ಡಾ.ವಡ್ಡಗೆರೆ ನಾಗರಾಜಯ್ಯ
ನಮ್ಮ ಜನಪದರ ನಂಬಿಕೆಯ ಪ್ರಕಾರ ಚಂದ್ರನಿಗೆ ಮದುವೆ ಮಾಡಿಕೊಳ್ಳುವ
ಆಸೆಯಾಗುತ್ತದೆ. ಹೆಣ್ಣು ಕೇಳಲೆಂದು ಅಮಾವಾಸ್ಯೆ ಕಳೆದ ಮೇಲೆ ಹೆಣ್ಣಿನವರ ಮನೆಗೆ
ನಗುನಗುತ್ತಾ ಹೋಗುತ್ತಾನೆ. "ನೀನಿನ್ನೂ ಎಳೆ ಹುಡುಗ, ನಿನಗೆ ಹೆಣ್ಣಿಲ್ಲ" ಎಂದು
ವಾಪಸ್ ಕಳಿಸುತ್ತಾರೆ. ಹುಣ್ಣಿಮೆ ಸಮೀಪಿಸಿದಾಗ ಮತ್ತೆ ಹೆಣ್ಣಿನವರ ಮನೆಗೆ ಹೆಣ್ಣಿಗೆಂದು
ನಗುತ್ತಲೇ ಹೋಗುತ್ತಾನೆ. "ನೀನು ಮುದುಕನಾಗಿರುವೆ. ನಿನಗೆ ನಮ್ಮಲ್ಲಿ ಹೆಣ್ಣಿಲ್ಲ"
ಎನ್ನುತ್ತಾರೆ. ಚಂದ್ರನಿಗೆ ಎಲ್ಲಿಯೂ ಹೆಣ್ಣು ಸಿಗದೆ ಮುಖ ಕಪ್ಪಾಗಿ ಅಮಾವಾಸ್ಯೆಯ
ಕತ್ತಲಾಗುತ್ತದೆ. ಮತ್ತೆಂದೂ ಅವನು ಹೆಣ್ಣು ಕೇಳದೆ ಅವಿವಾಹಿತನಾಗಿಯೇ
ಉಳಿಯಬೇಕಾಯಿತು. ಇದರಿಂದ ಸ್ವಲವೂ ನಿರಾಶನಾಗದಿರುವ ಚಂದ್ರನು , ತಾನು
ಬೆಳಕು ನೀಡುವ ಪ್ರಪಂಚದಲ್ಲಿ ಮದುವೆಯಾಗುವ ಹೊಸ ಜೋಡಿಯನ್ನು ನೋಡಿ
ಸಂತೋಷಪಟ್ಟು, ಅವರ ಮದುವೆಯಾದ ಬಳಿಕ ಇಬ್ಬರನ್ನೂ ತನ್ನ ಮನೆಗೆ ಕರೆದೊಯ್ದು
ಆತಿಥ್ಯ ನೀಡಿ ತೃಪ್ತಿ ಪಡಬೇಕಾಯಿತು.
ಇಂತಹ ಚಂದ್ರನನ್ನು ತೃಪ್ತಿಪಡಿಸುವ ಉಪಾಯವಾಗಿ ಮತ್ತು ತಮ್ಮೂರುಗಳಲ್ಲಿ
ಮದುವೆಯಾಗಲಿರುವ ಹೆಣ್ಣು- ಗಂಡುಗಳಿಗೆ ಒಳಿತಾಗಲೆಂದು ಚಂದ್ರನ
ಆಶೀರ್ವಾದಕ್ಕಾಗಿ ಪ್ರಾರ್ಥಿಸುವ ಸಲುವಾಗಿ, ಕದರಿ ಹುಣ್ಣಿಮೆಯ ಒಂದು ವಾರಕ್ಕೆ
ಮೊದಲು, ಚಂದ್ರಮನ ಆಚರಣೆ / ತಿಂಗಳ ಮಾವನ ಆಚರಣೆ/ ಬೆಳದಿಂಗಳಪ್ಪನ ಪೂಜೆ
ಹೀಗೆ ಪ್ರಾದೇಶಿಕವಾಗಿ ಬೇರೆ ಬೇರೆ ಹೆಸರುಗಳಲ್ಲಿ ಈ ಜಾನಪದೀಯ ಆಚರಣೆಯನ್ನು
ಕೈಗೊಳ್ಳುವುದನ್ನು ನಮ್ಮ ಜನಪದರು ರೂಢಿಸಿಕೊಂಡರು. ಜನಪದರಲ್ಲಿರುವ ಇಂತಹ
ನಂಬಿಕೆಯನ್ನು ವೈಜ್ಞಾನಿಕವಾಗಿ ಅಥವಾ ವೈಚಾರಿಕವಾಗಿ ಪರಿಶೀಲಿಸಿ, ನಗಾಡುತ್ತಾ
ಚಂದ್ರಮನ ಆಚರಣೆಯನ್ನು ತಿರಸ್ಕರಿಸುವ ಭಾವನೆಯನ್ನು ಪಕ್ಕಕ್ಕಿರಿಸಿ ಜನಪದರ.
ಜೀವನ ಶ್ರದ್ಧೆ ಮತ್ತು ಬದುಕಿನ ಪ್ರೀತಿಯ ನೆಲೆಗಳನ್ನು ನೋಡುವುದಾದರೆ, ಚಂದ್ರಮನ
ಆಚರಣೆಯನ್ನು ನಮ್ಮ ಗ್ರಾಮೀಣ ಪ್ರದೇಶಗಳಲ್ಲಿ ಈಗಲೂ ಕಾಣುತ್ತೇವೆ.
ಕದರಿ ಹುಣ್ಣಿಮೆಯ ಸಮಯದಲ್ಲಿ ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ
ವಡ್ಡಗೆರೆ ಎಂಬ ನಮ್ಮೂರಿನಲ್ಲಿ 'ಚಂದ್ರಮ್ಮನ ಉಯ್ಯೋದು' ಎಂಬ ಆಚರಣೆ
ಮಾಡುತ್ತೇವೆ. ಜಾನಪದ ಕಲಾವಿದೆಯಾದ ನನ್ನ ಅಮ್ಮ ವಡ್ಡಗೆರೆ ಕದರಮ್ಮ ಮತ್ತು
ಸಂಗಡಿಗರ ನೇತೃತ್ವದಲ್ಲಿ ನಮ್ಮ ಹಟ್ಟಿಯ ಹೆಣ್ಣುಮಕ್ಕಳು ರಾತ್ರಿಯ ಬೆಳದಿಂಗಳಿನ
ಬೆಳಕಿನಲ್ಲಿ ಹಟ್ಟಿಮಾರಮ್ಮನ ಗುಡಿಯ ಅಂಗಳವನ್ನು ಸಗಣಿ ಕದರಿನಿಂದ ಸಾರಿಸಿ
ಸೂರ್ಯ- ಚಂದ್ರ- ನಕ್ಷತ್ರಗಳ ರಂಗೋಲಿ ಚಿತ್ತಾರ ಬರೆದು ಚಂದ್ರಮ್ಮನ ಮೇಲೆ
ಜಾನಪದ ಹಾಡುಗಳನ್ನು ಹಾಡುತ್ತಾರೆ. ನನ್ನ ಅಮ್ಮ ಮತ್ತು ಸಂಗಡಿಗರು ಹಾಡುವ
ಚಂದ್ರಮ್ಮನ ಮ್ಯಾಲಿನ ಜಾನಪದ ಪದಗಳಲ್ಲಿ ಮದುವೆಗೆ ಬಂದ ಕಾವೇಟಿ ರಂಗನೆಂಬ
ಹೆಸರಿನ ಗಂಡಿಗೆ, ಗಂಡಿನ ಕಡೆಯವರು ಚಿಕ್ಕರಸಿ ಎಂಬುವಳ ಮನೆಗೆ ಹೋಗಿ ಲಕ್ಷ್ಮಿ
ಎಂಬ ಹೆಣ್ಣನ್ನು ಕೇಳುವ ಪದವೊಂದಿದೆ.
"ಒಂದು ವರಹ ಕೊಟ್ಟೇವು ಹೆಣ್ಣು ಕೊಡಿರಮ್ಮ…
ಕಾವೇಟಿ ರಂಗನಿಗೆ ಕಸ್ತೂರಿ ರಂಗನಿಗೆಸರುಪನ ಕಟ್ಟೆಮ್ಯಾಲೆ ಚೆಲುವಾನು ಕೂತ್ಕೊಂಡ ಹೆಣ್ಣು ಕೊಡಿರಮ್ಮ
ಹೆಣ್ಣು ಕೊಡಿರೇ" ಎಂದು ಹೆಣ್ಣು ಕೇಳುತ್ತಾರೆ. ಐದು ಅಥವಾ ಒಂಭತ್ತು ರಾತ್ರಿಗಳು
ನಡೆಯುವ 'ಚಂದ್ರಮ್ಮನ ಉಯ್ಯುವ ಆಚರಣೆ'ಯ ಕೊನೆಯ ದಿನ ಚಂದ್ರಮ್ಮನನ್ನು
ಸಾಗ್ಹಾಕೋ ಆಚರಣೆ ಇರುತ್ತದೆ. ಅಂದು ಋತುಮತಿಯಾಗದಿರುವ ಇಬ್ಬರು ಎಳೆಯ
ಹುಡುಗಿಯರಿಗೆ ಮದುವೆಯ ಗಂಡು- ಹೆಣ್ಣಿನ ಪಾತ್ರಗಳಲ್ಲಿ ಸಿಂಗಾರ ಮಾಡಿ ಅಣಕು
ಮದುವೆ ಮಾಡಿ ಚಂದ್ರಮ್ಮನೂರಿಗೆ ಕಳಿಸಿಕೊಡುತ್ತಾರೆ. ಚಂದ್ರನು ಕಾವೇಟಿ ರಂಗ
(ಗಂಡ) ಮತ್ತು ಲಕ್ಷ್ಮಿ (ಹೆಂಡತಿ) ಯನ್ನು ತನ್ನ ಮನೆದುಂಬಿಸಿಕೊಂಡು ಸುಖದ
ಸುಪ್ಪತ್ತಿಗೆಯಲ್ಲಿರಿಸಿ ಸಮಸ್ತ ಲೋಕವೂ ತಣ್ಣಗಿರಲೆಂದು ಸಂತೋಷದಿಂದ ಆಶೀರ್ವಾದ
ಮಾಡುತ್ತಾನೆ.
ನಮ್ಮೂರಲ್ಲಿ ನನ್ನ ಬಾಲ್ಯದ ದಿನಗಳಿಂದಲೂ ಚಂದ್ರಮ್ಮನ ಉಯ್ಯವ ಆಚರಣೆ
ನಡೆದುಕೊಂಡು ಬರುತ್ತಿದೆ. "ಒಂದು ವರಹ ಕೊಟ್ಟೇವು ಹೆಣ್ಣು ಕೊಡಿರಮ್ಮ ಕಾವೇಟಿ
ರಂಗನಿಗೆ, ಕಸ್ತೂರಿ ರಂಗನಿಗೆ" ಎಂಬ ಜಾನಪದ ಗೀತೆಯನ್ನು ಆಲಿಸುತ್ತಲೇ
ಬಂದಿದ್ದೇನೆ. ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳು ನಾಡಿನಲ್ಲಿ ಕಾವೇಟಿ
ರಂಗನಾಥಸ್ವಾಮಿ ಹೆಸರಿನ ದೇವಾಲಯಗಳಿವೆ. ಕೆಲವು ಕಡೆಗಳಲ್ಲಿ ಕಾವೇಟಿ
ರಂಗನಾಥನನ್ನು, ಬೇಟೆ ರಂಗನಾಥಸ್ವಾಮಿ ಅಥವಾ ಬ್ಯಾಟೆರಾಯಸ್ವಾಮಿ ಎಂಬ
ಬದಲಿ ಹೆಸರಿನಿಂದಲೂ ಆರಾಧಿಸುತ್ತಾರೆ. ಕಾವೇಟಿ ರಂಗನಾಥನ ಮೇಲೆ ಕನ್ನಡ
ತೆಲುಗು ತಮಿಳು ಭಾಷೆಯಲ್ಲಿ ಜಾನಪದ ಸುಗ್ಗಿ ಹಾಡುಗಳಿವೆ. ಕಾವೇಟಿ
ರಂಗನಾಥನನ್ನು ಕುರಿತ ಸಂಸ್ಕೃತ ಭಾಷೆಯ ಶ್ಲೋಕಗಳಲ್ಲಿಯೂ 'ಕಾವೇಟಿ' ಎಂಬ
ಉಲ್ಲೇಖವಿದೆ. 'ಕಾವೇಟಿ' ಪದ ಯಾವ ಭಾಷೆಯದ್ದು? ಕಾವೇಟಿ ಎಂದರೆ ಅರ್ಥವೇನು ?
ಕಾವೇಟಿ ಎಂದರೆ ಬೇಟೆಗಾರ ಎಂದರ್ಥವಿರಬಹುದೇ ?