ಭಾರತದ ಹಸಿರುಕ್ರಾಂತಿ

ಭಾರತದ ಹಸಿರುಕ್ರಾಂತಿ
Spread the love

ಭಾರತ ರತ್ನ ಡಾ. ಎಂ.ಎಸ್. ಸ್ವಾಮಿನಾಥನ್

ಅರವತ್ತರ ದಶಕದ ಆರಂಭದಲ್ಲಿ ವಿವಿಧ ಪ್ರದೇಶಗಳಲ್ಲಿ ನಡೆಸಿದ ಪ್ರಯೋಗಗಳನ್ನು ಅಧ್ಯಯನಕ್ಕೆ ಒಳಪಡಿಸಿದ
ನಂತರ ಅರೆಗುಳ್ಳು, ರಸಾಯನಿಕ ಗೊಬ್ಬರ ಮತ್ತು ನೀರಾವರಿಯನ್ನಾಧರಿಸಿದ ಗೋಧಿ ಬೆಳೆಗೆ ಇಳುವರಿ
ಕ್ರಾಂತಿಯನ್ನು ಆರಂಭಿಸಲು ಇದು ಸಕಾಲವೆಂದು ನಾನು ನಿರ್ಧರಿಸಿದೆ. 1964 ರ ಜೂನ್ ತಿಂಗಳಲ್ಲಿ ಸಣ್ಣ ಅತಿಸಣ್ಣ
ರೈತರ ಜಮೀನುಗಳಲ್ಲಿ ಹೊಸ ಬೆಳೆಗೆ ಒಟ್ಟು1000 ಪ್ರಾತ್ಯಕ್ಷಿಕೆಗಳನ್ನು ಹಮ್ಮಿಕೊಳ್ಳಲು ಪ್ರಸ್ತಾವನೆ ಸಲ್ಲಿಸಿದೆ. ಈ
ಪ್ರಾತ್ಯಕ್ಷಿಕೆಗಳನ್ನು ಸಂಪನ್ಮೂಲಗಳ ಕೊರತೆ ಎದುರಿಸುತ್ತಿರುವ ಸಣ್ಣ ಅತಿ ಸಣ್ಣ ರೈತರ ತುಂಡು ಜಮೀನುಗಳಲ್ಲಿ
ಕೈಗೊಳ್ಳಲು ನಿರ್ಧರಿಸಿದ್ದೆ. ಕಾರಣ, ಹೆಚ್ಚು ಜಮೀನಿರುವ ಶ್ರೀಮಂತರ ಭೂಮಿಗಳಲ್ಲಿ ಈ ಪ್ರಯೋಗ ಕೈಗೊಂಡಿದ್ದಲ್ಲಿ
ಅವರ ಶ್ರೀಮಂತಿಕೆಯಿಂದ ಪ್ರಯೋಗ ಯಶಸ್ವಿಯಾಯಿತೆಂಬ ಆಪಾದನೆ ಬರುವ ಸಾಧ್ಯತೆ ಇದ್ದು ಪ್ರಯೋಗದ
ಹಿಂದಿರುವ ತಂತ್ರಜ್ಞಾನ ಎಲೆಮರೆಕಾಯಿಯಾಗಿಯೇ ಉಳಿಯುವ ಅಪಾಯವಿತ್ತು.

ಕೃಷಿ ಸಚಿವಾಲಯ ಈ ಪ್ರಸ್ತಾವನೆಯನ್ನು ವಿರೋಧಿಸಿತ್ತು. ಆದರೆ ಅಂದಿನ ಆಹಾರ ಮತ್ತು ಕೃಷಿ ಸಚಿವರಾದ ಸಿ ಸುಬ್ರಮಣಿಯನ್ ಈ
ವಿರೋಧಗಳನ್ನು ಬದಿಗೊತ್ತಿ, 1964 ರ ಆಗಸ್ಟ್ ನಲ್ಲಿ ಯೋಜನೆಗೆ ಹಸಿರು ನಿಶಾನೆ ತೋರಿದರು. ಈ ರಾಷ್ಟ್ರೀಯ
ಪ್ರಾತ್ಯಕ್ಷಿಕೆಯಲ್ಲಿ ಸಣ್ಣ ರೈತರು ಒಂದು ಹೆಕ್ಟೇರ್‌ಗೆ ನಾಲ್ಕರಿಂದ ಐದು ಟನ್ ಗೋಧಿ ಇಳುವರಿ ತೆಗೆದರು. ಆಗ ಇತರೆ
ಜಮೀನುಗಳಲ್ಲಿ ಇಳುವರಿ ಹೆಕ್ಟೇರ್‌ಗೆ ಒಂದು ಟನ್ ಮೀರಿರಲಿಲ್ಲ. ಈ ಯಶಸ್ಸು ಸಣ್ಣ ರೈತರನ್ನು ಹುರಿದುಂಬಿಸಿತು.
ಒಂದು ಸಣ್ಣ ಸರ್ಕಾರಿ ಕಾರ್ಯಕ್ರಮ ನೋಡು ನೋಡುತ್ತಲೇ ದೇಶವ್ಯಾಪಿ ಆಂದೋಲನವಾಗಿ ಬದಲಾಯಿತು.
1964 ರಲ್ಲಿ ಅತಿಹೆಚ್ಚು ಇಳುವರಿ ಪಡೆವ ರೈತರ ರಾಷ್ಟ್ರ ಮಟ್ಟದ ಕ್ಲಬ್ ಸ್ಥಾಪಿಸಲಾಯಿತು. ಹೆಕ್ಟೇರ್‌ಗೆ ಎರಡು ಟನ್
ಗೋಧಿ ಅಥವಾ ಇತರ ಧಾನ್ಯಗಳ ಇಳುವರಿ ತೆಗೆವ ರೈತರು ಮಾತ್ರ ಸದಸ್ಯತ್ವಕ್ಕೆ ಅರ್ಜಿ ಸಲ್ಲಿಸಬಹುದಾಗಿತ್ತು.

ಅಂತೆಯೇ ಇಳುವರಿ ಕ್ರಾಂತಿಯ ಬೀಜಗಳು ಸಣ್ಣ ರೈತರ ಮನಸ್ಸಿನಲ್ಲಿ ಮತ್ತು ಬದುಕಿನಲ್ಲಿ ಬಿತ್ತಲಾಯಿತು.
1964-65 ರಲ್ಲಿ ಬಿತ್ತನೆ ಬೀಜೋತ್ಪಾದನೆಯನ್ನು ಗಮನಾರ್ಹವಾಗಿ ಹೆಚ್ಚಿಸಲು ಹಾಗೂ ಅದಕ್ಕೆ ಒಂದಷ್ಟು
ಸಮಯಾವಕಾಶ ಒದಗಿಸಿಕೊಳ್ಳಲು ಒಂದು ದ್ವಿಮುಖ ನೀತಿಯನ್ನು ರೂಪಿಸಿದೆ. ರಾಷ್ಟ್ರೀಯ ಪ್ರಾತ್ಯಕ್ಷಿಕೆಗಳ
ಅಭೂತಪೂರ್ವ ಯಶಸ್ಸಿನಿಂದ ಹೊಸ ಬಿತ್ತನೆ ಬೀಜಕ್ಕೆ ಬೇಡಿಕೆ ಆಹಾಕಾರದ ಸ್ವರೂಪ ಪಡೆದಿತ್ತು. ಈ ದ್ವಿಮುಖ
ನೀತಿಯಲ್ಲಿ ಮೊದಲನೆಯದು ದೆಹಲಿ ರಾಜ್ಯದ ಜೌಂಟಿ ಗ್ರಾಮವನ್ನು ಬೀಜ ಗ್ರಾಮವನ್ನಾಗಿ ಗುರುತಿಸುವುದು. ಹೊಸ
ಬಿತ್ತನೆ ಬೀಜವನ್ನು ಅಭಿವೃದ್ಧಿಪಡಿಸಲು ಗ್ರಾಮಸ್ಥರ ಮನವೋಲೈಕೆಯಲ್ಲಿ ಬೀಜ ತಜ್ಞ ಡಾ. ಅಮಿರ್ ಸಿಂಗ್
ಪ್ರಮುಖವಾದ ಪಾತ್ರ ವಹಿಸಿದರು. ಆ ಗ್ರಾಮಸ್ಥರಿಗೆ ಅವರು ಹತ್ತಿರವಾಗಿದ್ದದ್ದು ನಮ್ಮ ಕೆಲಸ ಸುಲಭವಾಗಿಸಿತು.

ರಣತಂತ್ರದ ಎರಡನೆಯ ಕೆಲಸ ಮೆಕ್ಸಿಕೋದಿಂದ ಅಗಾಧವಾದ ಪ್ರಮಾಣದಲ್ಲಿ ಬಿತ್ತನೆ ಬೀಜ ತರಿಸುವುದು. ಕೃಷಿ
ಸಚಿವರಾದ ಸಿ ಸುಬ್ರಮಣಿಯಂ ಮತ್ತು ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಹಾಗೂ ಇಂದಿರಾ ಗಾಂಧಿ ನಮ್ಮ
ಪ್ರಸ್ತಾವನೆಯನ್ನು ಒಪ್ಪಿಕೊಂಡರು. ಅಂತೆಯೇ 1965 ಮತ್ತು 66 ರಲ್ಲಿ ಗೋಧಿಯ ಎರಡು ತಳಿಗಳಾದ ಲೆರ್ಮಾ
ರೋಜೋ ಮತ್ತು ಸೊನಾರ 64 ವೆರೈಟಿಗಳನ್ನು ಕ್ರಮವಾಗಿ 200 ಮತ್ತು 12,000 ಟನ್ ಆಮದು ಮಾಡಿಕೊಳ್ಳುವುದು
ಸಾಧ್ಯವಾಯಿತು. ಡಾ. ಎಸ್ ಎಂ ಸಿಕ್ಕಾ, ಡಾ. ಎಸ್ ಪಿ ಕೊಹ್ಲಿ ಹಾಗೂ ವಿಜಯರಾಘವನ್‌ರ ತಂಡ ಮೆಕ್ಸಿಕೋಗೆ
ಬೀಜ ಖರೀದಿಗಾಗಿ ಪಯಣ ಬೆಳೆಸಿದರು. ಅವರ ಶ್ರಮದ ಫಲವಾಗಿ ಸೆಪ್ಟೆಂಬರ್‌ನಲ್ಲಿ ಬೀಜ ಭಾರತ ತಲುಪಿತು.

ಅಂದಿನ ಹಣಕಾಸು ಕಾರ್ಯದರ್ಶಿಗಳಾದ ಎಸ್ ಭೂತಲಿಂಗಂ ತಮ್ಮ ಕೃತಿ ‘ರಿಫ್ಲೆಕ್ಷನ್ಸ್ ಆನ್ ಯಾನ್ ಎರ’ (ಯುಗ
ಬಿಂಬ) ದಲ್ಲಿ ಈ ಐತಿಹಾಸಿಕ ನಿರ್ಧಾರದ ಬಗ್ಗೆ ವಿಷದವಾಗಿ ವಿವರಿಸಿದ್ದಾರೆ. 1967 ರಲ್ಲಿ ಇಂದಿರಾಗಾಂಧಿ ಜೌಂಟಿ
ಬೀಜಗ್ರಾಮಕ್ಕೆ ಬೇಟಿ ಕೊಟ್ಟು ಜವಹರ್ ಜೌಂಟಿ ಬೀಜ ಸಹಕಾರ ಸಂಘವನ್ನು ಉದ್ಘಾಟಿಸಿದರು.


4
ನಾಲ್ಕು ವರ್ಷದ ಹಿಂದೆ 12 ಮಿಲಿಯನ್ ಟನ್ ಇದ್ದ ಗೋಧಿ ಇಳುವರಿ 1964 ರಲ್ಲಿ 17 ಮಿಲಿಯನ್ ಟನ್ ಮುಟ್ಟಿತು.
ನನ್ನ ಸಲಹೆಯಮೇರೆಗೆ, ಇಂದಿರಾ ಗಾಂಧಿ ಹಾಗೂ ಅಂದಿನ ಕೃಷಿ ಸಚಿವ ಜಗಜೀವನ್ ರಾಮ್ 1968 ರ ಜುಲೈನಲ್ಲಿ
ಒಂದು ವಿಶೇಷ ಅಂಚೆ ಚೀಟಿ ಬಿಡುಗಡೆ ಮಾಡಿದರು. ಅದರ ಹೆಸರು ‘ಗೋಧಿ ಕ್ರಾಂತಿ’ ಎಂದಾಗಿತ್ತು.
ಗೋಧಿಯಲ್ಲಿರುವ ಇಳುವರಿಯ ಸಾಧ್ಯತೆಗಳ ಸಾಕ್ಷಾತ್ಕಾರಕ್ಕಾಗಿ ವಿಜ್ಞಾನ ವಹಿಸಿದ ಪಾತ್ರದ ಕುರುಹಾಗಿ
ಭಾರತೀಯ ಕೃಷಿ ಅಧ್ಯಯನ ಸಂಸ್ಥೆಯ ಗ್ರಂಥಾಲಯದ ಕಟ್ಟಡವನ್ನು ಅಂಚೆ ಚೀಟಿಯಲ್ಲಿ ಬಳಸಲಾಯಿತು.

1968 ರಲ್ಲಿ ಅತಿ ಹೆಚ್ಚು ಇಳುವರಿ ಕೊಡುವ ವೆರೈಟಿಗಳಿಂದಾಗಿ ನಾಲ್ಕು ಮಿಲಿಯನ್ ಟನ್ ಗೋಧಿ ಹೆಚ್ಚುವರಿಯಾಗಿ
ಲಭ್ಯವಾಗಿತ್ತು. ಅದರಲ್ಲಿ ಸಿಂಹಪಾಲು ಕೆಂಪು ಮೆಕ್ಸಿಕನ್ ಗೋಧಿ ‘ಲೆರ್ಮಾ ರೋಜಾ’ದ್ದಾಗಿತ್ತು. ಹೊಂಬಣ್ಣದ
ವೆರೈಟಿಗೆ ಕೃಷಿ ಬೆಲೆ ಆಯೋಗ ಪ್ರತಿ ಕ್ವಿಂಟಾಲಿಗೆ ಐದು ರೂಪಾಯಿ ಹೆಚ್ಚಿಸುವಂತೆ ಶಿಫಾರಸು ಮಾಡಿತು. ಮುಂದಿನ
ವರ್ಷದಲ್ಲಿ ಈ ಮೆಕ್ಸಿಕನ್ ವೆರೈಟಿಯನ್ನು ರೈತರು ದೂರವಿಡಲು ಈ ಹೆಚ್ಚುವರಿ ಬೆಲೆ ಸಾಕಾಗಿತ್ತು. ಹಾಗಾಗಿ ಅಂದಿನ
ಆಹಾರ ಕಾರ್ಯದರ್ಶಿ ಟೋನಿ ಡಯಾಸ್‌ರಲ್ಲಿ ನಾನು ಹೊಂಬಣ್ಣ ಮತ್ತು ಕೆಂಪು ವೆರೈಟಿಗಳಿಗೆ ಸಮಾನವಾದ
ಬೆಂಬಲ ಬೆಲೆ ನಿಗದಿ ಪಡಿಸುವುದು ಸೂಕ್ತವೆಂದು ಸೂಚಿಸಿದೆ. ಆಗ ಸಚಿವರಾಗಿದ್ದ ಜಗಜೀವನ್ ರಾಮ್ ಬಳಿ ನನ್ನನ್ನು
ಕರೆದೊಯ್ಯುವ ದಯೆ ತೋರಿದ ಟೋನಿ ಡಯಾಸ್, ಅವರಿಗೆ ಸಮಾನ ಬೆಂಬಲ ಬೆಲೆ ನಿಗದಿಪಡಿಸುವುದರ
ಲಾಭಗಳನ್ನು ಮನವರಿಕೆ ಮಾಡಿಕೊಡಲು ಅನುವು ಮಾಡಿಕೊಟ್ಟರು. ಪರಿಣಾಮವಾಗಿ, ಸಂಸತ್‌ನಲ್ಲಿ ಎಲ್ಲಾ ಬಗೆಯ
ಗೋಧಿಗೆ ಸಮಾನವಾದ ಬೆಂಬಲ ಬೆಲೆ, ಕ್ವಿಂಟಾಲಿಗೆ 65 ರೂಪಾಯಿಯಂತೆ, ಘೋಷಿಸಿದರು. ಜಗಜೀವನ್ ರಾಮ್‌ರ
ಈ ನಿರ್ಧಾರ 1968-69 ರ ಬೇಸಿಗೆಯಲ್ಲಿ ಅತಿ ಹೆಚ್ಚು ಇಳುವರಿ ಕೊಡುವ ಗೋಧಿ ಬೆಳೆಯನ್ನೇ ಬಹುತೇಕರು
ಬೆಳೆದರು.

ಮುಂಬರುವ ವರ್ಷಗಳಲ್ಲಿ ಆ ವೆರೈಟಿ ಬೆಳೆ ಎಲ್ಲೆಡೆ ವ್ಯಾಪಿಸತೊಡಗಿತು. ಈ ನಡುವೆ ನಮಗೆ ಬೇಕಾದ
ರುಚಿಯ ಗೋಧಿಯನ್ನು ಬೆಳೆಯುವ ನಿಟ್ಟಿನಲ್ಲಿ ನಮ್ಮ ಪ್ರಯೋಗವನ್ನು ನಾವು ಮುಂದುವರೆಸಿದ್ದೆವು. ಅತಿ ಹೆಚ್ಚು
ಇಳುವರಿ ಕೊಡುವ ಅತಿ ಹೆಚ್ಚು ಗುಣಮಟ್ಟದ ವೆರೈಟಿಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ವಿ ಎಸ್ ಮಾಥುರ್
ಗಣನೀಯವಾದ ಸೇವೆ ಸಲ್ಲಿಸಿದರು. ಅಖಿಲ ಭಾರತ ಗೋಧಿ ಬೆಳೆ ಅಭಿವೃದ್ಧಿ ಯೋಜನೆಯ ಸಂಚಾಲಕರಾದ ಡಾ. ಎ
ಬಿ ಜೋಷಿ, ಎಸ್ ಪಿ ಕೊಹ್ಲಿ ಮತ್ತು ಎಮ್ ವಿ ರಾವ್ ಹೊಸ ವೆರೈಟಿಗಳ ರೋಗನಿರೋಧಕ ಶಕ್ತಿ ಮತ್ತು ಹೆಚ್ಚಿನ
ಇಳುವರಿ ಗುಣಗಳನ್ನು ಪ್ರಯೋಗಕ್ಕೆ ಒಳಪಡಿಸುವ ಕಾರ್ಯ ದೇಶದೆಲ್ಲೆಡೆ ವ್ಯಾಪಿಸುವಲ್ಲಿ ಪ್ರಮುಖ ಪಾತ್ರ
ವಹಿಸಿದರು. ರಾಕ್ ಫೆಲ್ಲರ್ ಫೌಂಡೇಷನ್ ಪ್ರೋಜಿಸಿದ್ದ ಕೆನಡಾ ಮೂಲದ ವಿಜ್ಞಾನಿ ಡಾ ಗ್ಲೆನ್ ಆಂಡರ್ಸೆನ್ ಈ
ದೇಶವ್ಯಾಪಿ ಪ್ರಯೋಗದ ಆಧಾರ ಸ್ತಂಭವಾಗಿದ್ದರು.

1963 ರಲ್ಲಿ ಭೇಟಿ ಕೊಟ್ಟಿದ್ದ ಡಾ. ಬೋರ್ಲಾಗ್, ಇಲ್ಲಿನ ವಿಜ್ಞಾನಿಗಳು ಹಾಗೂ ರೈತರ ಪ್ರಗತಿಯನ್ನು ಗಮನಿಸಲು
ಹಾಗೂ ದಾಖಲಿಸಲು, ಪ್ರತಿ ವರ್ಷ ಮಾರ್ಚ್ ತಿಂಗಳಲ್ಲಿ ಕನಿಷ್ಠ ಏಳರಿಂದ ಎಂಟು ದಿನಗಳನ್ನು ಭಾರತದ ಭೇಟಿಗೆ
ಮೀಸಲಿಡುತ್ತಿದ್ದರು. ಅವರ ಭೇಟಿಗಳು ವಿಜ್ಞಾನಿಗಳು ಹಾಗೂ ರೈತರಿಗೆ ಸ್ಫೂರ್ತಿಯ ಚಿಲುಮೆಯಾಗಿದ್ದವು. ಅಷ್ಟೇ
ಅಲ್ಲದೇ ನಾವು ನಿಜವಾಗಿಯೂ ಅದೃಷ್ಟಶಾಲಿಗಳಾಗಿದ್ದೆವು. ಅದಕ್ಕೆ ಕಾರಣ, 1964 ರಿಂದ 70 ರ ಅವಧಿಯಲ್ಲಿ ಆಹಾರ

ಸಚಿವರಾದ ಸಿ ಸುಬ್ರಮಣಿಯಂ, ಜಗಜೀವನ್ ರಾಮ್ ಮತ್ತು ಪ್ರಧಾನಿಗಳಾದ ಲಾಲ್ ಬಹದ್ದೂರ್ ಶಾಸ್ತ್ರಿ ಮತ್ತು
ಇಂದಿರಾಗಾಂಧಿಯವರು ಜಾರಿಗೆ ತಂದ ಜನಪರ ನೀತಿಗಳು. ಅಂದಿನ ಕೃಷಿ ಕಾರ್ಯದರ್ಶಿಗಳಾಗಿದ್ದ ಬಿ. ಶಿವರಾಮು
ಕೂಡ ನಮ್ಮ ಪ್ರಯೋಗಗಳ ಬೆಂಬಲಕ್ಕೆ ನಿಂತವರಲ್ಲಿ ಪ್ರಮುಖರಾಗಿದ್ದರು.

ಗೋಧಿ ಬೆಳೆ ಹಾಗೂ ಉತ್ಪನ್ನದರ ಹೆಚ್ಚಾಗಲು, ಅಂದಿನ ರಾಜಕೀಯ ನಾಯಕರು ವೈಜ್ಞಾನಿಕ ಚಿಂತನೆಗಳಿಗೆ
ಸ್ಪಂದಿಸಿದ ಬಗೆಯೂ ಮುಖ್ಯ ಕಾರಣ. 1964 ರಿಂದ 67 ರವರೆಗೆ ಆಹಾರ ಹಾಗೂ ಕೃಷಿ ಸಚಿವರಾಗಿದ್ದ ಸಿ
ಸುಬ್ರಮಣ್ಯಂ ಇಡೀ ಕ್ರಾಂತಿಗೆ ಆಧಾರ ಸ್ತಂಭವಾಗಿದ್ದರು. ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ‘ಜೈ ಜವಾನ್ ಜೈ
ಕಿಸಾನ್’ ಘೋಷಣೆಯೊಂದಿಗೆ ದೇಶಕ್ಕೆ ಅನ್ನ ನೀಡುವ ರೈತ ಹೇಗೆ ದೇಶದ ಸ್ವಾಯತ್ತತೆಯನ್ನೂ ಸಂರಕ್ಷಿಸಬಲ್ಲ
ಎಂಬುದನ್ನು ಪ್ರಚುರಪಡಿಸಿದರು. ಮುಂದಿನ ಪ್ರಧಾನಿ ಇಂದಿರಾ ಗಾಂಧಿಯವರು ಇನ್ನೂ ಒಂದು ಹೆಜ್ಜೆ ಮುಂದೆ
ಹೋಗಿ, ಒಂದು ದೇಶದ ಆಹಾರ ಭದ್ರತೆ ಹೇಗೆ ಒಂದು ಸ್ವತಂತ್ರವಾದ ವಿದೇಶಿ ನೀತಿಯನ್ನು ರೂಪಿಸಬಲ್ಲದು
ಎಂಬುದನ್ನು ಅರಿತಿದ್ದರು. ಹಾಗಾಗಿಯೇ, ನಾನು ಮತ್ತು ಅಣುಶಕ್ತಿ ಆಯೋಗದ ಅಧ್ಯಕ್ಷರಾದ ವಿಕ್ರಮ್ ಸಾರಾಭಾಯಿ,
ಇಂದಿರಾ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ವರ್ಷ, ಅವರನ್ನು ಭೇಟಿಯಾಗಿ ನೈಸರ್ಗಿಕ ಸಂಪನ್ಮೂಲದ ದಾಖಲೆ
ಹಾಗೂ ನಿರ್ವಹಣೆ ಬಗ್ಗೆ ಚರ್ಚಿಸುತ್ತಿರುವಾಗ ಇದ್ದಕ್ಕಿದ್ದಂತೆಯೇ 10 ಮಿಲಿಯನ್ ಟನ್ ದವಸ ಸ್ಟಾಕ್ ಇಡಲು ಎಷ್ಟು
ಸಮಯ ಬೇಕಾದೀತು? ಎಂಬ ಪ್ರಶ್ನೆ ಒಗೆದಿದ್ದು ಅಚ್ಚರಿಯೇನಲ್ಲ. ಆ ಪ್ರಶ್ನೆಗೆ ನಾನು ಕ್ಷಣ ಕಾಲ ತಬ್ಬಿಬ್ಬಾಗಿದ್ದೆ. ಆದರೆ
ತುಸು ಯೋಚಿಸಿದ ನಂತರ, 1966 ರಲ್ಲಿ ಅಗಾಧವಾದ ರಾಜಕೀಯ ಮರ್ಯಾದೆ ಪಣಕ್ಕಿಟ್ಟು ನಾವು 10 ಮಿಲಿಯನ್
ಟನ್ ದವಸ ಧಾನ್ಯ ಆಮದು ಮಾಡಿಕೊಂಡಿದ್ದ ವಿಷಯ ನನಗೆ ನೆನಪಾಯಿತು. ‘ರೈತರ ಬೆಳೆಗೆ ಲಾಭದಾಯಕ
ಬೆಲೆಗಳನ್ನು ನಿಗದಿಪಡಿಸಿದಲ್ಲಿ 1970 ರ ದಶಕದ ವೇಳೆಗೆ 10 ಮಿಲಿಯನ್ ಟನ್ ದವಸ ಧಾನ್ಯದ ಸ್ಟಾಕ್ ಇಡಬಹುದು’
ಎಂದು ಉತ್ತರಿಸಿದ್ದೆ. ಅಲ್ಲದೇ, ದವಸ ಧಾನ್ಯ ಸಂರಕ್ಷಣೆಗೆ ಗೋದಾಮುಗಳನ್ನು ಪಂಜಾಬ್, ಹರಿಯಾಣ ಮತ್ತು
ಉತ್ತರಪ್ರದೇಶದ ಪಶ್ಚಿಮದ ಭಾಗಗಳಲ್ಲಿ ನಿರ್ಮಾಣ ಮಾಡುವುದು ಸೂಕ್ತವೆಂಬ ವಿಷಯವನ್ನೂ ಪ್ರಸ್ತಾಪಿಸಿದ್ದೆ. ಆ
ಕಾಲದಲ್ಲಿ ಗೋದಾಮುಗಳನ್ನು ಬಂದರುಗಳಲ್ಲಿ ಕಟ್ಟುವುದು ರೂಢಿಯಾಗಿತ್ತು. ತಕ್ಷಣ ಆ ವಿಷಯವನ್ನು ಅಂದಿನ
ಉಪಪ್ರಧಾನಿ ಹಾಗೂ ಆರ್ಥಿಕ ಸಚಿವರಾಗಿದ್ದ ಮುರಾರ್ಜಿ ದೇಸಾಯಿಗೆ ಇಂದಿರಾ ಮುಟ್ಟಿಸಿದರು.

ಕೂಡಲೆ ಮುತುವರ್ಜಿ ವಹಿಸಿದ ಮುರಾರ್ಜಿ ದೇಸಾಯಿಯವರು ಬಾರತೀಯ ಕೃಷಿ ಸಂಶೋಧನಾ ಸಂಸ್ಥೆ ಬಳಿ ಇದ್ದ
ಭಾರತೀಯ ಆಹಾರ ನಿಗಮದ ಗೋದಾಮುಗಳ ಬಳಿ ಒಂದು ಸಭೆಯನ್ನೇ ಆಯೋಜಿಸಿದರು. ಗೋಧಿ ಉತ್ಪಾದಿಸುವ
ಪ್ರದೇಶಗಳಲ್ಲಿ, ಸವಳು ಬಾಧಿತ ಜಮೀನುಗಳಲ್ಲಿ, ಗೋದಾಮುಗಳನ್ನು ಕಟ್ಟಲು ಭಾರತೀಯ ಆಹಾರ ನಿಗಮಕ್ಕೆ
ಸಲಹೆ ನೀಡಿದರು. ದುರದೃಷ್ಟವಶಾತ್ ಈಗಲೂ ನಮ್ಮಲ್ಲಿ ಬೆಳೆ ಸಂರಕ್ಷಣೆಗೆ ಬೇಕಾದ ಸುಸಜ್ಜಿತ ಗೋದಾಮುಗಳು
ನಿರ್ಮಾಣವಾಗಿಲ್ಲ. ಅದೇ ನಮ್ಮ ದೊಡ್ಡ ದೌರ್ಬಲ್ಯವೂ ಆಗಿದೆ. ಆದರೂ, ಆಗಿನ ಭಾರತೀಯ ಕೃಷಿ ಸಂಶೋಧನಾ
ಸಂಸ್ಥೆಯ ಕೀಟಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿದ್ದ ಡಾ. ಎಸ್ ಪ್ರಧಾನ್ ಅಭಿವೃದ್ಧಿಪಡಿಸಿದ ರೈತರ ಮಟ್ಟದ ಸಣ್ಣ
ಪ್ರಮಾಣದ ಗುಡಾಣಗಳ ಕೊಡುಗೆಯನ್ನು ಮರೆಯುವಂತಿಲ್ಲ.

ಇಂದಿರಾಗಾಂಧಿಯವರ ಮತ್ತೊಂದು ನಿರ್ಧಾರವನ್ನು ಇಲ್ಲಿ ದಾಖಲಿಸಲೇಬೇಕು. 1967 ರ ಜನವರಿಯ ಒಂದು ಸಂಜೆ.
ನಾನು ಮತ್ತು ವಿಕ್ರಮ್ ಸಾರಾಭಾಯಿ ಅರೆಗುಳ್ಳು ವೆರೈಟಿಯ ಗೋಧಿ ಬೆಳೆವ ದೆಹಲಿಯ ಸುತ್ತಮುತ್ತಲಿನ ಹಳ್ಳಿಗಳಿಗೆ
ಭೇಟಿ ನೀಡಿ ಹಿಂದಿರುಗುತ್ತಿದ್ದೆವು. ಹೊಸ ವೆರೈಟಿ ಬಗ್ಗೆ ರೈತರು ತೋರಿದ ಆಸಕ್ತಿಯಿಂದ ವಿಕ್ರಮ್

ಪ್ರಭಾವಿತರಾಗಿದ್ದರು. ರೇಡಿಯೋ ಹಾಗೂ ಟೆಲಿವಿಷನ್ ಮೂಲಕ ವಿಜ್ಞಾನ ತಂತ್ರಜ್ಞಾನದ ಹೊಳಹುಗಳು ಹಾಗೂ
ರೈತರ ದೈನಂದಿನ ಚಟುವಟಿಕೆಗಳ ನಡುವೆ ಇರುವ ಅಗಾಧವಾದ ಕಂದಕಕ್ಕೊಂದು ಸೇತುವೆ ಕಟ್ಟುವ ಕೆಲಸದ ಗತಿ
ಹೆಚ್ಚಿಸಬೇಕೆಂದು ಅವರು ಹೇಳಿದರು. ಅಷ್ಟೇ ಅಲ್ಲ, ಆ ವಿಷಯವನ್ನು ಆದಷ್ಟು ಬೇಗ ಇಂದಿರಾ ಗಾಂಧಿಯವರಿಗೆ
ಮುಟ್ಟಿಸಬೇಕೆಂದು ಅವರು ಬಯಸಿದರು. ನಾವು ನೇರವಾಗಿ ಇಂದಿರಾ ಅವರ ನಿವಾಸಕ್ಕೆ ತೆರಳಿದೆವು. ನಮ್ಮ
ಅದೃಷ್ಟಕ್ಕೆ ಅವರಿಗೆ ಬಿಡುವಿತ್ತು. ಮೇಲಾಗಿ ನಮ್ಮ ಮಾತುಗಳನ್ನು ಕೇಳಿಸಿಕೊಳ್ಳುವ ತಾಳ್ಮೆಯೂ ಇತ್ತು. ನಮ್ಮ
ಮಾತುಗಳನ್ನು ಆಲಿಸುತ್ತಿದ್ದಂತೆಯೇ ಮಾಹಿತಿ ಹಾಗೂ ಪ್ರಸಾರ ಇಲಾಖೆಯ ಸಚಿವರಿಗೊಂದು ಫೋನಾಯಿಸಿ
ಕೂಡಲೇ ದೂರದರ್ಶನದಲ್ಲೊಂದು ಕೃಷಿ ದರ್ಶನ ಕಾರ್ಯಕ್ರಮ ಆರಂಭಿಸಲು ಸೂಚಿಸಿದರು. ನೋಡು
ನೋಡುತ್ತಿದ್ದಂತೆಯೇ, ಅಂದರೆ 1967 ರ ಜನವರಿ 26 ರಂದು ರೈತರಿಗೆ ಹೊಸ ಹೊಸ ಕೃಷಿ ತಂತ್ರಜ್ಞಾನಗಳ
ಪರಿಚಯ ಮಾಡಿಕೊಡುವ ಕೃಷಿ ದರ್ಶನ ಕಾರ್ಯಕ್ರಮದ ಪ್ರಸಾರ ಆರಂಭವಾಗಿಯೇ ಬಿಟ್ಟಿತು. ಹಸಿರು
ಕ್ರಾಂತಿಯಾಗಲು ಆ ಕಾರ್ಯಕ್ರಮದ ಕೊಡುಗೆಯೂ ಪ್ರಮುಖವಾದುದು. ಇನ್ನೂ ಆ ಕಾರ್ಯಕ್ರಮ ಮುಂದುವರಿದಿದೆ.
ಕೃಷಿ ಉತ್ಪಾದನೆ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. 1960 ರ ದಶಕದಲ್ಲಿ ವಿಜ್ಞಾನಿಗಳು ಹಾಗೂ ರಾಜಕೀಯ
ನಾಯಕತ್ವದ ನಡುವೆ ಇದ್ದ ಬಂಧವನ್ನು ಈ ಉದಾಹರಣೆಗಳು ಸ್ಪಷ್ಟಪಡಿಸುತ್ತವೆ. ಯೋಜನಾ ಆಯೋಗದ
ಸಲಹೆಗಳನ್ನು ಉಲ್ಲಂಘಿಸಿ, ಗೋದಾಮುಗಳನ್ನು ನಿರ್ಮಿಸುವ ಇಂದಿರಾ ಗಾಂಧಿಯವರ ನಿರ್ಧಾರ, ಅನೇಕ
ವಿಷಯಗಳಲ್ಲಿ ಸ್ವತಂತ್ರವಾಗಿ ನಿರ್ಣಯಕ್ಕೆ ಬರುವ ಶಕ್ತಿಯನ್ನು ಭಾರತಕ್ಕೆ ನೀಡಿತು. ಅವುಗಳಲ್ಲಿ 1974 ಮತ್ತು 1998 ರ
ಪೋಕ್ರಾನ್‌ನಲ್ಲಿ ಕೈಗೊಂಡ ಆಣುಶಕ್ತಿ ಪ್ರಯೋಗಗಳೂ ಸೇರಿವೆ.

ಯಾವ ಯಾವ ಬೆಳೆಗಳ ಇಳುವರಿ ಹೆಚ್ಚಾಗಿದೆಯೋ ಅವೆಲ್ಲವೂ ಹಸಿರು ಕ್ರಾಂತಿಯ ವ್ಯಾಪ್ತಿಗೆ ಬರುತ್ತವೆ. 1967 ರಲ್ಲಿ
ಆರಂಭವಾದ ಈ ಕ್ರಾಂತಿಯಲ್ಲಿ ಗೋಧಿ, ಭತ್ತ, ಜೋಳ, ಮೆಕ್ಕೆ ಜೋಳ ಹಾಗೂ ಭಾಜ್ರ ಸೇರಿದ್ದವು. ತಂತ್ರಜ್ಞಾನ,
ಸಾರ್ವಜನಿಕ ನೀತಿ ಹಾಗೂ ರೈತರ ಉತ್ಸಾಹ ಮೂರು ಮೇಳೈಸಿದ್ದರಿಂದ ಮಾತ್ರ ಹಸಿರು ಕ್ರಾಂತಿ ಸಾಧ್ಯವಾಯಿತು.
ಸಾರ್ವಜನಿಕ ನೀತಿಯೆಂದರೆ, ಆಗಿನ ಕಾಲಕ್ಕೆ, ಉತ್ಪಾದನಾ ವೆಚ್ಚ ಮತ್ತು ಉತ್ಪನ್ನದ ಬೆಲೆ ಹಾಗೂ ಖಚಿತ
ಮಾರುಕಟ್ಟೆಯನ್ನು ಒದಗಿಸಿದ್ದೇ ಲೆಕ್ಕಾಚಾರ ಸರಿದೂಗಿಸಿದ್ದು. ಅದೇ ಲೆಕ್ಕಾಚಾರ ಹೆಚ್ಚೆಚ್ಚು ಇಳುವರಿ ತೆಗೆಯುವ
ವಿಷಯದಲ್ಲಿ ರೈತರು ಆಸಕ್ತಿ ಉಳಿಸಿಕೊಳ್ಳುವಂತೆ ಮಾಡಿದ್ದು. ಇದಕ್ಕೆ ತದ್ವಿರುದ್ಧವೆಂಬಂತೆ ಆಫ್ರಿಕಾದಲ್ಲಿ ಡಾ.
ಬೋರ್ಲಾಗ್ ಶ್ರಮವೆಲ್ಲಾ ವ್ಯರ್ಥವಾಯಿತು. ಕಾರಣ ಅಲ್ಲಿ ಬೆಳೆ ಕೊಳ್ಳುವವರಿಲ್ಲದೇ ಬೆಳೆಗಾರರು
ಸಂಕಟಕ್ಕೀಡಾದರು. ಈ ಉದಾಹರಣೆ, ಕೇವಲ ಹೆಚ್ಚು ಬೆಳೆ ಬೆಳೆದರೆ ಸಾಲದೆಂಬುದನ್ನು ಸ್ಪಷ್ಟಪಡಿಸಿತು. ಅದಕ್ಕೆ
ಪೂರಕವಾದ ಮಾರುಕಟ್ಟೆ, ಕನಿಷ್ಠ ಬೆಂಬಲ ಬೆಲೆ ಒದಗಿಸದಿದ್ದರೆ ಇಡೀ ಕ್ಷೇತ್ರ ಸಂಕಷ್ಟಕ್ಕೆ ಸಿಲುಕುವುದು
ಶತಃಸಿದ್ಧವೆಂಬುದು ಸಾಬೀತಾಯಿತು.

ರೈತರ ಉತ್ಸಾಹವನ್ನು ಈ ಮಾತುಗಳಲ್ಲಿ ನಾನು ದಾಖಲಿಸುತ್ತೇನೆ. ‘ಶಕ್ತಿ ಮೀರಿ ದುಡಿವ, ಬದ್ಧತೆ ತೋರುವ
ಉತ್ಸಾಹಿ ಹಾಗೂ ಕುಶಲ ಪಂಜಾಬ್ ರೈತ ಹಸಿರು ಕ್ರಾಂತಿಯ ಬೆನ್ನೆಲುಬು. ಕ್ರಾಂತಿಗಳೆಂದರೆ ಯುವಶಕ್ತಿಯ
ಸಂಚಲನದೊಂದಿಗೆ ತಳಕು ಹಾಕುತ್ತೇವೆ. ಆದರೆ ಈ ಕ್ರಾಂತಿಯಲ್ಲಿ ಪಾಲ್ಗೊಳ್ಳಲು ವಯಸ್ಸಿನ ಹಂಗಿರಲಿಲ್ಲ. ಯುವ
ರೈತರು ಮತ್ತು ವಯೋ ವೃದ್ಧರು, ಶಿಕ್ಷಿತರು ಅಶಿಕ್ಷಿತರು ಎಲ್ಲರೂ ಹೊಸ ಕೃಷಿಯನ್ನು ಅಪ್ಪಿಕೊಂಡರು. ಕಾಲೇಜ್
ಪಾಸು ಮಾಡಿದ ಯುವಕರು, ನಿವೃತ್ತರು, ಮಿಲಿಟರಿಯ ಮಾಜಿ ಯೋಧರು, ಅಶಿಕ್ಷಿತ ಕೃಷಿ ಕಾರ್ಮಿಕರು ಮತ್ತು ಸಣ್ಣ
ರೈತರೆಲ್ಲರೂ ಹೊಸ ಬಿತ್ತನೆ ಬೀಜಕ್ಕಾಗಿ ಸರದಿ ಸಾಲಿನಲ್ಲಿ ನಿಂತಿರುವುದನ್ನು ಕಂಡು ಮನಸು ಬೆಚ್ಚಗಾಗಿತ್ತು. ಕನಿಷ್ಠ

ಪಂಜಾಬ್‌ನಲ್ಲಾದರೂ, ಕಲಿತವರು ಮತ್ತು ಕಲಿಯದ ದುಡಿಯುವ ವರ್ಗದ ನಡುವೆ ಇರುವ ಅಂತರ
ಕಡಿಮೆಯಾಗುತ್ತಿತ್ತು.’

1970 ರಲ್ಲಿ ನೋಬೆಲ್ ಶಾಂತಿ ಪ್ರಶಸ್ತಿ ಸ್ವೀಕಾರದ ಸಂದರ್ಭದಲ್ಲಿ ಡಾ. ಬೋರ್ಲಾಗ್ ಹೀಗೆ ಬರೆದಿದ್ದರು. ‘ಹಸಿರು
ಕ್ರಾಂತಿಯೊಂದು ಸಾಂಘಿಕ ಪ್ರಯತ್ನ. ಆ ಯಶಸ್ಸಿನ ಬಹುಪಾಲು ಸಲ್ಲಬೇಕಾಗಿರುವುದು ಭಾರತದ ಅಧಿಕಾರಿಗಳಿಗೆ,
ಸಂಸ್ಥೆಗಳಿಗೆ, ವಿಜ್ಞಾನಿಗಳಿಗೆ ಹಾಗೂ ರೈತರಿಗೆ. ಆದರೂ, ಡಾ. ಸ್ವಾಮಿನಾಥನ್, ಮೆಕ್ಸಿಕನ್ ಗಿಡ್ಡ ವೆರೈಟಿಯಲ್ಲಿ ಅತಿ
ಹೆಚ್ಚು ಇಳುವರಿ ತೆಗೆವ ಸಾಧ್ಯತೆಯನ್ನು ಮೊದಲು ಕಂಡುಕೊಂಡ ನಿಮಗೆ ಆ ಯಶಸ್ಸಿನ ಆಗಾಧವಾದ ಪಾಲು
ಸಲ್ಲಬೇಕು. ಅಕಸ್ಮಾತ್ ಈ ಹೊಳಹು ಮೂರ್ತ ರೂಪ ಪಡೆಯದೇ ಇದ್ದಿದ್ದರೆ, ಏಷಿಯಾದಲ್ಲಿ ಹಸಿರು ಕ್ರಾಂತಿ
ಸಾಧ್ಯವಾಗುತ್ತಲೇ ಇರಲಿಲ್ಲ.’

ಈ ಬೆಳವಣಿಗೆ ಒಂದನ್ನಂತೂ ಸ್ಪಷ್ಟಪಡಿಸುತ್ತದೆ. ಕೃಷಿ ಅಭಿವೃದ್ಧಿ ಮಂತ್ರದಂಡದಿಂದ ಸಾಧ್ಯವಿಲ್ಲ; ಕೃಷಿ ಉತ್ಪಾದನ
ವಲಯ, ಮಾರುಕಟ್ಟೆ ವಲಯ ಹಾಗೂ ಬಳಕೆಯ ವಲಯದ ಸರಪಳಿ ಗಟ್ಟಿಯಾಗಿರುವಂತೆ ನಿರಂತರವಾಗಿ ಒಗ್ಗಟ್ಟಿನ
ದುಡಿಮೆಯಿಂದ ಮಾತ್ರ ಸಾಧ್ಯ. ರೈತರಿಂದ ಗೋಧಿ ಕೊಳ್ಳದಿದ್ದಿದ್ದರೆ ಹಾಗೂ ವಿಜ್ಞಾನಿಗಳು ಹೊಸ ತಳಿಗಳನ್ನು
ಅಭಿವೃದ್ಧಿಪಡಿಸದಿದ್ದಿದ್ದರೆ ಹಸಿರು ಕ್ರಾಂತಿ ಜರುಗುತ್ತಿರಲಿಲ್ಲ.


Spread the love