ಗಾಂಧೀಜಿಯನ್ನು ತಳ್ಳಿಹಾಕುವುದೆಂದರೆ – ನಮಗೆ ನಾವೇ ಮಾಡಿಕೊಳ್ಳುವ ಅಪಚಾರ: ಗಿರೀಶ್ ಕಾಸರವಳ್ಳಿ
oplus_262146
Spread the love

ನಾಗೇಶ್ ಕೆ.ಎನ್.

ಸೋಷಿಯಲ್ ಮೀಡಿಯಾಗಳಲ್ಲಿ ಗಾಂಧೀಜಿ ಬಗ್ಗೆ ದುರುದ್ದೇಶಪೂರ್ವಕವಾಗಿ ಇಲ್ಲ ಸಲ್ಲದ ಆರೋಪಗಳನ್ನು ಹರೀಬಿಡಲಾಗುತ್ತಿದೆ. ಯುವಕರು ಅದನ್ನೇ ಸತ್ಯ ಅಂತಾ ನಂಬುವ ಅಪಾಯವಿದೆ. ಹಾಗಾಗಿ ಗಾಂಧೀಜಿ ಬಗೆಗಿನ ನೈಜ ವಿಚಾರಗಳನ್ನು ಹೇಳುವ, ಸರಿಯಾದ ಮಾಹಿತಿ ನೀಡುವ ಕೆಲಸ ಈಗ ಆಗಬೇಕಿದೆ. ಆ ನಿಟ್ಟಿನಲ್ಲಿ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಆರಂಭಿಸಿರುವ ಗಾಂಧಿ ಸಿನಿಮಾ ಕ್ಲಬ್ ಅತ್ಯುತ್ತಮ ಕೆಲಸವಾಗಿದೆ ಎಂದು ಅಂತಾರಾಷ್ಟ್ರೀಯ ಖ್ಯಾತಿಯ ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅಭಿಪ್ರಾಯಪಟ್ಟರು.

ಇಂದು ಗಾಂಧಿ ಭವನದಲ್ಲಿ ಆಯೋಜಿಸಿದ್ದ ಗಾಂಧಿ ಸಿನೆಮಾ ಕ್ಲಬ್ ಉದ್ಘಾಟನೆ, ರಿಚರ್ಡ್ ಆಟಿನ್ ಬರೋ ನಿರ್ದೇಶನದ “ಗಾಂಧಿ” ಸಿನಿಮಾ ಪ್ರದರ್ಶನ ಹಾಗೂ ಸಂವಾದ ಸರಣಿಗೆ ಚಾಲನೆ ನೀಡಿ ಅವರು ಮತಾನಾಡುತ್ತಿದ್ದರು. ಗಾಂಧಿ ಎಂದಾಕ್ಷಣ ಅವರ ಪ್ರತಿಮೆಯ ರೂಪ ನಮ್ಮ ಕಣ್ಮುಂದೆ ಬರುತ್ತದೆ. ಆ ಪ್ರತಿಮೆಯ ಹಿಂದೆ ಅದೆಷ್ಟು ದೊಡ್ಡ ಚಿಂತನೆಯ ಶಕ್ತಿ ಇದೆ ಅನ್ನೋದು ಬಹಳ ಮುಖ್ಯ. ಅವರು ಯಾಕೆ ಶರ್ಟ್ – ಪ್ಯಾಂಟ್ ಧರಿಸುವುದನ್ನು ಬಿಟ್ಟರು ಎಂಬುದೇ ಇಡೀ ಭಾರತದ ಕಥೆಯನ್ನು ಹೇಳುತ್ತದೆ ಎಂದರು.
ಗಾಂಧಿ ಬಗ್ಗೆ ಮೂರು ತರದ ಸಿನಿಮಾಗಳನ್ನು ಮಾಡಲಾಗಿದೆ. ಒಂದು, ಅವರ ವ್ಯಕ್ತಿ ಚಿತ್ರಣ, ಇನ್ನೊಂದು ಅವರ ಏಕಾದಶ ಸೂತ್ರಗಳ/ಚಿಂತನೆಗಳ ಚಿತ್ರಗಳು, ಮತ್ತೊಂದು ಗಾಂಧಿ ಒಂದು ಕಮಾಡಿಟಿಯಾಗಿ. ಈ ಎಲ್ಲಾ ರೀತಿಯ ಚಿತ್ರಗಳನ್ನು ಇಂದಿನ ಯುವಸಮೂಹ ನೋಡಬೇಕು ಎಂದು ಕರೆ ನೀಡಿದರು.

ಇನ್ನು ಗಾಂಧಿ ಅವರ ಚಿಂತನೆ ಮತ್ತು ಸೂತ್ರಗಳ ಬಗೆಗೆ ಹೇಳುತ್ತಾ ಪ್ರತಿಯೊಬ್ಬರೂ ತಮ್ಮ ಕೆಲಸದಲ್ಲಿ ನೈತಿಕತೆ ಇಟ್ಟುಕೊಳ್ಳಬೇಕು, ಅಹಿಂಸೆಯಲ್ಲಿ ನಂಬಿಕೆ ಇರಿಸಿಕೊಳ್ಳಬೇಕು, ಸತ್ಯ, ಅಸ್ವಾದ ಮತ್ತು ಅಸಂಗ್ರಹ ಸೂತ್ರಗಳನ್ನು ಪಾಲಿಸಬೇಕು ಎಂಬ ಗಾಂಧಿ ಚಿಂತನೆಯನ್ನು ಯುವಕರೊಂದಿಗೆ ಹಂಚಿಕೊಂಡರು.

ಜಗತ್ತಿನ ಇತಿಹಾಸದಲ್ಲಿ ಗಾಂಧಿ ಒಬ್ಬ ಸಾಮಾಜ ಸುಧಾರಕ ಅಷ್ಟೇ ಅಲ್ಲ ನೈತಿಕತೆಯನ್ನು ಪ್ರಚುರಪಡಿಸಿದ ಬಹುದೊಡ್ಡ ಚಿಂತಕರಾಗಿದ್ದರು ಎಂದರು. ಪ್ರಸ್ತುತ ವಿದ್ಯಮಾನಗಳನ್ನು ನೆನೆದು “ಯಾರೇ ಗಾಂಧೀಜಿಯನ್ನು ತಳ್ಳಿಹಾಕುವುದೆಂದರೆ ನಮಗೆ ನಾವೇ ಮಾಡಿಕೊಳ್ಳುವ ಅಪಚಾರ” ಎಂದು ಸ್ಪಷ್ಟವಾಗಿ ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷರು, ಶಿಕ್ಷಣ ತಜ್ಞರು ಹಾಗೂ ಶೇಶಾದ್ರಿಪುರಂ ಶಿಕ್ಷಣ ಸಂಸ್ಥೆಗಳ ಗೌರವ ಕಾರ್ಯದರ್ಶಿಗಳೂ ಆದ ನಾಡೋಜ ವೂಡೇ ಪಿ.ಕೃಷ್ಣ ಮಾತನಾಡಿ ಇಂದಿನ ಡಿಜಿಟಲ್ ಯುಗದಲ್ಲಿ-ನಿಮ್ಮ ಭಾಷೆಯಲ್ಲಿ ಇಂದು ಗಾಂಧೀಜಿಯನ್ನು ನಿಮಗೆ ತಲುಪಿಸಬೇಕಿದೆ ಎಂದು ವಿದ್ಯಾರ್ಥಿಗಳಿಗೆ ಹೇಳಿದರು.

ಗಾಂಧೀಜಿ ಕುರಿತು ಮಾತನಾಡುತ್ತಾ ಈ ಭೂಮಿಯ ಮೇಲೆ ಸತ್ಯ ಮತ್ತು ಅಹಿಂಸೆ ಎಲ್ಲಿಯವರೆಗೆ ಇರುತ್ತೋ ಅಲ್ಲಿಯವರೆಗೆ ಗಾಂಧೀಜಿಯೂ ಪ್ರಸ್ತುತವಾಗಿರುತ್ತಾರೆ ಎಂದರು. ಗಾಂಧೀಜಿಯವರ ಸತ್ಯ ಮತ್ತು ಅಹಿಂಸೆಯ ತತ್ವವನ್ನು ವೂಡೇ ಪಿ. ಕೃಷ್ಣ ಅವರು ಧೈರ್ಯ ಮತ್ತು ಪ್ರೀತಿ ಎಂಬುದಾಗಿ ವ್ಯಾಖ್ಯಾನಿಸಿದ್ದು ವಿಶೇಷವಾಗಿತ್ತು.

ಇಂದಿನ ಕೊಳ್ಳುಬಾಕತನದ ಬಗ್ಗೆ ಮಾತನಾಡುತ್ತಾ ಗಾಂಧೀಜಿಯ ಸರಳತೆಯ ಸೂತ್ರವಾದ ಅಸಂಗ್ರಹದ ಬಗೆಗೆ ಬೆಳಕು ಚೆಲ್ಲಿದ ವೂಡೇ ಪಿ. ಕೃಷ್ಣ ಅವರು “ I go to market to see what all things I don’t need” ಎಂಬ ಸಾಕ್ರೆಟಸ್ ಮಾತನ್ನು ಉಲ್ಲೇಖಿಸಿ ಸರಳತೆಯ ಪಾಠ ಮಾಡದರು. ಜೊತೆಗೆ ಗಾಂಧೀಜಿಯನ್ನು ಅರ್ಥ ಮಾಡಿಕೊಳ್ಳುವುದೆಂದರೆ ಭಾರತದ ಅಂತರಾತ್ಮವನ್ನು ಅರ್ಥ ಮಾಡಿಕೊಂಡಂತೆ ಎಂದು ಹೇಳುವ ಮೂಲಕ ಎಲ್ಲಾ ವಿದ್ಯಾರ್ಥಿಗಳು ಗಾಂಧೀಜಿಯನ್ನು ಓದಬೇಕು, ಅರ್ಥ ಮಾಡಿಕೊಳ್ಳಬೇಕು, ಪ್ರಶ್ನೆಗಳಿದ್ದರೆ ಪ್ರಶ್ನೆಗಳನ್ನೂ ಹಾಕಿಕೊಳ್ಳಬೇಕು. ಸವಾಲುಗಳನ್ನೂ ಹಾಕಬೇಕು. ಅದೆಲ್ಲದಕ್ಕೂ ಗಾಂಧೀಜಿಯ ಕುರಿತಾಗಿ ಬಂದಿರುವ ಪುಸ್ತಕಗಳಲ್ಲಿ ಉತ್ತರವಿದೆ. He is the most documented person in this planet” ಎಂದರು.

ಸದಾ ಅನ್ವೇಷಣೆಯಲ್ಲಿರುತ್ತಿದ್ದ ಗಾಂಧಿ ತಮ್ಮ ಹೊಸ ನೋಟ ಹಾಗೂ ಹೊಳಹುಗಳನ್ನು ಹೇಳುವಾಗ “ I have moved from one level of truth to another” ಎಂದು ಹೇಳುತ್ತಿದ್ದದನ್ನೂ ಉಲ್ಲೇಖಿಸಿ ತಮ್ಮ ಮಾತುಗಳಿಗೆ ವಿರಾಮ ನೀಡಿದರು.
ವೂಡೇ ಪಿ. ಕೃಷ್ಣ ಅವರು ಮಾತಿಗೂ ಮುನ್ನ ಮಾತನಾಡಿದ ರಾಯಚೂರು ಮೂಲದ ವಿದ್ಯಾರ್ಥಿ ಶರಣ ಬಸವ ಗಾಂಧೀ ಸ್ಮಾರಕ ನಿಧಿಯ ಕಾರ್ಯಕ್ರಮಗಳನ್ನು ಸ್ಮರಿಸಿ ಗಾಂಧೀಜಿಯ ಪ್ರಸ್ತುತತೆಯ ಬಗ್ಗೆ ತಮ್ಮ ಮನದಾಳ ಮಾತುಗಳನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಗಾಂಧಿ ಸ್ಮಾರಕ ನಿಧಿ ಬಳಗದ ಇ.ಪಿ. ಮೆನನ್, ಕಾಂ. ಮೋಹನ್ ಕುಮಾರ್ ಕೊಂಡಜ್ಜಿ ಹಾಗೂ ಗಾಂಧಿ ಸ್ಮಾರಕ ನಿಧಿಯ ಕಾರ್ಯಾಧ್ಯಕ್ಷರಾದ ಎನ್.ಆರ್. ವಿಶುಕುಮಾರ್ ಉಪಸ್ತಿತರಿದ್ದರು.


Spread the love