ಲಾಂಗ್ ಲಿವ್ ಪ್ರೊ.ಎಂಡಿಎನ್

ಲಾಂಗ್ ಲಿವ್ ಪ್ರೊ.ಎಂಡಿಎನ್
Spread the love

ನಾಗೇಶ್ ಕೆ.ಎನ್.

ಅಂದು ಭಾನುವಾರ. ದಿನಾಂಕ 11-02- 2024 ನಮ್ಮ ಬಸಣ್ಣ (ಲಂಕೇಶ್ ಪತ್ರಿಕೆ ಬಸವರಾಜು) ಫೋನ್ ಮಾಡಿ ಎಂಡಿಎನ್ ಬಗ್ಗೆ ಒಂದು ಲೇಖನ ಕಳಿಸು ಅಂದರು. ಜೊತೆಗೆ 2005 ರಲ್ಲಿ ನಾನು ರೂಪಿಸಿದ್ದ ಎಂಡಿಎನ್ ಕ್ಯಾಲೆಂಡರ್ ನಲ್ಲಿ ಬಳಸಿದ್ದ ಎಂಡಿಎನ್ ಕೋಟ್ಸ್ ಬಗೆಗೆ ಮಾತನಾಡಿದರು. ಸರಿ ಆಗಲಿ ಬರೆದು ಕಳಿಸ್ತೀನಿ ಎಂದೆ. ಬರೆಯಲು ಕುಳಿತೆ. ಈಗ ಭಯ ಶುರುವಾಯಿತು. ಎಂಡಿಎನ್ ಕುರಿತು ಏನು ಬರೆಯುವುದು !?

ಮೈಸೂರು ರಾಜ್ಯದಲ್ಲಿ ಎಂಎಲ್ಸಿ ಆಗಿದ್ದ ಮಹಂತದೇವರ ಮಗ, ವಿದೇಶದಲ್ಲಿ ಅಂತಾರಾಷ್ಟ್ರೀಯ ಲಾ ಕಲಿತು ಬಂದು ರೈತ ಕುಲದ ಉದ್ದಾರಕ್ಕೆ ನಿಂತ ಯುಗಪುರುಷ ಎಂದು ಬರೆಯಲೇ ? ಈ ದೇಶ ಕಂಡ ಬಹುದೊಡ್ಡ ರೈತ ಹೋರಾಟಗಾರ ಎನ್ನಲೇ? ರೈತ ಚಳುವಳಿಯನ್ನು ಜಗದಗಲ ವಿಸ್ತರಿಸಿ ದೇಶ ವಿದೇಶಗಳಲ್ಲಿ ಪ್ರೊ ಸ್ವಾಮಿ- the great farmer’s leader ಎಂದೇ ಖ್ಯಾತರಾದವರು ಎಂದು ಹೇಳಲೇ. ರೋಮ್ ನಲ್ಲಿ ನಿಂತು ಬಹುರಾಷ್ಟ್ರೀಯ ಕಂಪನಿಗಳಿಗೆ “ನೀವು ಭಾರತದಲ್ಲಿ ಮಣ್ಣಾಗಬೇಕೆಂದು ಬಯಸಿದ್ದರೆ ಅಲ್ಲಿಗೆ ಬನ್ನಿ” ಎಂದು ಧಮಕಿ ಹಾಕಿದ ಗಟ್ಟಿಗ ಎಂದು ಬಣ್ಣಿಸಲೇ? ರೈತ ಸತ್ಯಾಗ್ರಹಿಗಳನ್ನು ಇಂಗ್ಲೇಂಡ್ ಗೆ ಕರೆದೊಯ್ಯಲು ಇಂಗ್ಲೇಂಡ್ ಎಂಬೆಸ್ಸಿಯಲ್ಲಿ ವೀಸಾ ಕೋರಿದಾಗ ಅವರು ರೈತ ಕಾರ್ಯಕರ್ತರ ಆಸ್ತಿ ಪಾಸ್ತಿಗಳ ಲೆಕ್ಕ ಕೇಳಲಾಗಿ “ನಮ್ಮ ಮತ್ತು ನಮ್ಮವರ ಆಸ್ತಿಯನ್ನೆಲ್ಲಾ ನೀವೇ ದೋಚಿದ್ದೀರಿ , ನಮ್ಮ ಆಸ್ತಿ ಎಲ್ಲಾ ಅಲ್ಲೇ ಇದೆ ಲೆಕ್ಕ ಮಾಡಿಕೂಳ್ಳಿ” ಎಂದು ಹೇಳಿ ಅವರನ್ನು ಪೇಚಿಗೆ ಸಿಲುಕಿಸಿದ ಪ್ರಸಂಗ ನೆನಪಿಸಲೇ ? ಭ್ರಷ್ಟ ಸರ್ಕಾರಿ ಅಧಿಕಾರಿಗಳಿಗೆ ಗ್ರಾಮದೊಳಗೆ ಪ್ರವೇಶವಿಲ್ಲ ವೆಂದು ಹಳ್ಳಿಗಳ ಮುಂದೆ ಬೋರ್ಡ್ ಹಾಕಿ ಪ್ರತಿರೋದ ಒಡ್ಡಿದ್ದನ್ನು ಬರೆಯಲೇ. ಮುಂದೊಂದು ದಿನ ಅದೇ ಬೋರ್ಡ್ ಲಂಡನ್ ನ ಮ್ಯೂಸಿಯಂ ನಲ್ಲಿ  ಹೋರಾಟದ ಶ್ರೇಷ್ಟ ಮಾದರಿ ಎಂದು ದಾಖಲಿಸಿ ಅದನ್ನು ಕಾಪಿಟ್ಟುರುವುದರ ಬಗ್ಗೆ ಹೇಳಲೇ.  ದಕ್ಷಿಣ ಅಮೆರಿಕಾದ ರೈತ ಸಮಾವೇಶವೊಂದರಲ್ಲಿ ಕಾಫಿ ಬ್ರೇಕ್ ನಲ್ಲಿ ನನ್ನ ನೇಮ್ ಟ್ಯಾಗ್ ನೋಡಿದ ಇಂಗ್ಲೇಂಡ್ ನ ವ್ಯಕ್ತಿಯೊಬ್ಬರು ಆರ್ ಯು ಫ್ರಮ್ ಫ್ರೊಫೆಸರ್ ಸ್ವಾಮೀಸ್ ರೀಜನ್ ಎಂದು ಕೇಳಿ ನನ್ನನ್ನು ದಂಗುಬಡಿಸಿದ ಕಥೆ ಹೇಳಲೇ.  ಇಡೀ ಯೂರೋಪಿನ ಹೋರಾಟಗಾರರು ಯಾವುದೇ ಹೋರಾಟದ ಚರ್ಚೆಯಲ್ಲಿ ಪ್ರೊ ಮಾತನ್ನೇ ಆಕೈರು ಎಂದು ಒಪ್ಪಿಕೊಳ್ಳುತ್ತಿದ್ದ ಬಗ್ಗೆ ತಿಳಿಸಲೇ. ಧ್ವನಿ ಇಲ್ಲದ ರೈತರಿಗೆ ಸ್ವಾಭಿಮಾನದ ಪಾಠ ಹೇಳಿ ಅನ್ಯಾಯದ ವಿರುದ್ಧ ಸೆಟೆದು ನಿಲ್ಲುವ ಶಕ್ತಿ ತುಂಬಿದ ಹುಟ್ಟು ಹೋರಾಟಗಾರ ಎನ್ನಲೇ ? ಪಾಪುಲರ್ ರಾಜಕಾರಣಕ್ಕೆ ರಾಜಿಯಾಗದ ದಿಟ್ಟ ನಿಲುವಿನ ಪ್ರಾಮಾಣಿಕ ಎಂದೆನ್ನಲೇ..? ನಡೆ ನುಡಿಯಲ್ಲಿ ಒಂದೇ ಆಗಿದ್ದ ತ್ರಿಕರಣ ಶುದ್ಧಿಯ  ಮಾನವತಾವಾದಿ ಎನ್ನಲೇ…!

ನನ್ನ ಶಾಲಾ ದಿನಗಳಲ್ಲಿ ಎಂಥವೋ ಕಾರಣಗಳಿಗೆ ಹುಡುಗರು ಬಡಿದಾಡಿಕೊಂಡಾಗ ಒದೆ ತಿಂದವನೊಬ್ಬನು “ತಾಳು ನಮ್ಮ ಅಮ್ಮನ್ನ ಕರ್ಕೊಂಡು ಬರ್ತೀನಿ ಅಂತಲೋ ಅಪ್ಪನ್ನ ಕರ್ಕೊಂಡು ಬರ್ತೀನಿ ಎಂದೋ” ಹೇಳುತ್ತಿದ್ದರು. ಅದರ ಅರ್ಥ ಹಾಗೆ ಹೇಳಿದವನಿಗೆ ಅನ್ಯಾಯವಾಗಿದೆ. ನೋವಾಗಿದೆ, ಆ ನೋವು ಅನ್ಯಾಯಗಳನ್ನು ವಿರೋಧಿಸಲು, ಪ್ರತಿಭಟಿಸಲು, ತಪ್ಪು ಮಾಡಿದವರಿಗೆ ತಕ್ಕ ಶಾಸ್ತಿ ಮಾಡಿಸಲು ನ್ಯಾಯದ ಪ್ರತಿರೂಪವಾದ ಅಪ್ಪನ್ನೋ ಅಮ್ಮನ್ನೋ ಕರೆದುಕೊಂಡು ಬರುವುದಾಗಿ ಹೇಳುತ್ತಿದ್ದದ್ದು.

ನಾನು ಈ ರೀತಿಯಾದ ಒಂದು ಪ್ರತಿರೋಧದ ಮಾತುಗಳ ವ್ಯಾಪ್ತಿಯನ್ನು ಕೊಂಚ ವಿಸ್ತರಿಸಿಕೊಂಡು ನೋಡಿದ್ದೇನೆ. ನಮ್ಮ ಸುತ್ತಲಿನ ಸಮಾಜದಲ್ಲಿ, ಸರ್ಕಾರಗಳ ಅಸಂಬದ್ಧ ನೀತಿ ನಿಯಮಗಳು, ಯೋಜನೆಗಳು ರೂಪುಗೊಂಡಾಗ, ಜಾರಿಯಾದಾಗ ಅವುಗಳಿಂದಾಗುವ ಅಪಾಯದಿಂದ ನಮ್ಮನ್ನೆಲ್ಲಾ ಕಾಪಾಡಾಲು ಅಪ್ಪ ಅಮ್ಮನಂತೆ ಹೋರಾಟಕ್ಕಿಳಿಯುತ್ತಿದ್ದ ಎಂಡಿಎನ್ ಅವರ ಗೈರು ನಮಗೆ ನಿತ್ಯವೂ ಕಾಡುತ್ತಲೇ ಇರುವ ಬಗ್ಗೆ ಹೇಳಿಕೊಳ್ಳಬೇಕಿದೆ..!

ಇರಲಿ ತಕ್ಷಣಕ್ಕೆ ಪ್ರೊ ಎಂಡಿಎನ್ ಅವರ ಕೆಲವು ಘಟನೆಗಳ ಮುಖೇನ ಅವರ ಕನ್ವಿಕ್ಷನ್ ಮತ್ತು ಅವರು ವಿಭಿನ್ನ ಸಂದರ್ಭಗಳಲ್ಲಿ ಹೇಗೆ ಪ್ರತಿಕ್ರಿಯಿಸುತ್ತಿದ್ದರು ಎಂಬುದನ್ನು ನೋಡೋಣ.

ಪಾಪುಲರ್ ರಾಜಕಾರಣಕ್ಕೆ ರಾಜಿ ಮಾಡಿಕೊಳ್ಳದ ಪ್ರೊ.ಎಂಡಿಎನ್

ಇಸವಿ 1994. ಮೇ 22 ಪ್ರೊ ಎಂಡಿಎನ್ ಮತ್ತು ಕೆಲವು ರೈತ ಮುಖಂಡರು ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಅತಿಥಿ ಗೃಹದಲ್ಲಿ ತಂಗಿರುತ್ತಾರೆ. ಇತ್ತ ಬೆಂಗಳೂರಿನಿಂದ ದೇವೇಗೌಡರು, ಎಂ.ಪಿ. ಪ್ರಕಾಶ್, ಪಿ.ಜಿ.ಆರ್. ಸಿಂಧ್ಯಾ ಹಾಗೂ ಸಿದ್ಧರಾಮಯ್ಯನವರ ಮೂಲಕ ಎಂಡಿಎನ್ ಅವರಿಗೆ ಒಂದು ಪ್ರಸ್ತಾವ ತಲುಪಿಸುತ್ತಾರೆ. ಪ್ರಸ್ತಾವ ಹೀಗಿದೆ. “ಸಾರ್ ನಾವು (ಜನತಾ ದಳ) ನಲವತ್ತು ಸೀಟ್ ಮಾತ್ರ ಕಂಟೆಸ್ಟ್ ಮಾಡ್ತೇವೆ, ಉಳಿದ ಎಲ್ಲಾ ಸೀಟ್ ಗಳೂ ರೈತ ಸಂಘದ ಅಭ್ಯರ್ಥಿಗಳೇ ನಿಲ್ಲಲಿ. ಜನತಾ ದಳ ಹಾಗೂ ರೈತ ಸಂಘ ಒಂದಾಗಿ ಎಲೆಕ್ಷನ್ ಗೆ ಹೋದರೆ ಗೆಲುವು ನಮ್ಮದೇ. ನಮ್ಮ ಪಕ್ಷದವರೊಬ್ಬರನ್ನು ಮುಖ್ಯಮಂತ್ರಿ ಮಾಡಿ ಉಳಿದ ಪೋರ್ಟ್ ಫೋಲಿಯೋಗಳು ತಾವು ಹೇಳಿದಂತೆ ಮಾಡುತ್ತೇವೆ. ಈ ಅವಕಾಶ ಮತ್ತು ಮೈತ್ರಿಗೆ ತಾವು ಒಪ್ಪಿಗೆ ಸೂಚಿಸಬೇಕು”

ಇದಕ್ಕೆ ಪ್ರೊ ಉತ್ತರ – ನಿಮ್ಮಲ್ಲಿರೋ ಮುದಿಗೂಬೆಗಳನ್ನೆಲ್ಲಾ ಮನೆಗೆ ಕಳ್ಸಿ ಬನ್ನಿ ಆಮೇಲೆ ನೋಡೋಣ… ಅದೆಲ್ಲಾ ಆಗಲ್ಲ, ನಮ್ಮದೇ ಸರ್ಕಾರ ಬರುತ್ತೆ ‘ರೈತ ಸರ್ಕಾರ’ ನೀವಿನ್ನು ಹೊರಡಿ ಎಂದು ನಿರ್ದಾಕ್ಷಿಣ್ಯವಾಗಿ ಹೇಳಿ ಕಳುಹಿಸುತ್ತಾರೆ. ಈ ಘಟನೆ ನಡೆದ ದಿನದಂದು ಅತಿಥಿಗೃಹದಲ್ಲಿ ಎಂಡಿಎನ್ ಅವರೊಂದಿಗಿದ್ದ ಹೆಚ್.ಆರ್. ಬಸವರಾಜಪ್ಪ ಮತ್ತು ಕೆ.ಟಿ. ಗಂಗಾಧರ್ ಅವರು ಇಂದಿಗೂ ನೆನೆಪಿಸಿಕೊಳ್ಳುತ್ತಾರೆ.

**

ಒಮ್ಮೆ ಬಂಗಾರಪ್ಪನವರು ಎಂಡಿಎನ್ ಅವರಿಗೆ ಕರೆ ಮಾಡಿ, ನೀವು ನಮ್ಮ ಪಕ್ಷಕ್ಕೆ ಬನ್ನಿ, ಎಂ.ಎಲ್.ಸಿ ಮಾಡಿ ಕೃಷಿ ಸಚಿವರನ್ನಾಗಿ ಮಾಡುತ್ತೇವೆ. ಏನೆಲ್ಲಾ ಸುಧಾರಣೆ ತರಬೇಕೋ ತನ್ನಿ ಎಂಬ ಪ್ರಸ್ತಾವ ಇಡುತ್ತಾರೆ. ಅದಕ್ಕೆ ಎಂಡಿಎನ್ ನನಗೆ ಗೊತ್ತಿದೆ, ಅಲ್ಲಿಗೆ ಬಂದ್ರೆ ಏನಾಗ್ತದೆ ಅಂಥಾ… ನಿಮ್ಮ ಕೆಲ್ಸಾ ನೀವು ಮಾಡಿ ನಾವು ಏನು ಮಾಡಬೇಕೊ ಅದನ್ನು ಮಾಡ್ತೀವಿ ಎಂದು ಆಹ್ವಾನವನ್ನು ನಿರಾಕರಿಸುತ್ತಾರೆ.

ಹೀಗೆ ರಾಜಿ ಇಲ್ಲದೇ ಹೋರಾಟಗಾರರಾಗಿಯೇ ತಮ್ಮ ಕೊನೆಯುಸಿರೆಳೆದವರು ಎಂಡಿಎನ್.

**

ಹೋರಾಟದ ಮಾರ್ಗಗಳ ತೀಕ್ಷ್ಣತೆ

ಮಿಸ್ಟರ್ ಸ್ವಾಮಿ, you have broken Monsanto, you have broken Kargil, you have broken KFC and you speak about non-violence and claim that your movement is non-violent! What right you have to speak like this? ಎಂಬ ಪತ್ರಕರ್ತೆಯೊಬ್ಬರ ಪ್ರಶ್ನೆ ಎದುರಾಗುತ್ತದೆ. ಅದಕ್ಕೆ ಎಂಡಿಎನ್ ಉತ್ತರ ಹೀಗಿದೆ.

Well, you should understand the difference between non-violence and non-violent direct action. “If I break your glasses and grab your pen and note pad you cannot see properly and you cannot write”.. Making you not to write and not to see properly is a non-violent direct action against you. If I slap you that’s the violence.

Same way we have made those companies not to work by disturbing their infrastructure. It’s a non-violent direct action against them. Understand the difference between violence and non-violent direct action ಎಂದರು.

**

ಅದೊಂದು ದಿನ ಯಾವುದೋ ಕೇಸ್ ಸಲುವಾಗಿ ಹೊಸದುರ್ಗದ ರೈತ ಸತ್ಯಾಗ್ರಹಿಗಳು ಕೋರ್ಟ್ ಹಾಲ್ ಗೆ ಹೋಗುತ್ತಾರೆ. ಆಗಿನ ಜಡ್ಜ್ ಎಲ್ಲ ರೈತ ಹೋರಾಟಗಾರರಿಗೂ ಶಾಲು ತೆಗೆದಿಟ್ಟು ಕೋರ್ಟ್ ಹಾಲ್ ಒಳಗೆ ಬನ್ನಿ ಎಂದು ಸೂಚಿಸುತ್ತಾರೆ. ಇದರಿಂದ ಕುಪಿತಗೊಂಡ ಹೋರಾಟಗಾರರು ಕೇಸು ಮದ್ಯಾನ್ಹಕ್ಕೆ ಮುಂದೂಡಲು ಕೋರಿ ಹೊರಗೆ ಬಂದು ಪ್ರೊ ಎಂಡಿಎನ್ ಅವರಿಗೆ ವಿಷಯ ಮುಟ್ಟಿಸುತ್ತಾರೆ. ಶಿವಮೊಗ್ಗ ಭಾಗದಲ್ಲಿ ಪ್ರವಾಸದಲ್ಲಿದ್ದ ಎಂಡಿಎನ್ ಖುದ್ದು ಬರುವುದಾಗಿ ತಿಳಿಸಿ ಮದ್ಯಾನ್ಹದ ವೇಳೆಗೆ ಹೊಸದುರ್ಗಕ್ಕೆ ತಲುಪುತ್ತಾರೆ. ನೇರ ಜಡ್ಜ್ ರೂಂಗೆ ಹೋಗಿ ಅವರು ಮಾಡಿದ ತಪ್ಪಿನ ಬಗ್ಗೆ ಪಾಠ ಮಾಡಿ ಆ ಬಗ್ಗೆ ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ದೂರು ನೀಡುವುದಾಗಿ ಹೇಳುತ್ತಾರೆ. ಹೊಸ ಯಂಗ್ ಜಡ್ಜ್ ಗೆ ತಮ್ಮ ತಪ್ಪಿನ ಅರಿವಾಗುತ್ತೆ. ಆಗ ಎಂಡಿಎನ್ ಯು ಆರ್ ಎ ಲಾ ಸ್ಟೂಡೆಂಟ್ ಐಯಾಮ್ ಲಾ ಪ್ರೊಫೆಸರ್ ಎಂದು ಹೇಳಿ ಹಿಂದಿರುಗುತ್ತಾರೆ. ಮದ್ಯಾನ್ಹದ ವಿಚಾರಣೆ ಸಂದರ್ಭದಲ್ಲಿ ಎಲ್ಲ ರೈತ ಸತ್ಯಾಗ್ರಹಿಗಳೂ ಶಾಲು ಧರಿಸಿಯೇ ಕೇಸ್ ಅಟೆಂಡ್ ಮಾಡುತ್ತಾರೆ.

**

ಚಾಮರಾಜನಗರ ಬಳಿ ಒಂದು ಕ್ವಾರೆ ನಡೆದಿರುತ್ತೆ. ಅನಧಿಕೃತವಾದ ಕ್ವಾರೆ. ಆ ಬಗ್ಗೆ ಸ್ಥಳೀಯ ರೈತರು ಹೋರಾಟ ಮಾಡಿರುತ್ತಾರೆ. ಯಾವುದೇ ಪ್ರಯೋಜನವಾಗಿರುವುದಿಲ್ಲ. ನನ್ನ ನೆನಪು ಸರಿ ಇದ್ದರೆ ಮಹೇಂದರ್ ಹೆಸರಿನ ರೈತ ಹೋರಾಟಗಾರ ಪ್ರೊ ಎಂಡಿಎನ್ ಅವರ ಮನೆಗೆ ಬಂದು ವಿಷಯ ಮುಟ್ಟಿಸಿ- ಆ ಕ್ವಾರೆಗೆ ಡಿ.ಸಿ, ಎಸ್.ಪಿ ಸಪೋರ್ಟ್ ಇದೆ ಎಂದು ಹೇಳುತ್ತಾರೆ. ಆಗ ಎಂಡಿಎನ್ , ಡಿಸಿ ಎಸ್.ಪಿ ಗೆ ನಾವು ಸಂಬಳ ಕೊಡೋದು ಸಾರ್ವಜನಿಕ ಆಸ್ಥಿ ಮಾರೋದಕ್ಕೆ ಮತ್ತು ದೋಚೋದಕ್ಕಲ್ಲ.. ಹಾಗೇನಾದ್ರೂ  ಅವರು ಆ ಕಳ್ಳರಿಗೆ ಸಪೋರ್ಟ್ ಮಾಡ್ತಿದ್ರೆ ಕಪಾಳಕ್ಕೆ ಹೋಡೀರಿ ಎಂದು ಹೇಳಿ ಕಳುಹಿಸಿದ್ದಾರೆ.

ಮಹೇಂದರ್ ನೇರ ಚಾಮರಾಜನಗರಕ್ಕೆ ಹೋದವರು ಸಮಯ ಕಾದು ಎಸ್.ಪಿ. ಗೆ ಕಪಾಳಕ್ಕೆ ಬಿಗಿದಿದ್ದಾರೆ. ಈಗ ವಿಷಯ ಎಂಡಿಎನ್ ಅವರಿಗೆ ತಲುಪಿದೆ. ಎಸ್.ಪಿ ಗೆ ಹೊಡೆದ ರೈತ ಕಾರ್ಯಕರ್ತ ಅರೆಸ್ಟ್ ಆಗಿದ್ದಾರೆ. ಆ ಸಂಬಂಧ ಪ್ರೊ ಬೆಂಗಳೂರಿನಿಂದ  ಚಾಮರಾಜನಗರಕ್ಕೆ ಪ್ರಯಾಣ ಬೆಳೆಸಿದ್ದಾರೆ. ಐಬಿಯಲ್ಲಿ ಕಿಕ್ಕಿರಿದ ಪತ್ರಕರ್ತರು. ಪ್ರೊ ಅಲ್ಲಿಗೆ  ತಲುಪಿದಾಕ್ಷಣ ಎಲ್ಲರೂ ಒಮ್ಮೆಗೇ ತಪ್ಪೊಪ್ಪಿಕೊಳ್ಳಿ ಎಂದು ಕೇಳಿದ್ದಾರೆ.

ಎಂಡಿಎನ್, “ನಮ್ಮ ಕಾರ್ಯಕರ್ತ ಅವರಿಗೆ ಕಪಾಳಕ್ಕೆ ಹೊಡೀಬಾರದಿತ್ತು, ಅದು ತಪ್ಪು. ಎಂದಾಗ ಪತ್ರಕರ್ತರ ನಡುವೆ ಪ್ರೊ ತಪ್ಪೊಪ್ಪಿಕೊಂಡಿದ್ದಾರೆ ಎಂಬ ಗುಜು ಗುಜು ಶುರುವಾಗಿದೆ. ಮರುಕ್ಷಣ ಪ್ರೊ. ನಮ್ಮ ಕಾರ್ಯಕರ್ತ ಆ ಎಸ್.ಪಿ. ಗೆ ಕಪಾಳಕ್ಕೆ ಹೊಡೆದಿದ್ದು ತಪ್ಪು, ಅವ ಎಸ್.ಪಿ.ಗೆ ಮೆಟ್ನಲ್ಲಿ ಹೊಡೀಬೇಕಿತ್ತು” ಎಂದು ಹೇಳಿ ಹೋರಾಟಗಾರನನ್ನು ಸಮರ್ಥಿಸಿಕೊಂಡಿದ್ದಾರೆ. ಪತ್ರಿಕಾ ಗೋಷ್ಟಿಯಲ್ಲಿ ಕ್ಷಣ ಕಾಲದ ಮೌನ.

**

ಕಾರ್ಯಕರ್ತರಿಗೆ ನಿತ್ಯವೂ ಪಾಠ ಹೇಳುತ್ತಿದ್ದ ಪ್ರೊ.

ರೈತರ ಪಂಪ್ ಸೆಟ್ ಗಳ ಬಿಲ್ ಬಾಕಿ  ವಜಾ ಮಾಡಬೇಕು ಎಂಬ ಹೋರಾಟ ನಡೆದಿತ್ತು. ಕೆ.ಪಿ.ಟಿ.ಸಿ.ಎಲ್ ಕಚೇರಿ ಆವರಣದಲ್ಲಿ ಸುಮಾರು ಒಂದೂವರೆ ತಿಂಗಳು ಪ್ರೊ. ಮೊಕ್ಕೊಂ ಹೂಡಿದ್ದರು. ಅಲ್ಲಿಯೇ ಅಡುಗೆ, ಊಟ, ನಿದ್ರೆ. ಹಾಸನದ ರೈತ ಹೋರಾಟಗಾರ ಕೊಟ್ಟೂರು ಶ್ರೀನಿವಾಸ್ ಅಡುಗೆಸಾಲೆಯ ಜವಾಬ್ಧಾರಿ.  ಅದೊಂದು ದಿನ ದೊಡ್ಡಬಳ್ಳಾಪುರದ ಕಾರ್ಯಕರ್ತರು ಒಂದಿಷ್ಟು ದವಸ, ತರಕಾರಿ ತಂದಿರುತ್ತಾರೆ. ಅದನ್ನೆಲ್ಲಾ ಅಡುಗೆಸಾಲೆಗೆ ಜಮಾ ಮಾಡಿಕೊಂಡ ಶ್ರೀನಿವಾಸ್ ಆ ವಿಷಯವನ್ನು ಪ್ರೊ ಎಂಡಿ ಎನ್ ಅವರಿಗೆ ಮುಟ್ಟಿಸಲು ಹೋಗುತ್ತಾರೆ. ಎಂಡಿಎನ್ ಹಣ ಎಣಿಸುತ್ತಿರುತ್ತಾರೆ. ಶ್ರೀನಿವಾಸ್, ಸಾರ್ ದೊಡ್ದಬಳ್ಳಾಪುರದವರು ಇಂತಿತ್ತದ್ದೆಲ್ಲಾ ತಂದಿದ್ದಾರೆ ಎಂದು ಒಂದೇ ಸಮನೆ ಹೇಳುತ್ತಾರೆ. ಪ್ರೊ ಒಮ್ಮೆ ದಿಟ್ಟಿಸಿ ನೋಡಿದರೂ ಅವರಿಗೆ ಅರ್ಥವಾಗಿಲ್ಲ. ಕಡೆಗೆ ಇಲ್ಲಿ ಬನ್ನಿ ತಗೊಳಿ ಇದು ಎಣಿಸಿ ಎಂದು ಅವರ ಕೈಲಿದ್ದ ಹಣದ ಕಟ್ಟನ್ನು ಶ್ರೀನಿನಾಸ್ ಅವರಿಗೆ ಕೊಟ್ಟಿದ್ದಾರೆ. ಈಗ ಕೊಟ್ಟೂರ್ ಶ್ರೀನಿವಾಸ್ ಅವರದ್ದು ಎಣಿಸುವ ಕೆಲಸ. ಎಂಡಿಎನ್ ನಿಮ್ಮೆಸರು ಕೊಟ್ಟೂರು ಶ್ರೀನಿವಾಸ್ ಅಲ್ವಾ ಎಂದಿದ್ದಾರೆ. ಹೌದೆಂದರು ಶ್ರೀನಿವಾಸ್. ಯಾವ ಕೊಟ್ಟೂರು ಎಂದಿದ್ದಾರೆ. ಮತ್ತೆ ಶ್ರೀನಿವಾಸ್ ಉತ್ತರ. ಎಷ್ಟು ದಿವಸ ಆಯ್ತು ಇಲ್ಲಿಗೆ ಬಂದು … ಹೀಗೆ ಒಂದರಿಂದೊಂದು ಪ್ರಶ್ನೆ ಕೇಳುತ್ತಾ ದುಡ್ಡು ಎಣಿಸಲು ಅಡಚಣೆ ಉಂಟು ಮಾಡುತ್ತಾ ಬೇಗ ಬೇಗ ಎಣಿಸಿ ಎಂದಿದ್ದಾರೆ. ಕೊಟ್ಟೂರ್ ಶ್ರೀನಿವಾಸ್ ಗೆ ಅವರ ತಪ್ಪು ಅರಿವಾಗಿತ್ತು. ಒಂದು ಕೆಲಸ ಮಾಡುವಾಗ ತೊಂದರೆ ಕೊಡಬಾರ್ದು ಕಾಮನ್ ಸೆನ್ಸ್ ಅಲ್ವಾ ಅದು ಎಂಬ ಅಂಶ ಮನವರಿಕೆ ಮಾಡಿದ್ದರು. ಸಣ್ಣದೇ ಪಾಠ ಬಹು ಮುಖ್ಯ ಪಾಠ.

**

ಊರು ನೆನಪಿಲ್ಲ. ದೊಡ್ಡ ರೈತ ಸಮಾವೇಶ. ಪ್ರೊ ಮಾತನಾಡುತ್ತಿದ್ದಾರೆ. ಅವರು ಕುಳಿತಿದ್ದ ಜಾಗದಲ್ಲಿ ಪುಟ್ಟದೊಂದು ವಾಟರ್ ಬಾಟಲ್ ಅವರ ಟೇಬಲ್ ಮೇಲಿರುತ್ತೆ. ವೇದಿಕೆಯಲ್ಲಿಯೇ ಇದ್ದ ಮತ್ತೊಬ್ಬ ರೈತ ಮುಖಂಡ ಆ ಬಾಟಲ್ ಎಟಕಿಸಿಕೊಳ್ಳುತ್ತಿರುವುದನ್ನು ಗಮನಿಸಿದ ಪ್ರೊ ಏಯ್ ನಿನ್ನ ನೀರು ನೀನು ತಂದ್ಕೋ… ನಿನಗೆ ಅಗತ್ಯವಿರೋದನ್ನು ತಂದಿಟ್ಟುಕೊಳ್ಳದ ನೀನು ಏನು ಹೋರಾಟ ಮಾಡ್ತೀಯಾ ಎಂದು ಗದರಿದ್ದಾರೆ. ಇದು ಭಾಷಣದ ನಡುವೆಯೇ ನಡೆದ ಪ್ರಸಂಗ. ಹೀಗೆ ಪ್ರೊ ಎಲ್ಲಾ ಸಮಯದಲ್ಲೂ ನಮ್ಮ ತಪ್ಪುಗಳನ್ನು ತಿದ್ದುವ ಮೇಷ್ಟ್ರಾಗಿಯೇ ಇದ್ದವರು.

**

ಕಿಬ್ಬನಹಳ್ಳಿ ಕ್ರಾಸ್ ನಲ್ಲಿ ವಿದ್ಯುತ್ ಬಿಲ್ ಸಂಬಂಧ ಪ್ರೊ ಭಾಷಣ. ಸಭೆಯಲ್ಲಿ ಯಾರೋ ಮಜ್ಜಿಗೆ ತಂದು ಕಾರ್ಯಕರ್ತರಿಗೆ ಕೊಡುವಾಗ, ಮಜ್ಜಿಗೆ ಪೊಟ್ಟಣಗಳಿಗೆ ನೆರೆದಿದ್ದವರು ನೂಕು ನುಗ್ಗಲು ಮಾಡಿಕೊಂಡಾಗ, ವ್ಯಕ್ತಿ ಘನತೆಯ ಬಗ್ಗೆ ನೇರ ವೇದಿಕೆಯಿಂದಲೇ ಪ್ರೊ ಮಾತನಾಡಿದ್ದರು. ನೇರ ಮಾತುಗಳಲ್ಲಿ ಠೀಕಿಸಿದ್ದರು.

ವಿದ್ಯುತ್ ಬಿಲ್ ವಿಚಾರವಾಗಿ ಅವರು ಮಾಡಿದ ದೀರ್ಘ ಭಾಷಣದ ಒಂದು ಮಾತು ಹೀಗಿದೆ. ಸರ್ಕಾರ ನಿಮಗೆ ಕರೆಂಟ್ ಕೊಡ್ತಾ ಇದೆ ಎಂದರೆ ಸರ್ಕಾರ ಮಾರಟಗಾರ ಎಂದರ್ಥ. ಅದನ್ನು ಬಳಸ್ತಿರೋ ನೀವು ಗ್ರಾಹಕರು ತಾನೇ. ಸೋ.. ಸರ್ಕಾರ ಕೊಡ್ತಿರೋ ಕರೆಂಟ್ ಗುಣಮಟ್ಟ ಹೇಗಿದೆ. ವರ್ಷಕ್ಕೆ ಎರಡು ಮೂರು ಸಾರಿ ನಿಮ್ಮ ಮೋಟರ್ ಗಳು ಸುಟ್ಟೋಗಿ ತೊಂದರೆ ಆಗ್ತಿದೆ. ನಿಮಗೆ ನೀಡ್ತಿರೋ ವಿದ್ಯುತ್ ಗುಣಮಟ್ಟದಲ್ಲ. ಯಾವುದೇ ಉತ್ಪನ್ನ ಅಥವಾ ಸೇವೆ ಗೆ ಗುಣಮಟ್ಟ ಬಹಳ ಮುಖ್ಯ. ಅದನ್ನು ಕೇಳುವುದು ಗ್ರಾಹಕರ ಹಕ್ಕು ಕೂಡಾ.. ಇದನ್ನೆಲ್ಲಾ ನೀವು ಒಪ್ಪೋದಾದ್ರೆ ಈಗ ಸರ್ಕಾರ ನಿಮಗೆ ಕೊಡ್ತಿರೋ ಕರೆಂಟ್ ಕಿರುಕುಳ ಅನ್ನಿಸ್ಕೊಳ್ಳೋಕೆ ಲಾಯಕ್ಕಾದದ್ದು ತಾನೆ ? ಹಾಗಾದ್ರೆ ಕಿರುಕುಳಕ್ಕೆ ಯಾರಾದ್ರೂ ಹಣ ಕೊಡ್ತಾರಾ? ತೆರಿಗೆ ಕೊಡೋಕಾಗುತ್ತಾ.. ಸೋ ನೀವು ಯಾರೂ ಕರೆಂಟ್ ಬಿಲ್ಲ ಕಟ್ಟೋ ಅಗತ್ಯ ಇಲ್ಲ ಎಂದು ಹೇಳಿದ್ದಾರೆ. ಈ ಭಾಷಣ ಮಾಡಿ ಮೂರೂವರೆ ದಶಕ ಸಂದಿರಬೇಕು. ಆ ಭಾಗದ ಅನೇಕ ಹಳ್ಳಿಗಳಲ್ಲಿ ಇಂದಿಗೂ ರೈತರು ವಿದ್ಯುತ್ ಬಿಲ್ ಕಟ್ಟಿಲ್ಲ. ಕಟ್ಟುವುದೂ ಇಲ್ಲ. ಇದು ಪ್ರೊ ವರಸೆ.

**

ಪ್ರೊ ಮತ್ತು ಮೋ.ಕ. ಗಾಂಧಿ

ಇಸವಿ 2004. ನಾನು ಕಲಾವಿದ ಮಿತ್ರ ರಾಠೋಡ್ ಪ್ರೊ ಎಂಡಿಎನ್ ಕ್ಯಾಲೆಂಡರ್ ರೂಪಿಸುತ್ತಿದ್ದೆವು. ಕವರ್ ಪೇಜ್ ನಲ್ಲಿ ಎಂಡಿಎನ್ ಸಿಗ್ನೇಚರ್ ಬಳಸುವ ಯೋಚನೆ ಸುಳಿಯಿತು. ಅಂತೆಯೇ ಮಾಡಿದೆವು. ಅದು ಎಲ್ಲರಿಗೂ ಇಷ್ಟವಾಗಿತ್ತು. ಆಗ ನಾನು ಅಂದು ಹೇಳದೆ ಹೋದ ವಿಷಯ ಇಂದು ಹೇಳಬೇಕೆನಿಸಿದೆ. ನೀವೊಮ್ಮೆ ಗಾಂಧೀಜಿ ಮತ್ತು ಎಂಡಿ ಎನ್ ಅವರ ಸಿಗ್ನೇಚರ್ ಗಮನಿಸಿ. ಸ್ಟೋಕ್ಸ್ ನಲ್ಲಿ ತುಂಬಾ ಸಾಮ್ಯ ಇದೆ. ಒಬ್ಬ ವ್ಯಕ್ತಿಯ ಸಿಗ್ನೇಚರ್ ನಿಂದ ಆತನ ಗುಣಗಳನ್ನು ಊಹಿಸಬಹುದೆಂಬ  ಬಗ್ಗೆ ಹಿಂದೊಮ್ಮೆ ಎಲ್ಲೋ ಓದಿದ್ದ ನೆನಪು. ಅದು ಹೌದಾದರೆ ಗಾಂಧಿ ಮತ್ತು ಎಂಡಿಎನ್ ಅವರ ಹೋರಾಟ ಮನೋಭಾವ ಮತ್ತು ಹೋರಾಟದ ಮಾರ್ಗಗಳಲ್ಲಿ ಸಾಮ್ಯವಿರುವುದು ಅವರೀರ್ವರ ಸಿಗ್ನೇಚರ್ ಗಳು ಕೂಡಾ ಖುಜುವಾತು ಮಾಡುತ್ತವೆ. ಪ್ರೊಫೆಸರ್ ಎಂಡಿಎನ್ ಗಾಂಧಿ ಮಾರ್ಗದಲ್ಲಿಯೇ ನಡೆದ ಸರ್ವ ಶ್ರೇಷ್ಟ ಹೋರಾಟಾಗಾರರಾಗಿದ್ದರು.

**

ಇಸವಿ 2004. ಫೆಬ್ರವರಿ 3. ನಾನು ಕೊಡಗಿನ ಬಳಿ ಕಾವೇರಿ ನಿಸರ್ಗದಾಮದಲ್ಲಿ ಸುತ್ತಾಡುತ್ತಿದ್ದೆ. ಚುಕ್ಕಿ ಅವರ ಫೋನ್ ಬಂತು. ಅನುಮಾನದಿಂದಲೇ ಫೋನ್ ರಿಸೀವ್ ಮಾಡಿದೆ. ಸುದ್ಧಿ ಖಾತ್ರಿಯಾಯಿತು. ಪ್ರೊ ನಿರ್ಗಮಿಸಿದ್ದರು. ತತ್ ಕ್ಷಣ ಅಲ್ಲಿಂದ ಹೊರಟೆ.  ರಾಜರಾಜೇಶ್ವರಿ ನಗರದ ಪ್ರೊಫೆಸರ್ ಅವರ ನಿವಾಸದ ಎದುರು ಸಾವಿರಾರು ಕಾರ್ಯಕರ್ತರು ಸೇರಿದ್ದರು. ನಾಡಿನ ಖ್ಯಾತನಾಮರೆಲ್ಲಾ ಬಂದು ಹೋಗುತ್ತಿದ್ದರು.  ಎಲ್ಲರನ್ನೂ ನೋಡುತ್ತಾ ಗಮನಿಸುತ್ತಾ ಅಲ್ಲಿಯೇ ಇದ್ದ ನಾವು ಕೆಲವು ಏರ್ಪಾಟುಗಳನ್ನು ಮಾಡುವ ಕೆಲಸದಲ್ಲಿ ತೊಡಗಿದ್ದೆವು. ರಾತ್ರಿ ಲಘು ಸಂಗೀತ ಮಾಡಿಸಬೇಕೆಂಬ ಸಲಹೆ ಬಂದಿತ್ತು. ಆ ವಿಷಯ ನನ್ನವರೆಗೆ ಮುಟ್ಟಿತು. ಆಗ ಎಂಡಿ ಪಲ್ಲವಿ ಅವರ ನೆನಪಾಯಿತು.  ಅವರನ್ನು ನಾನು ಸಮೂಹ ಸಂಸ್ಥೆಯ ಜಾಗೃತಿ ಹಾಡುಗಳ ಕ್ಯಾಸೆಟ್ ಗಾಗಿ  ಭೇಟಿಯಾಗಿದ್ದೆ, ಅವರ ನಂಬರ್ ನನ್ನ ಬಳಿ ಇತ್ತು. ಪ್ರೊ ಕುಟುಂಬದವರ ಅಪ್ಪಣೆ ಮೇರೆಗೆ ಅವರಿಗೆ ಫೋನ್ ಮಾಡಿ ರಾತ್ರಿ ಸ್ವಲ್ಪ ಕಾಲ ಹಾಡಬಹುದೇ ಎಂದು ವಿನಂತಿಸಿದೆ. ಮರು ಮಾತನಾಡದೆ ಅಡ್ರೆಸ್ ಪಡೆದು ಬಂದು ರಾತ್ರಿ ಹಾಡಿದರು. ಅಂದು  ಅವರಿಗೆ ಧನ್ಯವಾದ ಕೂಡಾ ಹೇಳಿ ಕಳುಹಿಸಿರಲಿಲ್ಲ ನಾನು. ಬೇರೆ ಯಾರಾದರೂ ಹೇಳಿದ್ದಿರಬಹುದು. ಇರಲಿ. ಈ ಲೇಖನದಲ್ಲಿ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ.

ಈಗ ಪ್ರೊ ಅಂತಿಮ ಯಾತ್ರೆಗೆ ಕ್ಯಾಂಟರ್ ನಲ್ಲಿ ವೇದಿಕೆ ಕಟ್ಟುವ ಕೆಲಸ ಆರಂಭಗೊಂಡಿತು. ಶೈಲು ಮಾಮ ( ಪ್ರೊಫೆಸರ್ ಅವರ ಪತ್ನಿ ಪ್ರತಿಮಾ ಮೇಡಂ ಅವರ ತಮ್ಮ) ನಾನು ವೇದಿಕೆ ಕಟ್ಟಲು ಕಾರ್ಯಕರ್ತರಿಗೆ ದಿವಾನ ಒಂದನ್ನು ಕೊಡಲು ನೋಡುತ್ತಿದ್ದೆವು. ಆಗ ನಮ್ಮ ಕಣ್ಣಿಗೆ ಬಿದ್ದದ್ದು  ಒಂದು ಬೆತ್ತದ ಮಂಚ. ಶೈಲು ಮಾಮ ಕಾರ್ಯಕರ್ತರಿಗೆ ಅದನ್ನೇ ಒದಗಿಸಿದರು. ಆ ಮಂಚ ಗಾಂಧಿ ಕುಟುಂಬಕ್ಕೆ ಸೇರಿದ್ದು ಎಂದು ನನಗೆ ಆಮೇಲೆ ಹೊಳೆಯಿತು.

ಒಮ್ಮೆ ಗಾಂಧಿ ಮೊಮ್ಮಗ ರಾಮಚಂದ್ರ ಗಾಂಧಿ ಅವರು ಬೆಂಗಳೂರು ವಿವಿಯ ತತ್ವಶಾಸ್ತ್ರ ವಿಭಾಗಕ್ಕೆ ಗೆಸ್ಟ್ ಪ್ರೊಫೆಸರ್ ಆಗಿ ಬಂದಿದ್ದರು. ಬಂದಾಗ ಒಂದೆರಡು ದಿನ ವಿವಿ ಗೆಸ್ಟ್ ಹೌಸ್ ನಲ್ಲಿ ಇದ್ದರಾದರೂ ಅವರು ರಾಜರಾಜೇಶ್ವರ ನಗರದಲ್ಲಿ ಪುಟ್ಟ ಮನೆಯೊಂದನ್ನು ಬಾಡಿಗೆಗೆ ಪಡೆದು ಬೆಂಗಳೂರಿನಲ್ಲಿ ಇದ್ದಷ್ಟು ಕಾಲ ಅಲ್ಲಿಯೇ ವಾಸವಿದ್ದರು. ಚುಕ್ಕಿ ಮತ್ತು ರಾಮಚಂದ್ರ ಗಾಂಧಿ ಅವರ ನಡುವೆ ಆಗಾಗ ಮಾತು ಕತೆ ನಡೆದಿತ್ತು. ಅವರು ಪರಸ್ಪರ ವಿಶ್ವಾಸಿಗಳಾಗಿದ್ದರು. ರಾಮಚಂದ್ರ ಗಾಂಧಿ ಅವರು ಬಂದ ಕೆಲಸ ಮುಗಿಸಿ ಪೂನಾ ಕ್ಕೆ ಹೊರಡುವುದಿತ್ತು. ಆಗ ಅವರು ಬಳಸುತ್ತಿದ್ದ ಬೆತ್ತದ ಮಂಚವೊಂದನ್ನು ರೈತ ಕಾರ್ಯಕರ್ತರು ಬಂದು ಹೋಗುವಾಗ ಬಳಕೆಯಾಗಲಿ ಎಂದು ಪ್ರೊ ಮನೆಯಲ್ಲಿಯೇ ಇಟ್ಟು ಹೋಗಿದ್ದರು. ಅದೇ ಗಾಂಧಿ ಕುಟುಂಬಕ್ಕೆ ಸೇರಿದ ಮಂಚದ ಮೇಲೆ ಪ್ರೊ ಎಂಡಿಎನ್ ಅಂತಿಮ ಯಾತ್ರೆ ಸಾವಿರಾರು ರೈತರ ಸಮ್ಮುಖದಲ್ಲಿ ನಡೆಯಿತು.

ಪ್ರೊ ದೈಹಿಕವಾಗಿ ಇಲ್ಲವಾದರು. ಅವರು ಬಿತ್ತಿದ ತತ್ವ ಸಿದ್ಧಾಂತಗಳು ನಿತ್ಯ ನಮ್ಮ ಜೊತೆಗೆ ಜೀವಂತವಾಗಿವೆ. ಆ ಮೂಲಕ ಪ್ರೊ ನಮ್ಮ ನಡುವೆಯೇ ಇದ್ದಾರೆ. ನಿತ್ಯವೂ ನಮ್ಮೊಳಗೆ ಬೆಳೆಯುತ್ತಲಿದ್ದಾರೆ. ಲಾಂಗ್ ಲಿವ್ ಪ್ರೊಫೆಸರ್…


Spread the love