ನಾಗೇಶ್ ಕೆ.ಎನ್.
- ಮಾಜಿ ಮುಖ್ಯಮಂತ್ರಿ ಶ್ರೀ ಎಸ್. ನಿಜಲಿಂಗಪ್ಪ ಅವರು ಚಿತ್ರದುರ್ಗದಲ್ಲಿ ವಾಸವಿದ್ದ ಮನೆಯನ್ನು ಸಂರಕ್ಷಿಸಲು ಹಾಗೂ ಅಭಿವೃದ್ಧಿಗೊಳಿಸುವ ಸರ್ಕಾರದ ಆದೇಶ(11-11-2021) ಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲ.
- ಬಂದು ಹೋದ ಸರ್ಕಾರಗಳ ಹಾಗೂ ಅಧಿಕಾರಶಾಹಿಗಳ ಅವಜ್ಞೆ.
- ರೆಡ್-ಟೇಪಿಸಮ್ ಗೆ ಇದೊಂದು ಕ್ಲಾಸಿಕ್ ಉದಾಹರಣೆ
- ಸರ್ಕಾರ ಹಾಗೂ ಅಧಿಕಾರಶಾಹಿಗಳ ನಡವಳಿಕೆಯಿಂದ ರೋಸಿಹೋದ ಎಸ್.ಎನ್. ಕುಟುಂಬಸ್ಥರು ಸರ್ಕಾರಕ್ಕೆ ಮನೆ ಮಾರದಿರಲು ತೀರ್ಮಾನ
- ಕಳೆದ ಐದಾರು ವರ್ಷಗಳಿಂದ ಈ ಕೆಲಸ ಆಗುಮಾಡಲು ಶ್ರಮಿಸಿದ ಮಾಜಿ ಎಂ.ಎಲ್.ಸಿ ಮೋಹನ್ ಕುಮಾರ್ ಕೊಂಡಜ್ಜಿ ತೀವ್ರ ಆಕ್ರೋಶ.
ಅಕ್ಟೋಬರ್ 2, 2024 ಗಾಂಧಿ ಜಯಂತಿಯಂದು ಹಿರಿಯ ಗಾಂಧಿವಾದಿ, ಮಾಜಿ ಎ ಐ ಸಿ ಸಿ ಅಧ್ಯಕ್ಷ, ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ಈ ನಾಡುಕಂಡ ಅಪ್ರತಿಮ ನಾಯಕ ದಿವಂಗತ ಎಸ್.ನಿಜಲಿಂಗಪ್ಪನವರು ವಾಸವಿದ್ದ ಮನೆಯನ್ನು ಸಂರಕ್ಷಿಸಿ ಅಭಿವೃದ್ಧಿಗೊಳಿಸುವ ಸರ್ಕಾರದ ತೀರ್ಮಾನಕ್ಕೆ ತಾನೇ ಬದ್ಧವಾಗಿಲ್ಲ.
ಇದಕ್ಕಾಗಿ 2021 ರಲ್ಲಿ ಸರ್ಕಾರ ಐದು ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿತ್ತು. ಆ ಹಣ ಚಿತ್ರದುರ್ಗದ ಜಿಲ್ಲಾಡಳಿತಕ್ಕೆ ಜಮಾಕೂಡಾ ಆಗಿತ್ತು. ಇಷ್ಟಾದ ಮೇಲೆ ಈ ಕೆಲಸವನ್ನು ಆಗುಮಾಡಲು ಈವರೆಗೆ ನಿಜಲಿಂಗಪ್ಪ ಮೆಮೋರಿಯಲ್ ಟ್ರಸ್ಟ್, ಮತ್ತವರ ಕುಟುಂಬಸ್ಥರು ಹಾಗೂ ಮಾಜಿ ಎಂ.ಎಲ್.ಸಿ ಮೋಹನ್ ಕುಮಾರ್ ಕೊಂಡಜ್ಜಿ ಅವರುಗಳು ನಡೆಸಿದ ಎಲ್ಲಾ ಪ್ರಯತ್ನಗಳಿಗೂ ಸರ್ಕಾರಗಳು ಹಾಗೂ ಅಧಿಕಾರಶಾಹಿಗಳು ಕವಡೆಕಾಸಿನ ಕಿಮ್ಮತ್ತು ನೀಡಲಿಲ್ಲ.
ಮಾರುಕಟ್ಟೆ ಬೆಲೆಗಿಂತ ಕಡಿಮೆ ಬೆಲೆಗೆ ಮಾರಲು ತಯ್ಯಾರಿದ್ದ ಕುಟುಂಬಸ್ಥರು ಇದೀಗ ಸರ್ಕಾರಗಳ ಹಾಗೂ ಅಧಿಕಾರಿಶಾಹಿಗಳ ನಡವಳಿಕೆಯಿಂದ ಬೇಸತ್ತು ಶಿಥಿಲಾವಸ್ಥೆಯಲ್ಲಿರುವ ಈ ಸ್ವತ್ತನ್ನು ಖಾಸಗಿಯವರಿಗೆ ಮಾರಲು ತೀರ್ಮಾನಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ವೀರಶೈವ-ಲಿಂಗಾಯಿತ ಮಹಾಸಭಾದ ನಾಯಕರುಗಳು ಇತ್ತ ತಮ್ಮ ಚಿತ್ತಹರಿಸಬೇಕೆಂಬುದು ಮೋಹನ್ ಕೊಂಡಜ್ಜಿ ಅವರ ಹಕ್ಕೋತ್ತಾಯವಾಗಿದೆ.