ಕೆ.ಎನ್.ನಾಗೇಶ್
ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ, ಹೆಸರಾಂತ ಭೌತ ವಿಜ್ಞಾನಿ ಹಾಗೂ ಬೆಂಗಳೂರಿ ವಿವಿ ಜ್ಞಾನ ಭಾರತಿ ಆವರಣದ ಜೀವವೈವಿಧ್ಯವನದ ಶಿಲ್ಪಿ ಡಾ.ಕೆ. ಸಿದ್ಧಪ್ಪ ಅವರ ಬದುಕು-ಸಾಧನೆ ಕುರಿತಾದ ಅಭಿನಂದನಾ ಗ್ರಂಥ “ಡಾ.ಕೆ.ಸಿದ್ದಪ್ಪ A visionary Educationist” 2024 ಜುಲೈ 17 ರಂದು ಬೆಂಗಳೂರಿನ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಆವರಣದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ನ ಆಯುಕ್ತರಾದ ಪಿ.ಜಿ.ಆರ್ ಸಿಂಧ್ಯಾ ಬಿಡುಗಡೆ ಮಾಡಿದರು.
ಪಿ.ಜಿ.ಆರ್. ಸಿಂಧ್ಯಾ
ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಸಿಂಧ್ಯಾ ಅವರು “ ಡಾ. ಸಿದ್ದಪ್ಪನವರು ಜನಾನುರಾಗಿಗಳು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ ಎನ್ನುವುದಕ್ಕೆ ಸಾಕ್ಷಿಯಾಗಿ ತಾವೆಲ್ಲಾ ಇಲ್ಲಿ ಗಣ್ಯರ ಸಮ್ಮುಖದಲ್ಲಿ ನೆರೆದಿದ್ದೀರಿ” ನಾನು ಗೃಹ ಮಂತ್ರಿ ಆಗಿದ್ದ ಸಂದರ್ಭದಲ್ಲಿ ಸಿದ್ಧಪ್ಪನವರು ನನ್ನೊಂದಿಗ ಮಾತನಾಡಿದರು, ವಿವಿಯ ವಸತಿ ಗೃಹದಲ್ಲಿ ೧೫-೨೦ ವರ್ಷಗಳಿಂದ ಅನಧಿಕೃತವಾಗಿದ್ದ ವಿದ್ಯಾರ್ಥಿಗಳನ್ನು ಹೊರಗೆ ಕಳುಹಿಸಲು ಪೊಲೀಸರ ಸಹಕಾರ ಕೋರಿದ್ದರು. ಅದು ಚಾಲೆಂಜಿಗ್ ಆಗಿತ್ತು. ಅವರ ದಕ್ಷತೆಗೆ ಇದೊಂದು ಉದಾಹರಣೆ.
ವಿಜ್ಞಾನವನ್ನು ತಿಳಿದು ಸಮಾಜದ ವಿವಿಧ ಸ್ಥರಗಳಲ್ಲಿ ಅದನ್ನು ಅಡಾಪ್ಟ್ ಮಾಡಲಿಕ್ಕೆ ಬೇಕಾದ ನಾಯಕರ ಕೊರತೆ ಇದೆ. ಆದರೆ ಡಾ. ಕೆ. ಸಿದ್ಧಪ್ಪ ಮರಳುಗಾಡಿನಲ್ಲಿ ಒಯಾಸಿನ್ ನಂತೆ ಇದ್ದಾರೆ. ವಿವಿ ಕುಲಪತಿಯಾಗಿ ಅವರು ಶಾಶ್ವತವಾದ ಬದಲಾವಣೆ ತಂದಿದ್ದಾರೆ. ಈ ಪುಸ್ತಕದ ಕೆಲ ಅಂಶಗಳನ್ನು ಪ್ರಾಥಮಿಕ ಶಾಲೆಗಳ ಪಠ್ಯವನ್ನಾಗಿ ಮಾಡಿದರೆ ಒಳ್ಳೆಯದು ಎಂಬುದು ನನ್ನ ಭಾವನೆ. ಈ ಪುಸ್ತಕ ಎಲ್ಲರಿಗೂ ಒಳ್ಳೆಯ ಸಂಗಾತಿ ಆಗ್ತದೆ ಎಂಬುದು ನನ್ನ ಅಭಿಪ್ರಾಯ ಎಂದರು.
ಈ ಸಭೆ ಇವತ್ತಿನ ಶಿಕ್ಷಣ ಪದ್ಧತಿಯ ಬಗ್ಗೆ ಮಾತಾಡಿದ್ರೆ ಒಳ್ಳೇದು ಎಂಬ ಮಾತನ್ನು ರುದ್ರೇಗೌಡರು ಹೇಳಿದರು. ಇವರೊಂದಿಗೆ ಬೆನಕಪ್ಪನವರು ಕೊಂಡಜ್ಜಿ ಷಣ್ಮುಗಪ್ಪನವರು ಇನ್ನೂ ಅನೇಕರು ಸೇರಿ ಸಿದ್ದಪ್ಪನವರಿಗೆ ಅಭಿನಂದನೆ ಮಾಡ್ತಿರೋದು ಸಂತೋಷ.
ಎಸ್.ರುದ್ರೇಗೌಡರು: ಅಭಿನಂದನಾ ಸಮಿತಿ ಅಧ್ಯಕ್ಷರು
ಡಾ. ಕೆ. ಸಿದ್ಧಪ್ಪನವರ ಅಭಿನಂದನಾ ಸಮಿತಿಯ ಅಧ್ಯಕ್ಷರಾದ ಎಸ್. ರುದ್ರೇಗೌಡರು ಪ್ರಾಸ್ತಾವಿಕವಾಗಿ ಮಾತನಾಡಿ ಈ ಅಭಿನಂದನಾ ಕಾರ್ಯಕ್ರಮ ಇತಿಹಾಸದಲ್ಲಿ ಉಳಿಯುವಂಥದ್ದು ಎಂದು ಅಭಿಪ್ರಾಯಪಟ್ಟರು. ಡಾ. ಸಿದ್ಧಪ್ಪನವರು ಪ್ರಾಧ್ಯಾಪಕರಾಗಿ, ಬೆಂ.ವಿ.ವಿಯ ಉಪಕುಲಪತಿಗಳಾಗಿ ಮಾಡಿರುವ ಸೇವೆ ಅನನ್ಯ ಎಂದು ಸ್ಮರಿಸಿದರು. ಅಂತೆಯೇ ಯಾವುದೇ ದೇಶದ ಘತನೆಯನ್ನು ಅಲ್ಲಿನ ವಿಶ್ವವಿದ್ಯಾಲಯಗಳು ಹಾಗೂ ನ್ಯಾಯಾಲಯಗಳು ಸಾರುತ್ತವೆ ಎಂಬ ಮಾತನ್ನೂ ಉಲ್ಲೇಖಿಸಿ ಶಿಕ್ಷಣ ಮತ್ತು ನ್ಯಾಯಾಂಗ ವ್ಯವಸ್ಥೆಯ ಪ್ರಾಮುಖ್ಯತೆಯ ಬಗ್ಗೆ ಒತ್ತಿ ಹೇಳಿದರು.
ಶ್ಯಾಮನೂರು ಶಿವಶಂಕರಪ್ಪ: ಉದ್ಘಾಟಕರು
ಡಾ.ಕೆ. ಸಿದ್ಧಪ್ಪನವರ ಅಭಿನಂದನಾ ಸಮಾರಂಭದ ಉದ್ಟಾಟನೆ ಮಾಡಿದ ಡಾ. ಶ್ಯಾಮನೂರು ಶಿವಶಂಕರಪ್ಪ ಅವರು ಮಾತನಾಡಿ “ಡಾ.ಕೆ.ಸಿದ್ಧಪ್ಪನವರು ದಾವಣಗೆರೆಯ ಸಮೀಪದ ರೈತ ಕುಟುಂಬದಲ್ಲಿ ಹುಟ್ಟಿದವರು. ಕರ್ನಾಟಕದಲ್ಲಿಯೇ ಒಳ್ಳೆಯ ವಿಜ್ಞಾನಿಯಾಗಿದ್ದಾರೆ. ಇವರು ಬೆಂ.ವಿ.ವಿ. ಉಪಕುಲಪತಿಗಳಾಗಿದ್ದಾಗ ವಿ.ವಿ ಗೆ ಸ್ಟಾರ್ ವ್ಯಾಲ್ಯೂ ತಂದುಕೊಟ್ಟವರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇವರು ವಿದ್ಯಾರ್ಥಿಗಳಿಗೆ ನೆಚ್ಚಿನ ಗುರುಗಳಾಗಿ, ಆಡಳಿತ ಮಂಡಳಿಗೆ ನಿಷ್ಟುರ ಅಧಿಕಾರಿಯಾಗಿದ್ದವರು ಎಂದು ಪ್ರಶಂಸಿದರು. ನಿವೃತ್ತಿಯ ನಂತರ ಇವರು ವಿಶ್ರಾಂತ ಜೀವನ ನಡೆಸಬಹುದಿತ್ತು. ಆದರೆ ಹಾಗೆ ಮಾಡಲಿಲ್ಲ. ಬದಲಿಗೆ ಹಲವಾರು ಮಠ ಮಾನ್ಯಗಳು ಹಾಗೂ ವಿಶೇಷವಾಗಿ ವಿಜ್ಞಾನ ಸಂಸ್ಥೆಗಳಿಗೆ ಸೇವೆ ಸಲ್ಲಿಸುತ್ತಿದ್ದಾರೆ. ತಮಗಾಗಿ ಏನನ್ನೂ ಬಯಸದೆ ಸದಾ ಲೋಕೋದ್ದಾರಕ್ಕೆ ದುಡಿದವರು ಎಂದರು. ೮೦ ವರ್ಷಗಳ ತುಂಬು ಜೀವನ ಪೂರೈಸಿರುವ ಈ ಸಂದರ್ಭದಲ್ಲಿ ಅವರಿಗೆ ಅಭಿನಂದನೆ ಸಲ್ಲಿಸುತ್ತಿರುವುದು ಸಮಯೋಚಿತವಾಗಿದೆ ಎಂದು ಶ್ಲಾಘಿಸಿದರು.
ಗೂ.ರು.ಚನ್ನಬಸಪ್ಪ: ಅಭಿನಂದನಾ ನುಡಿ
ಕೆ. ಸಿದ್ಧಪ್ಪನವರ ಕುರಿತಾಗಿ ಅಭಿನಂದನಾ ನುಡಿಗಳನ್ನಾಡಬೇಕು ಎಂದಾಗ ನನಗೆ ಒಂದು ಘಟನೆ ನೆನಪಾಯಿತು. “ಇಬ್ಬರು ಸ್ನೇಹಿತರು. ಹತ್ತಾರು ವರ್ಷಗಳ ಸ್ನೇಹ. ಒಮ್ಮೆ ಒಬ್ಬ ಇನ್ನೊಬ್ಬನನ್ನು ನೀನು ಯಾರು ಎಂದು ಕೇಳುತ್ತಾನೆ. ಆಗ ಆತ ಏನೂ ಹೇಳಲಾಗದೆ ಮೂಕನಾಗಿಬಿಟ್ಟ.” ಹಾಗೆ ಸಿದ್ದಪ್ಪನವರ ಬಗ್ಗೆ ಮಾತನಾಡಿ ಎಂದಾಗ ನಾನೂ ಮೂಕನಾದೆ. ನನಗೆ ಸಿದ್ಧಪ್ಪ ಅವರೊಂದಿಗೆ ಮೂರು ದಶಕ ವಿಶ್ವಾಸ ಇದ್ದರೂ ಏನು ಹೇಳಬೇಕೆಂದು ಹೊಳೆಯಲಿಲ್ಲ ಎಂದರು. ಗೂರೂಚ ಅವರು ಹೀಗೆ ಹೇಳಿದರೂ ಅತ್ಯಂತ ಮಹತ್ವದ ಅಭಿನಂದನಾ ನುಡಿಗಳನ್ನಾಡಿದರು.
ಕ್ರಿಸ್ತ ಪೂರ್ವದಲ್ಲಿ ರೋಮನ್ ರಾಜನೀತಿಜ್ಞ ಸಿಸಿರೋ ಮಾನವನ ಆರು ದೋಷಗಳನ್ನು ಹೇಳ್ತಾನೆ. ಅವುಗಳಲ್ಲಿ ಇತರರನ್ನು ಹತ್ತಿಕ್ಕುವುದರಿಂದ ವೈಯಕ್ತಿಕ ಲಾಭ ಆಗ್ತದೆ ಎಂಬ ಭ್ರಮೆ, ನಾವು ಸಾಧಿಸಲಾಗದ ಕಾರಣಕ್ಕೆ ಅದು ಅಸಾಧ್ಯ ಎಂದು ತಿಳಿಯುವುದು ಹೀಗೆ ಇನ್ನೂ ನಾಲ್ಕು ದೋಷಗಳನ್ನು ಅವನು ಹೇಳುತ್ತಾನೆ, ಆದರೆ ಸಿದ್ದಪ್ಪನವರು ಈ ಆರೂ ದೋಷಗಳನ್ನು ತಮ್ಮ ಹತ್ತಿರು ಬಿಟ್ಟುಕೊಳ್ಳದಂತೆ ಬದುಕಿದವರು. 40 ವರ್ಷಗಳ ಬೋಧನೆಯ ಅನುಭವ, ಆಡಳಿತಾನುಭವದ ಜೊತೆಗೆ 300 ಕ್ಕೂ ಹೆಚ್ಚು ಸಂಶೋಧನ ಪ್ರಬಂಧಗಳನ್ನು ರಚಿಸಿದ್ದಾರೆ ಜೊತೆಗೆ ಹತ್ತಾರು ಮಹತ್ವದ ಗ್ರಂಥಗಳನ್ನು ರಚಿಸಿದಿದ್ದಾರೆ ಎಂದು ಪ್ರಶಂಸಿಸಿದರು.
ಸಿದ್ದಪ್ಪ ಅವರಿಗೆ ಅಮೆರಿಕಾದ ನಾಲ್ಕು ಪ್ರತಿಷ್ಟಿತ ಪ್ರಶಸ್ತಿಗಳು ಬಂದಿವೆ. ಮೂರು ರಾಷ್ಟ್ರೀಯ ಪ್ರಶಸ್ತಿಗಳು ಸಂದಿವೆ. ಇವರು ಮಂಗಳೂರು ವಿ.ವಿ.ಯಲ್ಲಿದ್ದಾಗ ಉದ್ಯೋಗಿಗಳ ಸಹಕಾರ ಸಂಘ ಸ್ಥಾಪಿಸಿದವರು ಎಂದು ತಿಳಿಸಿದ್ದಲ್ಲದೆ ಆ ಪ್ರಯತ್ನವನ್ನು ಜಪಾನಿ ತಜ್ಞರು ಮೆಚ್ಚುಗೆ ವ್ಯಕ್ತಪಡಿದ ಬಗ್ಗೆಯೂ ಉಲ್ಲೇಖಿಸಿದರು. ಇಷ್ಟೆಲ್ಲಾ ಆದರೂ ಯಾವುದೇ ಬಿಗುಮಾನ ಅವರಲ್ಲಿಲ್ಲ. ಸೇವಾ ಸಜ್ಜಿನಿಕೆಯ ನಾಡಿನ ಶ್ರೇಷ್ಟ ವಿಜ್ಞಾನಿ ಅವರು ಎಂದರು. ಸಿದ್ದಪ್ಪ ಅವರ ವಿಶೇಷವಾದ ಗುಣವೆಂದರೆ ಅವರು ಇನ್ನೊಬ್ಬರಿಗೆ ಕೆಲಸ ಮಾಡಲು ಹೇಳುವುದಕ್ಕಿಂತ ಹೆಚ್ಚಾಗಿ ತಮಗೆ ತಾವೇ ಹೇಳಿಕೊಂಡು ಕೆಲಸ ಮಾಡುತ್ತಾರೆ ಎಂಬುದು.
ಪ್ರೊ ಸಿದ್ಧಪ್ಪ ಅವರದ್ದು ಮುಕ್ತ ಮನಸ್ಸು. ಯಾವುದೇ ಕೆಲಸದಲ್ಲಿ ಅವರು ಅವಸರದ ಫಲಿತಾಂಶ ನಿರೀಕ್ಷಿಸುವವರಲ್ಲ. ಅವಸರಕ್ಕಿಂತ ಶಾಶ್ವದ ಪ್ರಾಪ್ತಿ ಅವರ ಆಶಯ. ಸಾಧನೆಯಲ್ಲಿ ಸಂತೃಪ್ತಿಯನ್ನು ಕಂಡಿದ್ದಾರೆ. ಬಾಹ್ಯ ಪ್ರೇರಣೆಯಿಂದ ಮಾಡುವ ಕೆಲಸಗಳನು ಪ್ರದರ್ಶಕವಾಗಬಹುದು. ಅಂತರಂಗದ ಕೆಲಸ ಯಾವಾಗಲೂ ಜನರಿಗೆ ಮುಟ್ಟುತ್ತದೆ. ವಿಜ್ಞಾನ ಜನಸಮುದಾಯದ ಬದುಕಿಗೆ ಅನುವಾಗಿರಬೇಕು ಎಂಬುದೇ ಅವರ ಆಶಯ. ಅವರದ್ದು ಪೂರ್ಣ ವೈಜ್ಞಾನಿಕ ಮನಸ್ಸು ಎಂದು ಶ್ಲಾಘಿಸಿದರು.
ಸಿದ್ಧಪ್ಪ ಭೌತ ವಿಜ್ಞಾನಿ ಅನ್ನುವುದಕ್ಕಿಂತ ಹೆಚ್ಚಿನದಾಗಿ ನನಗೆ ಸಮಾಜ ವಿಜ್ಞಾನಿಯಾಗಿ ಕಾಣುತ್ತಾರೆ ಎಂದರು. ಯಾವುದೇ ಕೆಲಸ ಮಾಡುವಾಗ ಅಡ್ಡಿ ಆತಂಕ ಇರುತ್ತವೆ. ಆದರೆ ಏನೂ ಮಾಡದೆ ಹೋದ್ರೆ ಜೀವನದಲ್ಲಿ ಆ ಅಡ್ಡಿ ಆತಂಕಗಳು ಇನ್ನೂ ಹೆಚ್ಚಾಗುತ್ತವೆ ಎಂಬ ಮಾತನ್ನು ಉಲ್ಲೇಖಿಸಿ ಸಿದ್ದಪ್ಪನವರ ಕಾಯಕ ಪ್ರಜ್ಞೆಯ ಬಗ್ಗೆ ಮತ್ತು ಸದಾ ಹೊಸತನದಲ್ಲಿ ತೊಡಗುವುದರ ಬಗ್ಗೆ ಗೌರವದ ಮಾತುಗಳನ್ನಾಡಿದರು.
ಹೊಸ ಮೌಲ್ಯಗಳು ಯಾವುವು ಎಂದು ತಿಳಿಯದ ಸಂದರ್ಭದಲ್ಲಿ, ಸನ್ನಿ ಹಿಡಿದಂತಃ ಸಮಾಜದಲ್ಲಿ ನಮಗೆ ನಾವೇ ಕಳೆದುಹೋಗ್ತಿದ್ದೇವೆ. ಇಂಥ ಸಂದರ್ಭದಲ್ಲಿ ಸಿದ್ದಪ್ಪನವರು ಭರವಸೆಯಾಗಿ ಕಾಣುತ್ತಾರೆ. ಅಂತೆಯೇ ಸಮಾಜಕ್ಕೆ ಅನುಭವದ ಶಿಕ್ಷಣ ಅಗತ್ಯ, ಜಾಣ್ಮೆಯ ಶಿಕ್ಷಣ ಅಲ್ಲ ಎಂಬುದಾಗಿ ಹೇಳುವ ಮೂಲಕ ಪ್ರಸ್ತುತ ಶಿಕ್ಷಣ ವ್ಯವಸ್ಥೆಯ ಬಗ್ಗೆ ಬೆಳಕು ಚಲ್ಲಿದರು.
ಸಿದ್ದಪ್ಪ ಅವರಿಗೆ ಸದಾ ವಿಜ್ಞಾನ ಪ್ರಸಾರದ್ದೇ ಹಂಬಲ. ಜಗತ್ ಪ್ರಸಿದ್ಧ ವಿಜ್ಞಾನಿ ಎಡಿಸನ್ ಯಾವಾಗಲೂ ಪ್ರಯೋಗಾಲಯದಲ್ಲಿಯೇ ಇರುತ್ತಿದ್ದರು. ಕೆಲವೊಮ್ಮೆ ಇಡೀ ರಾತ್ರಿ ಅಲ್ಲಿಯೇ ಇರುತ್ತಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ ಅವರ ಪತ್ನಿ ನೀವು ಯಾಕೆ ಯಾವಾಗಲೂ ಪ್ರಯೋಗಾಲಯದಲ್ಲಿ ಇರ್ತೀರಿ. ಆಚೆ ಹೋಗ್ಬಾರ್ದಾ, ಆಚೆ ಬರಬಾರ್ದಾ ಎಂದು ಹೇಳುತ್ತಾರೆ. ಅದಕ್ಕೆ ಎಡಿಸನ್ ಎಲ್ಲಿಗೆ ಹೋಗುವುದು ಎಂದು ಕೇಳುತ್ತಾರೆ. ಆಗ ಅವರ ಪತ್ನಿ ನಿಮಗಿಷ್ಟವಾದ ಯಾವುದೇ ಸ್ಥಳಕ್ಕೆ ಹೋಗಿ ಎಂದಾಗ ಆಗಲಿ ಎಂದ ಎಡಿಸನ್ ಕೂಡಲೇ ಪ್ರಯೋಗಾಲಯಕ್ಕೆ ತೆರಳುತ್ತಾರೆ. ಈ ವಿಷಯವನ್ನು ಪ್ರಸ್ತಾಪಿಸಿದ ಗೂರೂಚ ಅವರು ಸಿದ್ದಪ್ಪನವರ ಪತ್ನಿ ರತ್ನಮ್ಮ ಅವರು ಇಂಥ ಪ್ರಶ್ನೆಯನ್ನೆನಾದರೂ ಸಿದ್ದಪ್ಪನವರಿಗೆ ಕೇಳಿದರೆ ಅವರೂ ಕೂಡಾ ಎಡಿಸಿನ್ ರೀತಿಯಲ್ಲಿಯೇ ಪ್ರತಿಕ್ರಿಯಿಸುತ್ತಿದ್ದರು ಎಂದು ಅವರ ಕಾಯಕ ನಿಷ್ಟೆಯ ಬಗ್ಗೆ ಗೌರವದ ಮಾತುಗಳನ್ನಾಡಿದರು.