳಿ ಈಗ ಸೂಪರ್ ಕಳೆಗಳನ್ನು ಸೃಷ್ಟಿಸಿದೆ. ಬಿಟಿ ಬೆಳೆಗಳು ಕೀಟಗಳನ್ನು
ಕಂಟ್ರೋಲ್ ಮಾಡಬೇಕಿತ್ತು. ಈಗವು ಹೊಸ ಕೀಟಗಳನ್ನು ಸೂಪರ್ ಕೀಟಗಳನ್ನು ಸೃಷ್ಟಿಸಿ
ರೈತರನ್ನು ಆತ್ಮಹತ್ಯೆಗೆ ದೂಡುತ್ತಿವೆ.

ಇಷ್ಟೆಲ್ಲಾ ಆದಮೇಲೀಗ ಹೊಚ್ಚ ಹೊಸ ಮಂತ್ರ ಶುರುವಾಗಿದೆ. ಬಿಗ್ ಡಾಟ ನಮಗೆ ಆಹಾರ
ಒದಗಿಸುತ್ತದೆ ಎಂದು ಹೇಳಲಾಗುತ್ತಿದೆ. ಬಿಗ್ ಡಾಟ ಮತ್ತು ಆರ್ಟಿಫಿಷಿಯಲ್ ಇಂಟಲಿಜನ್ಸ್
ಆಧರಿಸಿದ ಡಿಜಿಟಲ್ ಕೃಷಿ ಎಂದು ಮಾನ್ಸಾಂಟೊ ಅದಕ್ಕೆ ನಾಮಕರಣ ಮಾಡಿದೆ. ಕೃಷಿಕರಿಲ್ಲದ
ಕೃಷಿಯ ಬಗ್ಗೆ ಮಾತನಾಡಲು ಆ ಕಂಪನಿ ಆರಂಭಿಸಿದೆ. ಇದಕ್ಕಾಗಿಯೇ ರೈತರ ಆತ್ಮಹತ್ಯೆ ಎಷ್ಟೇ
ಹೆಚ್ಚಾದರೂ ಎಷ್ಟೇ ವ್ಯಾಪಿಸಿದರೂ ಸರ್ಕಾರಗಳು ಕುರುಡಾಗಿವೆ ಹಾಗೂ ಕಿವುಡಾಗಿವೆ. ಏಕೆಂದರೆ
ಸರ್ಕಾರಗಳು ಡೆಡ್ ಎಂಡ್ ಹೆದ್ದಾರಿಯತ್ತ ಮುಖ ಮಾಡಿ ಕುಳಿತಿವೆ.

ಈಗ ಎರಡನೆ ಹಾದಿಯತ್ತ ಗಮನ ಹರಿಸೋಣ. ಅದು ನಾನು ಮೂರು ದಶಕಳಿಂದ ಶ್ರಮಿಸಿದ ಹಾದಿ.
ಜೀವ ವೈವಿಧ್ಯ, ಮಣ್ಣು, ನೀರು ಸಣ್ಣ ಸಣ್ಣ ತೋಟಗಳ ಜಮೀನುಗಳ ಪುನರುತ್ಥಾನದಿಂದ ಗ್ರಹದ
ಪುನರುತ್ಥಾನದ ಹಾದಿ. ಎಲ್ಲರಿಗೂ ಆರೋಗ್ಯಯುತವಾದ, ಆಗ ತಾನೆ ಕೊಯಿಲು ಮಾಡಿದ,
ಪೌಷ್ಠಿಕಾಂಶವಿರುವ ಸಹಜ ಪರಿಸರದ ಆಹಾರ ಒದಗಿಸುವ ಹಾದಿ. ಸ್ಥಳೀಯ ಬೀಜಗಳನ್ನು
ಕಾಪಾಡುವ ಮೂಲಕ ನವಧಾನ್ಯವನ್ನು ಕಾಪಾಡುವುದೇ ನಮ್ಮ ಕೆಲಸ. ಕೃಷಿ ಪರಿಸರ ನಿರ್ವಹಣೆ
ಹಾಗೂ ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳುವ ಮೂಲಕ ಎಕರೆವಾರು ಲೆಕ್ಕದಲ್ಲಿ
ಪೌಷ್ಠಿಕಾಂಶ ಹೆಚ್ಚಿಸುತ್ತೇವೆ. ರಾಸಾಯನಿಕಗಳ ಬಳಕೆ ಮಾಡುವುದಿಲ್ಲ. ಈ ಪದ್ಧತಿ ಎರಡೆರಡು
ಭಾರತಗಳಿಗೆ ಅನ್ನ ನೀಡಬಲ್ಲದು. ಶಕ್ತಿ ಒದಗಿಸಬಲ್ಲದು. ಆರೈಕೆ ಮಾಡಬಲ್ಲದು. ಹಸಿವು ಮತ್ತು
ಅಪೌಷ್ಠಿಕತೆಗೆ ಇದೇ ಪರಿಹಾರ. ರಾಸಾಯನಿಕಗಳನ್ನು ನಿಷೇಧಿಸಿ ಕಮಾಡಿಟಿಗಳನ್ನು ಬದಿಗೊತ್ತಿ
ಸಹಜವಾಗಿ ಉತ್ತಮ ಆಹಾರ ಬೆಳೆವ ರೈತರು ಹತ್ತು ಪಟ್ಟು ಹೆಚ್ಚು ಗಳಿಸುತ್ತಿದ್ದಾರೆ. ಕೃಷಿ ಬಿಕ್ಕಟ್ಟಿಗೆ
ಮತ್ತು ರೈತರ ಆತ್ಮಹತ್ಯೆಗೆ ಇದೇ ಪರಿಹಾರ.


Spread the love