ಅನ್ನದ ಪ್ರತಿರೋಧ
-1-
ರೈತರ ಚರ್ಮ ಕಿತ್ತು ಬರುವಂತೆ ಹೊಡೆದು ಸುಸ್ತಾದ ಪೋಲೀಸನೊಬ್ಬ
ಬಸಬಸನೆ ವಾಂತಿ ಮಾಡಿಕೊಂಡ.
ಜೀರ್ಣವಾಗದೇ ರಸ್ತೆಗೆ ಬಿದ್ದ ಅನ್ನ ಹೇಳಿತು –
“ನಿನ್ನ ಹೊಟ್ಟೆಯಲ್ಲಿ ಆಹಾರವಾಗುವುದಕ್ಕಿಂತ
ನನ್ನನ್ನು ಬೆಳೆದಾತನ ಪಾದದಡಿ ಗೊಬ್ಬರವಾಗುವುದು ಮೇಲು !"
-2-
ಆತ ಆಜ್ಞಾಪಿಸಿದ
“ಇನ್ನು ಒಂದು ಶಬ್ದ ಹೆಚ್ಚು ಮಾತಾಡಿದರೆ,
ನನ್ನ ಕಾಲು ತೊಳೆದ ನೀರು ನೀನು ಕುಡಿಯಬೇಕಾದೀತು”
ರೈತ ತಣ್ಣಗೆ ಉತ್ತರಿಸಿದ –
“ನಾನು ತುಳಿದ ಮಣ್ಣಲ್ಲಿ ಬೆಳೆದದ್ದನ್ನೇ ನೀನು ಉಣ್ಣುತ್ತಿದ್ದೀಯಾ!”
– 3 –
ಕೊಬ್ಬಿದ ಶ್ರೀಮಂತ ಉದ್ಯಮಿಯೊಬ್ಬ ಉಣ್ಣುವ ಹೊತ್ತು.
“ಫಳಾರ್” ಎಂದು ಕಿಟಕಿಯ ಗಾಜನ್ನು ಒಡೆದು ಒಳನುಗ್ಗಿದ ಕಲ್ಲೊಂದು
ಬೆಳ್ಳಿಯ ಬಟ್ಟಲಲ್ಲಿ ಧೊಪ್ಪನೆ ಬಿತ್ತು. ಹೌಹಾರಿದ ಆತ
“ರೈತನು ಕಲ್ಲೆಸೆಯುತ್ತಿದ್ದಾನೆ ! ಆತನನ್ನು ಗಡೀಪಾರು ಮಾಡಿ” ಎಂದು ಚೀರತೊಡಗಿದ.
ಕಲ್ಲನ್ನು ಮೂಸಿದ ಅನ್ನ ಉತ್ತರಿಸಿತು
“ರೈತನಿಂದ ನಿನ್ನ ಬಟ್ಟಲಲ್ಲಿ ಬಿದ್ದಿರುವುದು ಕಲ್ಲಲ್ಲ, ನಾವು.
ಸಾಧ್ಯವಾದರೆ ನಮ್ಮನ್ನು ಬಟ್ಟಲಿಂದ ಆಚೆ ಹಾಕು!”
-4-
ತೀವೃ ಖಾಯಿಲೆಯಿಂದ ಬಳಲುತ್ತಿದ್ದ ಮುದಿ ರಾಜಕಾರಣಿಯೊಬ್ಬನಿಗೆ ಹಸಿವಾಯಿತು.
ಮೆಲ್ಲನೆ ಹಾಸಿಗೆಯಿಂದ ಎದ್ದು ಬಟ್ಟಲಿಗೆ ಕೈಚಾಚಿದ.
ಅಂದು ರೈತವಿರೋಧಿ ಕಾನೂನುಗಳಿಗೆ
ಆರಾಮಾವಾಗಿ ಸಹಿ ಹಾಕಿದ ಕೈಗಳು
ಇಂದು ಅನ್ನದ ಬಟ್ಟಲನ್ನು ಹಿಡಿಯುವಾಗ ಕಂಪಿಸುತ್ತಿದ್ದವು.
ಇದ್ದಕಿಂದ್ದಂತೆ ಕೈತಪ್ಪಿ ಬಟ್ಟಲು ಕೆಳಗೆ ಬಿತ್ತು.
ನೆಲದಲ್ಲೆಲ್ಲಾ ಚೆಲ್ಲಿದ ಅನ್ನದ ಅಗುಳುಗಳು – ಆತನಿಗೆ
ವರುಷಗಳ ಹಿಂದೆ ರಸ್ತೆಯ ಮೇಲೆ ಪ್ರತಿಭಟಿಸುತ್ತಿದ್ದ ರೈತರಂತೆಯೇ ಕಂಡವು.
-5-
ಪ್ರತಿಭಟಿಸುತ್ತಿದ್ದ ರೈತನ ಕಂಬನಿಯೊಂದು ಜಾರಿ
ಕಲ್ಲಿನ ಮೇಲೆ ಬಿತ್ತು
ಕಲ್ಲು ಮೆಲ್ಲನೆ ಗುನುಗಿತು
“ನಾನು ಅಕ್ಕಿಯ ಕಾಳಾಗುತ್ತಿದ್ದರೆ
ಈ ಹೊತ್ತಿಗೆ ಕಂಬನಿಯ ಬೆಂಕಿಗೆ ಬೆಂದು ಅನ್ನವಾಗುತ್ತಿದ್ದೆ !”
-6-
ಸ್ಟುಡಿಯೋದಲ್ಲಿ ಕುಂತು ರೈತರ ವಿರುದ್ಧ ಗಂಟೆಗಟ್ಟಲೆ ಕಿರುಚಾಡುತ್ತಿದ್ದ ಪತ್ರಕರ್ತನೊಬ್ಬ
ಬಿಡುವಿನ ವೇಳೆಯಲ್ಲಿ ಊಟಕ್ಕೆ ಕುಂತ.
ಬಟ್ಟಲಲ್ಲಿ ನೋಡುತ್ತಾನೆ , ಅನ್ನದ ಬದಲು ಬಂದೂಕಿನ ಬುಲೆಟ್ಟುಗಳು !
ಬಟ್ಟಲು ಗೊಣಗಿತು
“ಕೊಂಚ ಹೊತ್ತಿನ ಮುಂಚೆ ರೈತರನ್ನು ಟೆರರಿಸ್ಟ್ ಗಳೆಂದು ಕಿರುಚಿದ್ದು ನೀನಲ್ಲವೇ ?
ಬಹುಷ ನಿನ್ನ ಬುತ್ತಿಯೊಳಗಿನ ಅನ್ನವು ಅದನ್ನು ಕೇಳಿಸಿಕೊಂಡಿರಬೇಕು !”
-7-
ಪ್ರಭುತ್ವವನ್ನು ಹೊಗಳಿ ಅಟ್ಟಕ್ಕೇರಿಸಿ
ಕವಿತೆ ಬರೆದು ಸನ್ಮಾನಿಸಿಕೊಂಡ ಕವಿ
ಗತ್ತಿನಿಂದ ಮನೆಯೊಳಗೆ ಬಂದ.
ಸಿಕ್ಕಿದ ಬೆಳ್ಳಿಯ ಪಾರಿತೋಷಕವನ್ನು ಮೇಜಿನ ಮೇಲಿಟ್ಟು
ಅದರ ಚೆಂದ ನೋಡುತ್ತಾ ಊಟಕ್ಕೆ ಅಣಿಯಾದ.
ಕೈ ಹಾಕಿದರೆ ಬಟ್ಟಲು ಖಾಲಿ!
“ಅನ್ನವೆಲ್ಲಿ?” ಅರಚಿದ ಆತನಿಗೆ ಖಾಲಿ ಬಟ್ಟಲಿನ ಮೇಲೆ
ಅನ್ನ ಬರೆದ ಸಾಲು ಕಂಡಿತು-
“ನಮ್ಮನ್ನು ಬೆಳೆದವರ ಸಮಸ್ಯೆಗೆ ನೀವು ಸ್ಪಂದಿಸದೇ ಇದ್ದಿದ್ದರಿಂದ
ನಾವೇ ರಸ್ತೆಗಿಳಿದಿದ್ದೇವೆ..
ಸದ್ಯಕ್ಕೆ ಪಾರಿತೋಷಕವನ್ನು ನೆಕ್ಕುತ್ತಾ ನಿಮ್ಮ ಹಸಿವನ್ನು ತಣಿಸಿಕೊಳ್ಳಿ!”
-ವಿಲ್ಸನ್ ಕಟೀಲ್