ಜಲಮೂಲ-ಬೋರ್ವೆಲ್ ಮತ್ತು ಶಕುನ

ಜಲಮೂಲ-ಬೋರ್ವೆಲ್ ಮತ್ತು ಶಕುನ
Spread the love

-ಯಜಮಾನ್

ಯಜಮಾನ ಮಲ್ಲಶೆಟ್ಟಪ್ಪ ಮತ್ತು ಸಿದ್ದಪ್ಪ ಹುಲಿಕಟ್ಟು ಆಡುತ್ತಿದ್ದಾರೆ. ಬಹಳ
ಹೊತ್ತಾದರೂ ಬರೀ ಕಾಯಿ ಜರುಗಿಸುತ್ತಾ, ಬೀಡಿ ಸೇದುತ್ತಾ ಒಂದೂ ಮಾತನಾಡದೆ
ಆಟವನ್ನೇ ದಿಟ್ಟಿಸುತ್ತಿದ್ದ ಮಲ್ಲಶೆಟ್ಟಪ್ಪನನ್ನು ಕುರಿತು, ದೊಡ್ಡಪ್ಪೋ ಯಾಕೆ ಯತೆ
ಇಕ್ಕಂಡಿದ್ದೀಯಾ ಅಂದನು ಸಿದ್ದಪ್ಪ. ತೋಟುತ್ತಾವ ಬೋರು ಹಾಕ್ಸಿದೀನಿ, ಅದೂ ಈ
ಹುಡುಗೂರ ಸಮಾದಾನಕ್ಕೆ, ಬಾವಿ ತುಂಬಾ ನೀರು ಇದ್ದೇ ಇರ್ತಾವಲ್ಲ. ಬೋರು
ಬ್ಯಾಡಾ ಅಂತಾ ಹೇಳ್ದೆ ಕೇಳ್‌ಲಿಲ್ಲ. ನಾವು ಮನೆಗೊಬ್ಬರಂಗೆ ತೊರೆ ದಡದ
ತಲಪರಿಗೆಯಿಂದ ಕಾಲೇವು ಕೆಲಸ ಮಾಡಿ ನೀರು ಹರಿಸ್ದೋರು. ಸುಮ್ನೆ ಜಲವೆಲ್ಲಾ
ಬಗಿಯೋ ಕೆಲ್ಸ್ ಆಗಬಾರ್ದು ಸಿದ್ದಪ್ಪ ಎಂದು ಒಂದೇ ಉಸುರಿಗೆ ಒದರಿದನು.

ಸಾರಿ..ಸಾರಿ..ಸಾರಿ..ಬೋರಾಕ್ಸಿ ಕಾಲ ಆಗೋಯ್ತು ಈಗ ಅದನ್ನ ನೆನೆಸಿಕೊಂಡು ಯತೆ
ಬಿದ್ರೆ ಯಂಗ್ ದೊಡ್ಡಪ್ಪ. ಸುಮ್ನಿರಬಾರ್ದ. ನಿನ್ನ ಕಾಲದಂಗೆ ಎಲ್ಲಾ ನಡಿಯಲ್ಲಾ ಬಿಡು
ಅಂದ ಸಿದ್ದಪ್ಪ.

ಅದಲ್ವೋ ಸಿದ್ದ ನಂಗೀಗ ಯತೆ. ಮತ್ತೇನು ಯಣ್ ನೋಡ್ಬೇಕೆ ನಿಂಗೆ ಅಂದು
ವಾತಾವರಣವನ್ನು ತಮಾಷೆಗೆ ತಿರುಗಿಸುವ ಸಿದ್ದಪ್ಪನ ಪ್ಲಾನ್ ಕೆಲಸ ಮಾಡಲಿಲ್ಲ.
ಕುಶಾಲು ಮಾಡೋಕು ಟೇಮ್ ಇಲ್ಲ ನಿಂಗೆ. ಈ ಹುಡ್ಗೂರು ದಿನ್ನೆಗೂ ಬೋರು ಹಾಕ್ಸು
ಅಂತಾರಲ್ಲಾ ಏನ್ ಹೇಳ್ಬೇಕು ಇವರ ಬುದ್ದೀಗೆ? ಈಗೇನು ಮಾಡಿಯಾ..? ನೋಡಾನ ತಡಿ ಅಂದವನು..ಅಲ್ಲೇ ಅಡ್ಡಾಡುತ್ತಿದ್ದ ಹುಡುಗರಿಗೆ ಕಡ್ಲೇಕಾಯಿ ಉರಿಯಕೇಳ್ರಪಯಾನಿಮ್ಮಜ್ಜಿಗೆ ಎಂದು ಫರ್ಮಾನು ಹೊರಡಿಸಿ ಈಚೆಯ ಜಗುಲಿಗೆ ಬಂದು ಬೀಡಿ ಹಚ್ಚಿದನು.

ತದೇಕಚಿತ್ತದಿಂದ ಬೀಡಿ ಸೇದುತ್ತಾ ಕುಳಿತಿದ್ದ ಮಲ್ಲಶೆಟ್ಟಪ್ಪನ ಕುರಿತು ದೊಡ್ಡಪ್ಪೋ
ಈಗಾ..ಮಾರಮ್ಮನ್ನ ಪತ್ರೆ ಕೇಳು. ಕೊಟ್ರೆ ಹಾಕ್ಸು. ಇಲ್ದಿದ್ರೆ ಇನ್ನೊಂದು ದಪಾ
ನೋಡುದ್ರಾಯ್ತು ಅಂದ ಸಿದ್ದಪ್ಪ. ಆ ಮಾತು ಮಲ್ಲಶೆಟ್ಟಪ್ಪನಿಗೆ ಕೊಂಚ ಸಮಾದಾನ
ತರುವ ವಿಚಾರವಾದರೂ ಇಡೀ ಊರ ಜನ ಒಂದಾಗಿ ತಲಪರಿಗೆಯಿಂದ ತಮ್ಮ ತಮ್ಮ
ಹೊಲಗಳಿಗೆ ನೀರು ಹಾಯಿಸಿಕೊಳ್ಲುತ್ತಿದ್ದದ್ದು, ಒಟ್ಟಿಗೆ ಗಂಗಮ್ಮನ ಪೂಜೆ
ಮಾಡುತ್ತಿದ್ದದ್ದು, ನೀರು ಘಂಟಿ, ತೋಟಿ, ತಳವಾರ, ಗೊಂಚಕಾರ ಎಂದು ಕೆಲಸ
ಹಂಚಿಕೊಳ್ಳುತ್ತಿದ್ದದ್ದು ಪದೇ ಪದೇ ನೆನಪಿಗೆ ಬರುತ್ತಲೇ ಇತ್ತು. ಆಗಲಿ.. ನೋಡಾನ
ಎಂದು ಸಿದ್ದಪ್ಪನನ್ನು ಕಳಿಸಿ ಕೈ-ಕಾಲು ತೊಳೆದು ದೇವರ ಪೂಜೆಗೆ ಕುಳಿತನು.

ಹಿಂದೊಮ್ಮೆ ಗಾಡಿ ಕಟ್ಟಿಕೊಂಡು ಹೋಗುವಾಗ ಬಸ್ಸಿಗೆ ಬೆದರಿ ಓಟ ಕಿತ್ತ ಎತ್ತುಗಳು
ಮಲ್ಲಶೆಟ್ಟಪ್ಪನನ್ನು ಗಾಡಿಯಿಂದ ಕೆಡವಿ ಸೊಂಟ ಊನ ಮಾಡಿದ್ದವು. ಆದ ಕಾರಣ
ಆತನಿಗೆ ದೇವರ ಪೂಜೆಗಾಗಲಿ, ಊಟಕ್ಕಾಗಲಿ ಚಕಳ ಮಕಳ ಹಾಕಿ ಕೂರಲು
ಆಗುತ್ತಿರಲಿಲ್ಲ. ಕುಕ್ಕರಗಾಲಲ್ಲೇ ಕುಳಿತು ಪೂಜೆ ಮುಗಿಸಿ ಉಂಬೋ ಮನೆಗೆ ಬಂದು
ಮುದ್ದೆ-ಹುಣುಸೆ ಚಿಗುರಿನ ಸಾರು ಉಂಡು ಹಜಾರಕ್ಕೆ ಬಂದನು.
ಗಂಗಮ್ಮಜ್ಜಿ ಉರಿದ ಜೋಳಕ್ಕೆ ಖಾರ ಸೋಕಿಸಿ ತಗೊಳೋ ಪಾಪ..ತಾತಗೆ ಉಂಡ
ಬಾಯಿಗೆ ಕೊಡು ಎಂದು ಮೊರದಲ್ಲಿ ತುಂಬಿ ತಿಪ್ಪೇಶಿಗೆ ಕೊಟ್ಟಳು. ಜೋಳ ತಿನ್ನುತ್ತಾ..
ಸಿದ್ದಪ್ಪನ ಸಲಹೆ ಒಂದು ಕಡೆ-ತಾನೂ ತನ್ನೂರ ಜನವೆಲ್ಲಾ ಸೇರಿ ಕೃಷಿ ಮಾಡುತ್ತಿದ್ದದ್ದು.
ನೀರಿನ ಮೂಲದ ವಿಚಾರ ತಲೆ ಕೆಡಿಸಿಕೊಂಡು ದೂರದ ದಿನ್ನೆಯ ಕಡೆ ದೃಷ್ಟಿ ನೆಟ್ಟು
ಕುಳಿತನು.

ಮಲ್ಲಶೆಟ್ಟಪ್ಪನ ಮಕ್ಕಳಾದ ಮಲ್ಲಣ್ಣ ಮತ್ತು ಸೋಮಣ್ಣ ಅವರ ಬೇಡಿಕೆಯಾದ ದಿನ್ನೆಗೆ
ಬೋರು ಹಾಕಿಸುವ ಘಳಿಗೆ ಹತ್ತಿರಕ್ಕೆ ಬಂದಿದೆ. ಕಡ್ಡಿ ಹಿಡಿದು, ತೆಂಗಿನಕಾಯಿ ಹಿಡಿದು
ಜಲಮೂಲ ಹುಡುಕುವ ಅಂತರ್ಜಲ ತಜ್ಞರು ಕೆಲವರ ಸಲಹೆಯಂತೆ ಬೋರಿಗೆ
ಪಾಯಿಂಟ್ ಮಾಡಿಸಲಾಯಿತು.

ವರ್ಷಕ್ಕೆ ಎರಡಾವರ್ತಿ ದುಡ್ಡು ಎಣಿಸಿ ಬೀರಿಗೆ ತುಂಬಿ ಸೊಂಟಕ್ಕೆ ಕೀಲಿ
ಜೋತುಬಿಟ್ಟುಕೊಳ್ಳುತ್ತಿದ್ದ ಮಲ್ಲಶೆಟ್ಟಪ್ಪ ಬೋರು ಲಾರಿ ತರಿಸುವ ಮುನ್ನ ಅನೇಕ ಸಾರಿ
ಬೀರಿನ ಬಾಗಿಲು ತೆಗೆದು ದುಡ್ಡು ಎಣಿಸಿ, ಎಣಿಸಿ ಇಟ್ಟಿದ್ದನು. ಮಲ್ಲಶೆಟ್ಟಪ್ಪ ನೋಡಿದ್ದ
ಅತಿ ದೊಡ್ಡ ನೋಟು ನೂರು ರೂಪಾಯಿ. ಆ ನೋಟುಗಳನ್ನು ಒಂದರ ಪಕ್ಕದಲ್ಲೊಂದು
ಇಟ್ಟು ಒಂದು..ಎರಡು..ಮೂರು..ಎಂದು ಎಣಿಸುತ್ತಿದ್ದದ್ದು-ನೀಟಾಗಿ ಜೋಡಿಸಿಡುತ್ತಿದ್ದದ್ದು
ಆತನಿಗೆ ಹಣದ ಮೇಲಿದ್ದ ಗೌರವಾದಿ ವ್ಯಾಮೋಹಗಳನ್ನು ತೋರಿಸುತ್ತಿತ್ತು.

ಇನ್ನೇನು ಬೋರು ಕೊರೆಸುವ ದಿನ ಹತ್ತಿರಕ್ಕೆ ಬಂತು. ಹಿಂದಿನ ದಿನ ಬೈಗಿಂದ
ತೋಟದಿಂದ ಹೊರಡುವ ಮುನ್ನ ಎಳೆಯ ಅಗ್ರದೆಲೆ ಕುಯ್ದು ಸುರುಳಿ ಮಾಡಿಕೊಂಡು
ಅದರ ತುಂಬಾ ಲಕ್ಕಿ ಪತ್ರೆ ಬಿಡಿಸಿ ತಂದಿದ್ದಾನೆ. ಲಕ್ಕಿ ಪತ್ರೆ ತೋಟದ ಹಿಂಬಾಗಕ್ಕೆ
ನೆಟ್ಟಿದ್ದರು. ನಾಲ್ಕೈದು ತೋಟದವರು ಅದೇ ಹಾದಿಯಲ್ಲಿ ಹೋಗಬೇಕಿತ್ತು. ಅವರಿಗೆಲ್ಲಾ
ಪತ್ರೆ ಒದಗಿಸುತ್ತಿದ್ದ ಪುಷ್ಕಳವಾದ ಪತ್ರೆ ಅಲ್ಲಿ ಬೆಳೆದಿತ್ತು.

ಪೂಜೆ ಮುಗಿಸಿ ಸೋಮಣ್ಣನನ್ನು ಗೌರಿಬಿದನೂರಿಗೆ ಬೋರು ಲಾರಿ ತರಲು ಕಳುಹಿಸಿದ
ಮಲ್ಲಶೆಟ್ಟಪ್ಪ ಹೊಲ-ಮನೆ ಎಂದು ಒಂದೇ ಸಮ ತಿರುಗಾಡುತ್ತಿದ್ದ. ಊರು ತಟಾಯ್ದು
ಎರಡು ಮೈಲಿ ಹೋಗುವಷ್ಟರಲ್ಲಿ ಸೋಮಣ್ಣನ ಸೈಕಲ್ಲಿಗೆ ಎದುರಾಗಿ ನಾಗರ
ಹಾವೊಂದು ಅಡ್ಡ ಬಂದಿದೆ. ಶಕುನದ ಬಗ್ಗೆ ಅರ್ಧ ನಂಬಿಕೆ ಅರ್ಧ ಅಪನಂಬಿಕೆ ಇರುವ
ಸೋಮಣ್ಣ ಚಣಕಾಲ ನಿಂತು ಮುಂದೆ ಹೋಗುತ್ತಾನೆ. ಬೋರ ಲಾರಿಯೂ ಹೊಲಕ್ಕೆ ಬಂದಾಯಿತು. ಸೋಮಣ್ಣ ತನಗಾದ ಅಪಶಕುನದ ಬಗ್ಗೆ ಹೇಳಲಿಲ್ಲ. ಮೊದಲೇ ಒಲ್ಲದ ಮನಸ್ಸಿನಿಂದ ಬೋರು ಕೊರೆಸಲು ಒಪ್ಪಿರುವ ಮಲ್ಲಶೆಟ್ಟಪ್ಪ ತಿರುಗಿ ರಾಗ
ಬದಲಿಸಿಯಾನು ಎಂಬ ಆತಂಕ. ಮನೆಯ ಹಿರಿಯ ಸೊಸೆ ರತ್ನಮ್ಮ ಬೋರ ಲಾರಿಗೆ
ಪೂಜೆ ಮಾಡಿ ಎಲ್ಲರಿಗೂ ತೀರ್ಥ ಪ್ರೋಕ್ಷಣೆ ಮಾಡಿದಳು. ನೆರಿದಿದ್ದವರು ಹರ ಹರ
ಮಹದೇವ್ ಎನ್ನಲಾಗಿ ಬೋರ್ ಲಾರಿ ತನ್ನ ಕಾಯಕ ಆರಂಭಿಸಿತು.

ಲಾರಿಯ ಮಗ್ಗುಲಲ್ಲೇ ಕುಕ್ಕರಗಾಲಲ್ಲಿ ಕೂತ ಮಲ್ಲಶೆಟ್ಟಪ್ಪ ಭೂಗರ್ಬದಿಂದ ಬರುವ ಬಣ್ಣ
ಬಣ್ಣದ ಮಣ್ಣನ್ನು ಹಿಚುಕಿ..ಹಿಚುಕಿ ನೋಡುತ್ತಿದ್ದಾನೆ. ಏನ್ ದೊಡ್ಡಪ್ಪ ಮಣ್ ನೋಡ್ತೀಯ,
ನೀರು ಸಿಕ್ತಾವೆ ಅಲ್ವೆ? ಎಂದು ಸಿದ್ದಪ್ಪ ಕೇಳುತ್ತಾನೆ. ಮಲ್ಲಶೆಟ್ಟಪ್ಪನಿಗೆ ನೀರು
ಬೀಳ್ತಾವೋ ಇಲ್ವೋ ಆತಂಕ, ಮಾತು ಹೊರಡುತ್ತಿಲ್ಲ. ಅಷ್ಟರಲ್ಲಿ ದಡುಂ..ದಡುಂ..ಸದ್ದು,
ಬಂಡೆ ಸಿಕ್ಕಿದೆ. ಬಿಳಿ ಪುಡಿ ಮೇಲೆ ಹಾರುತ್ತಿದೆ. ಇನ್ನೇನು ನೀರು ಸಿಕ್ಕಲ್ಲ ಅಂತಾ
ಕೆಲವರು. ಬಂಡೆ ತಟಾಯ್ದ ಮೇಲೆ ಕಿತ್ಕಂಡು ಬತ್ತಾವೆ ನೀರು ನೋಡಣ್ಣಾ., ಅಂತಾ
ಹಲವರು, ಹೀಗೆ ಒಬ್ಬೊಬ್ಬರೂ ಅವರಿಗೆ ತೋಚಿದಂತೆ ಮಾತನಾಡುತ್ತಿದ್ದಾರೆ.
ಮಲ್ಲಶೆಟ್ಟಪ್ಪ ಮಾತ್ರ ಬೆಪ್ಪಾಗಿ ಕುಳಿತೇ ಇದ್ದಾನೆ. ನೀರು ಸಿಗಲ್ಲಾ ಅಂದಾಯ್ತು.
ಸೋಮಣ್ಣನಿಗೆ ಕಕರು ಮಕರು. ಯಾರಿಗೂ ಹೇಳದೇ ಇದ್ದ ಅಪಶಕುನ ಮತ್ತೆ ಮತ್ತೆ
ಕಾಡುತ್ತಿದೆ. ಲಾರಿಯವನು ವಕಾರ್ ರ…ವಾಡ ಇಂಗ.. ಎಂದು ಆ ಊರಿನವರಿಗೆ ಏನೂ
ಅರ್ಥವಾಗದ ಭಾಷೆಯಲ್ಲಿ ಮಾತನಾಡುತ್ತಾ ಅಲ್ಲಿಂದ ಜಾಗ ಕಾಲಿ ಮಾಡಲು
ಮುಂದಾಗಿದ್ದಾನೆ. ಸಣ್ಣಗೆ ಒಂದೊಂದೇ ನೋಟು ಎಣಿಸಿ ಮುಂಗಡ ಹಣ
ಮುರಿದುಕೊಂಡು ಉಳಿಕೆ ಹಣವನ್ನು ತಾಂಬೂಲದಲ್ಲಿಟ್ಟು ಕೊಟ್ಟು ಕೈಮುಗಿದು ನಡೀರಪ್ಪ
ಎಂದು ಬೋರುಲಾರಿಯವರನ್ನು ಕಳಿಸಿದ ಸೋಮಣ್ಣ ಒತ್ತರಿಸಿ ಬರುತ್ತಿದ್ದ ಸಂಕಟ
ನುಂಗಿ ಮನೆಕಡೆ ಕಾಲುಬೆಳೆಸಿದ.


Spread the love