ನಾಗೇಶ್ ಕೆ.ಎನ್.
ಮೊನ್ನೆಯಷ್ಟೇ ಕೊಡಗು ಜಿಲ್ಲೆಯಲ್ಲಿ ಪ್ರವಾಸದಲ್ಲಿದ್ದೆ. ಕಿರಿಯ ಗೆಳೆಯ ಥಾಮಸ್ ನ ಫೇಸ್ ಬುಕ್ ಪೋಸ್ಟ್ ಒಕ್ಕಣೆ ತನ್ನ ಗೆಳೆಯ ಗಣೇಶ್ ಕುರಿತದ್ದಾಗಿತ್ತು. ಅವನ ಪದಗಳು ಏನೋ ಹೇಳುವಂತಿದ್ದ ಕಾರಣ ಫೋನ್ ಮಾಡಿದೆ. ಒಂದೆರಡು ನಿಮಿಷ ಗಣೇಶನ ಆರೋಗ್ಯ ಸ್ಥಿತಿಯ ಬಗ್ಗೆ ಮಾತನಾಡಿದ. ನನಗೆ ವಿಷಯ ಮನದಟ್ಟಾಯಿತು. ಚಿಕ್ಕ ವಯಸ್ಸು ಎಂಬುದೊಂದನ್ನು ಯೋಚಿಸಿ ಲೊಚಗುಟ್ಟಿಕೊಳ್ಳುವುದು ಬಿಟ್ಟರೆ ಬೇರೇನೂ ಹೊಳೆಯಲಿಲ್ಲ. ಮಾರನೆಯ ದಿನ ಗಣೇಶನ ಸಾವಿನ ಸುದ್ಧಿ ಬಂದೆರಗಿತು.
ಈ ಹುಡುಗ ನನಗೆ ಯಾವಾಗ ಪರಿಚಯವಾದನೆಂಬ ನೆನಪಿಲ್ಲ. ಯಾವಗಲೇ ಎದುರಾದಾಗ ನಾನು ಗಣೇಶೂ,, ಎನ್ನುವುದು ಅವನು ನಾಗೇಶಣ್ಣ ಎನ್ನುವುದು.. ಒಂದರೆ ಘಳಿಗೆ ಯಾವುದೋ ವಿಷಯದ ಬಗ್ಗೆ ಹರಟಿ ಅಭಿಮಾನದ ನಗೆಬೀರಿ ನಂನಮ್ಮ ಕೆಲಸಗಳಿಗೆ ತೆರಳುವುದು ನಡೆದೇ ಇತ್ತು.
ಕ್ರೈಂ ಪತ್ರಿಕೋಧ್ಯಮದ ನನ್ನ ಹಿರಿಯ ಗೆಳೆಯರೆಲ್ಲ ತೀರಿಹೋದ ಬಳಿಕ ನಾನು ಕ್ರೈಂ ಕುತೂಹಲಗಳಿಗಾಗಿ ಸಂಪರ್ಕಿಸುತ್ತಿದ್ದದ್ದು ಈ ಗಣೇಶನನ್ನು. ಬಿಟ್ಟರೆ ನರೇಂದ್ರ ಮತ್ತು ಸಂತೋಷನನ್ನು. ಮೊನ್ನೆ ಮೊನ್ನೆಯಷ್ಟೇ ದರ್ಶನ್ ಕೇಸ್ ಬಗ್ಗೆ ಮಾತನಾಡಿದ್ದೆ. ಕೊಂಚ ಬ್ಯುಸಿ ಇದ್ದ ಕಾಣುತ್ತೆ. ಅಣ್ಣಾ ನಾನು ಆ ಕೇಸ್ ಬಗ್ಗೆ ಮಾಡಿರುವ ನೋಟ್ಸ್ ಮತ್ತೆ ಫೋಟೋಗಳು ಕಳಿಸ್ತೀನಿ ನೋಡಿ.. ಫೋಟೋಗಳು ನೋಡೋಕಾಗಲ್ಲ್ ಚಿತ್ರಹಿಂಸೆ ಅದು ಬ್ರೂಟಲ್ ಮರ್ಡರ್ ಎಂದು ಆಮೇಲೆ ಮಾತಾಡೋಣ ಎಂದ.. ಹಾಗೆಯೇ ಕಳುಹಿಸಿದ. ಅವನ ಟಿಪ್ಪಣಿಗಳು ಹಲವು ದಿನ ಪತ್ರಿಕೆಗಳಲ್ಲಿ ಹೆಡ್ ಲೈನ್ ಆಗಿದ್ದು ಗಮನಿಸಿದೆ. ಅವನ ಅಧ್ಯಯನ, ಸುದ್ಧಿಯ ಮೇಲಿನ ಹಿಡಿತ ಕಂಡು ಗಣೇಶನ ಬಗ್ಗೆ ಅಭಿಮಾನ ಮೂಡಿತ್ತು.
**
ಇತ್ತೀಚೆಗೆ ಪ್ರೆಸ್ ಕ್ಲಬ್ ಚುನಾವಣೆಯಲ್ಲಿ ದಾಖಲೆಯ ಮತಗಳಿಸಿ ಖಜಾಂಚಿಯಾಗಿ ಆಯ್ಕೆಯಾಗಿದ್ದ. ಈ ಎಲೆಕ್ಷನ್ ಸಂದರ್ಭದಲ್ಲಿ ಈತನಿಗಿದ್ದ ಪ್ರೌಢಿಮೆಯ ಪರಿಚಯ ನನಗಾಯಿತು. ಕಾರಣ ಇಷ್ಟೇ.. ಅವನ ಪ್ರತಿಸ್ಪರ್ಧಿ-ನನ್ನ ದಶಕಗಳ ಗೆಳೆಯ ಸಿದ್ದೇಶ್ ಪರವಾಗಿ ನಾನು ಎಲೆಕ್ಷನ್ ಕ್ಯಾಂಪೇನ್ ಮಾಡಬೇಕಿತ್ತು. ಆ ವಿಷಯ ಅವನಿಗೂ ಗೊತ್ತಿತ್ತು. ಆದಾಗ್ಯೂ ದಿನಂಪ್ರತಿ ಎದುರಾದಾಗ ಯಾವ ಮುನಿಸು ಅಸಮಧಾನವನ್ನೂ ಹೊರಹಾಕದೆ (ಅವನಲ್ಲಿ ಅದಿರಲಿಕ್ಕಿಲ್ಲ) ಆರಾಮವಾಗಿ ಎಂದಿನ ಅಭಿಮಾನದಿಂದ ಮಾತನಾಡಿ ತುಂಟ ನಗೆಯೊಂದಿಗೆ ಹೊರಡುತ್ತಿದ್ದ. ಮಾಗಿದ ಗಣೇಶ !
**
ಫೇಸ್ ಬುಕ್ ನಲ್ಲಿ ಗಣೇಶನ ಹಿರೀಕರು ಕಿರೀಕರು ಸರೀಕರು ಬರೆದಿರುವ ಪೋಸ್ಟ್ ಗಳನ್ನು ನೋಡಿದಾಗ ನಮ್ಮ ಪೀಳಿಗೆಯ ಮುಂದುವರಿಕೆ ಭಾಗದಂತೆ ನನಗೆ ಗೋಚರಿಸತೊಡಗಿದ್ದಾನೆ. ಹೊಸಕಾಲದ ಹುಡುಗರು ಅವರಾಯ್ತು ಅವರ ಸ್ವಾರ್ಥವಾಯ್ತು ಎಂಬತ್ತಿರುವ ಹೊತ್ತಿನಲ್ಲಿ ಈ ರೇರ್ ಪೀಸ್ ಗಣೇಶ ಭಿನ್ನವಾಗಿದ್ದ. ಈತನಿಗೆ ಪತ್ರಿಕೋದ್ಯಮದಲ್ಲಿ ಉಜ್ವಲ ಭವಿಷ್ಯವೂ ಇತ್ತು. ಅಷ್ಟರಲ್ಲಿ ಕಾಲನ ಕರೆಗೆ ಓಗೊಟ್ಟು ನಿರ್ಗಮಿಸಿದ್ದಾನೆ.
ಗೆಳೆಯ ನಿನ್ನ ನೆನಪು ನಮ್ಮೊಂದಿಗೆ ಇರಲಿದೆ… ನಿನಗೆ ಇಲ್ಲಿ ಸಿಗದ ಸುಖ ಬೇರೊಂದು ಲೋಕ (ಇದ್ದಲ್ಲಿ) ದಲ್ಲಿ ಸಿಗಲಿ… ಹೋಗಿ ಬಾ..