ನಾಗೇಶ ಹೆಗಡೆ
ನಿಮ್ಮ ಬೀದಿಯ ಮೂಲೆಯಲ್ಲಿ ತಿಪ್ಪೆರಾಶಿ ಜಮಾ ಆಗಿದ್ದರೆ ಮುನ್ಸಿಪಲ್ ಅಧಿಕಾರಿಗೆ ನೀವು ದಂಡ ಹಾಕಿಸಬಹುದು, ಜೈಲಿಗೂ ಅಟ್ಟಬಹುದು ಗೊತ್ತೆ? ಇಂಥದ್ದೊಂದು ಕಾನೂನು ದಂಡವನ್ನು ಜನಸಾಮಾನ್ಯರಿಗೆ ಕೊಟ್ಟ ಮಹಿಳೆ ಆಲ್ಮಿತ್ರಾ ಪಟೇಲ್.
ಅಮೆರಿಕದ ಎಮ್‌ಐಟಿಯಲ್ಲಿ ಓದಿ ಬಂದ ಮೊದಲ ಭಾರತೀಯ ಮಹಿಳಾ ಎಂಜಿನಿಯರ್ ಆಗಿ, ನಿಸರ್ಗಪ್ರೇಮಿಯಾಗಿ, ಪರಿಸರ ಚಳವಳಿಗಳ ಬೆನ್ನೆಲುಬಾಗಿ, ಬೆಂಗಳೂರಿನ ಅಂಚಿನಲ್ಲಿ ತಮ್ಮ ಪಾಡಿಗೆ ತಾವಿರುವ ಹೊತ್ತಿನಲ್ಲಿ ಕರ್ನಾಟಕ ಸರ್ಕಾರ 89ರ ವಯಸ್ಸಿನ ಈ ಮಹಿಳೆಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ಇಂದು ನೀಡಲಿದೆ.
40 ವರ್ಷಗಳ ಹಿಂದಿನ ಮಾತು. ಪರಿಸರ ಚಳವಳಿಗೆ ರೆಕ್ಕೆ ಮೂಡುತ್ತಿದ್ದ ಕಾಲ. ಎಚ್.ಎಸ್. ದೊರೆಸ್ವಾಮಿ, ಪ್ರೊ. ಎಮ್ ಡಿ ನಂಜುಂಡಸ್ವಾಮಿ, ಅಪರೂಪಕ್ಕೆ ಪ್ರೊ. ಮಾಧವ ಗಾಡಗೀಳ, ರಾಮಚಂದ್ರ ಗುಹಾ ಎಲ್ಲ ಬರುತ್ತಿದ್ದರು. ಭೋಪಾಲ್, ಚೆರ್ನೊಬಿಲ್ ದುರಂತಗಳ ಚರ್ಚೆ ನಡೆಯುತ್ತಿತ್ತು, ಹಿಂದೆ ನಡೆದ ಪ್ರತಿಭಟನೆಯ ಅವಲೋಕನ, ಮುಂದೆ ಕೈಗೊಳ್ಳಬೇಕಾದ ಹಕ್ಕೊತ್ತಾಯ ಯೋಜನೆಗಳ ರೂಪರೇಷೆ ಚರ್ಚೆ… ಹೀಗೆ ನಡೆಯುವ 20-30 ಜನರ ಆ ಸಭೆಗೆ ಹಿರಿಯ ಮಹಿಳೆಯೊಬ್ಬರು ತಪ್ಪದೇ ಬರುತ್ತಿದ್ದರು.
ಸ್ಕರ್ಟ್ ತೊಟ್ಟ, ತುಸು ಬಿಳಿ ಕೂದಲಿನ, ಈ ಬಾಬ್ ಕಟ್ ಮಹಿಳೆ ಹಿಂದಿನ ಸೀಟಿನಲ್ಲೆಲ್ಲೋ ಕೂತಿರುತ್ತಿದ್ದರು. ಮಾತನ್ನಂತೂ ಆಡಿದ್ದೇ ಕಮ್ಮಿ. ಕನ್ನಡ ಬರುತ್ತೊ ಇಲ್ಲವೊ ಅದೂ ಗೊತ್ತಿಲ್ಲ. ಸಭೆಯ ಕೊನೆಯಲ್ಲಿ ನಾವು ಚಂದಾ ಡಬ್ಬಿ ಹಿಡಿದು ಎಲ್ಲರ ಬಳಿ ಹೋಗುತ್ತಿದ್ದೆವು. ತಲಾ ಐದೋ ಹತ್ತೋ ರೂಪಾಯಿಗಳನ್ನು ಸಾಮಾನ್ಯವಾಗಿ ಎಲ್ಲರೂ ನೀಡುತ್ತಿದ್ದರೆ ಈ ಮಹಿಳೆ ಮಾತ್ರ ಧಾರಾಳವಾಗಿ ನೂರರ ಎರಡು ಮೂರು ನೋಟುಗಳನ್ನು ಚಂದಾ ಡಬ್ಬಿಗೆ ಕಷ್ಟಪಟ್ಟು ತುರುಕಿ, ಹೆಚ್ಚೇನೂ ಮಾತನಾಡದೇ ಹೊರಟು ಬಿಡುತ್ತಿದ್ದರು.
ಇವರು ಆಲ್ಮಿತ್ರಾ ಪಟೇಲ್. ಆ ಹೆಸರು ನಮ್ಮ ಮನಸ್ಸಿನಲ್ಲಿ ಅಚ್ಚೊತ್ತುವ ಹೊತ್ತಿಗೆ ಚಳವಳಿಗಳ ಕಾವು ಇಳಿದಿತ್ತು. ಜಾಗತೀಕರಣ, ಸೋವಿಯತ್ ವಿಘಟನೆ, ಐಟಿ ಬೂಮ್ ಎಲ್ಲ ಬಂದು ಯುವಕರು ಹೊಸ ಬೆಳಕಿನ, ಹೊಸ ಗಾಳಿಯ ಬೆಂಬತ್ತಿದ್ದರು. ಎಲ್ಲ ಚಳವಳಿಗಳ ಹಾಗೆ ಪರಿಸರ ಚಳವಳಿಯೂ ಕ್ರಮೇಣ ನೆಲ ಕಚ್ಚಿತ್ತು. ಗಾಂಧೀ ಭವನದ ಮಾಸಿಕ ಪರಿಸರ ಮಂಥನ ಸಭೆಯೂ ಮಾಸುತ್ತ ಇತಿಹಾಸಕ್ಕೆ ಸೇರಿಹೋಯಿತು. ಆಲ್ಮಿತ್ರಾ ಪಟೇಲ್ ಮರೆತೂ ಹೋದರು.
ನಮ್ಮ ಪಾಲಿಗಷ್ಟೆ ಆಲ್ಮಿತ್ರಾ ಪಟೇಲ್ ಮರೆತು ಹೋದರು. ಜಾಗತೀಕರಣದ ಸುನಾಮಿಗೆ ಸಿಕ್ಕು ನಾವೆಲ್ಲ ದಿಕ್ಕೆಟ್ಟು ಕೂತಿರುವಾಗ ಅತ್ತ ಆಲ್ಮಿತ್ರಾ ಪಟೇಲ್ ಮಾತ್ರ ದಿಕ್ಕು ಬದಲಾಯಿಸಿ ಒಬ್ಬಂಟಿಯಾಗಿ ಸಂಗ್ರಾಮಕ್ಕಿಳಿದಿದ್ದರು. ಅವರು ನಗರದ ಹೊರ ವಲಯದಲ್ಲಿ, ಹೆಣ್ಣೂರು ಬಾಣಸವಾಡಿಯ ಕಡೆ ಪತಿಯ ಪಿಂಗಾಣಿ ಉದ್ಯಮದ ಕಡೆ ಗಮನ ಹರಿಸುತ್ತ ಎಲ್ಲೋ ಫಾರ್ಮ್ ಹೌಸ್‌ನಲ್ಲಿ ವಾಸಿಸುತ್ತಿದ್ದರು. ಈ ಸುನಾಮಿ ಅವರಿಗೆ ತಟ್ಟದಿದ್ದರೂ ಅದರ ದುಷ್ಪರಿಣಾಮ ಕಾಣತೊಡಗಿತ್ತು.
ನಗರದಲ್ಲಿ ಕೊಳ್ಳುಬಾಕ ಸಂಸ್ಕೃತಿ ಹೆಚ್ಚುತ್ತಿದ್ದ ಹಾಗೆ ಕಸದ ಲಾರಿಗಳು ಅವರ ಮನೆಯೆದುರಿನ ರಸ್ತೆಯ ಮೂಲಕ ಮುಂದಕ್ಕೆ ಸಾಗಿ ಹಳ್ಳಕೊಳ್ಳ ಗುಡ್ಡಬೆಟ್ಟಗಳ ಖಾಲಿ ಸ್ಥಳದಲ್ಲಿ ಸುರಿಯತೊಡಗಿದ್ದವು. ದುರ್ವಾಸನೆ, ಹದ್ದು ನಾಯಿಗಳ ಕಾಟದಿಂದ ರೈತರು ಕಂಗಾಲಾಗಿದ್ದರು. ಸಂಕಷ್ಟಗಳ ದುಸ್ಸುನಾಮಿ ಅವರತ್ತ ಬಂದಿತ್ತು. ಮೃದುಭಾಷಿ, ಮೆದು ಹೃದಯದ ಇವರು ಆಗಾಗ ಹಳ್ಳಿಯ ಜನರ ಸಂಕಷ್ಟಗಳಿಗೆ ಸ್ಪಂದಿಸುತ್ತಿದ್ದರು. ಈ ಕಸದ ಸಮಸ್ಯೆಯನ್ನು ಬೇರು ಮೂಲದಲ್ಲೇ ಕಿತ್ತು ಹಾಕಲು ಸಾಧ್ಯವೆ ಎಂದು ಅವರು ಚಿಂತಿಸುತ್ತಿದ್ದರು.
ಪುಣೆಯ ಯಾವುದೋ ದೊಡ್ಡ ಸಭೆಯಲ್ಲಿ ‘ಪರಿಸರ ಸೂಕ್ಷ್ಮ ವಲಯ’ ಎಂಬ ವಿಷಯದ ಮೇಲೆ ದೂರದ ಅರಣ್ಯ, ಯಾವುದೋ ನದಿ, ಹಿಮಾಲಯದ ಕೆರೆ, ಸಮುದ್ರದಂಚಿನ ಹವಳದ ಕಣಿವೆ ಇಂಥವುಗಳ ಬಗೆಗೆ ದೊಡ್ಡ ದೊಡ್ಡ ಉಪನ್ಯಾಸಗಳು ನಡೆಯುತ್ತಿದ್ದವು. ಆಲ್ಮಿತ್ರಾ ಕೇಳಿದರು: “ಹಾಗಿದ್ದರೆ ನಗರದ ಹೊರ ವಲಯಗಳು ಸೂಕ್ಷ್ಮ ಪ್ರದೇಶ ಅಲ್ಲವೆ? ದೇಶದ ಎಲ್ಲ ನಗರಗಳ ಸುತ್ತ ಹೀಗೆ ಕೊಳೆ ರಾಶಿಯನ್ನು ಪೇರಿಸುವುದು ಅಲ್ಲಿನ ಜಲಮೂಲಗಳ ಮೇಲೆ, ಜಲಜೀವಿಗಳ ಮೇಲೆ ಅತ್ಯಾಚಾರ ಮಾಡಿದಂತೆ ಅಲ್ಲವೆ?” ಎಂದು.
ನಗರದ ಹೊರವಲಯದಲ್ಲಿ ಕಸ ಎಸೆಯುವ ವಿಷಯದ ಬಗ್ಗೆ ಕಾನೂನುಗಳೇ ಇಲ್ಲವಲ್ಲ? ಅದು ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಗೆ ಬರುವುದಿಲ್ಲ. ನಗರಪಾಲಿಕೆಯ ವ್ಯಾಪ್ತಿಗೂ ಬರುವುದಿಲ್ಲ! ಹೊಸ ಕಾನೂನನ್ನೇ ರೂಪಿಸಬೇಕು. ಅದಕ್ಕೆ ಏನು ದಾರಿ?
ಪರಿಸರ ಹೋರಾಟಗಾರರನ್ನು ಸಂಪರ್ಕಿಸಿ, ಯೋಜನಾ ಆಯೋಗದ ದಾಖಲೆಗಳನ್ನೆಲ್ಲ ಪರಿಶೀಲಿಸಿ, ಕಾನೂನು ತಜ್ಞರನ್ನು ಕೇಳಿ, ಆಲ್ಮಿತ್ರಾ ಪಟೇಲ್ 1996ರಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ಒಂದು ದಾವೆ ಹೂಡಿದರು. ಭಾರತದ ಎಲ್ಲ ರಾಜ್ಯಗಳ ವಿರುದ್ಧ ಹೂಡಿದ ಆ ‘ಸಾರ್ವಜನಿಕ ಹಿತಾಸಕ್ತಿ ಖಟ್ಲೆ’ ದೊಡ್ಡ ಸಂಚಲನವನ್ನೇ ಮೂಡಿಸಿತು.
ಇವರು ಹೂಡಿದ ದಾವೆಗೆ ಸರ್ವೋಚ್ಚ ನ್ಯಾಯಾಲಯ ಅಷ್ಟೇ ತೀವ್ರವಾಗಿ ಸ್ಪಂದಿಸಿತು. ಕಾನೂನುಗಳೇ ಇಲ್ಲದ ಕ್ಷೇತ್ರದಲ್ಲಿ ನ್ಯಾಯ ನಿರ್ಣಯ ಮಾಡುವುದು ಹೇಗೆ? ಕಸ ವಿಲೆವಾರಿಗೆ ಮಾನದಂಡ ಹೇಗಿರಬೇಕು? ವಿಲೆವಾರಿಯ ವಿಧಿವಿಧಾನಗಳು ಹೇಗಿರಬೇಕು? ಅದನ್ನೆಲ್ಲ ಅರಿಯಲೆಂದು ದೇಶದ ಎಲ್ಲಾದರೂ ಮಾದರಿ ಕಸ ವಿಲೆವಾರಿ ನಡೆಯುತ್ತಿದೆಯೆ ಎಂಬ ಸಮೀಕ್ಷೆಗೆ ಒಂದು ಸಮಿತಿ ನೇಮಕ ಮಾಡಿ, ಅದರಲ್ಲಿ ಆಲ್ಮಿತ್ರಾ ಹೆಸರನ್ನೂ ಸೇರ್ಪಡೆ ಮಾಡಲಾಯಿತು.
ಆಲ್ಮಿತ್ರಾ ಇಂಡಿಯಾದ ಅನೇಕ ನಗರಗಳನ್ನು ಸುತ್ತಿ ಕಸದ ತಿಪ್ಪೆಗಳ ಸಮೀಕ್ಷೆ ನಡೆಸಿದ್ದೂ ಅಲ್ಲದೆ, ದೇಶ ವಿದೇಶಗಳ ಎಷ್ಟೊಂದು ನಗರಗಳ ಕಸ ವಿಲೆವಾರಿ ವ್ಯವಸ್ಥೆಯ ಅಧ್ಯಯನವನ್ನೂ ಕೈಗೊಂಡರು. ಕಸವನ್ನು ಹೇಗೆ ವಿಂಗಡಿಸಿ ಅದರಿಂದ ರಸ ತೆಗೆಯಬಹುದು ಎಂಬ ಬಗ್ಗೆ ಎಂಜಿನಿಯರಿಂಗ್ ಸೊಲ್ಯೂಶನ್ ಹುಡುಕುತ್ತ….
ಹೋರಾಟದ ಆರು ವರ್ಷಗಳ ನಂತರ ದೇಶದ ಎಲ್ಲ ನಗರಗಳಿಗೂ ಅನ್ವಯ ಆಗುವಂತೆ ಕಾನೂನು ರೂಪುಗೊಂಡು, ಸರ್ವೋಚ್ಚ ನ್ಯಾಯಾಲಯ 2000ದಲ್ಲಿ ಆದೇಶ ಹೊರಡಿಸಿತು. ಕಸವನ್ನು ಹೇಗೆ ವಿಂಗಡಿಸಬೇಕು, ಹೇಗೆ ದೂರ ಸಾಗಿಸಬೇಕು, ಯಾವ ಭಾಗವನ್ನು ಹೇಗೆ ಮರುಬಳಕೆ ಮಾಡಬೇಕು ಎಂಬ ಎಲ್ಲ ಕಾನೂನು ಸಂಹಿತೆಗಳನ್ನು ಸ್ವತಃ ಅಧ್ಯಯನ ಮಾಡಿ, ನಿಯಮಗಳನ್ನು ರೂಪಿಸುವಲ್ಲಿ ಆಲ್ಮಿತ್ರಾ ಪಟೇಲ್ ಶ್ರಮಿಸಿ ಗೆದ್ದರು.
ಕಾನೂನನ್ನು ಕಡೆಗಣಿಸದಂತೆ ಯಾರ ಮೇಲ್ವಿಚಾರಣೆ ಇರಬೇಕು ಎಂಬ ಬಗ್ಗೆ ಮೊದಲ ಬಾರಿಗೆ ರಾಷ್ಟ್ರಕ್ಕೊಂದು ದಿಗ್ದರ್ಶನ ಸಿಕ್ಕಂತಾಯಿತು.
ಆಲ್ಮಿತ್ರಾ ಪಟೇಲ್ ಸುಮ್ಮನೆ ಕೂರಲಿಲ್ಲ. ಖುದ್ದಾಗಿ ಕಸದ ಬೆಟ್ಟಗಳಲ್ಲಿ ಓಡಾಡಿ, ಒದ್ದೆ ಕಸವನ್ನು ಸಾಲಾಗಿ ಪಾತಿಯಂತೆ ವಿಂಗಡಿಸಿ, ಅದು ಒಣಗಿದ ಬಳಿಕ ಸಾವಯವ ವಸ್ತುಗಳನ್ನು ವಿಂಗಡಿಸಿ ಎರೆಗೊಬ್ಬರ ತಯಾರಿಸುವ ಪ್ರಾತ್ಯಕ್ಷಿಕೆಯನ್ನೂ ನಡೆಸಿದರು. ಒಣಕಸವನ್ನು ಉರಿಸಿ ವಿದ್ಯುತ್ ಉತ್ಪಾದಿಸುವ ಕುರಿತೂ ಉದ್ಯಮಿಗಳಿಗೆ ಪ್ರೇರಣೆ ನೀಡಿದರು.
ಆದರೆ ಭೋಗವಸ್ತುಗಳ ಬಳಕೆ ಹೆಚ್ಚಿದಂತೆಲ್ಲ ಹೊಸ ಹೊಸ ತ್ಯಾಜ್ಯವಸ್ತುಗಳೂ ಹೆಚ್ಚುತ್ತವೆ. ಪ್ಯಾಕಿಂಗ್ ಗೆ ಬಳಸುವ ಪಾಲಿವಿನೈಲ್ ಪ್ಲಾಸ್ಟಿಕ್, ಥರ್ಮೊಕೊಲ್ ಮತ್ತು ಫ್ಲೆಕ್ಸ್ ಪರದೆಗಳಂಥ ತ್ಯಾಜ್ಯವಸ್ತುಗಳನ್ನು ಯಾರೋ ಬೆಂಕಿ ಇಟ್ಟು ಸುಟ್ಟರೆ ಅದರ ಹೊಗೆಯಿಂದ ಹೊಮ್ಮುವ ವಿಷಕಣಗಳ ಮೇಲೆ ನಿಗಾ ಇಟ್ಟು, ತಪ್ಪಿತಸ್ಥರನ್ನು ಶಿಕ್ಷಿಸುವಂತೆ ಸರ್ವೋಚ್ಚ ನ್ಯಾಯಾಲಯ ರಾಜ್ಯಗಳಿಗೆ ನಿರ್ದೇಶನ ನೀಡಬೇಕು ಎಂದು ಮತ್ತೆ ಆಲ್ಮಿತ್ರಾ ಪಟೇಲ್ ಕೋರಿದರು.
ಅನೇಕ ವರ್ಷಗಳ ಅಲೆದಾಟದ ನಂತರ 2016ರಲ್ಲಿ ರಾಷ್ಟ್ರೀಯ ಹಸಿರು ನ್ಯಾಯಪೀಠ ಆಲ್ಮಿತ್ರಾ ಪಟೇಲರ ವಿನಂತಿಯನ್ನು ಮನ್ನಿಸಿ ಹೊಸದೊಂದು ಆಜ್ಞೆಯನ್ನು ಹೊರಡಿಸಿತು: “ತ್ಯಾಜ್ಯವಸ್ತುಗಳ ಎರ‍್ರಾಬಿರ‍್ರಿ ಎಸೆದರೆ ಅದಕ್ಕೆ ಕಾರಣರಾದ ಯಾವ ಅಥವಾ ಎಲ್ಲ ಅಧಿಕಾರಿಗಳ ಮೇಲೂ ನ್ಯಾಯನಿಂದನೆಯ ಪ್ರಕರಣ ದಾಖಲಿಸಬಹುದು” ಎಂತಲೂ ಹಸಿರು ನ್ಯಾಯಪೀಠ ಆದೇಶ ನೀಡಿದೆ.
ನಿಮ್ಮೂರಿನಲ್ಲಿ ಕಸ ವಿಲೆವಾರಿ ಸರಿಯಾಗಿ ನಡೆಯದಿದ್ದರೆ ನೀವು ಅಧಿಕಾರಿಯ ಮೇಲೆ ದಾವೆ ಹೂಡಬಹುದು. ಅವರ ಮೇಲೆ ನ್ಯಾಯನಿಂದನೆ ಖಟ್ಲೆ ಹಾಕಬಹುದು. ಅಂತೂ ಹೊಣೆಗೇಡಿ ಅಧಿಕಾರಿಗಳನ್ನು ಸರಿದಾರಿಗೆ ತರಬಲ್ಲ ಮಹಾ ಅಸ್ತ್ರ ವೊಂದನ್ನು ಜನಸಾಮಾನ್ಯರಿಗೆ ಕೊಡಿಸಿದ ಶ್ರೇಯ ಆಲ್ಮಿತ್ರಾ ಪಟೇಲರಿಗೆ ಸಂದಿದೆ.
ನಾವು ಈ ಅಸ್ತ್ರವನ್ನು ಹೇಗೆ ಬಳಸುತ್ತೇವೆ, ಅಥವಾ ಕಡೆಗಣಿಸಿ ಕೊಳಕು ರಸ್ತೆಯಲ್ಲೇ ಸಾಗುತ್ತೇವೆ ಅನ್ನೋದು ಬೇರೆ ವಿಚಾರ. ನ್ಯಾಯವಾದಿಗಳು ಇತ್ತು ಆಸಕ್ತಿ ವಹಿಸುತ್ತಾರೊ ಇಲ್ಲವೊ ಬೇರೆ ವಿಚಾರ. ಕಾನೂನುಗಳು ಪರಿಣಾಮಕಾರಿಯಾಗಿ ಜಾರಿಗೆ ಬರುತ್ತದೊ ಇಲ್ಲವೊ ಅದೂ ಬೇರೆ ವಿಚಾರ. ಆದರೆ….
ಒಬ್ಬ ಮಹಿಳೆ, ಆಲ್ಮೋಸ್ಟ್ ಏಕಾಂಗಿಯಾಗಿ ಹೋರಾಡಿ, ತನ್ನ ಸತತ ಶ್ರಮ, ಹಣ ಮತ್ತು ಛಲದಿಂದಾಗಿ ಇಡೀ ದೇಶದ ಜನಾರೋಗ್ಯವನ್ನೂ ಮರ್ಯಾದೆಯನ್ನೂ ಕಾಪಾಡಬಲ್ಲಂಥ ಕಾನೂನುಗಳು ರೂಪಿತವಾಗಲು ಕಾರಣರಾದರಲ್ಲ -ಅದು ಅಪರೂಪದಲ್ಲಿ ತೀರ ಅಪರೂಪ ಘಟನೆ.
ಅವರೇನೂ ನ್ಯಾಯವಾದಿಯಲ್ಲ, ಕಾನೂನು ತಜ್ಞರಲ್ಲ, ಕೆಮಿಕಲ್ ವಿಜ್ಞಾನಿಯಲ್ಲ, ಪರಿಸರ ವಿಜ್ಞಾನದ ಪದವೀಧರೆ ಅಲ್ಲ, ಸಾರ್ವಜನಿಕ ಆರೋಗ್ಯ ಕ್ಷೇಮಚಿಂತನೆ ಮಾಡಬೇಕಾದ ಡಾಕ್ಟರ್ ಅಲ್ಲ; ಬೀದಿಗಿಳಿದು ಹೋರಾಡುವ ಧೀರ ಸಾಹಸಿಯೂ ಅಲ್ಲ. ಆದರೂ- ಅವರೆಲ್ಲರ ಪಾತ್ರವನ್ನು ತಾನೊಬ್ಬಳೇ ನಿರ್ವಹಿಸಿದ ಧೀರೆ.
ಆಲ್ಮಿತ್ರಾ ಎಂದರೆ ಸರ್ವಸ್ನೇಹಿ.
ಮತ್ತೊಂದು ಸಾಹಸದ ಸುಳಿವು
ನಗರದ ತ್ಯಾಜ್ಯಗಳ ಪೈಕಿ ಅತಿದೊಡ್ಡ ರಗಳೆ ಎಂದರೆ ಸ್ಯಾನಿಟರಿ ಪ್ಯಾಡ್‌ಗಳು. ಮಕ್ಕಳು, ಮಹಿಳೆಯರು, ವೃದ್ಧರು ಮನೆಯಲ್ಲಿ ಆಸ್ಪತ್ರೆಗಳಲ್ಲಿ ಬಳಸಿ ಎಸೆಯುವ ಇಂಥ ಕೋಟಿಗಟ್ಟಲೆ ಪ್ಯಾಡ್‌ಗಳನ್ನು ಸುಟ್ಟರೆ ಕಮಟು. ಹಾಗಿದ್ದರೆ ವಿಲೆವಾರಿ ಹೇಗೆ? ಆಲ್‌ಮಿತ್ರಾ ಅನೇಕ ಕಡೆ ಜಾಲಾಡಿ, ನೆದರ್ಲ್ಯಾಂಡ್ಸ್ ಮತ್ತು ಲಂಡನ್‌ನಲ್ಲಿ ಇದರ ಮರುಬಳಕೆಯ ಲಾಭಕಾರಿ ಉದ್ಯಮವೇ ಇದೆಯೆಂದು ಪತ್ತೆ ಮಾಡಿದರು. ಈ ಪ್ಯಾಡ್‌ಗಳಲ್ಲಿನ ನಾರಿನ ಪಿಂಡಿ ತನ್ನ ತೂಕದ ನಾಲ್ಕಾರು ಪಟ್ಟು ನೀರನ್ನು ಹೀರಿಕೊಳ್ಳುತ್ತವೆ. ಅದನ್ನು ಬೇರ್ಪಡಿಸಿ, ಯಂತ್ರದಲ್ಲಿ ಆರೆಂಟು ಬಾರಿ ತೊಳೆದು ಒಣಗಿಸಿ, ಮೆತ್ತೆಯನ್ನಾಗಿ ಮಾಡಿ ಗಿಡಮರಗಳ ಬುಡದಲ್ಲಿ ಇಟ್ಟರೆ ಬೇಸಿಗೆಯಲ್ಲಿ ಪದೇಪದೇ ನೀರುಣಿಸುವುದು ಬೇಕಾಗಿಲ್ಲ ಎಂದು ಆಲ್ಮಿತ್ರಾ ಹೇಳುತ್ತಾರೆ.
ನವೋದ್ಯಮಿಗಳು ಇಲ್ಲೊಂದು ಹೊಸ ಅವಕಾಶ ಕಾದಿದೆ.