ಸಿರಿಧಾನ್ಯದ “ಸಿರಿ” ಜಾನುವಾರುಗಳಿಗೂ ಸಿಗಲಿ

ಸಿರಿಧಾನ್ಯದ “ಸಿರಿ” ಜಾನುವಾರುಗಳಿಗೂ ಸಿಗಲಿ
Spread the love

ಮಲ್ಲಿಕಾರ್ಜುನ ಹೊಸಪಾಳ್ಯ

ಅತ್ಯಂತ ಕಡಿಮೆ ಮಳೆಯಲ್ಲಿ ಬೆಳೆಯುವ, ಕೀಟ-ರೋಗಗಳ ಬಾಧೆಯಿಲ್ಲದ, ತನ್ನೊಡನೆ ಹತ್ತಾರು
ಬೆಳೆಗಳನ್ನು ಬೆಳೆಯಲು ಅವಕಾಶ ಮಾಡಿಕೊಡುವ ಸಿರಿಧಾನ್ಯಗಳು ಅತ್ಯಂತ ಕಡಿಮೆ ಫಲವತ್ತಾದ
ಭೂಮಿಯಲ್ಲಿಯೂ ಚಿಗುರೊಡೆಯಬಲ್ಲವು. ಹವಾಮಾನದ ಏರುಪೇರುಗಳನ್ನು ಸಮರ್ಥವಾಗಿ
ಎದುರಿಸಬಲ್ಲ ಇವು ಪೌಷ್ಟಿಕ ಆಹಾರವೂ ಹೌದು, ಉತ್ತಮ ಮೇವೂ ಹೌದು.

ಈಗ ಎಲ್ಲಿ ನೋಡೊದರೂ ಸಿರಿಧಾನ್ಯಗಳದ್ದೇ ಮಾತು. ವಿಚಾರ ಸಂಕಿರಣಗಳು, ಮೇಳಗಳು,
ಭಾಷಣಗಳು, ಪತ್ರಿಕಾ ಅಂಕಣಗಳು, ಪ್ರಕಟಣೆಗಳು ಮುಂತಾದ ವೈವಿಧ್ಯಮಯ ಚಟುವಟಿಕೆಗಳನ್ನು
ಸರ್ಕಾರ, ಸಂಘಸಂಸ್ಥೆಗಳು, ಸ್ವಯಂ ಸೇವಾ ಸಂಸ್ಥೆಗಳು ಮಾಡುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ
ಆರೋಗ್ಯದಲ್ಲಾದ ಏರು-ಪೇರು, ಅದರಲ್ಲಿಯೂ ನಗರ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಮಧುಮೇಹ,
ಬೊಜ್ಜು ಮುಂತಾದ ಕಾರಣಗಳಿಂದ ಸಿರಿಧಾನ್ಯಗಳಿಗೆ ಇನ್ನಿಲ್ಲದ ಬೇಡಿಕೆ ಬಂದಿದೆ. ಕೆಲವೇ ವರ್ಷಗಳ
ಹಿಂದೆ ಬೆರಳೆಣಿಕೆಯಷ್ಟು ಅಂಗಡಿಗಳಲ್ಲಿ-ಅದರಲ್ಲಿಯೂ ಸಾವಯವ ಅಂಗಡಿಗಳಲ್ಲಿ ಮಾತ್ರ ಸಿಗುತ್ತಿದ್ದ
ಇವು ಇಂದು ಬಹುತೇಕ ಕಡೆ ಲಭ್ಯವಿವೆ.

ಇದು ಒಳ್ಳೆಯ ಲಕ್ಷಣ, ಆದರೆ ಸಿರಿಧಾನ್ಯಗಳನ್ನು ಕೇವಲ ಆಹಾರ ದೃಷ್ಟಿಯಿಂದ ಮಾತ್ರ
ಪ್ರಚಾರಪಡಿಸುವ ಭರದಲ್ಲಿ ಅವುಗಳ ಮತ್ತೊಂದು ಪ್ರಮುಖ ಉಪಯೋಗವನ್ನು
ಕಡೆಗಣಿಸಲಾಗುತ್ತಿದೆ, ಅದೇನೆಂದರೆ ಸಿರಿಧಾನ್ಯಗಳ ಮೇವಿನ ಬಳಕೆ. ಈ ದೃಷ್ಟಿಯಿಂದ
ಯೋಚಿಸುತ್ತಿರುವವರು ತುಂಬಾ ಕಡಿಮೆ. ನೆನಪಿಟ್ಟುಕೊಳ್ಳಿ ಉತ್ಕೃಷ್ಟ ನಾರಿನಂಶವುಳ್ಳ ಸಿರಿಧಾನ್ಯ

ಅಕ್ಕಿ ಹೇಗೆ ಮನುಷ್ಯರ ಆರೋಗ್ಯಕ್ಕೆ ಪೂರಕವೋ ಜಾನುವಾರುಗಳ ಮೇವಾಗಿಯೂ ಅಷ್ಟೇ
ಉಪಯುಕ್ತ.

ಕುರಿಗಾರರ ಕೈಹಿಡಿದ ಕೊರಲೆ

ಕೇವಲ 60 ದಿವಸಗಳಿಗೆ ಮೇವು ಕೊಡುವ ಕೊರಲೆಯಂತೂ ಇಂದಿಗೂ ತುಮಕೂರು ಜಿಲ್ಲೆಯ ಶಿರಾ,
ಮಧುಗಿರಿ, ಪಾವಗಡ, ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ, ಹಿರಿಯೂರು ಇತ್ಯಾದಿ ತಾಲ್ಲೊಕುಗಳಲ್ಲಿ
ಕುರಿಗಾರರ ಮೆಚ್ಚಿನ ಮೇವು. ಅವರ ಬದುಕು ಕುರಿಗಳ ಸಾಕಾಣಿಕೆ ಮತ್ತು ಮಾರಾಟದ ಮೇಲೆ
ಅವಲಂಬಿತವಾಗಿದ್ದರೆ, ಕುರಿಗಳ ಬದುಕು ಕೊರಲೆ ಮೇವನ್ನೇ ಅವಲಂಬಿಸಿದೆ. ಈ ಭಾಗದಲ್ಲಿ
ಇಂದಿಗೂ ಕೊರಲೆ ಜೀವಂತವಾಗಿದ್ದರೆ ಅದಕ್ಕೆ ಕುರಿಗಳೇ ಕಾರಣ.

ಚಳ್ಳಕೆರೆ ತಾಲ್ಲೂಕು ದೇವರಮರಿಕುಂಟೆಯ ಸದಾನಂದ್-ಸುಧಾ ದಂಪತಿಗಳು ಒಂದು ತಿಂಗಳು
ವಯಸ್ಸಿನ ನಾಲ್ಕೈದು ಕುರಿಮರಿಗಳನ್ನು ತರುತ್ತಾರೆ. ಸಾಮಾನ್ಯವಾಗಿ ಒಂದೂವರೆಯಿಂದ ಎರಡು
ಸಾವಿರ ಬೆಲೆ ಕೊಟ್ಟು ತರುವುದು ರೂಢಿ. ನಾಲ್ಕೈದು ತಿಂಗಳು ಸಾಕಾಣಿಕೆ ಮಾಡಿ 5 ರಿಂದ 6
ಸಾವಿರಕ್ಕೊಂದರಂತೆ ಮಾರಾಟ ಮಾಡುತ್ತಾರೆ. ವರ್ಷವಿಡೀ ಇದೇ ಇವರ ಉಪಕಸುಬು. ಮನೆಯ
ಬಳಿಯೇ ಕಟ್ಟಿ ಮೇಯಿಸುತ್ತಾರೆ, ಹಾಗೆ ಮೇಯಿಸಲು ಇವರು ಬಳಸುವ ಪ್ರಮುಖ ಮೇವು ಕೊರಲೆ
ಹುಲ್ಲು. ಈ ತಾಲ್ಲೂಕಿನ ಬಹುತೇಕ ಕಡೆ ಈ ಸಂಪ್ರದಾಯವನ್ನು ಕಾಣಬಹುದು. ಕುರಿಮರಿಗಳ
ಮೇವಿಗಾಗಿಯೇ ಇಲ್ಲಿ ಕೊರಲೆ ಬೆಳೆಯಲಾಗುತ್ತಿದೆ.

ಇತ್ತೀಚಿನ ವರ್ಷಗಳಲ್ಲಿ ಕುರಿಗಳನ್ನು ಮನೆಯಲ್ಲಿ ಕಟ್ಟಿ ಮೇಯಿಸುವ ಪರಿಪಾಠ ಬೆಳೆಯುತ್ತಿದೆ.
ಕುರಿಗಳಿಗೆ ಕೊರಲೆ ಅಚ್ಚುಮೆಚ್ಚಿನ ಆಹಾರ. ಅದರಲ್ಲೂ ಮಾರಾಟದ ಉದ್ದೇಶಕ್ಕಾಗಿ ಮೇಯಿಸುವ
ಕುರಿಗಳು ಕಡಿಮೆ ಅವಧಿಯಲ್ಲಿ ದಷ್ಟ-ಪುಷ್ಟವಾಗಿ ಬೆಳೆಯಲು ಕೊರಲೆ ಹುಲ್ಲೇ ಅತ್ಯುತ್ತಮ. ಕಾಳು
ಕಟ್ಟುವ ಮೊದಲೇ ಕತ್ತರಿಸಿ ಕುರಿಗಳಿಗೆ ಹಾಕುತ್ತಾರೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನಹಲವಾರು ರೈತರು
ಈ ಪದ್ಧತಿ ಅನುಸರಿಸುವುದನ್ನು ಕಾಣಬಹುದು. ಕಡಿಮೆ ವೆಚ್ಚ. ಸ್ವಲ್ಪವೇ ನೀರು ಸಾಕು.

ತುಮಕೂರು ತಾಲ್ಲೂಕು ಮಣಿವಿನಕುರಿಕೆ ಮಂಜಣ್ಣನವರ ಪ್ರಕಾರ ಕೊರಲೆ ಹುಲ್ಲು ಕರಾವಿನ
ರಾಸುಗಳಿಗೆ ಅತ್ಯುತ್ತಮವಾದುದು. ಮನುಷ್ಯರಿಗೆ ಕೊರಲೆ ರೊಟ್ಟಿ ಹೇಗೆ ಇಷ್ಟವೋ ಹಾಗೆಯೇ
ರಾಸುಗಳಿಗೆ ಕೊರಲು ಹುಲ್ಲು ಬಲು ಇಷ್ಟ ಎನ್ನುತ್ತಾರೆ ಅವರು. ಎಷ್ಟೊ ರೈತರು ಬರೀ
ಮೇವಿಗಾಗಿಯೇ ಕೊರಲೆ ಬೆಳೆಯುವುದೂ ಉಂಟು. ಕಾಳು ಬೇರ್ಪಡಿಸಿದ ಒಣ ಹುಲ್ಲನ್ನೂ ಸಹ
ರೈತರು ಜತನದಿಂದ ಕಾಪಾಡುತ್ತಾರೆ. ಕೆಲವರು ಅದನ್ನೇ ಪ್ರತ್ಯೇಕ ಬಣವೆ ಹಾಕಿ ಬಳಸುವುದೂ
ಉಂಟು. ಬೇರೆ ಯಾವ ಹುಲ್ಲೂ ಸಹ ಇಷ್ಟು ಮೃದುವಾಗಿರುವುದಿಲ್ಲ. ಕಟಾವಾದ ನಂತರ ಮಳೆಗೆ
ಸಿಕ್ಕರೆ ಮೇವಿನ ಗುಣ ಹಾಳಾಗುತ್ತದೆ. ಆದ್ದರಿಂದ ರೈತರು ಮಳೆ ನೋಡಿಕೊಂಡು ಕಣಕ್ಕೆ ಹಾಕಿ
ಒಕ್ಕಣೆ ಮಾಡುತ್ತಾರೆ.

ಕೊರಲೆಯು ಕಡಿಮೆ ಫಲವತ್ತತೆಯ ಭೂಮಿಯಲ್ಲೂ ಬೆಳೆಯಬಲ್ಲದು, ನೆರಳಿನಲ್ಲಿಯೂ ಬೆಳೆಯುವ
ವಿಶಿಷ್ಟ ಗುಣ ಅದಕ್ಕಿದೆ. ಹಾಗಾಗಿ ಕಡಿಮೆ ವೆಚ್ಚದಲ್ಲಿಯೇ ಮೇವಿನ ಸಮಸ್ಯೆಗೆ ಪರಿಹಾರ
ಕಂಡುಕೊಳ್ಳಬಹುದು.

ಹಾರಕದ ದ್ವಿಪಾತ್ರಾಭಿನಯ

120 ರಿಂದ 140 ದಿವಸಗಳ ಧೀರ್ಘಾವಧಿ ಬೆಳೆಯಾದ ಹಾರಕವೂ ಮೇವಿನ ಸಮಸ್ಯೆ ತೀರಿಸುತ್ತಿರುವ
ಮತ್ತೊಂದು ಪ್ರಮುಖ ಸಿರಿಧಾನ್ಯ. ಕೊರಲೆಯನ್ನು ಹಸಿ ಮೇವಾಗಿ ಬಳಸಿದರೆ ಕಾಳು ಸಿಗುವುದಿಲ್ಲ.
ಆದರೆ ಹಾರಕ ಕಾಳೂ ಕೊಡುತ್ತದೆ, ಹಸಿ ಮೇವನ್ನೂ ಕೊಡುತ್ತದೆ. ಬೇರೆ ಯಾವ ಸಿರಿಧಾನ್ಯಗಳಿಗೂ
ಇಲ್ಲದ ಗುಣವೊಂದು ಹಾರಕಕ್ಕಿರುವುದೇ ಇದಕ್ಕೆ ಕಾರಣ.

ಹಾರಕವನ್ನು ಬಿತ್ತಿದ ಒಂದು ತಿಂಗಳ ನಂತರ ದನ ಅಥವಾ ಕುರಿಗಳಿಂದ ಬುಡದವರೆಗೂ
ಮೇಯಿಸುತ್ತಾರೆ. ಈ ಪದ್ಧತಿ ಹಾರಕ ಬೆಳೆಯುವ ಬಹುತೇಕ ಕಡೆ ಚಾಲ್ತಿಯಲ್ಲಿದೆ. ಇದರಿಂದ ಹಾರಕದ
ತೆಂಡೆ ಹೊಡೆಯುವ ಸಾವ್ಮರ್ಥ್ಯ ಹೆಚ್ಚುತ್ತದೆ. ‘ಶೇವಿಂಗ್ ಮಾಡದಂಗೆ ನುಣ್ಣಗೆ ಮೇಯಿಸ್ಬೇಕು,
ಇಲ್ದಿದ್ರೆ ತೆಂಡೆ ಕೀಳಲ್ಲ’ ಎನ್ನುತ್ತಾರೆ ಚಿಕ್ಕನಾಯಕನಹಳ್ಳಿ ತಾಲ್ಲೂಕು ಗೋಪಾಲನಹಳ್ಳಿಯ ರೈತ
ಶಂಕರಲಿಂಗಪ್ಪ.

ರಾಗಿ ಹೊಲವನ್ನು ಬೆಳವಣಿಗೆ ಹಂತದಲ್ಲಿ ಗರಿ ಮೇಯಿಸುವ ಪದ್ಧತಿ ರೂಢಿಯಲ್ಲಿದೆ. ಆದರೆ
ಬುಡದವರೆಗೂ ಮೇಯಿಸುವುದು ಹಾರಕವನ್ನು ಮಾತ್ರ. ದನಗಳನ್ನು ಹಾರಕದ ಹೊಲದಲ್ಲಿ ಕಟ್ಟಿ
ಹಾಕಿ ಮೇಯಿಸುವುದನ್ನೂ ಕಾಣಬಹುದು.

ಹಾರಕ ಮೇಯಿಸುವ ಹಂತದಲ್ಲಿ ತೇವ ಇರಬಾರದು. ಇದ್ದರೆ ಬೇರು ಕಿತ್ತು ಬರುತ್ತದೆ. ಮೇಯಿಸಿದ
ನಂತರ ಅಚ್ಚರಿಯಾಗುವಂತೆ ಚಿಗುರಿ ಹುಲುಸಾಗಿ ಬೆಳೆಯತೊಡಗಿ ತೆಂಡೆ ಹೊಡೆಯುತ್ತದೆ.
ಮೇಯಿಸದಿದ್ದರೆ ಹುಲುಸಾಗಿ ಬೆಳೆಯುವುದಿಲ್ಲ. ‘ಇದನ್ನ ನೋಡೇ ನಾವು ಹಾರ್ಕ ಎರಡು ಸಲ ಮೇವು
ಕೊಡುತ್ತೆ ಅಂತಿವಿ’ ಎನ್ನುತ್ತಾರೆ ಗೋಪಾಲನಹಳ್ಳಿಯ ಮತ್ತೊಬ್ಬ ರೈತ ಆತ್ಮಾನಂದ. ಹೆಚ್ಚು
ದನಗಳಿರುವವರಿಗೆ ಇದು ತುಂಬಾ ಅನುಕೂಲಕರ. ಬೆಳವಣಿಗೆ ಹಂತದಲ್ಲಿ ಹಸಿ ಮೇವು, ಕಟಾವಾದ
ಮೇಲೆ ಒಣ ಮೇವು ಕೊಡುವುದು ಹಾರಕದ ಹೆಗ್ಗಳಿಕೆ. ‘ರಾಗಿ ಬಿತ್ತನೆ ಹೊತ್ತಿಗೆ ಹಾರಕ ಬುಡ
ಮೇಯಿಸುವ ಹಂತಕ್ಕೆ ಬಂದಿರುತ್ತದೆ. ರಾಗಿ ಬಿತ್ತಿ ಸುಸ್ತಾದ ಎತ್ತುಗಳನ್ನು ಹಾರಕದ ಹೊಲಕ್ಕೆ ಕಟ್ಟಿ
ಮೇಯಿಸುವುದರಿಂದ ಅವಕ್ಕೆ ತುಂಬಾ ಪುಷ್ಟಿ ಬರುತ್ತಿತ್ತು, ಮೇವಿನ ಚಿಂತೆಯೂ ನೀಗುತ್ತಿತ್ತು’ ಎಂದು
ನೆನಪಿಸಿಕೊಳ್ಳುತ್ತಾರೆ ಇದೇ ಗ್ರಾಮದ ಬೈರಣ್ಣ.

ಹಾರಕವನ್ನು ಮೇಯಿಸಬೇಕಾಗಿರುವುದರಿಂದಲೇ ಅದರ ಜೊತೆ ಯಾವ ಬೆಳೆಯನ್ನೂ ಅಕ್ಕಡಿಯಾಗಿ
ಬಿತ್ತುವುದಿಲ್ಲ. ಯಾಕೆಂದರೆ ಅಕ್ಕಡಿ ಬೆಳೆಗಳನ್ನು ದನಗಳು ಒಮ್ಮೆ ತಿಂದರೆ ಅವು ಮತ್ತೆ

ಬೆಳೆಯುವುದಿಲ್ಲ. ಒಂದು ವೇಳೆ ಅಕ್ಕಡಿ ಬೆಳೆ ಇದ್ದಾಗ ದನಗಳನ್ನು ಕೈಯಲ್ಲಿ ಹಿಡಿದು ನಿಗಾವಹಿಸಿ
ಮೇಯಿಸಬೇಕು.

ಮತ್ತೊಂದು ಸಿರಿಧಾನ್ಯವಾದ ಸಜ್ಜೆಯನ್ನು ಸಾಂಪ್ರದಾಯಿಕವಾಗಿಯೇ ಮೇವಿಗೆ ಬಳಸುವ ಪದ್ಧತಿ
ಇದೆ. ಅದರಲ್ಲೂ ತಮಿಳುನಾಡಿನಲ್ಲಿ ಹೆಚ್ಚಾಗಿ ಇದನ್ನು ಕಾಣಬಹುದು. ಹಸಿ ಮೇವು ಹಾಗೂ ಒಣ
ಮೇವಾಗಿ ಬಳಸಲಾಗುತ್ತದೆ. ಹಾಲು ಹಿಂಡುವ ರಾಸುಗಳಿಗೆ ಸಜ್ಜೆ ಮೇವು ಉತ್ತಮ. ಬದುಗಳು
ಹಾಗೂ ಸಾಲು ಬೆಳೆಯಾಗಿ ಹಾಕಬಹುದು.

ಇನ್ನು ಇತರೆ ಸಿರಿಧಾನ್ಯಗಳಾದ ಸಾವೆ, ನವಣೆ, ಬರಗು ಮುಂತಾದುವು ಹಸಿ ಮೇವಾಗಿ ಅಷ್ಟು
ಬಳಕೆಯಲ್ಲಿಲ್ಲ. ಪ್ರಯೋಗಿ ರೈತರು ಈ ನಿಟ್ಟಿನಲ್ಲಿಯೂ ಬಳಸಿ ಪರೀಕ್ಷಿಸಬಹುದು. ಆದರೆ ಒಕ್ಕಣೆ
ನಂತರ ಇವುಗಳ ಮೇವನ್ನು ಜಾನುವಾರುಗಳು ಕಡ್ಲೆ ಪುರಿ ಸವಿದಂತೆ ಸವಿದು ತಿನ್ನುತ್ತವೆ. ಒಂದು
ಎಚ್ಚರಿಕೆ ಏನೆಂದರೆ ಟ್ರಾಕ್ಟರ್ ಬಳಸಿ ಒಕ್ಕಿದರೆ ಮೇವು ಪುಡಿಯಾಗುತ್ತದೆ. ಹಾಗಾಗಿ ಆದಷ್ಟೂ
ದನಗಳಿಂದ ಒಕ್ಕಲೆ ತುಳಿಸಬೇಕು. ಆಗ ಮೇವು ವ್ಯರ್ಥವಾಗುವುದಿಲ್ಲ.

ಮನುಷ್ಯರಷ್ಟೇ ಸಿರಿಧಾನ್ಯಗಳನ್ನು ತಿಂದು ಆರೋಗ್ಯ ಸುಧಾರಿಸಿಕೊಳ್ಳುವುದು ಬೇಡ,
ಜಾನುವಾರುಗಳಿಗೂ ಆ ಸಿರಿ ದೊರೆಯಲಿ.


Spread the love