ಅಕ್ಕಡಿ ಬೇಸಾಯ ಮತ್ತು ಬೆರಕೆ ಸೊಪ್ಪಿನ ಜ್ಞಾನದ ಖನಿ ಪುಟ್ಟೀರಮ್ಮನಿಗೆ ರಾಜ್ಯೋತ್ಸವ ಪುರಸ್ಕಾರ

ಅಕ್ಕಡಿ ಬೇಸಾಯ ಮತ್ತು ಬೆರಕೆ ಸೊಪ್ಪಿನ ಜ್ಞಾನದ ಖನಿ ಪುಟ್ಟೀರಮ್ಮನಿಗೆ ರಾಜ್ಯೋತ್ಸವ ಪುರಸ್ಕಾರ
Spread the love

ಮಲ್ಲಿಕಾರ್ಜುನ ಹೊಸಪಾಳ್ಯ
ಬೆಳದಿಂಗಳ ಬೆಳಕಲ್ಲಿ ಅರ್ಜುನ ರಾಯ ಅವರೆ ಬಿತ್ತಾಕೆ ಹೋಗಿ
ಅವರೆಯ ಸಾಲೆಲ್ಲ ಸರಮುತ್ತು ಕಿರುಗೆಜ್ಜೆ
ಮೂಡಪ್ಪ ಬೆಳದಿಂಗಳೇ
ಬೆಳದಿಂಗಳ ಬೆಳಕಲ್ಲಿ ಅರ್ಜುನ ರಾಯ ಕಳ್ಳೆ ಬಿತ್ತಾಕೆ ಹೋಗಿ
ಕಳ್ಳೆಯ ಸಾಲೆಲ್ಲ ಸರಮುತ್ತು ಕಿರುಗೆಜ್ಜೆ
ಮೂಡಪ್ಪ ಬೆಳದಿಂಗಳೇ
ಈ ಬಾರಿ ಕೃಷಿ ವಿಭಾಗದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿರುವ ಚಾಮರಾಜನಗರದ ಕೃಷಿಕ ಮಹಿಳೆ ಅಕ್ಕಡಿ ಬೇಸಾಯದ ಕುರಿತು ಹೇಳುವ ಪದ ಇದು. ಇಂತಹ ಹತ್ತಾರು ಪದಗಳ ಕಣಜವೇ ಆಗಿದ್ದಾರೆ ಇವರು. ತಮ್ಮ ಪಣ್ಯದಹುಂಡಿಯ ಸಣ್ಣ ಜಮೀನಲ್ಲಿ ತಾನು ಮಾಡುವ ವಿಧವಿಧದ ಅಕ್ಕಡಿ ಬಿತ್ತನೆಯು ಮಹಾಭಾರತದ ಕಾಲದಲ್ಲಿ ಕುಂತಿ-ಅರ್ಜುನರು ಬೆಳದಿಂಗಳ ಬೆಳಕಿನಲ್ಲಿ ಮಾಡುತ್ತಿದ್ದ ಬಿತ್ತನೆಯ ಮುಂದುವರೆದ ಭಾಗವೇ ಎನ್ನುವಂತೆ ರಾಗವಾಗಿ ಹಾಡುತ್ತಾ ವಿವರಿಸುವ ಅವರ ನೆನಪಿನ ಶಕ್ತಿ ಅಪರೂಪ. ವಾರಗಟ್ಟಳೆ ಹೇಳಿದರೂ ಅವರ ಪದಗಳ ಖಜಾನೆ ಮತ್ತು ಅಕ್ಕಡಿ ಬೇಸಾಯದ ಮಾಹಿತಿ ಖಾಲಿಯಾಗದು.
ನೂರಕ್ಕೂ ಹೆಚ್ಚು ಬೆರಕೆ ಸೊಪ್ಪುಗಳನ್ನು ಗುರುತಿಸುವ ಮತ್ತು ಕುಯ್ಯುವ ಅಪಾರ ಜ್ಞಾನವಂತೆ. ಬೆರಕೆ ಸೊಪ್ಪಿನ ಬಳಕೆಯೇ ನಶಿಸುತ್ತಿರುವ ಕಾಲಮಾನದಲ್ಲಿ ಅದರ ಜ್ಞಾನವನ್ನು ತಮ್ಮ ಗ್ರಾಮ ಎಳೆಯ ಹೆಣ್ಣುಮಕ್ಕಳಿಗೂ ಕಲಿಸುತ್ತಿರುವುದು ಇವರ ವಿಶೇಷ.  ಒಣಭೂಮಿ ಕೃಷಿ, ಅಕ್ಕಡಿ ಬೇಸಾಯ ಹಾಗೂ ಬೆರಕೆ ಸೊಪ್ಪುಗಳು ನಮ್ಮ ಬೇಸಾಯದಿಂದ ಕಣ್ಮರೆಯಾಗುತ್ತಿರುವ ದಿನಗಳಿವು. ಇಂತಹ ಸಮಯದಲ್ಲಿ ಇವುಗಳ ಪ್ರತಿನಿಧಿಯಂತಿರುವ ಪುಟ್ಟೀರಮ್ಮನನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿರುವುದು ಅಭಿನಂದನೀಯ. ಇಕ್ರಾ ಸಂಸ್ಥೆಯು ಇವರ ಬಗ್ಗೆ ಒಳ್ಳೆಯ  ಪುಸ್ತಕ ಪ್ರಕಟಿಸಿದೆ.
 ಶಾಲೆ ಕಲಿಯದ “ಪ್ರೊಫೆಸರ್‌ ಪುಟ್ಟೀರಮ್ಮ”ನಿಗೆ ಈಗ 86 ವರ್ಷ. ದೃಷ್ಟಿ ಮಸುಕಾಗುತ್ತಿದೆ. ಇವರಿಗೆ ಪ್ರಶಸ್ತಿ ದೊರೆತಿರುವುದು ಸುಸ್ಥಿರ ಕೃಷಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ನಮಗೆಲ್ಲರಿಗೂ ಹೆಮ್ಮೆಯ ವಿಷಯ. ಈ ಪ್ರಶಸ್ತಿಯಿಂದ ಸಮಾಜದಲ್ಲಿ ಅಕ್ಕಡಿ ಬೇಸಾಯ ಮತ್ತು ಬೆರಕೆ ಸೊಪ್ಪುಗಳ ಬಗೆಗೆ ಹೆಚ್ಚು ಒಲವು ಮೂಡಲಿ ಎಂದು ಆಶಿಸುತ್ತೇನೆ.

Spread the love