ಅರದೇಶಹಳ್ಳಿ ಎಂ. ವೆಂಕಟೇಶ
ಹೆಚ್.ಎಸ್.ಶಿವಪ್ರಕಾಶ್ ಕನ್ನಡದ ಕಾವ್ಯ ಪರಂಪರೆಯಲ್ಲಿ “ಅಣು ಕ್ಷಣ ಚರಿತ” ದಂಥ ಬಿನ್ನ ಬಗೆಯ ಕಾವ್ಯದ ಮೂಲಕ ಹೊಸ ಸೃಜನಶೀಲತೆಯ ಮಜಲುಗಳನ್ನು ತೆರೆದು ತೋರಿದವರು. ಆಧುನಿಕ ಕನ್ನಡ ರಂಗಭೂಮಿಗೆ ಅನುಭಾವ ಪರಂಪರೆಯ ನಂಟನ್ನು ಅತ್ಯಂತ ಸಮರ್ಥವಾಗಿ ತಮ್ಮ ನಾಟಕಗಳಲ್ಲಿ ನಿರ್ವಹಿಸಿದವರು. ಕನ್ನಡ ಸಂವೇದನಾಶೀಲತೆಯನ್ನು ಅತ್ಯಂತ ಆಳವಾದ ತಿಳುವಳಿಕೆಯ ಮೂಲಕ ಮರು ವ್ಯಾಖ್ಯಾನಿಸಿದವರು.
ಕವಿಯಾಗಿ, ನಾಟಕಕಾರರಾಗಿ, ಚಿಂತಕರಾಗಿ, ಅನುವಾದಕರಾಗಿ ಅವರು ಸವೆಸಿರುವ ಹಾದಿ ಬಲು ದೊಡ್ಡದು. ಅವರು ಸೇವೆ ಸಲ್ಲಿಸಿರುವ ಸಂಘಸಂಸ್ಥೆಗಳು ಅತ್ಯಂತ ಮಹತ್ವವಾದವು. ಜವಹಾರ್ ಲಾಲ್ ವಿಶ್ವವಿದ್ಯಾಲಯದ ಪ್ರಾದ್ಯಾಪಕ, ರವೀಂದ್ರನಾಥ್ ಠಾಗೋರ್ ಕೇಂದ್ರದ ನಿರ್ದೇಶಕರಾಗಿ ಸಲ್ಲಿಸಿರುವ ಸೇವೆಯೊಂದಿಗೆ ಅನೇಕ ಭಾರತೀಯ ಭಾಷೆಗಳಲ್ಲಿ ಹಾಗೂ ಇಂಗ್ಲೀಷ್, ಫ್ರೆಂಚ್, ಜರ್ಮನ್, ಇಟಾಲಿಯನ್ ಭಾಷೆಗಳಿಗೆ ಅನುವಾದಗೊಂಡಿರುವ ಮಹತ್ವದ ಲೇಖಕರಾಗಿದ್ದಾರೆ. ಇವರಿಗೆ ಸಂದಿರುವ ಪ್ರಶಸ್ತಿಯ ಪಟ್ಟಿಯೂ ದೊಡ್ಡದಿದೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕೇಂದ್ರ ಸಂಗೀತ ಅಕಾಡೆಮಿ ಪ್ರಶಸ್ತಿ ಹೀಗೆ.
ವಚನ ಸಾಹಿತ್ಯವನ್ನು ಇಂಗ್ಲೀಷ್ ಭಾಷೆಗೆ ಅನುವಾದಿಸಿರುವ ಹೆಚ್.ಎಸ್.ಶಿವಪ್ರಕಾಶ ರ ವಿಶಿಷ್ಟತೆ ಇರುವುದೂ ಅವರ ಆಳವಾದ ಅಧ್ಯಯನ ಹಾಗೂ ಪ್ರಖರ ಪಾಂಡಿತ್ಯದಿಂದಾಗಿಯೇ.
ಭಕ್ತಿ ಸಾಹಿತ್ಯ ಹಾಗೂ ಅನುಭಾವ ಪರಂಪರೆಯ ಗಾಢವಾದ ಸಂಬಂಧವನ್ನು ಹೊಂದಿರುವ ಶಿವಪ್ರಕಾಶರ ಎಲ್ಲ ಬಗೆಯ ಬರಹಗಳೂ ಕನ್ನಡಕ್ಕೆ ಹೊಸಬೆಳಕು ಚೆಲ್ಲಿವೆ. ಶಿವಪ್ರಕಾಶರ ನಾಟಕ ಕೃತಿಗಳೂ ಸಹ ಕೇವಲ ನಾಟಕಗಳಂತಿರದೆ ಬೇರೆ ಬೇರೆ ಶಿಸ್ತ್ರುಗಳ ಅಧ್ಯಯನ ಪಠ್ಯಗಳೂ ಸಹ ಆಗಿರುವುದು ಅವರ ನಾಟಕಗಳಿಗೊಂದು ಬಗೆಯ ಗಾಂಭೀರ್ಯ ತಂದುಕೊಟ್ಟಿದೆ.
ಶಿವಪ್ರಕಾಶರ ಸರಳತೆ ಹಾಗೂ ಸಾಹಿತ್ಯ ಕೃಷಿಯೆಡೆಗಿನ ಅವರ ಕಾಯಕಕ್ಕೆ ಹೊಸದೊಂದು ಕಸುವು ಮೂಡಿಸಿಕೊಳ್ಳಲು ನಾಟಕ ಅಕಾಡೆಮಿ ಅವರಿಗೆ ಗೌರವ ಪ್ರಶಸ್ತಿ ನೀಡುವ ಮೂಲಕ ತನ್ನನ್ನೇ ಗೌರವಿಸಿಕೊಂಡಿದೆ.