ಕೃಷಿ ಸಮಯ ಡೆಸ್ಕ್
ಕನ್ನಡ ಸಾಹಿತ್ಯಕ್ಕೆ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ದೊರೆಯುವಂತೆ ಮಾಡಿ, ಜಾಗತಿಕ ಮಟ್ಟದಲ್ಲಿ ಖ್ಯಾತಿ ಗಳಿಸುವಂತೆ ಮಾಡಿದ ನಮ್ಮ ಹೆಮ್ಮೆಯ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ಪುರಸ್ಕೃತರಾದ ಶ್ರೀಮತಿ ಬಾನು ಮುಷ್ತಾಕ್ ಹಾಗೂ ಶ್ರೀಮತಿ ದೀಪಾ ಭಾಸ್ತಿ ಅವರಿಗೆ ತಲಾ 10 ಲಕ್ಷ ರೂಗಳಂತೆ 20 ಲಕ್ಷ ರೂಗಳ ಪುರಸ್ಕಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಇಂದು ಕನ್ನಡ ಸಂಸ್ಕೃತಿ ಇಲಾಖೆಯ ವತಿಯಿಂದ ವಿಧಾನಸೌಧ ಬ್ಯಾಂಕ್ವೆಟ್ ಹಾಲ್‍ನಲ್ಲಿ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ಪುರಸ್ಕೃತರಾದ ಶ್ರೀಮತಿ ಬಾನು ಮುಷ್ತಾಕ್ ಹಾಗೂ ಶ್ರೀಮತಿ ದೀಪಾ ಭಾಸ್ತಿ ರವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ, ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಿ ಮಾತನಾಡಿದ ಮುಖ್ಯಮಂತ್ರಿಗಳು, ಇನ್ನು ಮುಂದೆ ಕನ್ನಡ ಸಾಹಿತ್ಯವನ್ನು ಇಂಗ್ಲೀಷ್‍ಗೆ ಅನುವಾದ ಮಾಡಲು ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಲಾಗುವುದು ಎಂದರು.
ಇತ್ರೀಚೆಗೆ ಬೂಕರ್ ಪ್ರಶಸ್ತಿ ವಿಜೇತರಾದ ಶ್ರೀಮತಿ ಬಾನು ಮುಷ್ತಾಕ್ ಅವರ 12 ಆಯ್ದ ಕಥೆಗಳನ್ನು “ಹಾರ್ಟ್ ಲ್ಯಾಂಪ್” ಹೆಸರಿನ ಪುಸ್ತಕವನ್ನಾಗಿ ಅನುವಾದ ಮಾಡಿದ ಶ್ರೀಮತಿ ದೀಪಾ ಭಾಸ್ತಿ ಇಬ್ಬರಿಗೂ ಸರ್ಕಾರದಿಂದ ಅಭಿನಂದನೆ ಸಲ್ಲಿಸಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಸರ್ಕಾರದ ಪರವಾಗಿ ಹೃದಯಪೂರ್ವಕವಾಗಿ ಅಭಿನಂದನೆ ಸಲ್ಲಿಸುತ್ತೇನೆ. 2025 ನೇ ಸಾಲಿನಲ್ಲಿ ಬಾನು ಮುಷ್ತಾಕ್ ಅವರ “ಹಸೀನ” ಹಾಗೂ ಇತರ ಕಥೆಗಳು ಪುಸ್ತಕಕ್ಕೆ ಹಾಗೂ ಅನುವಾದಿತ “ಎದೆಯ ಹಣತೆ”ಗೆ ಬೂಕರ್ ಪ್ರಶಸ್ತಿ ದೊರೆತಿದೆ. ಕನ್ನಡದಲ್ಲಿ ಬರೆದಿರುವ ಕಥೆಗೆ ಇಂಗ್ಲೀಷ್‍ನಲ್ಲಿ ಅನುವಾದ ಮಾಡಿರುವ ಪುಸ್ತಕಕ್ಕೆ ಪ್ರಶಸ್ತಿ ದೊರೆತಿರುವುದು ವಿಶೇಷವಾಗಿದ್ದು, ಇಬ್ಬರು ಸಾಹಿತಿಗಳನ್ನು ಅಭಿನಂದಿಸುತ್ತೇವೆ ಎಂದರು.
ಶ್ರೀಮತಿ ಬಾನು ಮುಷ್ತಾಕ್ ಅವರು ಪತ್ರಕರ್ತೆಯಾಗಿ ಲೇಖಕಿಯಾಗಿ, ವಕೀಲರಾಗಿ ಎಲ್ಲಕ್ಕಿಂತ ಮುಖ್ಯವಾಗಿ ಹೋರಾಟಗಾರರಾಗಿ ತಮ್ಮನ್ನು ಈ ಸಮಾಜದಲ್ಲಿ ಗುರುತಿಸಿಕೊಂಡಿದ್ದಾರೆ. ಬಹಳಷ್ಟು ಜನ ಹೆಣ್ಣು ಮಕ್ಕಳು ಅವರ ವಯಸ್ಸಿನಲ್ಲಿ ಮದುವೆ ಸಂಭ್ರಮದಲ್ಲಿದ್ದರೆ, ಇವರು ಕಾಲೇಜು ಶಿಕ್ಷಣ ಪಡೆದು ಬಿಎಸ್ಸಿ, ಎಲ್‍ಎಲ್‍ಬಿ ಪದವಿ ಪಡೆದು ತಮ್ಮನ್ನು ಸಮಾಜಕ್ಕೆ ಸಂಪೂರ್ಣವಾಗಿ ಅರ್ಪಿಸಿಕೊಂಡಿದ್ದಾರೆ. ವಕೀಲೆಯಾಗಿ ಬಹಳಷ್ಟು ಜನ ಹೆಣ್ಣು ಮಕ್ಕಳಿಗೆ ನ್ಯಾಯ ದೊರಕಿಸಿ ಕೊಟ್ಟಿದ್ದಾರೆ. ಕರ್ನಾಟ ರಾಜ್ಯೋತ್ಸವ ಪ್ರಶಸ್ತಿ, ಅತ್ತಿಮಬ್ಬೆ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಇನ್ನೂ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅವರ ಬರಹದಲ್ಲಿ ಸಾಮಾಜಿಕ ಕಳಕಳಿ, ಸಾಮಾಜಿಕ ಸಂದೇಶ ಇರುವುದರಿಂದ ಶಕ್ತಿಯುತ ಬರಹಗಾರರಾಗಿ ಹೊರಹೊಮ್ಮಿದ್ದಾರೆ. ಅವರ ಕಥೆಗಳ ಮೂಲಕ ಇಡೀ ಜಗತ್ತಿನ ಲೇಖನದ ಮೂಲಕ ಅವರ ಮನಸ್ಸಿನ ನೋವನ್ನು ತಿಳಿಸುವ ಪ್ರಯತ್ನ ಮಾಡಿದ್ದಾರೆ. ಸಮಾಜದಲ್ಲಿನ ಶೋಷಿತ ಮಹಿಳೆಯರ, ಅದರಲ್ಲೂ ಮುಸ್ಲಿಂ ಮಹಿಳೆಯರ ಧ್ವನಿಯಾಗಿ ಕೆಲಸ ಮಾಡಿದ್ದಾರೆ. ಅವರಲ್ಲಿ ವೈಚಾರಿಕತೆ ಇರುವುದರಿಂದ ಗೊಡ್ಡು ಸಂಪ್ರದಾಯ ಮತ್ತು ಕಂದಾಚಾರಗಳ ವಿರುದ್ಧ ಗುರುತಿಸಿಕೊಂಡಿದ್ದಾರೆ. ಮನುಷ್ಯ ಸಮಾಜದಲ್ಲಿ ಹೇಗಿರಬೇಕೆಂಬ ಬಗ್ಗೆ ಸಾಹಿತ್ಯದ ಮೂಲಕ ಇಡೀ ಸಮಾಜಕ್ಕೆ ಸಂದೇಶ ಕೊಟ್ಟಿದ್ದಾರೆ. ಬೂಕರ್ ಪ್ರಶಸ್ತಿ ಬಂದಿರುವದರಿಂದ ಸಾಹಿತ್ಯ ಕ್ಷೇತ್ರ ಇನ್ನೂ ಹೆಚ್ಚು ಜವಾಬ್ದಾರಿಯುತವಾಗಿ ಕೆಲಸ ಮಾಡುವಂತೆ ನಿರ್ಮಾಣವಾಗಿದ್ದು, ಸಾಹಿತ್ಯಕ್ಕೆ ಮೊದಲಿಗಿಂತ ಜವಾಬ್ದಾರಿ ಹೆಚ್ಚಾಗಿದೆ ಎಂದರು.
ಕನ್ನಡ ಸಾಹಿತ್ಯಕ್ಕೆ ದೀರ್ಘವಾದ ಇತಿಹಾಸವಿದ್ದು, 1200 ವರ್ಷಗಳಿಂದ ಜನರನ್ನು ಒಟ್ಟುಗೂಡಿಸುವ ಕೆಲಸ ಮಾಡುತ್ತಿದೆ. ಕನ್ನಡದಲ್ಲಿ ಲಭ್ಯವಿರುವ ಕೃತಿ ಕವಿರಾಜ ಮಾರ್ಗ ಇದರಲ್ಲಿ ಪರಧರ್ಮ, ಪರವಿಚಾರಗಳನ್ನು ಸಹನಾಭೂತಿಯಿಂದ ನೋಡುವುದೆ ನಿಜವಾದ ಒಡವೆ ಎಂದಿದ್ದಾರೆ. ಆದಿಕವಿ ಪಂಪ ಅವರು ಮನುಷ್ಯ ಜಾತಿ ತಾನೊಂದೆ ವಲಂ ಎಂದು ಹೇಳಿದ್ದಾರೆ ಬಸವಣ್ಣ ಇವನಾರವ ಎಂದು ಹೇಳಬೇಡ, ಇವ ನನ್ನವ ಎಂದರು. ಅಕ್ಕಮಹಾದೇವಿಯೂ ಸಹ ಹೆಣ್ಣು ಮಕ್ಕಳ ಪರವಾಗಿ ಧ್ವನಿ ಎತ್ತಿದರು ಎಂದರು.
ಇನ್ನು ಮುಂದೆ ಬಾನು ಮುಷ್ತಾಕ್ ಅವರ ಪುಸ್ತಕಗಳನ್ನು ಗ್ರಂಥಾಲಯಗಳಿಗೆ ಕೊಂಡುಕೊಳ್ಳಲಾಗುವುದು. ಶ್ರೀಮತಿ ದೀಪಾ ಭಾಸ್ತಿ ಅವರು ಬಾನು ಮುಷ್ತಾಕ್ ಅವರ ಕಥೆಗಳನ್ನು ಇಂಗ್ಲೀಷಿಗೆ ಅನುವಾದ ಮಾಡಿರುವುದರಿಂದ ಬೂಕರ್ ಪ್ರಶಸ್ತಿ ದೊರೆತಿದೆ. ಆದ್ದರಿಂದ ಇವರಿಗೆ ವಿಶೇಷ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಾತನಾಡಿ, ಶ್ರೀಮತಿ ಬಾನು ಮುಷ್ತಾಕ್ ಹಾಗೂ ಶ್ರೀಮತಿ ದೀಪಾ ಭಾಸ್ತಿ ಅವರು ವಿಶ್ವಮಟ್ಟದಲ್ಲಿ ರಾಯಭಾರಿಯಾಗಿ ಬೆಳೆದಿದ್ದಾರೆ. ನಮ್ಮ ಜಗತ್ತಿಗೆ ಕನ್ನಡದ ಜ್ಯೋತಿ ಬೆಳಗಿದ್ದಾರೆ. ಕನ್ನಡ ಉಳಿಸಿದ್ದಾರೆ. ಸಪ್ತಸಾಗರದ ಆಚೆ ಇಂದು ಕನ್ನಡಕ್ಕೆ ಗೌರವ ತಂದಿರುವ ಇವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ ತಂಗಡಗಿ ಅವರು ಪ್ರಾಸ್ತಾವಿಕ ಮಾತನಾಡಿ, ನಮ್ಮ ಕನ್ನಡ ಭಾಷೆ, ಕನ್ನಡ ನಾಡು ನುಡಿ, ಸಂಸ್ಕೃತಿ ಅತ್ಯಂತ ಪ್ರಾಚೀನದ್ದಾಗಿದೆ. ಮೈಸೂರು ರಾಜ್ಯಕ್ಕೆ ಕರ್ನಾಟಕ ರಾಜ್ಯ ಎಂದು ನಾಮಕರಣ ಮಾಡಿ 50 ವರ್ಷ ಪೂರೈಸಿದ ವರ್ಷದಲ್ಲಿ ಇಬ್ಬರು ಹೆಣ್ಣು ಮಕ್ಕಳಿಗೆ ವಿಶೇಷ ಪ್ರಶಸ್ತಿ ಬಂದಿರುವುದು ಭುವನೇಶ್ವರಿ ತಾಯಿಯನ್ನು ನೋಡಿದ ಅನುಭವವಾಗಿದೆ. 8 ಜ್ಞಾನ ಪೀಠ ಪ್ರಶಸ್ತಿ ಪಡೆದ ಕನ್ನಡ ಭಾಷೆಗೆ, ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ಪಡೆಯುವ ಮೂಲಕ ನಮ್ಮ ನಾಡಿನ ಹೆಣ್ಣು ಮಕ್ಕಳು ಕನ್ನಡ ನಾಡಿಗೆ ಹಿರಿಮೆ ತಂದು ಕೊಟ್ಟಿದ್ದಾರೆ. ಶ್ರೀಮತಿ ದೀಪಾ ಭಾಸ್ತಿ ಅವರು ಆಂಗ್ಲ ಭಾಷೆಗೆ ವಿಶೇಷ ಅನುವಾದ ಮಾಡುವ ಮೂಲಕ ಕನ್ನಡ ಭಾಷೆಗೆ ಹೆಮ್ಮೆ ತರುವ ಕೆಲಸ ಮಾಡಿದ್ದಾರೆ. ಜಗತ್ತಿನಲ್ಲಿ ಕನ್ನಡದ ಹಣತೆ ಬೆಳಗಿಸಿದ್ದಾರೆ ಎಂದರು.
ವಿಧಾನಪರಿಷತ್ತಿನ ಸಭಾಪತಿಗಳಾದ ಬಸವರಾಜ ಶಿವಲಿಂಗಪ್ಪ ಹೊರಟ್ಟಿ ಅವರು ಮಾತನಾಡಿ, ನಮ್ಮ ನಾಡಿನ ಹಿರಿಯ ಹಾಗೂ ಕಿರಿಯ ಸಾಹಿತಿಗಳನ್ನು ಒಂದೇ ವೇದಿಕೆಯಲ್ಲಿ ನೋಡುವ ಸೌಭಾಗ್ಯವನ್ನು ಕ್ನನಡ ಮತ್ತು ಸಂಸ್ಕೃತಿ ಇಲಾಖೆಯು ಕಲ್ಪಿಸಿದೆ. ಇಡೀ ಜಗತ್ತಿಗೆ ಕರ್ನಾಟಕವನ್ನು ಗುರುತು ಮಾಡಿರುವ ಅಂತರರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರಾದ ಶ್ರೀಮತಿ ಬಾನು ಮಷ್ತಾಕ್ ಹಾಗೂ ಶ್ರೀಮತಿ ದೀಪಾ ಭಾಸ್ತಿ ಅವರನ್ನು ಕರ್ನಾಟಕ ವಿಧಾನ ಮಂಡಲವು ಹೃದಯಪೂರ್ವಕವಾಗಿ ಅಭಿನಂದಿಸುತ್ತದೆ. ಇದೇ ರೀತಿ ಇನ್ನೂ ಹೆಚ್ಚಿನ ಪ್ರಶಸ್ತಿ ಲಭಿಸುವಂತಾಗಲಿ ಎಂದು ಹೃದಯಪೂರ್ವಕ ಅಭಿನಂದಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಿವಾಜಿನಗರದ ಶಾಸಕರಾದ ರಿಜ್ವಾನ್ ಅರ್ಷದ್ ಅವರು, ಕನ್ನಡ ಭಾಷೆಗೆ ಸಾವಿರಾರು ವರ್ಷದ ಇತಿಹಾಸವಿದ್ದು. ಈ ಐತಿಹಾಸಿಕ ಭಾಷೆಗೆ ಇಂದು ಇತಿಹಾಸ ಸೃಷ್ಟಿಸಿರುವ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತರಿಗೆ ಅಭಿನಂದನೆ ಸಲ್ಲಿಸಿದರು.
ಅಂತರರಾಷ್ಟ್ರೀಯ ಪ್ರಶ್ತಸ್ತಿ ಪುರಸ್ಕೃತರಾದ ಶ್ರೀಮತಿ ಬಾನು ಮುಷ್ತಾಕ್ ಅವರು ಮಾತನಾಡಿ, ನಾನು ಇಂದು ನಿಮ್ಮ ಮುಂದೆ ನಿಂತಿರುವುದು ಅಪಾರ ಕೃತಜ್ಞತೆ ಮತ್ತು ವಿನಯದಿಂದ. ನನಗೆ ಇದು ಸುವರ್ಣ ಸಂಭ್ರಮದ ವರ್ಷ ಎಂದು ನೆನಪಿರಲಿಲ್ಲ. ಸಚಿವರಾದ ಶಿವರಾಜ ತಂಗಡಿಯವರು ಹೇಳಿದ ಮೇಲೆ ಇದು ಒಂದು ವಿಶೇಷ ಎನಿಸಿತು. ಜಾಗತಿಕ ಮನ್ನಣೆಗಿಂತ ಹೆಚ್ಚಿನ ಗೌರವ ಮತ್ತು ಪ್ರೀತಿಯನ್ನು ನನ್ನ ಸ್ವಂತ ಕರ್ನಾಟಕ ರಾಜ್ಯದಿಂದ ದೊರಕಿದೆ. ನನ್ನ ತವರು ನೆಲ ನನ್ನ ಆಲೋಚನೆ ಮತ್ತು ಸೃಜನ ಶೀಲತೆಗೆ ಪ್ರೇರಣೆ ನೀಡಿತು. ಬೂಕರ್ ಪ್ರಶಸ್ತಿ ಪಡೆಯುವುದು ನನ್ನ ಕನಸ್ಸಾಗಿತ್ತು. ನಾವು 8 ಜ್ಞಾನಪೀಠ ಪ್ರಶಸ್ತಿಗಳೊಂದಿಗೆ ಒಂದು ಬೂಕರ್ ಪ್ರಶಸಿಯನ್ನು ಪಡೆದಿದ್ದೇವೆ. ಇದು ನಮ್ಮ ಕನ್ನಡಕ್ಕೆ ದಕ್ಕಿರುವ ಸಂಭ್ರಮ. ಎರಡು ಜ್ಞಾನಪೀಠ ಪ್ರಶಸ್ತಿಗೆ ಸುಸ್ತಾಗಿರುವ ಭಾಷೆಯ ದೇಶಗಳನ್ನು ನೋಡಿದ್ದೇವೆ. ಆದರೆ ಕನ್ನಡ ಚಿರ ನೂತನ ಎಂದ ಅವರು, ಪ್ರಶಸ್ತಿ ಪುರಸ್ಕೃತರಿಗೆ ಕರ್ನಾಟಕ ನೀಡಿರುವ ಅದ್ಭುತ ಗೌರವಕ್ಕೆ ಹೃದಯಂತಾರಳದ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.
ಶ್ರೀಮತಿ ದೀಪಾ ಭಾಸ್ತಿ ಅವರು ಮಾತನಾಡಿ ಬೂಕರ್ ಸಿಕ್ಕಿರುವುದರಿಂದ ಕನ್ನಡದ ಹಿರಿಮೆ ಹೆಚ್ಚಾಗಿದೆ. ಅನುವಾದ ಕೃತಿಗೆ ಪ್ರಶಸ್ತಿ ಸಿಕ್ಕಿದೆ ಎನ್ನುವುದಕ್ಕಿಂತಲೂ ಕನ್ನಡದ ಮೂಲಕ್ಕೆ ಕನ್ನಡದ ಸಂಪತ್ತಿಗೆ ಗೌರವ ಸಂದಿದೆ. ಬೂಕರ್ ಪ್ರಶಸ್ತಿಯನ್ನು ಪ್ರತಿಯೊಬ್ಬರು ತಮಗೆ ಸಿಕ್ಕಿರುವಂತೆ ಸಂಭ್ರಮಿಸುತ್ತಿರುವುದನ್ನು ನೋಡಲು ಸಂತೋಷವಾಗುತ್ತಿದೆ ಎಂದರು.
ಸಮಾರಂಭದಲ್ಲಿ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಬಿ.ಝಡ್.ಜಮೀರ್, ವಿಧಾನ ಸಭೆಯ ಮುಖ್ಯ ಸಚೇತಕರಾದ ಅಶೋಕ್ ಮಹದೇವಪ್ಪ ಪಟ್ಟಣ್, ವಿಧಾನಪರಿಷತ್ ಮುಖ್ಯ ಸಚೇತಕ ಸಲೀಂ ಅಹಮದ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಡಾ.ಕೆ.ಗೋವಿಂದರಾಜ್, ನಸೀರ್ ಅಹಮದ್, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ, ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತರಾದ ಉಮಾ ಮಹಾದೇವನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಡಾ.ವೆಂಕಟೇಶ್ ಎಂ.ವಿ, ಹಾಗೂ ಹಿರಿಯ ಮತ್ತು ಕಿರಿಯ ಸಾಹಿತಿಗಳು, ಎದೆಯ ಹಣತೆ ಪ್ರಕಾಶನ ಸಂಸ್ಥೆಯ ಪದಾಧಿಕಾರಿಗಳು ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.
