ಡಾ. ದೇವಿಂದರ್ ಶರ್ಮಾ
‘ನಾವು ಪರಿಸರಕ್ಕೆ ಯಾವುದೇ ಬಗೆಯ ತೊಂದರೆ ಕೊಟ್ಟಲ್ಲಿ ದಿನಕಳೆದಂತೆ ಅದೇ ತಿರುಗಿ ನಮಗೆ ತೊಂದರೆ
ಕೊಡುತ್ತದೆ. ಇದು ನಾವು ಎದುರಿಸಲೇಬೇಕಾಗಿರುವ ವಾಸ್ತವ’ ಕ್ಸಿ ಜಿನ್ಪಿಂಗ್, ಅಧ್ಯಕ್ಷ ಚೈನಾ
ಇಲ್ಲಿ ಸಾಕ್ಷಿಗಳಿವೆ. ಆಧುನಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡ ಕೃಷಿ ಭೂಮಿಗಳಲ್ಲಿ ಭೂಮಿಯ ಫಲವತ್ತತೆ
ಶೂನ್ಯವಾಗುತ್ತಿದೆ. ಅಂತರ್ಜಲದ ದುರ್ಭಳಕೆಯಿಂದಾಗಿ ಜಲಮೂಲಗಳು ಬತ್ತುತ್ತಿವೆ. ರಾಸಾಯನಿಕ ಒಳಸುರಿಗಳು
ಅದರಲ್ಲೂ ವಿಶೇಷವಾಗಿ ರಾಸಾಯನಿಕ ಕೀಟನಾಶಕಗಳು ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿವೆ. ಇಡೀ
ಆಹಾರ ಸರಪಳಿ ಕಲುಷಿತಗೊಂಡಿದೆ. ಮಣ್ಣು ಅನಾರೋಗ್ಯಕ್ಕೀಡಾಗಿದೆ, ಔದ್ಯೋಗಿಕ ಕೃಷಿಗಾಗಿ ಕಾಡುಗಳನ್ನು
ಕಡಿಯಲಾಗಿದೆ. ಮಣ್ಣಿನ ಸವಕಳಿ ಹೆಚ್ಚಿದೆ. ಬೆಳೆಯ ಉತ್ಪಾದಕತೆ ಸ್ಥಿರವಾಗಿದೆ. ಈಗಿರುವಷ್ಟೇ ಉತ್ಪಾದನೆ ಪಡೆಯಲು
ಹೆಚ್ಚಿನ ರಾಸಾಯನಿಕ ಒಳಸುರಿಗಳು ಬಳಸಲಾಗುತ್ತಿದೆ., ಕೃಷಿ ಭೂಮಿ ವಿಷಯುಕ್ತವಾಗಿ ಪರಿಣಮಿಸುತ್ತಿವೆ. ಆಧುನಿಕ
ಕೃಷಿ ಪದ್ಧತಿಯಿಂದ ಹಸಿರುಮನೆ ಅನಿಲಗಳ ಬಿಡುಗಡೆ ಹೆಚ್ಚಿದೆ, ಇದರಿಂದ ವಾತಾವರಣ ವೈಪರೀತ್ಯ
ಉಂಟಾಗುತ್ತಿದೆ.
ಜೇನು ನೊಣಗಳ ಸಂತತಿ ಕಡಿಮೆ ಆಗುತ್ತಿದೆ. ಅಪಾಯದ ಗಂಟೆ ಭಾರಿಸಲು ಆರಂಭವಾಗಿ ಬಹಳ ಕಾಲವೇ ಆಯಿತು.
ಇತ್ತೀಚಿನ ಅಧ್ಯಯನದಿಂದ ಸಂರಕ್ಷಿತ ಪರಿಸರಗಳಲ್ಲಿ ಶೇಕಡಾ 75 ರಷ್ಟು ಹಾರುವ ಕೀಟಗಳು ಕಡಿಮೆ ಆಗಿರುವುದಾಗಿ
ತಿಳಿದುಬಂದಿದೆ. ಇದು ಪರಿಸರದ ಮೇಲಾಗುತ್ತಿರುವ ಅಂತಿಮ ಸ್ವರೂಪದ ಮಹಾದಾಳಿ.
ಹಸಿರುಕ್ರಾಂತಿಯು ತನ್ನ ಉಮೇದುಕಳೆದುಕೊಂಡು ಕೇಡುಣಿಸಿ ಇದೀಗ ರೈತರ ಆತ್ಮಹತ್ಯೆ ರೂಪದಲ್ಲಿ ಅದರ
ಪರಿಣಾಮಗಳು ಪ್ರಕಟಗೊಳ್ಳುತ್ತಿವೆ. ಒಳಸುರಿಗಳ ವೆಚ್ಚ ಹೆಚಾಗುತ್ತಿದೆ. ಕೃಷಿ ಉತ್ಪನ್ನಗಳ ಬೆಲೆ ಇದ್ದಲ್ಲಿಯೇ ನಿಂತಿದೆ.
ರೈತರ ಆದಾಯ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಯೂರೋಪ್ ಖಂಡದಲ್ಲಿ ಸಹಾಯಧನ ಕೊಡದೇ ಹೋದರೆ
ಬಹುತೇಕ ಕೃಷಿ ಭೂಮಿಗಳು ಲಾಭದಾಯಕವಾಗಿ ಉಳಿಯುವುದಿಲ್ಲ. ಫ್ರಾನ್ಸ್ ದೇಶದಲ್ಲಿ ರೈತರ ವಿಮೆ ಸಂಸ್ಥೆ
ಅಂದಾಜಿಸಿದಂತೆ 2016 ರಲ್ಲಿ ರೈತರು ತಿಂಗಳಿಗೆ 350 ಯೂರೋಗಳಿಗಿಂತ ಕಡಿಮೆ ದುಡಿಯುತ್ತಾರೆ. ಭಾರತದ
ಆರ್ಥಿಕ ಸಮೀಕ್ಷೆಯ ಪ್ರಕಾರ 2016 ರಲ್ಲಿ ದೇಶದ 17 ರಾಜ್ಯಗಳಲ್ಲಿ ಕೃಷಿ ಕುಟುಂಬದ ವಾರ್ಷಿಕ ಆದಾಯ 20,000
ರೂಪಾಯಿ. ಕೃಷಿ ವಾಣಿಜ್ಯದಲ್ಲಿ ತೊಡಗಿರುವ ಕಾರ್ಪೊರೇಷನ್‌ಗಳು ಲಾಭದಲ್ಲಿ ಬದುಕುತ್ತಿವೆ. ವಿಶ್ವದಾದ್ಯಂತ ಒಂದು
ಬಿಲಿಯನ್ ಜನರು ರಾತ್ರಿ ಊಟವಿಲ್ಲದೆ ಮಲಗುತ್ತಿದ್ದಾರೆ ಎಂದರೆ ಅದರಲ್ಲಿ ಭಾರತದ ಸಣ್ಣ ರೈತರೂ ಸೇರಿದ್ದಾರೆ. ಇಲ್ಲೇನೋ ಬಹಳ ಗಂಭೀರವಾದ ತಪ್ಪು ನಡೆಯುತ್ತಿದೆ.
ಚೈನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಹೇಳುವಂತೆ ವಿಶ್ವದಲ್ಲಿ ಔಧ್ಯೋಗಿಕ ಕೃಷಿಯ ಹೊಡೆತದಿಂದಾಗಿ ಇದೀಗ ಈ
ಸಮಸ್ಯೆಗಳು ನಮ್ಮನೇ ಕಾಡುತ್ತಿವೆ.ಈಗ ಅಂಥದ್ದೇ ಸ್ವರೂಪದ ತಾಂತ್ರಿಕತೆಯನ್ನು ಇದಕ್ಕೆ ಪರಿಹಾರವೆಂಬತೆ ಬಿಂಬಿಸಲಾಗುತ್ತಿದೆ. ಯಾವುದೇ ದೊಡ್ಡ
ಸಮಾವೇಶ ನಡೆದಾಗ ಅಂತಿಮವಾಗಿ ಬಡತನ ನಿವಾರಣೆ ಮಾಡುವ ಘೋಶವಾಕ್ಯದೊಂದಿಗೆ ಮುಗಿಯುತ್ತವೆ.
ವರ್ಲ್ಡ್ ಫುಡ್ ಸಮ್ಮಿಟ್ ಹಸಿವನ್ನು ನೀಗಿಸಬೇಕೆಂದು ಘೋಷಿಸುತ್ತದೆ. ವಿಶ್ವ ಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ
ಸುಸ್ಥಿರ ಕೃಷಿ ಪದ್ಧತಿಗೆ ಕರೆ ನೀಡುತ್ತದೆ. ಪ್ರತಿಯೊಂದು ಕೇಡು ಕೂಡಾ ಹೊಸದೊಂದು ಅವಕಾಶವನ್ನು ತೆರೆದಿಡುತ್ತದೆ. ಆದರೆ ಬೇಕೋ ಬೇಡವೋ ಅದೊಂದು ಉದ್ದಿಮೆಯ ಅವಕಾಶವಾಗಿ ಪರಿಣಮಿಸುತ್ತದೆ. ಇಲ್ಲಿ ಮಾತೂ ಕೂಡಾ ಅದೇ ಆಗಿದೆ ಉತ್ತರವೂ ಅದೇ ಆಗುತ್ತಿದೆ.
ಔದ್ಯೋಗಿಕ ಕೃಷಿಯೆಡೆಗೆ ಹೆಚ್ಚು ಪ್ರೋತ್ಸಾಹ ನೀಡಲಾಗುತ್ತಿದೆ.
ಆದರೆ ಒಂದು ಭರವಸೆ ಇದೆ. ನಾವು ಹೊಸ ಕಾಲಕ್ಕೆ ಕಾಲಿಡುವ ಈ ಹೊತ್ತಿನಲ್ಲಿ ಪರಿಸರಕ್ಕೆ ಹಾನಿಯಾಗದ ಸುಸ್ಥಿರ
ಕೃಷಿ ಮಾಡಿದಲ್ಲಿ ರೈತರ ಮೊಗದಲ್ಲಿ ನಗೆ ಹೊಮ್ಮಿಸಬಹುದು. ಕೆಲವರ್ಷಗಳಲ್ಲಿ ಕೃಷಿ ಪರಿಸರದ ಬಗ್ಗೆ ಬಂದ
ಒಪ್ಪಂದಗಳ ಎಲ್ಲವನ್ನು ಒಳಗೊಂಡ ಮಾದರಿಯಾಗಿವೆ, ಇದೊಂದು ಪರ್ಯಾಯವಾಗಿ ಕಾಣತೊಡಗಿದೆ. 2050 ಕ್ಕೆ
ದೇಶಕ್ಕೆ ಬೇಕಾದ ಆಹಾರ ಬೆಳೆಯಲು ಔದ್ಯೋಗಿಕ ಕೃಷಿಯ ಕಡೆ ಒಲವು ತೋರಿಸಿಲ್ಲ. ಬದಲಾಗಿ ಸಣ್ಣ ರೈತರ
ನಡುವೆ ಸುಸ್ಥಿರ ಕೃಷಿ ಪದ್ಧತಿಗಳನ್ನು ಪ್ರೋತ್ಸಾಹಿಸುವುದು ವಿಶೇಷವಾಗಿ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ
ಮಹಳೆಯರನ್ನೊಳಗೊಂಡ ಕೃಷಿಯಿಂದಲೇ ಈ ಅಗತ್ಯವನ್ನು ಪೂರೈಸಲು ಮಾರ್ಗಸೂಚಿ ರೂಪಿಸಿದೆ. ಶೇಕಡಾ 80
ರಷ್ಟು ಆಹಾರ ಸ್ಥಳೀಯವಾಗಿಯೇ ಉತ್ಪಾದನೆ ಹಾಗೂ ಬಳಕೆ ಆಗುತ್ತಿರುವುದರಿಂದ ಕೃಷಿಯನ್ನು ಆರ್ಥಿಕವಾಗಿ
ಸುಸ್ಥಿರಗೊಳಿಸುವುದು, ಕೃಷಿ ಭೂಮಿಯನ್ನು ವಿಷಮುಕ್ತವಾಗಿಸುವುದೂ ಆಗಿದೆ. ತನ್ಮೂಲಕ ಸುಸ್ಥಿರ ಆರೋಗ್ಯವಂತ
ಜೀವನ ಸಾಧ್ಯ.
ರಾಸಾಯನಿಕ ಕೀಟನಾಶಗಳನ್ನು ಕಿತ್ತೊಗೆಯಬೇಕು: ಹಸಿರು ಕ್ರಾಂತಿಯಿಂದಾದ ಅನಾಹುತ ಅರಿಯಲು
ಅಂತಾರಾಷ್ಟ್ರೀಯ ಅಕ್ಕಿ ಸಂಶೋಧನಾ ಸಂಸ್ಥೆಗೆ ಮೂರು ದಶಕಗಳೇ ಬೇಕಾಯಿತು. ಕೀಟನಾಶಕಗಳು ಅನಗತ್ಯ
ಎಂದು ಸಂಸ್ಥೆಯ ಪರಿಸರ ವಿಜ್ಞಾನಿ ಗ್ಯಾರಿ ಜಾನ್ ಹೇಳಿದರು. ವಾಸ್ತವಾಂಶ ಏನೆಂದರೆ “ ಏಷಿಯಾ ದಲ್ಲಿ ಭತ್ತದ
ಬೆಳೆಯಲ್ಲಿ ಸಿಂಪಡಿಸುವ ಕೀಟನಾಶಕಗಳು ರೈತರ ಸಮಯ ಮತ್ತು ಹಣವನ್ನು ವ್ಯಯಿಸುತ್ತಿವೆ”. 2003 ರಲ್ಲಿ ನಡೆದ
ಅಧ್ಯಯನದಲ್ಲಿ ಕೀಟನಾಶಕ ಸಿಂಪಡಿಸಿದ್ದಕ್ಕೆ ಯಾವುದೇ ಬದಲಾವಣೆ ಕಂಡುಬಂದಿಲ್ಲ ಎಂದು ತಿಳಿದುಬಂದಿದೆ. ಆದರೆ
ಯಾವುದೇ ರಾಷ್ಟ್ರೀಯ ಸಂಶೋಧನಾ ಸಂಸ್ಥೆಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಇದೊಂದು
ಮಾತನ್ನು ಭತ್ತ ಬೆಳೆಯುವ ಪ್ರಾಂತ್ಯಗಳಲ್ಲಿ ಅಳವಡಿಸಿಕೊಂಡಿದ್ದರೆ ಬಹುತೇಕ ರಾಸಾಯನಿಕ ಕೀಟನಾಶಕಗಳ ಬಳಕೆಕಡಿಮೆ ಆಗುತ್ತಿದ್ದರಲ್ಲಿ ಸಂಶಯವೇ ಇಲ್ಲ. ಉದಾಹರಣೆಗೆ ಭಾರತದಲ್ಲಿ ಸುಮಾರು 42 ರಾಸಾಯನಿಕಗಳನ್ನು ಭತ್ತಬೆಳೆಯಲ್ಲಿ ಇಂದಿಗೂ ಬಳಸಲಾಗುತ್ತಿದೆ. ಇತ್ತೀಚೆಗೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಂಸ್ಥೆ – ಕೀಟನಾಶಕಗಳು ಪರಿಸರ, ಮನುಷ್ಯರ ಆರೋಗ್ಯ ಮತ್ತು ಇಡೀ ಸಮಾಜಕ್ಕೆ ತೊಂದರೆ ಉಂಟು ಮಾಡುತ್ತವೆ ಎಂದಿದೆ. ಸ್ಥಳೀಯವಾಗಿ ಕೀಟನಾಶಕ ಬಳಸದೆ ಕೃಷಿ ನಿರ್ವಹಣೆ (ಎನ್ ಪಿ ಎಮ್) ಯೋಜನೆ ಅಡಿಯಲ್ಲಿ ಆಂದ್ರ ಪ್ರದೇಶದಲ್ಲಿ 3.6 ಮಿಲಿಯನ್ ಎಕರೆಯಷ್ಟು ಕೃಷಿ ಭೂಮಿಯಲ್ಲಿ ಕೀಟನಾಶಕಗಳನ್ನು ಬಳಸಲಾಗುತ್ತಿಲ್ಲ.
ಜೈವಿಕ ಬೆಳೆ ಉತ್ಪಾದನೆಯತ್ತ: ಗೋಧಿ ಮತ್ತು ಭತ್ತ ದ ಗಿಡ್ಡ ತಳಿಗಳು ಸಾರಜನಕ, ರಂಜಕ ಹಾಗೂ ಪೊಟ್ಯಾಷ್
ಗೊಬ್ಬರಗಳನ್ನು ಹೆಚ್ಚು ಬೇಡುತ್ತಿದ್ದವು. ಅವುಗಳನ್ನು ಅಭಿವೃದ್ಧಿಪಡಿಸಿದ ಕ್ರಮವೇ ಹಾಗಿತ್ತು. ಪ್ರತಿ ಚದುರ ಮೀಟರ್‌ಗೆ
ಹೆಚ್ಚಿನ ಸಸ್ಯಗಳ ಸಂಖ್ಯೆ ಇದ್ದದ್ದರಿಂದ ಹೆಚ್ಚಿನ ತೆಂಡೆಗಳು ಬಂದವು ಹೆಚ್ಚಿನ ಕೀಟಗಳನ್ನೂ ಆಕರ್ಷಿಸಿದವು ಹಾಗಾಗಿ
ಹೆಚ್ಚಿನ ಕೀಟನಾಶಕಗಳನ್ನೂ ಸಿಂಪಡಿಸಬೇಕಾಯಿತು. ದಿನಕಳೆದಂತೆ ವಿವಿಧ ಕೃಷಿ ಪರಿಸರಗಳಿಗೆ ಒಗ್ಗಿಸಿ ಹೆಚ್ಚಿನ
ಒಳಸುರಿ ಕೊಡುವುದು ಆರಂಭವಾಯಿತು. ಇಳುವರಿ ಹೆಚ್ಚಿದಂತೆಲ್ಲಾ ಪೋಷಕಾಂಶಗಳಲ್ಲಿ ಕುಂಟಿತ ಆಗುತ್ತಾ ಸಾಗಿದೆ.
ಇಳುವರಿಯು ಪೋಷಕಾಂಶಗಳ ಮೇಲೆ ನೇರ ಪ್ರಭಾವ ಬೀರಿದೆ.
ಇಳುವರಿ ಸ್ಥಿರವಾದಂತೆ, ಗೊಬ್ಬರಗಳ ಪ್ರಭಾವ ಕಡಿಮೆ ಆಗುತ್ತಿದೆ, ಇದೀಗ ಜೈವಿಕ ಗೊಬ್ಬರಗಳನ್ನು ಬಳಸಿ ಹೆಚ್ಚು
ಇಳುವರಿ ಕೊಡುವ ತಳಿಗಳನ್ನು ಅಭಿವೃದ್ಧಿಪಡಿಸುವತ್ತ ಸಂಶೋಧನೆಗಳು ನಡೆಯುತ್ತಿವೆ. ಇಂಥದೊಂದು ಹೈಬ್ರೀಡ್
ಉತ್ಪಾದನೆ ಮಾಡುವುದು ಸಸ್ಯ ಪೋಷಕಾಂಷಗಳು ಹಾಗೂ ಪೋಷಂಕಾಂಶಗಳ ಭದ್ರತೆಗೆ ಬಹಳ
ಮುಖ್ಯವಾಗಿರುತ್ತದೆ. ಕೀಟಗಳ ನಿಯಂತ್ರಣ, ಮಣ್ಣಿನ ಫಲವತ್ತತೆ, ನೀರಿನ ಬಳಕೆ ಕಡಿಮೆ ಮಾಡುವ ಇಂಥ ಬೆಳೆಗಳು
ಪರಿಸರ ಸಮತೋಲನ ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸಬಲ್ಲವು.
ಪಾರಂಪರಿಕ ಜ್ಞಾನದ ಉತ್ಖನನ: ಕಲಿಕೆ, ಶಿಕ್ಷಣ ಮತ್ತು ಜ್ಞಾನ ಕೃಷಿ ಕ್ಷೇತ್ರವನ್ನು ಸುಸ್ಥಿರತೆಯತ್ತ ಕೊಂಡೊಯ್ಯುವ
ಮೂಲ ದ್ರವ್ಯ. ಇಂಥ ಜ್ಞಾನ ಬಹುತೇಕ ಶಾಸ್ತ್ರೀಯ ಶಿಕ್ಷಣದಿಂದಾಚೆಗೆ ಉತ್ಪತ್ತಿಯಾಗುತ್ತದೆ, ಇದು ಕೃಷಿ
ಚಟುವಟಿಕೆಗಳಲ್ಲಿ ಭಾಗಿಯಾಗುತ್ತಾ ಕಲಿಯುವ ಮತ್ತು ಸಮುದಾಯಗಳಿಂದ ಕಲಿಯುವಂಥದ್ದಾಗಿರುತ್ತದೆ.
ಉದಾಹರಣೆಗೆ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯು ಪಾರಂಪರಿಕ ಕೃಷಿ ಜ್ಞಾನವನ್ನು ನಾಲ್ಕು ಸಂಪುಟಗಳಲ್ಲಿ
ಕಲೆಹಾಕಿದೆ. ಆದರದು ಗೋಡೋನ್ ನಲ್ಲಿಯೇ ದೂಳಿಡಿದು ಕೂತಿದೆ.
ಪಾರಂಪರಿಕ ಕೃಷಿ ಜ್ಞಾನವನ್ನು ದಾಖಲಿಸುವುದು ಮತ್ತು ಅದರ ಒಡೆತನ ಹಕ್ಕು ಯಾ ಒಡೆತನಕ್ಕೆ ಒದ್ದಾಡುವುದು
ಅಂತಾರಾಷ್ಟ್ರೀಯ ಮಾತುಕತೆಗಳಲ್ಲಿ ಬಂದು ಹೋಗುತ್ತಿದ್ದರೂ ಇವುಗಳನ್ನು ದಾಖಲಿಸಬೇಕೆಂಬ ಉತ್ಸಾಹ
ಮುಂದುವರೆದೇ ಇದೆ. ಇದು ನಿರಂತರವಾಗಿಯೇ ಇರುತ್ತದೆ. ಇದರ ಬಗ್ಗೆ ನೈತಿಕವಾದ ಚೌಕಟ್ಟು ಇದ್ದರೂ
ಪಾರಂಪರಿಕ ಜ್ಞಾನದ ಬಗ್ಗೆ ಒಂದು ನೀತಿಯು ಸಾಂಸ್ಕೃತಿಕವಾಗಿ ಸರಿ ಎನಿಸುವ, ಪರಿಸರಕ್ಕೆ ಹೊಂದುವ,
ಸಾಮಾಜಿಕವಾಗಿ ಸೂಕ್ಷ್ಮವಾಗಿರುವ ಜನಸಾಮಾನ್ಯರ ನೀತಿಯಾಗಿ ಹೊಮ್ಮಿದಲ್ಲಿ ಈಗಿರುವ ಪಾರಂಪರಿಕ
ಜ್ಞಾನವನ್ನು ಸಾರ್ವಜನಿಕವಾಗಿ ಲಭ್ಯವಾಗುವಂತೆ ಮಾಡಬಹುದು. ಪಾರಂಪರಿಕ ಜ್ಞಾನವನ್ನು ಮತ್ತೆ ಪತ್ತೆಹಚ್ಚುವುದು,
ಅದನ್ನು ಒಂದು ಚೌಕಟ್ಟಿನೊಳಗೆ ತಂದಿಡುವುದು ತನ್ಮೂಲಕ ಹಲವು ಜ್ಞಾನ ಶಾಖೆಗಳ ನಡುವಿನ ಅಂತರ ಕಡಿಮೆ
ಮಾಡುವುದು, ಅದರಿಂದ ಕೃಷಿ ಪರಿಸರದ ಬಗ್ಗೆ ಹೆಚ್ಚಿನ ಕಾಳಜಿವಹಿಸುವುದು ಮುಖ್ಯ.
ಸಾರ್ವಜನಿಕ ಸಂಗ್ರಹಣ ವ್ಯವಸ್ಥೆ ಪುನಾರಚನೆ : ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ವಿಶ್ವ ವಾಣಿಜ್ಯ ಸಂಸ್ಥೆಯಡಿ
ರೈತರಿಗೆ ನೀಡುತ್ತಿರುವ ಬೆಂಬಲ ಬೆಲೆ ಮಾರುಕಟ್ಟೆ ವ್ಯವಸ್ಥೆಯನ್ನು ಹದಗೆಡಿಸುತ್ತಿದೆ ಎಂದು ಭಾರತ ಮತ್ತು ಚೀನಾ
ರಾಷ್ಟ್ರಗಳೆರಡೂ ಜಂಟಿಯಾಗಿ ವಿರೋಧಿಸುತ್ತಿದ್ದರೂ, ಅವುಗಳ ಮೂಲ ಉದ್ದೇಶ ಆಹಾರ ಧಾನ್ಯಗಳ ಸಾರ್ವಜನಿಕ
ಸಂಗ್ರಹಣ ವ್ಯವಸ್ಥೆಯ ನೀತಿಗಳನ್ನು ಸಂರಕ್ಷಿಸುವುದೇ ಆಗಿದೆ. ಆಹಾರ ಸ್ವಯತ್ತತೆ ಸಾಧಿಸಲು ದಶಕಗಳಿಂದ ಕಟ್ಟಿದ
ಈ ವ್ಯವಸ್ಥೆಯನ್ನು ರೂಪುರೇಷಗಳನ್ನು ಉಳಿಸಿಕೊಳ್ಳುವುದು ಆಹಾರ ಭದ್ರತೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ
ತುಂಬಾ ಮುಖ್ಯವಾಗುತ್ತದೆ. ಸಾವಯವ ಬೆಳೆಗಾರರಿಗೆ ನಿಗದಿತ ಬೆಲೆ ಒದಗಿಸುವ ನಿಟ್ಟಿನಲ್ಲಿ ಮೇಲಿನ ನೀತಿಗಳನ್ನೇ
ಸಾವಯವ ಬೆಳೆಗಳನ್ನು ಸಂಗ್ರಹಿಸುವಾಗಲೂ ಅನ್ವಯಿಸಬೇಕಾಗುತ್ತದೆ.
ಸ್ಥಳೀಯ ಅವಶ್ಯಕತೆಗಳನ್ನು ಪೂರೈಸಲು ಭಿನ್ನ ಭಿನ್ನ ವಲಯಗಳಲ್ಲಿ ಭಿನ್ನ ಭಿನ್ನ ಕೃಷಿ ವಿಧಾನಗಳ ಮೂಲಕ
ಉತ್ಪಾದನೆಯಾಗುವ ಆಹಾರ ಧಾನ್ಯಗಳ ಸಂಗ್ರಹಣೆಯ ವಿಚಾರ ಬಂದಾಗ ಈ ನೀತಿಗಳಿಗೆ ಹೊಸ ರೂಪುರೇಷೆ
ಕೊಡುವುದು ಅನಿವಾರ್ಯವಾಗುತ್ತದೆ. ಉದಾಹರಣೆಗೆ ಭಾರತದಲ್ಲಿ ಸಾವಯವ ಬೆಳೆಗಳಿಗೆ, ಭತ್ತ ಮತ್ತು
ಗೋಧಿಯನ್ನೂ ಒಳಗೊಂಡು, ಬೇಡಿಕೆ ಹೆಚ್ಚುತ್ತಿರುವುದರಿಂದ, ರಾಸಾಯನಿಕ ಮುಕ್ತ ಬೆಳೆಗಳಿಗೆ ಹೆಚ್ಚಿನ ಬೆಲೆಯನ್ನು
ನಿಗದಿಪಡಿಸುವುದು ಇಂದಿನ ತುರ್ತು. ದೇಶದಲ್ಲಿ ಬೆಳೆಗಳ ನಾಡೆಂದು ಪ್ರಸಿದ್ಧಿಯಾಗಿರುವ ಪಂಜಾಬ್ ಸಹ
ಮಧ್ಯಪ್ರದೇಶದಿಂದ ಗೋಧಿ ಹಿಟ್ಟನ್ನು ಆಮದು ಮಾಡಿಕೊಳ್ಳುತ್ತದೆ. ಆಮಾದಾಗುವ ಗೋಧಿ ಹಿಟ್ಟು ಸಾವಯವವೆಂದು
ಹೇಳಲಾಗುತ್ತದೆ. ಆದರೆ ಹಾಗೆಂದು ಅಧಿಕೃತಗೊಳಿಸಲು ಯಾವುದೇ ಸಾವಯವ ಪ್ರಮಾಣಪತ್ರವಿರುವುದಿಲ್ಲ.
ಪಂಜಾಬ್ ರಾಜ್ಯದಲ್ಲಿಯೇ ರಾಸಾಯನಿಕ ಮುಕ್ತ ಸಾವಯವ ಗೋಧಿಗೆ ಹೆಚ್ಚಿನ ಬೆಲೆ ನಿಗಧಿಪಡಿಸಿದಲ್ಲಿ
ಸಹಜವಾಗಿಯೇ ಸಾವಯವ ಗೋಧಿಯ ಉತ್ಪಾದನೆ ಹೆಚ್ಚಾಗುತ್ತದೆ. ಹಾಗೆಯೇ ದೇಶದ ಈಶಾನ್ಯ ಪ್ರದೇಶಗಳನ್ನು
ಸಾವಯವ ಹಬ್‌ಗಳೆಂದು ಘೋಷಿಸಲಾಗಿದೆ. ಅಲ್ಲಿ ಕೃಷಿ ಹೂಡಿಕೆಯು ನಿಯಂತ್ರಿತ ಸಾರ್ವಜನಿಕ ಸಂಗ್ರಹಣೆಯ
ಮೂಲಕ ಬರಬೇಕು.
ವಿವಿಧ ಪ್ರಕಾರಗಳಲ್ಲಿ ಕೃಷಿ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳುವ ರೈತರಿಗೆ ಹೆಚ್ಚುವರಿ ಆದಾಯ ಒದಗಿಸುವ ಗ್ರೀನ್
ಡೈರೆಕ್ಟ್ ಪೇಮೆಂಟ್ (ಪರಿಸರಸ್ನೇಹಿ ನೇರ ಪಾವತಿ) ಪದ್ಧತಿಯು ಮತ್ತೊಂದು ಉತ್ತಮ ದಾರಿ. ಉದಾಹರಣೆಗೆ
ಯೂರೋಪಿಯನ್ ಯೂನಿಯನ್‌ನಲ್ಲಿ ನೇರ ಪಾವತಿಯ ಶೇಕಡ 30 ರಷ್ಟು ಭಾಗ ಪರಿಸರ ಸ್ನೇಹಿ ನೇರ ಪಾವತಿಗೆ
ನಿಗದಿಪಡಿಸಲಾಗಿದೆ. ಅದರಂತೆಯೇ, ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಸಾವಯವ ಉತ್ಪನ್ನಗಳನ್ನು
ನಿಯಂತ್ರಿತ ಮಾರುಕಟ್ಟೆಗೆ ಮಾರಾಟ ಮಾಡುವ ರೈತರು ಶೇಕಡ 30 ರಷ್ಟು ಹೆಚ್ಚಿನ ಬೆಲೆ ಪಡೆಯಬೇಕು.
ಪರಿಸರ ಸಂಪನ್ಮೂಲಗಳ ಮೌಲ್ಯಮಾಪನ: ಇಷ್ಟೂ ವರ್ಷಗಳು ಮಣ್ಟಿನ ಫಲವತ್ತತೆ ಇದ್ದೇ ಇದೆ ಎಂದು
ಪರಿಗಣಿಸಲಾಗುತ್ತಿತ್ತು. ಅಂದರೆ ಇದುವರೆಗೂ ಮಣ್ಣಿನ ಫಲವತ್ತತೆ ಒದಗಿಸುತ್ತಿದ್ದ ಸೇವೆಗಳ, ಇಳುವರಿ ಮತ್ತು ಬೆಳೆಯ
ಗುಣಮಟ್ಟ ಎಂದುಕೊಳ್ಳೋಣ, ಆರ್ಥಿಕ ಮೌಲ್ಯಗಳನ್ನು ಯಾರೂ ಪರಿಗಣಿಸುತ್ತಿಲ್ಲ. ಆರ್ಥಿಕ ವ್ಯವಹಾರಗಳಲ್ಲಿ ಹಾಗೂ
ಹಣಕಾಸು ವ್ಯವಹಾರಗಳಲ್ಲಿ ಅದರ ಪಾಲುದಾರಿಕೆ ಹಾಗೂ ಅದರಿಂದ ಉಂಟಾಗುತ್ತಿದ್ದ ಲಾಭ ನಷ್ಟಗಳ ಬಗ್ಗೆ ಯಾರೂ
ತಲೆ ಕೆಡಿಸಿಕೊಂಡಿಲ್ಲ. ಈ ನಿಟ್ಟಿನಲ್ಲಿ ನೈಸರ್ಗಿಕ ಸಂಪನ್ಮೂಲಗಳು ಒದಗಿಸುವ ಸೇವೆಗಳು, ಅವುಗಳ ಮೌಲ್ಯಗಳನ್ನು
ಹಣಕಾಸಿನ ಲೆಕ್ಕಾಚಾರಕ್ಕೆ ಸರಿದೂಗಿಸುವ ಅಥವಾ ಅವಕ್ಕೊಂದು ಆರ್ಥಿಕ ಮೌಲ್ಯ ನಿಗದಿಪಡಿಸುವ ಪ್ರಕ್ರಿಯೆಗೆ
ಒಂದು ತಾರ್ಕಿಕ ಅಂತ್ಯ ಕಾಣಿಸುವ ಮೂಲಕ, ಬೆಳೆಗಳಿಗೆ ಬೆಲೆಗಳನ್ನು ನಿಗದಿಪಡಿಸುವ ಅಥವಾ ರೈತ ನಷ್ಟ
ಅನುಭವಿಸಿದಾಗ ಆತನಿಗೆ ಸಲ್ಲಬೇಕಾದ ಸರಿಯಾದ ಹಣವನ್ನು ಪಾವತಿ ಮಾಡುವ ಆರ್ಥಿಕ ವ್ಯವಸ್ಥೆಯೊಂದನ್ನು
ನಿರ್ಮಿಸಬೇಕು.
1991 ಹಾಗೂ 1998 ರಲ್ಲಿ ಚೀನಾ ದೇಶವೂ ಕ್ರಮವಾಗಿ GRAIN FOR GREEN ಹಾಗೂ GRAIN FOR BLUE
ಯೋಜನೆಗಳನ್ನು ಜಾರಿಗೆ ತಂದಿತು. ಅದೇ ಬಗೆಯ ಶಿಫಾರಸುಗಳನ್ನು ಯೂರೋಪ್‌ನಲ್ಲೂ ಮಂಡಿಸಲಾಯಿತು.
ಮಧ್ಯ ಅಮೆರಿಕದ ಪಶ್ಚಿಮ ಪ್ರದೇಶಗಳಲ್ಲೂ ಸುಸ್ಥಿರ ಕೃಷಿ ಪದ್ಧತಿಗಳ ಕಡೆಗೆ ರೈತರು ಅಳವಡಿಸಿಕೊಳ್ಳುವುದನ್ನು
ಪ್ರೋತ್ಸಾಹಿಸುವುದಕ್ಕಾಗಿ ಪರಿಸರ ಸ್ನೇಹಿ ವಿಧಾನಗಳಿಗೆ ಹೆಚ್ಚುವರಿ ಪಾವತಿಗೆ ಪ್ರಸ್ತಾವನೆ ಮಂಡಿಸಲಾಯಿತು. ತೀರ
ಇತ್ತಿಚೆಗೆ ಪೇಮೆಂಟ್ ಫಾರ್ ಎಕೋ ಸಿಸ್ಟಮ್ ಸರ್ವೀಸಸ್ (ಪಿಇಎಸ್; ಪರಿಸರ ಸ್ನೇಹಿ ಸೇವಾ ಪಾವತಿ ಕ್ರಮ),
ಶಿಫಾರಸ್ಸಿನ ರೂಪ ಪಡೆಯಿತು. ಸುಸ್ಥಿರ ಕೃಷಿ ಪದ್ಧತಿ ಪಾಲಿಸುವ ರೈತರಿಗೆ ವರಮಾನ ಖಾತರಿ ನೀಡುವುದೇ ಅದರ
ಉದ್ದೇಶ. ಆ ಶಿಫಾರಸ್ಸಿನಲ್ಲಿ ಮಂಡನೆಯಾದ ಕೆಲವು ಅಂಶಗಳು ಹೀಗಿವೆ; ‘ಪರಿಸರ ಸ್ನೇಹಿ ಕೃಷಿ ವಿಧಾನಗಳನ್ನು
ಅಳವಡಿಸಿಕೊಂಡಿರುವ ರೈತ ಇತರ ರೈತರಿಗೆ ಹೋಲಿಸಿದರೆ, ಪರಿಸರಕ್ಕೆ ಹೆಚ್ಚಿನ ಕೊಡುಗೆಯನ್ನು ಕೊಡುತ್ತಿದ್ದಾನೆ.
ಅವುಗಳಲ್ಲಿ ಸಾವಯವ ಕೃಷಿಯೂ ಒಂದು. ಅಂತಹ ಕೃಷಿಕರು, ತಮ್ಮ ಕೃಷಿ ವಿಧಿವಿಧಾನಗಳ ಮೂಲಕ ಪಾರಿಸರಿಕ
ಆಸ್ತಿ ಬಂಡವಾಳ ವರ್ಧನೆ ಮಾಡದ ರೈತರಿಗೆ ಹೋಲಿಸಿದಾಗ, ಹೆಚ್ಚಿನ ಅಥವಾ ಹೆಚ್ಚುವರಿ ಆದಾಯವನ್ನು
ಪಡೆಯತಕ್ಕದ್ದು. ಈ ಹೊತ್ತಿನ ಆರ್ಥಿಕ ಅಧ್ಯಯನದಲ್ಲಿ ಅಂದರೆ ಕೃಷಿ ಆರ್ಥಿಕತೆ ಅಧ್ಯಯನದಲ್ಲಿ, ಹಾಗೂ
ಸಾರ್ವಜನಿಕ ನೀತಿಯಲ್ಲೂ ಒಳಗೊಂಡಂತೆ, ಪರಿಸರ ಸ್ನೇಹಿ ಸೇವೆಗಳಿಗೆ ಹಣ ನೀಡುವುದು ಅತ್ಯಗತ್ಯ
ಕ್ರಮವಾಗುತ್ತದೆ.
ಜೀ 20 ಯಲ್ಲಿ : ಈಗ ಅಂತಿಮವಾಗಿ; ಇಡೀ ಜಗತ್ತು ವಾತಾವರಣ ಬದಲಾವಣೆಯ ಬಿಸಿಯನ್ನು
ಅನುಭವಿಸುತ್ತಿರುವಾಗ; ಇಡೀ ಜಗತ್ತು ಉದ್ಯೋಗ ಸೃಷ್ಟಿಸಲಾಗದೇ ಶೂನ್ಯ ದೃಷ್ಟಿ ಬೀರುತ್ತಿರುವಾಗ; ಇಡೀ ಜಗತ್ತು
ತನ್ನ ಪರಿಸರದ ಮೇಲಾಗುತ್ತಿರುವ ದಾಳಿಗೆ ಕೇವಲ ಸಾಕ್ಷಿಯಾಗಿರುವಾಗ; ಕನಿಷ್ಠ ಪಕ್ಷ ಈ ಜೀ 20 ರಾಷ್ಟ್ರಗಳು
ವಿಷಯುಕ್ತವಾಗಿರುವ ಉಳುವ ಯೋಗಿಯ ಭೂಮಿಯನ್ನು ಅಮೃತವಾಗಿಸುವ ಯೋಚನೆ ಮಾಡುತ್ತವೆಯೇ?
ವಿಷ ಭೂಮಿಗಳನ್ನು ಅಮೃತಭೂಮಿಗಳನ್ನಾಗಿಸದ ಹೊರತು, ಸಾವಯವ ಕೃಷಿಯತ್ತ ಆರ್ಥಿಕ ಅಭಿವೃದ್ಧಿಯ ನೋಟ
ಹರಿಯದ ಹೊರತು, ವಾತಾವರಣ ಬದಲಾವಣೆಯ ಬಿಕ್ಕಟ್ಟುಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುವ ಬಗೆಯ
ಕುರಿತೋ ಅಥವಾ ದೇಶ ಅನುಭವಿಸುತ್ತಿರುವ ಉದ್ಯೋಗ ಸೃಷ್ಟಿಯ ದೊಡ್ಡ ಕಂದಕವನ್ನು ತುಂಬುವ ಯಾವುದೇ
ಯೋಜನೆಗಳು ನನ್ನ ಪಾಲಿಗೆ ಆಶಾದಾಯಕವಾಗಿಲ್ಲ.
ಸುಸ್ಥಿರ ಕೃಷಿ ಮಾತ್ರ ಮನುಕುಲದ ಬದುಕನ್ನು ಕಟ್ಟಬಲ್ಲದು. ಪರಿಸರಸ್ನೇಹಿ ಕೃಷಿ ಪದ್ಧತಿಗಳು ಮಾತ್ರ ನಮ್ಮ
ಜಮೀನುಗಳನ್ನು ವಿಷ ಮುಕ್ತವಾಗಿಸಬಲ್ಲವು, ಅಂತರ್ಜಲವನ್ನು ವೃದ್ಧಿಸಬಲ್ಲವು, ನದಿಗಳನ್ನು ಮತ್ತೆ ಹರಿಯುವಂತೆ
ಮಾಡಬಲ್ಲವು, ಆರೋಗ್ಯಯುತ ಪೌಷ್ಠಿಕ ಆಹಾರ ಮಾತ್ರ ಇಡೀ ಜಗತ್ತನ್ನು ಆವರಿಸಿಕೊಳ್ಳುತ್ತಿರುವ ರೋಗಗಳಿಂದ
ಮುಕ್ತವಾಗಿಸಬಲ್ಲದು. ಕೃಷಿ ಮಾತ್ರ ಜಾಗತಿಕ ಆರ್ಥಿಕತೆಯನ್ನು ಮೇಲೆತ್ತಬಲ್ಲದು. ಕಾರ್ಮೋಡಗಳ ತುತ್ತ ತುದಿಯಲ್ಲಿ
ಚಿಮ್ಮುತ್ತಿರುವ ಬೆಳ್ಳಿಯಂಚನ್ನು ಜಿ 20 ರಾಷ್ಟ್ರಗಳು ಕಾಣಬಲ್ಲವೇ?!!!