ಲಕ್ಷ್ಮಿನಾರಾಯಣ
ರಂಗಭೂಮಿಯ ಬದ್ಧತೆಯ ಕರ್ಮಜೀವಿ ಡಾ.ಟಿ.ಎಸ್.ನರಸಿಂಹ ಪ್ರಸಾದ್ ಗೆ 2022-23 ನೇ ಸಾಲಿನ ಕೆ.ರಾಮಚಂದ್ರ ದತ್ತಿ ಪುರಸ್ಕಾರ ಬಂದಿರುವುದು ಪ್ರಸಾದ್ ನ ಗೆಳೆಯರಿಗೆಲ್ಲ ಸಂತಸ ತಂದಿದೆ. ಸುಮಾರು ನಾಲ್ಕು ದಶಕಗಳಿಂದಲೂ ರಂಗಭೂಮಿಯಲ್ಲಿ ತೊಡಗಿಸಿಕೊಂಡ ಪ್ರಸಾದನಿಗೆ ಇದೊಂದು ಸಾರ್ಥಕದ ಘಳಿಗೆ ಎಂದು ನಾನು ಭಾವಿಸುತ್ತೇನೆ.
ಹೌದು. ಪ್ರಸಾದ್ ಆ ರೀತಿಯ ಪ್ರಾಮಾಣಿಕ ರಂಗಕ್ರಿಯೆಯನ್ನು ಮೈಗೂಡಿಸಿಕೊಂಡಿದ್ದಾನೆ. ನಟನಾಗಿ, ಸಂಘಟಕನಾಗಿ, ಸಂಚಾಲಕನಾಗಿ ಒಂದಿಲ್ಲ ಒಂದು ಕೆಲಸವನ್ನು ಆಯ್ದುಕೊಂಡು ಸಂಪೂರ್ಣ ಅದರಲ್ಲೇ ತೊಡಗಿಸಿಕೊಂಡು ಹಿಡಿದ ಕೆಲವನ್ನು ಬಿಡದ ಮಾಡುವ ಸಾಧಕ.
ತನ್ನ ಬಾಳಸಂಗಾತಿ ಲಕ್ಷ್ಮೀದೇವಿಯನ್ನು ಪ್ರೇಮವಿವಾಹವಾದ ನಂತರ ಪ್ರಸಾದನ ರಂಗಚಟುವಟಿಕೆ ದ್ವಿಗುಣವಾಯಿತು ಏಕೆಂದರೆ ಅವನ ಮಡದಿಯೂ ಕೂಡ ಪ್ರಸಾದಿಯಷ್ಟೇ ಶ್ರಮವನ್ನು ರಂಗಭೂಮಿಗೆ ಧಾರೆ ಎರೆದ ಕಲಾವಿದೆ..ನಂತರ ಮಗ ವೇಣು ಇವರ ಬಾಳಿನಲ್ಲಿ ಪ್ರವೇಶ ಪಡೆದ ನಂತರ ಇವರೀರ್ವರು ಒಂದು ರಂಗವಿರಾಮವನ್ನು ಘೋಷಿಸುತ್ತಾರೆ ಎಂದುಕೊಂಡರೆ ಅದು ಸುಳ್ಳಾಗಿತ್ತು..ಮಗು ವೇಣುವನ್ನು ಮಡಿಲಲ್ಲಿ ಹಾಕಿಕೊಂಡೇ ಇಬ್ಬರೂ ರಂಗಭೂಮಿಯ ಸೇವೆಯನ್ನು ಅಷ್ಟೇ ಪ್ರೀತಿಯಿಂದ ಮಾಡತೊಡಗಿದರು. ಲಕ್ಷ್ಮೀದೇವಿಯ phd ಮಾಡುವ ಸಮಯದಲ್ಲಿ ಲಕ್ಷ್ಮಿ ಹೋಗುವ ಎಲ್ಲಾ ಕಡೆಗಳಲ್ಲೂ ಇವನೂ ಸಂಚರಿಸಿ ಲಕ್ಷ್ಮೀದೇವಿಯ ಪ್ರೋತ್ಸಾಹವನ್ನು ನೀಡಿ ಪ್ರೇರಕನಾಗಿದ್ದವನು ಈ ಪ್ರಸಾದ….
ನರಸಿಂಹ ಎಂದ ಮಾತ್ರಕ್ಕೆ ಇವನು ಉಗ್ರರೂಪಿ ಎಂದುಕೊಂಡರೆ ಅದು ಶುದ್ಧ ಸುಳ್ಳು. ಅದೇ ಹೆಸರಿನ ಕೊನೆಯಲ್ಲಿ ಪ್ರಸಾದ ಎಂಬ ಹೆಸರೂ ಇದೆ. ಕೇಳಿದವರಿಗೂ ಮತ್ತು ಕೇಳದವರಿಗೂ ಒಂದೇ ರೀತಿಯಾದ ಭಾವನೆಯಿಂದ ತನ್ನ ಸೇವೆಯನ್ನು ಪ್ರಸಾದಿಸುತ್ತಾನೆ. ಹೊಸಬರು, ಹಳಬರು, ವೃದ್ಧರು, ಮಕ್ಕಳು, ಸ್ನೇಹಿತರು, ಬಂಧುಗಳು ಎಂಬ ಯಾವುದೇ ಬೇದಗಳು ನೋಡದೆ ಎಲ್ಲರ ಜೊತೆಯಲ್ಲೂ ಕರಗಿ ಹೋಗುವ ಪ್ರೀತಿ ಇವನು.
ಹಣವಿರಲಿ ಇಲ್ಲದೆ ಹೋಗಲಿ ಹಿಗ್ಗದೆ, ಕುಗ್ಗದೆ ತೋರಿಕೆಯ ಸೋಗು ಇಲ್ಲದೆ ಎಲ್ಲ ರೀತಿಯ ಸನ್ನಿವೇಶಗಳಲ್ಲೂ ಒಗ್ಗಿಕೊಳ್ಳುವ ದ್ರವ ರೂಪ ಇವನ ಮನಸ್ಸು..
ಇತ್ತೀಚೆಗೆ ಆತನದೇ ಅದ ಲಕ್ಷ್ಮಿ ದೇವಿಯು ಹೆಸರಿನಲ್ಲಿ ಒಂದು ಟ್ರಸ್ಟನ್ನು ಮಾಡಿಕೊಂಡು ಸಾಂಸ್ಕೃತಿಕ ಭಾದ್ಯತೆಗಳನ್ನು ನಿಭಾಯಿಸುತ್ತಿದ್ದಾನೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನಿರಾಕರಣೆ ಎಂಬ ಏಕವ್ಯಕ್ತಿ ಅಭಿನಯದ ಒಂದು ನಾಟಕವನ್ನು ಬರೆದಿದ್ದಾನೆ. ಈ ರೀತಿಯಾಗಿ ಅವನು ಅವನಿಗಾಗಿ ಕೆಲಸಗಳನ್ನು ಮಾಡಿಕೊಂಡು ಇದಿದ್ದಿದ್ದರೆ ಇನ್ನೂ ಹೆಚ್ಚಿನ ಸಾಧನೆಗಳನ್ನು ಮಾಡುತ್ತಿದ್ದ. ಆದರೆ ತನ್ನನ್ನು ಪರರ ಸಂತೋಷಗಳಲ್ಲಿ ಕಂಡುಕೊಳ್ಳುತ್ತ ಅವರಿಗಾಗಿಯೇ ತನ್ನ ಜೀವನದ ಬಹುಪಾಲು ಸಮಯವನ್ನು ಕಳೆದಿದ್ದಾನೆ. ಈ ರೀತಿಯಾಗಿ ಕಳೆದದ್ದನ್ನು ಪಡೆದದ್ದೆ ಎಂದು ಧನಾತ್ಮಕವಾಗಿ ತೆಗೆದುಕೊಂಡ ದುಗುಡವನ್ನು ನುಂಗಿದ ಕೆಂದಾವರೆಯಾಗಿದ್ದಾನೆ.
ಸಮಯ ಸಿಕ್ಕರೆ ಸಾಕು ಎಲ್ಲ ನೋವು ನಲಿವುಗಳನ್ನು ಮೆಲುಕು ಹಾಕುತ್ತಾ ತನ್ನ ಅಭಿನಯ ಪ್ರವೇಶವಾದ ಭಾರತಯಾತ್ರಾ ಕೇಂದ್ರದ ಪ್ರಯೋಗರಂಗವನ್ನು ಸದಾ ನೆನೆಯುತ್ತಾನೆ. ಎಲ್ಲಾ ಕಲಾವಿದರ ನೋವು ನಲಿವುಗಳಿಗೆ ಮರುಗಿ ಸ್ಪಂದಿಸುತ್ತಾನೆ….
ಪ್ರಸಾದನ ಪ್ರಾಮಾಣಿಕ ರಂಗಭೂಮಿಯ ಕಾರ್ಯ ಇತರರಿಗೆ ಮಾರ್ಗದರ್ಶನ ಆಗಲಿ…