ನೈರುತ್ಯ ಪದವೀಧರ ಕ್ಷೇತ್ರ ಲಾಗಾಯ್ತಿನಿಂದಲೂ ಭಾ.ಜ.ಪ ಭದ್ರಕೋಟೆ. ಭಾರತೀಯ ಜನತಾ ಪಕ್ಷದಲ್ಲಿ ಕೇವಲ ಒಬ್ಬೇ ಒಬ್ಬ ಶಾಸಕ (ಬಿ.ಎಸ್.ವೈ) ಇದ್ದಾಗಲೂ ನೈರುತ್ಯ ಪದವೀಧರ ಕ್ಷೇತ್ರದಿಂದ ಡಿ.ಹೆಚ್. ಶಂಕರಮೂರ್ತಿ ಆಯ್ಕೆಯಾಗಿದ್ದರು. ಇದೀಗ ಡಾ. ಧನಂಜಯ ಸರ್ಜಿ 37,627 ಮತಗಳನ್ನು ಪಡೆಯುವ ಮೂಲಕ ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್ ನ ಆಯನೂರು ಮಂಜುನಾಥ್ ಅವರನ್ನು 24,111 ಮತಗಳ ಅಂತರದಿಂದ ಸೋಲಿಸಿದ್ದಾರೆ.
ಡಾ. ಸರ್ಜಿ ಅವರ ವಿರುದ್ಧ ಇಲ್ಲ ಸಲ್ಲದ ಆರೋಪಗಳನ್ನು ಮಾಡಿದ ಉಚ್ಛಾಟಿತ ಭಾಜಪ ಮುಖಂಡರಾದ ಕೆ.ಎಸ್. ಈಶ್ವರಪ್ಪ ಹಾಗೂ ಕೆ. ರಘುಪತಿ ಭಟ್ ಅವರ ಮಾತುಗಳಿಗೆ ಮತದಾರ ಕಿವಿಗೊಡಲಿಲ್ಲ. ಪಕ್ಷದಿಂದಲೇ ಬೆಳೆದ ಈಶ್ವರಪ್ಪನವರು ಬಂಡಾಯ ಎದ್ದು ಲೋಕಸಭಾ ಚುನಾವಣೆಯಲ್ಲಿ ತೀವ್ರ ಮುಖಭಂಗ ಅನುಭವಿಸಿದರು. ವಿಧಾನ ಪರಿಷತ್ ಚುನಾವಣೆಯಲ್ಲಿ ಕೆ.ರಘುಪತಿ ಭಟ್ ಅವರದ್ದೂ ಅದೇ ಪಾಡಾಯಿತು.
ಭಾರತೀಯ ಜನತಾ ಪಕ್ಷದ ಧುರೀಣ ಮುತ್ಸದ್ಧಿ ಬಿ.ಎಸ್. ಯಡಿಯೂರಪ್ಪನವರು, ಖ್ಯಾತ ಕೈಗಾರಿಕೋದ್ಯಮಿ ಹಾಗೂ ವಿಧಾನ ಪರಿಷತ್ ಸದಸ್ಯರಾದ ಎಸ್.ರುದ್ರೇಗೌಡರು, ಭಾ.ಜ.ಪ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಲೋಕಸಭಾ ಸದಸ್ಯ ಬಿ.ವೈ ರಾಘವೇಂದ್ರ, ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್. ಅರುಣ್ ಸೇರಿದಂತೆ ಅನೇಕ ಮುಖಂಡರು, ಕಾರ್ಯಕರ್ತರು ಡಾ. ಸರ್ಜಿ ಅವರ ಬೆನ್ನಿಗೆ ನಿಂತು ಈ ಗೆಲುವಿಗೆ ಕಾರಣರಾಗಿದ್ದಾರೆ. ಒಂದರ್ಥದಲ್ಲಿ ಇದು ಪಕ್ಷದ ಗೆಲುವಾದರೂ ಡಾ.ಸರ್ಜಿ ಅವರು ಪಡೆದ ಮತಗಳನ್ನು ನೋಡಿದಾಗ ಸರ್ಜಿ ಅವರ ವ್ಯಕ್ತಿತ್ವ, ವೃತ್ತಿ, ಜನಪರ ಜೀವಪರ ಚಟುವಟಿಕಗಳು ಹೀಗೆ ಅವರ ವರ್ಚಸ್ಸಿಗೂ ಸಾಕಷ್ಟು ಮತಗಳು ಬಂದಿರುವುದು ಸ್ಪಷ್ಟವಾಗುತ್ತದೆ.
ಇನ್ನು ಮುಂದೆ ಡಾ. ಸರ್ಜಿ ಅವರು ಈ ರಾಜ್ಯಕ್ಕೆ ಏನೆಲ್ಲಾ ಹೊಸತುಗಳನ್ನು ಸೂಚಿಸುತ್ತಾರೆ, ಕಾರ್ಯರೂಪಕ್ಕೆ ತರಲು ಶ್ರಮಿಸುತ್ತಾರೆ ಎಂಬುದನ್ನು ಮುಂದಿನ ಅವರ ಅಧಿಕಾರಾವಧಿಯಲ್ಲಿ ಕಾಣಬೇಕಿದೆ !
ಡಾ. ಧನಂಜಯ ಸರ್ಜಿ ಅವರ ಕಿರುಪರಿಚಯ
ಡಾ. ಧನಂಜಯ ಸರ್ಜಿ ಶಿವಮೊಗ್ಗ ಸಮೀಪದ ಗೊಪ್ಪೇನಹಳ್ಳಿ ಗ್ರಾಮದ ರೈತ ಕುಟುಂಬದಿಂದ ಬಂದ ಅಪ್ಪಟ ದೇಸಿ ಪ್ರತಿಭೆ. ಅಪ್ಪ ಶರಣ ಸರ್ಜಿ ರುದ್ರಪ್ಪ. ಅಮ್ಮ ಶರಣೆ ರೇಣುಕಾ. ಇವರೀರ್ವರ ಶಿಸ್ತು, ಜೀವನದ ಮೌಲ್ಯಗಳನ್ನು ಎಳವೆಯಿಂದಲೂ ರೂಢಿಸಿಕೊಂಡು ಬೆಳೆದರು.
ಪೀಡಿಯಾಟ್ರಿಕ್ಸ್ ನಲ್ಲಿ ಎಂ.ಡಿ ಪಡೆದ ಡಾ. ಸರ್ಜಿ ಮಕ್ಕಳ ಪಾಲಿಗೆ ಸಂಜೀವಿನಿಯಂತಿದ್ದಾರೆ. ಒಬ್ಬ ಯಶಸ್ವೀ ವೈಧ್ಯನಾಗಿ ಶಿವಮೊಗ್ಗದಂತಃ ನಗರದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ವೈಧ್ಯಕೀಯ ಸೇವೆಗಳನ್ನು ಒದಗಿಸುವ ಸೂಪರ್ ಸ್ಪೆಷಾಲಿಟ್ ಆಸ್ಪತ್ರೆ ಕಟ್ಟಿ ವೈಧೋದ್ಯಮಿಯಾಗಿ ಮನೆ ಮಾತಾಗಿದ್ದಾರೆ. ಸಾವಿರಾರು ಮಂದಿ ಇವರು ಕಟ್ಟಿರುವ ಸಂಸ್ಥೆಗಳಲ್ಲಿ ಉದ್ಯೋಗಿಗಳಿದ್ದಾರೆ. ಅಷ್ಟೇ ಪ್ರಮಾಣದ ಪರೋಕ್ಷ ಉದ್ಯೋಗಗಳೂ ಸೃಷ್ಟಿಯಾಗಿವೆ.
ಒಬ್ಬ ಸುಶಿಕ್ಷಿತ ಯುವ ನಾಯಕ ಹೇಗೆ ಒಂದು ಸಂಸ್ಥೆಯನ್ನು ಕಟ್ಟಬಹುದು, ಬೆಳೆಸಬಹುದು ನೂರಾರು ಮಂದಿಗೆ ಆಶ್ರಯವಾಗಬಹುದು ಎಂಬುದಕ್ಕೆ ಡಾ. ಸರ್ಜಿ ಅವರು ಮಾದರಿಯಂತಿದ್ದಾರೆ.
ವೈಧ್ಯ ವೃತ್ತಿಯ ನಡುವೆ ಡಾ. ಸರ್ಜಿ ಅನೇಕ ಜನಪರ-ಜೀವಪರ ಚಟುವಟಿಕೆಗಳಲ್ಲಿ ಸದಾ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ಇತರರ ಸೇವೆಯಲ್ಲಿ ಬದುಕಿನ ಸಾರ್ಥಕ್ಯ ಕಾಣುವ ಅವರ ಗುಣ ಅನುಕರಣೀಯ. ಸಮಾಜ ಸೇವೆಗಾಗಿಯೇ ತಾವು ಸ್ಥಾಪಿಸಿರುವ ಸರ್ಜಿ ಫೌಂಡೇಶನ್ ನಿಂದ ಉಚಿತ ಆರೋಗ್ಯ ಶಿಬಿರಗಳು, ಉಚಿತ ಲಸಿಕಾ ಶಿಬಿರಗಳ ಮೂಲಕ ಸಾವಿರಾರು ಕುಟುಂಬಗಳಿಗೆ ಆರೋಗ್ಯ ಸೇವೆಯನ್ನು ಒದಗಿಸುತ್ತಿದ್ದಾರೆ. ಪ್ರತಿ ವಾರ ವಿವಿಧ ಮಾಧ್ಯಮಗಳಲ್ಲಿ ಹೆಲ್ತ್ ಟಿಪ್ಸ್ ಕೊಡುವ ಮುಖೇನ ಜನರಿಗೆ ಆರೋಗ್ಯಪೂರ್ಣ ಬದುಕು ನಡೆಸಲು ಮಾರ್ಗದರ್ಶಿಯಾಗಿದ್ದಾರೆ. ಸಮಾಜದ ಶೋಷಿತ ಸಮುದಾಯಗಳಿಗೆ ಹೆಲ್ತ್ ಕಾರ್ಡ್ ವಿತರಿಸುವುದರ ಮೂಲಕ ಸುಲಭದ ಧರದಲ್ಲಿ ಉತ್ಕೃಷ್ಟ ಆರೋಗ್ಯ ಸೇವೆ ಒದಗಿಸುತ್ತಿದ್ದಾರೆ.
ಇವೆಲ್ಲದರ ಜೊತೆಗೆ ವಿಶೇಷವಾಗಿ ವಿವಿಧ ಪದವಿಗಳನ್ನು ಪಡೆದ ಯುವಕ ಯುವತಿಯರಿಗೆ ಹೊಸ ಶತಮಾನದ ಕೆಲಸಗಳಿಗೆ ಸಜ್ಜು ಮಾಡಲು ಅನೇಕ ಕಾರ್ಯಗಾರಗಳನ್ನು ನಡೆಸುತ್ತಾ ಬಂದಿದ್ದಾರೆ. ಖುದ್ದು ತಾವೇ ಯಶಸ್ವೀ ವೈಧ್ಯೋದ್ಯಮಿಯಾಗಿ ವಿವಿಧ ಕ್ಷೇತ್ರಗಳಲ್ಲಿ ನೂತನ ಸಂಸ್ಥೆಗಳನ್ನು ಕಟ್ಟುವ ಉತ್ಸಾಹಿ ಯುವಕರಿಗೆ ಮಾರ್ಗದರ್ಶನ ನೀಡುತ್ತಾ ಕೈ ಹಿಡಿದು ಮುನ್ನಡೆಸುತ್ತಿದ್ದಾರೆ. ಹೀಗೆ ತಾನೂ ಬೆಳೆದು ಇತರರನ್ನೂ ಬೆಳೆಸುವ ಎಲ್ಲರನ್ನೂ ಒಳಗೊಂಡು ಇವ ನಮ್ಮವ.. ಇವ ನಮ್ಮವ.. ನೆಂದು ಬದುಕುವ ಅಪರೂಪದ ವ್ಯಕ್ತಿ ಡಾ. ಸರ್ಜಿ.