ನಾಗೇಶ್ ಕೆ.ಎನ್.
ಮೊನ್ನೆ ತಾರೀಖು ಹದಿನಾರು. ನಾನು ಗೆಳೆಯ ವೆಂಕಟೇಶ್ ಕ್ಲಬ್ಬಿನಲ್ಲಿ ಗುಂಡೋಪಂಥರಾಗಿದ್ದೆವು. ಮಾತಿನ ಮಧ್ಯೆ ನಾಳೆ ವೈ.ಜಿ ಬರ್ತ್ ಡೇ ಅಂದರು ವೆಂಕಟೇಶ್. ಹೌದು. ತುಲಾಸಂಕ್ರಮಣದ ದಿನ ಅವರ ಬರ್ತ್ ಡೇ ಎಂದೆ. ಕೂಡಲೇ ವೈಜಿ ಗೆ ಫೋನ್ ಮಾಡಿದ ವೆಂಕಟೇಶ್ ಸಾರ್, ನಾಳೆ ನಿಮ್ಮನ್ನು ಭೇಟಿಯಾಗಬೇಕೆಂದರು, ಅಷ್ಟು ಸಾಲದೆಂಬಂತೆ ಯಾರ ಅಪ್ಪಣೆಯೂ ಕೇಳದೆ ನಾನೂ ನಾಗೇಶ್ ಬರುತ್ತೇವೆ ಎಂದು ಹೇಳಿದರು.
ಅಂತೆಯೇ ನಾವಿಬ್ಬರೂ ಮತ್ತು ಗೆಳೆಯ ಸಿದ್ದೇಶ್ ಜೊತೆಗೂಡಿ ಹೊಳೆನರಸಿಪುರಕ್ಕೆ ತೆರಳಿದೆವು. ಅವರ ಮನೆಯಲ್ಲಿ ಪ್ರಸಾದ ಸ್ವೀಕರಿಸಿ ಮೆಸ್ಸಿನಲ್ಲಿ ಒಳ್ಳೆ ಮುದ್ದೆ ಸಾರು ಹೊಟ್ತುಂಬಾ ಉಂಡು ಹಾಸನಕ್ಕೆ ಹೊರಟೆವು. ಮಾರ್ಗಮಧ್ಯೆ ಹಳೇಕೋಟೆಯ ಬೆಟ್ಟದ ರಂಗನಾಥಸ್ವಾಮಿ ದೇವಸ್ಥಾನಕ್ಕೆ ಹೋದೆವು. ವೈಜಿ ಕಾರಣಕ್ಕೆ ನಮಗಲ್ಲಿ ಪೂಜೆಯ ವ್ಯವಸ್ಥೆಯೂ ಆಯಿತು (ಎಂದಿನಂತೆ). ಅಲ್ಲಿಂದ ಹಾಸನಕ್ಕೆ ತೆರಳಿ ಸುತ್ತಾಡುವಷ್ಟರಲ್ಲಿ ಅಲ್ಲಿನ ಗೆಳೆಯರನೇಕರು ವೈಜಿ ಹುಟ್ಟಿದ ದಿನಕ್ಕೆಂದು ವ್ಯವಸ್ಥೆ ಮಾಡಿದ್ದರು. ನಾವೆಲ್ಲಾ ಅಲ್ಲಿಗೆ ಹೋಗಿದ್ದು ಸಂಭ್ರಮಾಚರಣೆಯಲ್ಲಿ ಭಾಗವಹಿಸಿ ರಾತ್ರಿ ಭರ್ಜನಿ ಪಾರ್ಟಿಯಲ್ಲಿ ಮಿಂದೆದ್ದೆವು. ಬೆಳಿಗ್ಗೆ ಎದ್ದು ಹಾಸನದ ಇಡ್ಲಿ ಮಾಮು ಹೋಟೆಲ್ ನಲ್ಲಿ ತಿಂಡಿ ನಂತರ ವೈಜಿ ಮತ್ತವರ ಸ್ನೇಹಿತರ ಕನಸಿನ ರೆಸಾರ್ಟ್ ಸೈಟ್ ಗೆ ಭೇಟಿ., ಅಲ್ಲಿಂದ ಜ್ಯೂವೆಲ್ ರಾಕ್ ಹೋಟೆಲ್ ನಲ್ಲಿ ಅಕ್ಕಿ ರೊಟ್ಟಿ ಊಟ ಮಾಡಿಕೊಂಡು ಬೆಂಗಳೂರಿಗೆ ವಾಪಸ್ಸಾದೆವು.
ಏತನ್ಮಧ್ಯೆ ನಮಗೆ ಕಾಡಿದ್ದು ಕಿ.ರಂ. ಸರ್ಕಲ್. ಹೋಗ್ತಾ ಬರ್ತಾ ನೋಡ್ರಿ ವೆಂಕಟೇಶ್ ನೋಡ್ರಿ ನಾಗೇಶ್ ಇದು ಕಿ.ರಂ. ಸರ್ಕಲ್ ಎಂದು ಮೂರ್ನಾಲ್ಕು ಬಾರಿ ಹೇಳಿದ್ದರು ವೈ.ಜಿ. ನಾವು ಅತ್ತಿಂದಿತ್ತ ಇತ್ತಿಂದತ್ತ ನೋಡುವಷ್ಟರಲ್ಲಿ ಕಿರಂ ಹೆಸರು ಕಾಣುತ್ತಿರಲಿಲ್ಲ. ಕಡೆಗೆ ಮತ್ತೊಂದು ಬಾರಿ ಅಲ್ಲಿಗೆ ಬಂದಾಗ ಕಾರು ನಿಲ್ಲಿಸಿ ಕಿರಂ ಸರ್ಕಲ್ ಹೆಸರಿನ ಬೋರ್ಡು (ಮರೆಯಾಗಿರುವ) ಫೋಟೋ ಕ್ಲಿಕ್ಕಿಸಿಕೊಂಡು ಬಂದೆವು.
ವಿಷಯ ಇಷ್ಟೇ, ಒಂದು ಪ್ರಮುಖ ವೃತ್ತಕ್ಕೆ ಕಿರಂ ಹೆಸರನ್ನು ಇಡಲಾಗಿದೆ. ಆದರೆ ಬೋರ್ಡು ಸರಿಯಾಗಿಲ್ಲ. ಅವರದ್ದೊಂದು ಬಸ್ಟ್ ಮಾಡಿಲ್ಲ. ಆ ಬಗ್ಗೆ ಕಿರಂ ಅಭಿಮಾನಿಗಳು, ಸಾಹಿತ್ಯದ ವಿದ್ಯಾರ್ಥಿಗಳು ಗಮನಹರಿಸಬೇಕಿದೆ. ಒಂದು ಸಿಂಡಿಕೇಟ್ ಮಾಡಿಕೊಂಡು ಹಾಸನ ಕನ್ನಡ ಸಾಹಿತ್ಯ ಪರಿಷತ್ ನೊಂದಿಗೆ ಮಾತನಾಡಿಕೊಂಡು ಒಂದೊಳ್ಳೆ ಮಾನ್ಯುಮೆಂಟ್ ಮಾಡಬಹುದಾದ ಸಾಧ್ಯತೆ ಇದೆ. ಕಿ.ರಂ. ಅವರಿಗಾಗಿ ಅದು ಮಾಡಬೇಕು ಕೂಡಾ…
ಈ ಕೆಲಸ ಆಗುಮಾಡಲು ಇಚ್ಛಾಶಕ್ತಿಯಷ್ಟೆ ಬೇಕು. ಬಾಕಿ ಎಲ್ಲಾ ತಂತಾನೇ ಏರ್ಪಾಡಾಗುತ್ತದೆ. ಅದನ್ನು ಮಾಡಲು ಹಾಸನದ ಜನತೆ ಬದ್ಧರಿದ್ದಾರೆ….. ಇಂಥಃ ಕೆಲಸಗಳಿಗೆ ಅಲ್ಲೇ ಇರುವ ವೈಜಿ ಟೊಂಕ ಕಟ್ಟಿ ನಿಲ್ಲುತ್ತಾರೆಂದು ಮತ್ತೊಮ್ಮೆ ಹೇಳಬೇಕಾಗಿಲ್ಲ….