ನಾಗೇಶ್ ಕೆ.ಎನ್.
ನಿನ್ನೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಆಪ್ತ ಕಾರ್ಯದರ್ಶಿ ಮತ್ತು ನನ್ನ ಸನ್ಮಿತ್ರರೂ ಆದ ಡಾ. ವೆಂಕಟೇಶಯ್ಯ ಅವರನ್ನು ಕಾಣಲು ಹೋಗಿದ್ದೆ. ಒಂದೈದು ನಿಮಿಷ ಇದ್ದು ಮಾತನಾಡಿ ಅವರ ಚೇಂಬರ್ ನಿಂದ ಆಚೆ ಬರುವಾಗ ಮಾಸಲು ಬಟ್ಟೆಯ, ಒಣ ಮುಖದ, ನಿದ್ದೆ ಕಾಣದ ಒಬ್ಬ ವ್ಯಕ್ತಿ ಎರಡೂ ಕೈಯಲ್ಲಿ ಅರ್ಜಿಯೊಂದನ್ನು ಹಿಡಿದು ಬಂದಿದ್ದ. (ಆ ಅರ್ಜಿ ಬರೆದ ಪೇಪರ್ ಕೂಡಾ ಮಾಸಿತ್ತು, ಮುದುಡಿತ್ತು, ಹರಿದಿತ್ತು).
ಆ ಸನ್ನಿವೇಶ ನನ್ನೊಳಗೆ ಏನೋ ಉಂಟುಮಾಡಿತು. ಕಾರಿಡಾರ್ ನಲ್ಲಿ ಹೆಜ್ಜೆಹಾಕುತ್ತಾ ಅದೇ ವ್ಯಕ್ತಿಯನ್ನು ನೆನಪಿಸಿಕೊಂಡು, ಆತ ಅಲ್ಲಿಯವರೆಗೆ ಬಂದಿರುವುದು ಮತ್ತು ಅದಕ್ಕೆ ಈ ಸರ್ಕಾರ ಮತ್ತು ಅಧಿಕಾರಿಗಳು ಅವಕಾಶ ಮಾಡಿಕೊಟ್ಟಿರುವುದರ ಬಗ್ಗೆ ಖುಷಿಪಟ್ಟೆ. ಅದಾವ ಕೆಲಸಕ್ಕೆ ಆತ ಬಂದಿದ್ದನೋ ಆ ವಿಷಯ ನನಗೆ ತಿಳಿಯದು. ಮು.ಮ ಕಚೇರಿಗೆ ಬಂದು ತನ್ನ ಅಹವಾಲನ್ನು ಹೇಳಬಹುದಾದ ಸ್ಪೇಸ್ ಅವನಿಗೆ ಇರುವುದೇ ಚಂದ ಅನಿಸಿತು.
ಆತ ಮರಳಿ ಊರಿಗೋಗಿ ನಾನು ಮುಖ್ಯಮಂತ್ರಿ ಕಚೇರಿಗೆ ಹೋಗಿ ಬಂದಿದ್ದೀನಿ ಎಂದು ಸಿಕ್ಕ ಸಿಕ್ಕವರತ್ತಿರ ಹೇಳಿಕೊಂಡು ತನ್ನ ಆತ್ಮಸ್ಥೈರ್ಯ, ಆರೋಗ್ಯ ಹೆಚ್ಚಿಸಿಕೊಳ್ಳಬಹುದಾದ ಅವಕಾಶವದು. ಇನ್ನು ಹೀಗೆ ಯಾರೇ ಬಂದರೂ ಸಮಾಧಾನವಾಗಿ ಮಾತನಾಡಿ, ಅವರ ಅಹವಾಲು ಕೇಳಿ, ಪರಿಹಾರ ಸೂಚಿಸಿ ಕಳುಹಿಸುವ ವೆಂಕಟೇಶಯ್ಯ ಅವರಂಥಃ ಅಧಿಕಾರಿಗಳಿಂದ ಸರ್ಕಾರಗಳ ಬಗ್ಗೆ ಜನರಲ್ಲಿ ಕೊಂಚ ಅಭಿಮಾನ ಮೂಡುವುದರಲ್ಲಿ ಸಂಶಯವಿಲ್ಲ.
**
ಈ ಘಟನೆಯಿಂದ ನನಗೆ ಜೆ.ಹೆಚ್. ಪಟೇಲರ ಕಾಲದಲ್ಲಿ ಮುಖ್ಯಮಂತ್ರಿಗಳ ಕಚೇರಿಯ ಘಟನೆಯೊಂದು ನೆನಪಿಗೆ ಬಂತು. 1997. ಅದೊಂದು ದಿನ ನಾನು ಗೆಳೆಯ ರೇಣುಕಾ ಪ್ರಸನ್ನ ಮತ್ತು ಅವರ ಮಾವ ಪ್ರೊ.ಗಂಗಾಧರಪ್ಪ (ಪ್ರೊ ಗಂಗಾಧರಪ್ಪ ಮತ್ತು ದಯಾಶಂಕರ್ ಸಹಪಾಠಿಗಳು) ಪಟೇಲರ ಆಪ್ತಕಾರ್ಯದರ್ಶಿ ದಯಾಶಂಕರ್ ಅವರನ್ನು ನೋಡಲು ಹೋಗಿದ್ದೆವು. ನಮಗೆ ಚಾಲುಕ್ಯದಿಂದ ರವಾ ಇಡ್ಲಿ ತರಿಸಿ ಕೊಟ್ಟರು. ಕಚ್ಚೆ ಪಂಚೆ ಜುಬ್ಬಾ ಹೆಗಲಿಗೊಂದು ಬ್ಯಾಗು ನೇತುಬಿಟ್ಟುಕೊಂಡು ಕೈಲೊಂದು ಅರ್ಜಿ ಹಿಡಿದು ಅತ್ತಿಂದಿತ್ತ ಇತ್ತಿಂದತ್ತಾ ತಾರಾಡುತ್ತಾ ಇಣುಕಿ ನೋಡುತ್ತಿದ್ದ ಇಳಿವಯಸ್ಸಿನ ವ್ಯಕ್ತಿಯನ್ನು ನೋಡಿದ ದಯಾಶಂಕರ್ ಒಳಗೆ ಬರಹೇಳಿದರು. ಆತನ ಸಮಸ್ಯೆ ವಿಚಿತ್ರವಾಗಿತ್ತು. ಮಗಳ ಮದುವೆ ಮಾಡಿದನಂತೆ, ಬಹಳ ಖರ್ಚು ಆಗಿತ್ತಂತೆ, ಪ್ರಸ್ತ ಮುಗಿದ ಮಾರನೆಯ ದಿನದಿಂದ ಗಂಡು (ಅಳಿಯ) ನಾಪತ್ತೆಯಂತೆ, ಅವನನ್ನು ಹುಡುಕಿಸಿಕೊಡಿ ಅಂತಾ ಸಿ.ಎಂ. ಕಚೇರಿಗೆ ಬಂದಿದ್ದ. ದಯಾಶಂಕರ್ ಕ್ಷಣ ಕಾಲ ಮೌನವಾಗಿ, ಏನು ಮಾಡೋದು ಗಂಗಾಧರ್ ಇದಕ್ಕೆ ಅಂದವರು ಊಟ ಮಾಡಿದ್ರಾ ಯಜಮಾನ್ರೆ ಅಂದು ಆತನ ಉತ್ತರಕ್ಕೆ ಕಾಯದೆ ರವೆ ಇಡ್ಲಿ ತಿನ್ನಿಸಿ, ನಿಮ್ಮ ಕೆಲ್ಸಾ ಮಾಡಾನಂತೆ, ಹೋಗಿ ಎಸ್ಪಿ ಕಾಣಿ ಎಂದು ಬೀಳ್ಕೊಟ್ಟರು.
ನಂತರ ಬಳ್ಳಾರಿ ಎಸ್ಪಿಗೆ ಫೋನ್ ತಗೋ ಅಂತೇಳಿ, ಘಟನೆ ವಿವರಿಸಿ ಆತನನ್ನು ಕಳುಹಿಸಿಕೊಡುವುದಾಗಿ ಹೇಳಿದರು. ಅಷ್ಟಲ್ಲದೆ ಕೇಸ್ ಅಪ್ಡೇಟ್ ಕೊಡುವಂತೆಯೂ ಸೂಚಿಸಿದರು. ಅದೇ ತಾನೆ ಎಂ.ಎ. ಮುಗಿಸಿ ಚಳವಳಿಗಳ ಗುಂಗಿನಲ್ಲೇ ಇದ್ದ ನನಗೆ ದಯಾಶಂಕರ್ ಬಗ್ಗೆ ಬಹಳ ಹೆಮ್ಮೆಯ ಭಾವ ಮೂಡಿತು.
**
ಮೊನ್ನೆ ಮೊನ್ನೆ ಬಿ.ಎಸ್.ವೈ ಮುಖ್ಯಮಂತ್ರಿಯಾಗಿದ್ದಾಗ ಅವರ ಮಾಧ್ಯಮ ಸಲಹೆಗಾರರೂ ನನ್ನ ಹಿತೈಶಿಗಳೂ ಆದ ಬೃಂಗೀಶ್ ಅವರನ್ನು ಕಾಣಲು ಅವರ ಕಚೇರಿಗೆ ಹೋಗಿದ್ದೆ. ಅವರ ಸಹಾಯಕ ಸಾಹೇಬ್ರು ಆಂಟಿ ಚೇಂಬರ್ ನಲ್ಲಿರುವುದಾಗಿ ಹೇಳಿ ನನ್ನನ್ನು ಕೂರಲು ಹೇಳಿದರು. ಒಂದರ್ಧ ಗಂಟೆಯ ನಂತರ ಆಂಟಿ ಚೇಂಬರ್ ಬಾಗಿಲು ತೆಗೆಯಿತು. ಇಬ್ಬರು (ಕೇಶವ ಕೃಪಾ) ವ್ಯಕ್ತಿಗಳು ಆಚೆ ಬಂದರು. ಅವರ ಹಿಂದಗುಂಟಾ ತಮ್ಮ ಡೆಸ್ಕಿನತ್ತ ಬೃಂಗೀಶ್ ಬಂದರು. ಏನ್ಸಾರ್ ಅಂದೆ. ಏನ್ ಹೇಳೋದು ನಾಗೇಶ್ ಮುಖ್ಯಮಂತ್ರಿಗಳಿಗೆ ಇವ್ರು ಹೇಳೋದೆಲ್ಲಾ ಹೇಳಾಕಾಗುತ್ತಾ ಬಿಡಿ ಅದು…!? ಕಾಫಿ ಕುಡಿದ್ರಾ …ಏಯ್ ಕಾಫಿ ಕೊಡಪ್ಪಾ ಅಂದರು. ಕಾಫಿ ಕುಡೀತಾ ಇಬ್ಬರೂ ಮುಖ ನೋಡಿಕೊಂಡು ಮೌನವಾಗಿ ಮಾತನಾಡಿಕೊಂಡೆವು.
ಈ ಎಲ್ಲಾ ಘಟನೆಗಳಿಂದ ನನಗೆ ಅನಿಸಿದ್ದು ಯಾವುದೇ ಪಕ್ಷ ಸರ್ಕಾರ ರಚಿಸಲಿ ಅದು ಜನರ ಸರ್ಕಾರವಾಗಿದ್ದರೆ ಸೊಗಸು. “ಸಂಘ”ದ ಸರ್ಕಾರವಾಗಿರಬಾರದು. ಸರ್ಕಾರ ಸಂಘದ ಹಿಡಿತಕ್ಕೆ ಜಾರಿದರೆ ಜನರಿಗೆ ಅಲ್ಲಿ ತಾವಿಲ್ಲ. ಜನರಿಗೆ ತಾವಿಲ್ಲದಿದ್ದರೆ ಅದು ಪ್ರಜಾಪ್ರಭುತ್ವವಲ್ಲ.
ReplyForward |