ನಾಗೇಶ್ ಕೆ.ಎನ್.
ವಿಧಾನ ಸೌಧ ದಿಂದ ದೇವನಹಳ್ಳಿ ರಸ್ತೆಯಲ್ಲಿ ಇಪ್ಪತ್ನಾಲ್ಕು ಕಿ.ಮೀ ಕ್ರಮಿಸಿ ಎಡಕ್ಕೆ ಒಂದು ಕಿ.ಮೀ ಚಲಿಸಿದರೆ ಬೈನಹಳ್ಳಿ ಗ್ರಾಮ. ಗ್ರಾಮಕ್ಕೆ ಆತುಕೊಂಡಂತೆ “ನಿಸರ್ಗ –The ARTS of NATURE” ಮೂರು ಎಕರೆ ಪ್ರದೇಶದಲ್ಲಿ ರೂಪುಗೊಳ್ಳುತ್ತಿದೆ. ಇದೊಂದು ಅಧ್ಯಯನ ತಾಣ, ಕಲಿಕಾ ಕೇಂದ್ರ, ಮನಸ್ಸಿಗೆ ಮುದ ನೀಡುವ ಸಂಸ್ಥೆ. ಮನೆ ಮಕ್ಕಳೆಲ್ಲಾ ಹೋಗಿದ್ದು ಬರಬಹುದಾದ ಜೀವವೈವಿಧ್ಯವನ.
ಇದರ ರೂವಾರಿ ಕನ್ನಡ ನೆಲದ ಖ್ಯಾತ ತೋಟಗಾರಿಕಾ ತಜ್ಞ, ಮರಿಗೌಡರ ಗರಡಿಯಲ್ಲಿ ಬೆಳೆದ ಡಾ. ಎಸ್. ಅಶ್ವಥ್. ಅಲ್ಲಿ ಸುಮಾರು ನೂರಾಐವತ್ತಕ್ಕೂ ಹೆಚ್ಚು ಸಸ್ಯ ಪ್ರಭೇದಗಳಿವೆ. ಮುಖ್ಯ ಬೆಳೆ ಅಡಿಕೆಯದ್ದು ಒಂದು ತೂಕವಾದರೆ ಇತರೆ ಗಿಡಮರಗಳದ್ದು ಅದಕ್ಕೂ ದುಪ್ಪಟ್ಟು ತೂಕವೆನ್ನಬೇಕು. ಹಣ್ಣಿನ ಗಿಡಗಳು, ಟಿಂಬರ್, ಬಿದಿರು, ತರಕಾರಿ ಸಸ್ಯಗಳು, ಹೂವು, ಹಣ್ಣು, ಬಳ್ಳಿ, ಕಾಯಿ ಹೀಗೆ ಜೀವವೈವಿಧ್ಯತೆಯ ತಾಣವದು.
ತೋಟದಲ್ಲಿ ಅಲ್ಲಲ್ಲಿ ಓಡಾಡುವ ಬಾತುಕೋಳಿಗಳು, ನಾಟಿ ಕೋಳಿಗಳು, ಮೂರ್ನಾಲ್ಕು ಕತ್ತೆಗಳು, ಪ್ರೀತಿ ತೋರುವ ನಾಯಿಗಳು, ಯಾರ ಮುಲಾಜಿಗೂ ಸಿಗದ ತೋಟದ ಕಾಯಕಜೀವಿಗಳ ನಡುವೆ ಹಚ್ಚ ಹಸುರಿನ ನಡುವೆ ಐಷಾರಾಮಿ ಅಲ್ಲದ, ಸರಳ ತಂಗುದಾಣದಲ್ಲಿ ಒಂದಿನಿತೂ ವಾಹನಗಳ ಸದ್ದು ಗದ್ದಲವಿಲ್ಲದೆ ಒಂದು ದಿನ ಇದ್ದು ಬರುವ ಅವಕಾಶ ಬೆಂಗಳೂರಿನ ಮಂದಿಗೆ ಸದ್ಯವೇ ಲಭ್ಯವಾಗಲಿದೆ.
ಇಲ್ಲಿಗೆ ಹೋಗುವ ಯಾರಾದರೂ ಕೃಷಿ ಚಟುವಟಿಕೆಗಳಲ್ಲಿ ತೊಡಗಿ ಅನುಭವ ಪಡೆಯಬಹುದು. ಸಂಘ ಸಂಸ್ಥೆಗಳು ತಮ್ಮ ಕಾರ್ಯಕರ್ತರಿಗೆ, ನೌಕರರಿಗೆ ತರಬೇತಿ ಶಿಬಿರಗಳನ್ನು ಏರ್ಪಾಡು ಮಾಡಬಹುದು. ಅದಕ್ಕೆಲ್ಲಾ ಬೇಕಾದ ವ್ಯವಸ್ಥೆ ಮಾಡಲಾಗುತ್ತಿದೆ. ಡಾ. ಅಶ್ವಥ್ ಅವರ ಕನಸಿನಲ್ಲಿಯೇ ಮೊಳೆಯುತ್ತಿದ್ದ ಈ ಕಲ್ಪನೆಗೆ ರೈತ ಸಂಘದ ಹಿರಿಯ ನಾಯಕರು ಮತ್ತು ಚಿಂತಕರೂ ಆದ ಕೆ.ಟಿ. ಗಂಗಾಧರ್ ನೀರೆರೆದಿದ್ದಾರೆ.
ನಿನ್ನೆ ಅವರೀರ್ವರು ಕುಳಿತು ಯೋಜನೆಯ ರೂಪುರೇಷೆಗಳನ್ನು ಸಿದ್ಧಪಡಿಸಿದ್ದರು. ಅಷ್ಟಾಗಿ ಕಿರಿಯ ಪೀಳಿಗೆಯ ನನ್ನನ್ನೂ ಬರಹೇಳಿ ಇಂದು ಒಂದಿಡೀ ದಿನ ಚರ್ಚೆ ಮಾಡಿದೆವು. ಈಗಾಗಲೇ ಅವರು ಕಲ್ಪಿಸಲೆತ್ನಿಸಿರುವ ಫೆಸಿಲಿಟಿಗಳನ್ನು ಕಂಡೆ. ಅವರೀರ್ವರ ಕನಸುಗಳನ್ನೂ ಅರಿತೆ. ಅವರೊಂದಿಗೆ ಆ ದಾರಿ ನಡೆಯುವ ಕಲ್ಪನೆಯೇ ನನ್ನನ್ನು ಪುಳಕಿತನನ್ನಾಗಿಸಿದೆ. ಒಂದೂವರೆ ದಶಕಕ್ಕೂ ಹಿಂದಿನ ನನ್ನ ಕಲ್ಪನೆಯ “ಗ್ರೀನ್ ಸ್ಕೂಲ್’ ಮುಂದುವರಿದ ಅಥವಾ ಪರಿಷ್ಕೃತ ಚಿಂತನೆಯನ್ನು ಈ ಹಿರಿಯ ಜೀವಗಳು ಕನಸಿವೆ. ಅವರೊಂದಿಗೆ ನಡೆವ ಭಾಗ್ಯ ನನ್ನದು. ಇದನ್ನು ಓದಿದ ನಿಮಗೆಲ್ಲಾ ಅಲ್ಲಿಗೆ ಯಾವಾಗಿನಿಂದ ಹೋಗಬಹುದೆಂಬುದನ್ನು ಇಲ್ಲಿಯೇ ಮತ್ತೆ ಬರೆಯುವೆ. ಅಲ್ಲಿಯವರೆಗೆ ಕಾಯಿರಿ. ನಿಮ್ಮಹಾಗೆ ನಾನೂ ಕಾಯುತ್ತಲೇ ಅವರೊಂದಿಗೆ ಕೆಲಸದಲ್ಲಿ ತೊಡಗಿರುತ್ತೇನೆ.
ಜೀವವೈವಿಧ್ಯತೆಯ ತಾಣದಲ್ಲಿ ನಾವೆಲ್ಲಾ ಸೇರೋಣ-ಶೀಘ್ರದಲ್ಲಿಯೇ….!