ಗೊಲ್ಲಳ್ಳಿ ಮತ್ತು “ಕೃಷಿ ಸಮಯ” ಸಂಬಂಧ – ಒಂದು ಭಾವಪೂರ್ಣ ನೆನಪು

ಗೊಲ್ಲಳ್ಳಿ ಮತ್ತು “ಕೃಷಿ ಸಮಯ” ಸಂಬಂಧ – ಒಂದು ಭಾವಪೂರ್ಣ ನೆನಪು
Spread the love

ನಾಗೇಶ್ ಕೆ.ಎನ್.

ಈಗ್ಗೆ ಏಳೆಂಟು ವರ್ಷಗಳ ಹಿಂದಿನ ಮಾತು. ಬೆಂಗಳೂರು ಕೃಷಿ ವಿ.ವಿ.ಯ EXTENSION DIRECTOR ನಾಗರಾಜ್ ಅವರು ಕೃಷಿ ಮೇಳಕ್ಕೊಂದು ಥೀಮ್ ಸಾಂಗ್ ಮಾಡಬಹುದಾ ಎಂದು ಪ್ರಸ್ತಾಪಿಸಿದರು. ಸರ್. ವೆರಿ ಗುಡು ಐಡಿಯಾ ಎಂದವನು.. ಗೊಲ್ಲಳ್ಳಿ ಶಿವಪ್ರಸಾದ್ ಕೇಳಿ ಎಂದೆ. ನನಗೂ ಅವರೇ ತಲೇಲಿರೋದು ಅಂದರು. ಫೋನ್ ಮಾಡಿದರು. ಆ ಕಡೆಯಿಂದ ಉತ್ತರವಿಲ್ಲ. ಕ್ಷಣ ಕಾಲ ಬಿಟ್ಟು ನಾನು ಕಾಲ್ ಮಾಡಿದೆ ಮತ್ತೆ ಉತ್ತರವಿಲ್ಲ.

ಸಂಜೆಗೆ ಗೊಲ್ಲಳ್ಳಿ ಅವರ ಫೋನ್ ಬಂತು. ನಾನು ಅವರು ಕನ್ನಡ-ತೆಲುಗು ಮಿಶ್ರಿತ ಭಾಷೆಯಲ್ಲಿ ಮಾತನಾಡಿಕೊಳ್ಳುವುದು. “ಸ್ವಾಮೇ ಇವ್ಡ ಕೃಷಿ ಮೇಳಾಕಿ ಪಾಟ ರಾಯಲ್ಲ ಕದಾ ಅಂದೆ. ಮೀರಂತಾ ಏಮ್ ಶೇಸ್ತಾರು, ಅಂತಾ ನೇನೇ ರಾಯಲ್ನೇ ಅಂದರು. ಅಯ್ಯೋ.. ಅದೇಮಿ ಆರ್ಟಿಕಲ್ಲಾ, ನ್ಯೂಸ್ ಸ್ಟೋರಿಯಾ… ನೇನೆಟ್ಲ ರಾಸೇದಿ ಅಂದೆ. ಏಮಿ ಸಾಂಗ್ ಅದಿ ಅಂದ್ರು. ಥೀಮ್ ಸಾಂಗ್ ಅಂದೆ. ಥೀಮ್ ತೆಲೀದಾ ನೀಕು… ರಾಯಿ ಅಂದ್ರು. ಸರೇ ಟ್ರೇ ಚೇಸ್ತಾನು.. ಮಲ್ಲಾ ಮೀರು ಚೂಡಲ್ಲ ಅಂದೆ. ಕಾನಿ ಅಂದ್ರು. ಕುಶಲೋಪಹರಿ ಮುಗಿಸಿ ಫೋನ್ ಕಟ್

ಇದೊಳ್ಳೆ ತಾಪತ್ರಾಯ ಆಯ್ತಲ್ಲಾ ಅಂದುಕೊಂಡು… ಅಂದೇ ರಾತ್ರಿ ಬರೆಯುವ ಪ್ರಯತ್ನ ಮಾಡಿದೆ.

“ಇದು ನೆಲದ ಮೇಳ

ಇದು ಜಲದ ಮೇಳ

ಇದು ಬೀಜದ ಮೇಳ

ಇದು ಬೆಳೆಯ ಮೇಳ

ಹೀಗೆ ಬರೆದು ಕಳುಹಿಸಿದೆ. ದೀಂಟ್ಲಾ ಏಮೀ ಚೇಂಜ್ ಒದ್ದು ಬಾಗನೇ ಉಂದಿ ಪಂಪಿ ವಾಳ್ಕಿ ಅಂದರು. ಮಾರನೇ ದಿನ ನಿರ್ದೇಶಕರನ್ನು ಭೇಟಿ ಮಾಡಿ ನಡೆದದ್ದೆಲ್ಲಾ ವಿವರಿಸಿದೆ. ಹೌದೇನ್ರಿ ಗೊಲ್ಲಳ್ಳಿ ಸರಿ ಇದೆ ಅಂದ್ರಾ.. ಹೂ ಸಾರ್ ನನ್ನನ್ನೂ ರಾತ್ರೋ ರಾತ್ರಿ ಹಾಡು ಬರಿಯೋಹಂಗೆ ಮಾಡಿದ್ರು ನೋಡಿ ಅಂದೆ. ಅವ್ರು ಒಂದೆರಡು ಸಾರಿ ಓದಿ.. ಓಕೆ ಮ್ಯೂಸಿಕ್ ಮಾಡ್ಸಿ ಅಂದರು.

ಜನ್ನಿ ಅವರಿಗೆ ಕಳುಹಿಸಿದೆ. ಏಯ್ ನಾಗೂ… ಚನ್ನಾಗಿದೆ ಕಣೋ ಇದು.. ನಾಳೆನೇ ಮಾಡ್ತೀನಿ ಅಂದವರು … ಒಳ್ಳೇ ಮ್ಯೂಸಿಕ್ ಮಾಡಿದ್ದೂ ಅಲ್ಲದೆ ತಾವೇ ಖುದ್ದು ಹಾಡಿ ಕಳುಹಿಸಿದರು.ನನ್ನ ಖುಷಿಗೆ ಪಾರವೇಇಲ್ಲ. ಆ ಕೃಷಿ ಮೇಳದ ಟೈಟಲ್ ಸಾಂಗ್ ಕೃಷಿ ಮೇಳದ ಆಂಥಮ್ ಆಗಿದ್ದು ಸುಳ್ಳಲ್ಲ.

ಹೀಗೆ ಸುದ್ಧಿ ಲೇಖನ ಬರೆಯೋ ನನ್ನನ್ನ ಹಾಡು ಬರೆಯೋಹಾಗೆ ಮಾಡಿದ ಗೊಲ್ಲಳ್ಳಿ ಶಿವಪ್ರಸಾದ್ ಜಾನಪದ ಅಕಾಡೆಮಿ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಅವರಿಗೆ ಅಭಿನಂದನೆಗಳು.

ನಿನ್ನೆ  ಜೂನ್ 13 ರಂದು ಕರ್ನಾಟಕದ ಜಾನಪದ ಅಕಾಡೆಮಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಗೊಲ್ಲಳ್ಳಿ ಶಿವಪ್ರಸಾದ ಮಾತನಾಡಿ ಪ್ರಚಲಿತ ಹಾಗೂ ನಶಿಸುವ ಹಂತದಲ್ಲಿರುವ ಜನಪದ ಕಲೆಗಳ ಪುನರುಜ್ಜೀನಗೊಳಿಸಬೇಕು. ಅದಕ್ಕಾಗಿ ಶಾಲಾ ಕಾಲೇಜುಗಳಲ್ಲಿ ಜನಪದ ಕಲಿಕಾ ಶಿಬಿರಗಳ ಮುಖಾಂತರ ವಿದ್ಯಾರ್ಥಿಗಳಿಗೆ ಜಾನಪದದ ಬಗ್ಗೆ ಅರಿವು ಮೂಡಿಸುವ ಕೆಲಸಗಳನ್ನು ಮಾಡಬೇಕಿದೆ ಎಂದು ತಮ್ಮ ಮನದಾಶೆಯನ್ನು ಹೇಳಿದರು.

ಗೊಲ್ಲಳ್ಳಿ ಅವರ ನೇತೃತ್ವದಲ್ಲಿ ಕರ್ನಾಟಕದ ಜಾನಪದ ಲೋಕದಲ್ಲಿ ಹೆಚ್ಚಿನ ಸಂಶೋಧನೆಗಳು ನಡೆಯಲಿ, ಅಳಿವಿನಂಚಿಯ ಜಾನಪದ ಪ್ರಕಾರಗಳು ಮರುಜನ್ಮ ತಾಳಲಿ, ಹೊಸಪೀಳಿಗೆಗೆ ಜಾನಪದದ ಸೊಗಡು ಅನುಭವಕ್ಕೆ ಬರಲಿ ಎಂದು ಕೃಷಿ ಸಮಯ ಆಶಿಸುತ್ತದೆ.


Spread the love