ಆರ್. ಜಿ. ಹಳ್ಳಿ ನಾಗರಾಜ
ನಿನ್ನೆಯಷ್ಟೇ ಸಾಹಿತಿ ಕೃಷ್ಣಮೂರ್ತಿ ಬಿಳಿಗೆರೆ ಅವರಿಗೆ ಬಾಲ ಸಾಹಿತ್ಯ ವಿಭಾಗದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದ ಕೃತಿ “ಛೂಮಂತ್ರಯ್ಯನ ಕತೆಗಳು” ಸಂಕಲನದಲ್ಲಿ ಜೀವಪರ ಕೃಷಿಗೆ ಸಂಬಂಧಿಸಿದ, ರೈತರೇ ವಿಜ್ಞಾನಿಗಳಾಗುವ, ತತ್ವಜ್ಞಾನಿಗಳಾಗುವ ಪ್ರಕ್ರಿಯೆಗೆ ದಾರಿಯಾಗುವ ಕತೆಗಳಿವೆ. ಇಲ್ಲಿನ ಚೂಮಂತ್ರಯ್ಯ ಒಬ್ಬನಲ್ಲ, ಬಹುಜೀವಿಗಳ ರೂಪಕ. ಕೇವಲ ಮನುಷ್ಯರಲ್ಲ, ಪ್ರಾಣಿ ಪಕ್ಷಿ, ಕ್ರಿಮಿಕೀಟ ಗಿಡ,ಮರ ,ಬಳ್ಳಿ, ಮಳೆ ,ಗಾಳಿ, ಬಿಸಿಲು ಏನೆಲ್ಲವೂ ಇವೆಯೋ ಛೂಮಂತ್ರಯ್ಯನ ಕತೆಯಲ್ಲಿ ಇವೆಲ್ಲವೂ ಜೀವಪರ ಕಾಳಜಿ ಹೊಂದಿವೆ.
“ಹುಟ್ಟಿಸುವ ಅಧಿಕಾರ ನಿನಗಿದೆಯೋ ಇಲ್ಲವೋ ಆದರೆ ಕೊಲ್ಲುವ ಅಧಿಕಾರ ನಿನಗಿಲ್ಲ” ಎನ್ನುವುದನ್ನು ಸಾಧಿಸಿ ತೋರಿಸುವ ಕತೆಗಳು ನಮಗೆ ಮುಖಾಮುಖಿಯಾಗುತ್ತವೆ. ಸಾಮಾನ್ಯವಾಗಿ ಕತೆ ಎಂದರೆ ಕಾಲ್ಪನಿಕದ್ದಾಗಬಹುದು, ಕನಸಿನದ್ದಾಗಬಹುದು, ವಾಸ್ತವ ಜಗತ್ತಿಗೆ ತೆರೆದುಕೊಳ್ಳುವುದಗಾಬಹುದು, ಅನುಭವದ ಸಾರವೂ ಆಗಬಹುದು. ಆದರೆ ಈ ಕತೆಗಳನ್ನು ಓದುತ್ತಾ ಹೋದಂತೆ ಫ್ಯಾಂಟಸಿಯ ಕಲ್ಪನೆ ಹೆಚ್ಚಿದೆ ಅನ್ನಿಸುತ್ತದೆ. ನಿಜ. ಇವತ್ತಿನ ಜಗತ್ತೇ ಫ್ಯಾಂಟಸಿಯದ್ದು. ಆ ಮೂಲಕ ಮತ್ತೊಂದು ಬದುಕನ್ನು ಕಟ್ಟಿಕೊಳ್ಳುವತ್ತ ಆಲೋಚಿಸುತ್ತೇವೆ. ಹೀಗಾಗಿ ಛೂಮಂತ್ರಯ್ಯ.. “ಮನುಷ್ಯ ಕುಲಕ್ಕೆ ಸೇರದ ಕಾಡು ಮನುಷ್ಯ” , ಅಂತಾ ಕರೆಯುತ್ತಿದ್ದರು ಅನ್ನೋದು ಕಥೆಯಲ್ಲಿದೆ. ಅದು ಒಂದರ್ಥದಲ್ಲಿ ಸರಿ, ಈ ಛೂಮಂತ್ರಯ್ಯ ಸಾಂಕೇತಿಕ- ಕಾಲ್ಪನಿಕ ಹೆಸರಾದರೂ ಬುಜಂಗಯ್ಯನ ದಯಾವತಾರದ ತರ.
ಹೀಗೆ ಅನೇಕ ಕಥೆಗಳು ಮನಸ್ಸಲ್ಲಿ ಉಳಿಯುವ, ಮನಸ್ಸಿಗೆ ನಾಟುವ ವಸ್ತು ವೈವಿಧ್ಯತೆಗಳಿಂದ ಒಳಗೊಂಡಿವೆ. ಅದರಲ್ಲಿ ಎರಡು ಹಾವುಗಳು ಶಾಶ್ವತವಾಗಿ ಇಲ್ಲವಾದದ್ದು ಒಂದು ಘಟನೆ. ಕಥೆ ಓದುತ್ತಿದ್ದರೆ ವಿಚ್ರಿತ್ರ ಅನಿಸುತ್ತದೆ. “ ಹಾವುಗಳು ರೈತನ ಮಿತ್ರ” ಅನ್ನೋ ಸತ್ಯ ನಮಗೆ ಅರಿವಾಗುತ್ತೆ. ಕಥೆ ಓದುತ್ತಾ ಹೋದಂತೆ ಹೌದಲ್ವಾ ಹಾವುಗಳೂ ರೈತನ ಸ್ನೇಹ ಜೀವಿಗಳು ಅನ್ನಿಸಿಬಿಡುತ್ತೆ. ಅದರೆ ವಾಸ್ತವ ಹಾಗಿಲ್ಲ. ಕಲ್ಲನಾಗರ ಕಂಡರೆ ಹಾಲೆರೆವ, ದಿಟನಾಗರ ಕಂಡರೆ ಕೊಲ್ಲೆಂಬರು ಎಂಬ ಸಂಸ್ಕೃತಿ ನಮ್ಮದು. ಇಲ್ಲಿನ ಎರಡು ಹಾವುಗಳು ಒಂದೇ ರೀತಿ. ಅವು ಗಂಡ ಹೆಂಡತಿಯೋ, ಅಕ್ಕ ತಂಗಿಯೋ, ಅಣ್ಣ ತಮ್ಮನೋ ಒಟ್ಟಲ್ಲಿ ಜೊತೆಗಿರ್ತಿದ್ವು. ಈ ಹಾವುಗಳು ಛೂಮಂತ್ರಯ್ಯನ ತೋಟದಲ್ಲಿ ಇರುವ ಬಗ್ಗೆ ಕುತೂಹಲಕಾರಿ ಸನ್ನಿವೇಶಗಳನ್ನು ಕಥೆಗಾರ ಇಲ್ಲಿ ತಂದಿದ್ದಾನೆ. ಉದಾಹರಣೆ ಪುಟ 30.
ಇದೊಂದು ವೈಜ್ಞಾನಿಕ ಕಾರಣ ಅನ್ನಿಸಿತು. ಭೂಮಿಯ ಅನುಭವ ಪಡೆಯದೆ ತೋಟದಲ್ಲಿನ ಪ್ರತಿ ಜೀವಿಗಳನ್ನು ಸೂಕ್ಷ್ಮವಾಗಿ ಗಮನಿಸದಿದ್ದರೆ ಹೀಗೆ ಬರೆಯಲು ಸಾಧ್ಯವೇ ಇಲ್ಲ. ಉದಾಹರಣೆಗೆ ಇಲಿ, ಹಲ್ಲಿ, ಕಪ್ಪೆ ನುಂಗಿ ಬರುತ್ತಿದ್ದ ಹಾವುಗಳು ಅವು ಸಿಕ್ಕದಿದ್ದಾಗಿ ಗೆದ್ದಲು ತಿನ್ನುತ್ತಿದ್ದವು ಅನ್ನೋದು ನಮ್ಮ ಆಲೋಚನೆಗೆ ಬಿಟ್ಟಿದೆ. ಬಹುಸೂಕ್ಷ್ಮ ಗ್ರಹಿಕೆಯ ವಿಚಾರವಿದು. ಮುಂದೆ ಕಥೆ ಅನೇಕ ತಿರುವುಗಳನ್ನು ಪಡೆಯುತ್ತಾ ಹಾವುಗಳಿಗೂ ಬರವಿರಲಿಲ್ಲ, ಇದ್ದಕ್ಕಿದ್ದಂತೆ ಅವು ಅಲ್ಲಿ ಇಲ್ಲವಾದಾಗ ಚೂಮಂತ್ರಯ್ಯನಿಗೆ ಚಿಂತೆ ಶುರುವಾಗುತ್ತೆ. ಕೊನೆಗೆ ಇಲಿ ಹಿಡಿಯಲು ಇಟ್ಟಿದ್ದ ಕತ್ತರಿಯಲ್ಲಿ ಸಿಲುಕಿ ಅವು ಸತ್ತು ಹೋಗಿರುತ್ತವೆ. ಆದರೆ ಜಾಣ ಇಲಿಗಳು ಒಂದೂ ಅಲ್ಲಿ ಬಂದು ಸಿಕ್ಕಿಹಾಕಿಕೊಂಡಿರಲಿಲ್ಲ ಅನ್ನೋದು ಕುತೂಹಲಕರ.
ಮುಂದೆ ಛೂಮಂರ್ತಯ್ಯನಿಗೆ ಚಿಂತೆ ಆಗುತ್ತೆ, ತೋಟದಲ್ಲಿ ಹಾವಿರಬೇಕು ಎಂದು ಹಾವಾಡಿಗರನ್ನು ಕರೆಸಿಕೊಂಡು ಹಾವು ಬಿಡಿಸಿಕೊಳ್ಳುತ್ತಾನೆ. ಇದು ಛೂಮಂತ್ರಯ್ಯನಿಂದ ಸಾಧ್ಯ. ಛೂಮಂತ್ರಯ್ಯ ಮನುಷ್ಯನಾಗಿರದೆ ಕಾಡುಮನುಷ್ಯನ ಹಾಗೇ ಕಾಣುತ್ತಾನೆ.
ರೈತ ವರ್ಗದಲ್ಲಿ ಇಷ್ಟು ಕರಾರುವಾಕ್ಕಾಗಿ ಆಲೋಚಿಸುವ ಬಿಳಿಗೆರೆಯಂತ ಲೇಖಕರರನ್ನು ಮೂರು ದಶಕಗಳಿಂದ ನಾನು ಕಂಡಿಲ್ಲ. ಬಿಳಿಗೆರೆ ತನ್ನ ವೃತ್ತಿಯನ್ನು, ಪ್ರವೃತ್ತಿಯನ್ನೂ ಸಮಾನವಾಗಿ ಪ್ರೀತಿಸಿದವನು. ನಗರ ಪ್ರದೇಶವನ್ನು ದಿಕ್ಕರಿಸಿ ಸಂಗಾತಿ ಜೊತೆಗೆ ಬಿಳಿಗೆರೆ ಎಂಬ ಹಳ್ಳಿಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ಬಾಳಿ ಬದುಕಿದವನು. ತನ್ನ ಅಪ್ಪ ಅವ್ವನ ಹೊಲ ತೋಟ ಮಾಡುತ್ತಾ ಕವಿತೆ, ಹಾಡು, ನಾಟಕ ಬರಕೊಂಡು ಕೃಷಿಯಲ್ಲಿ ಹೊಸತನ ಸಾಧಿಸಿದ ಮಿತ್ರ ಇವನು. ಕಲಿತ ನಮಗೆಲ್ಲಾ ಎಂಬತ್ತರ ದಶಕದಿಂದ ಫುಕುವೋಕಾ ಗೊತ್ತು. ಕೃಷಿಕರಲ್ಲದವನೂ ಅವನ ಸಹಜ ಕೃಷಿ ಬಲ್ಲರು. ಕೊನೆ ಪಕ್ಷ ಅವನ ಪುಸ್ತಕವನ್ನಾದರೂ ಒದಿದವರು.
ಇಡೀ ಕೃತಿಯಲ್ಲಿ ಗ್ರಹಿಸಿಬೇಕಾದ ಅನೇಕ ಅಂಶಗಳಿವೆ. ರೈತ ಹೋರಾಟಕ್ಕೆ ಸಂಬಂಧಿಸಿದ ನೇರ ಸೂಕ್ಷ್ಮ ವಿಚಾರಗಳೂ ಇಲ್ಲಿವೆ. ಮುಖ್ಯವಾಗಿ ರಾಸಾಯನಿಕಗಳಿಂದ, ಕ್ರಿಮಿನಾಶಕಗಳಿಂದ ರೈತನ ಜಮೀನು ಬಂಜೆ ಆಗುವ ಬಗ್ಗೆ ರೈತನ ಶೋಷಣೆಗಳ ಅರಿವು ಮೂಡಿಸುತ್ತಾ ಜಪಾನಿನ ಉದ್ದ ಗಡ್ಡದ ಫುಕವೋಕಾ ತಮ್ಮ ಪೂರವಜರ ಕೃಷಿ ಪದ್ಧತಿಗಳು ಛೂಮಂತ್ರನಲ್ಲಿವೆ.
ಇಂಥವರ ಆದರ್ಶ ಕೃಷ್ಣಮೂರ್ತಿ ಬಿಳಿಗೆರೆಗೂ ಇದೆ. ಹೀಗಾಗಿ ಅವನ ಛಲ, ಸಾಧನೆ ಹಾಡು, ಸಂಘಟನೆ, ಉಪನ್ಯಾಸ ಮತ್ತವನ ತೊಡಗಿಸಿಕೊಳ್ಳುವಿಕೆ ನಮಗೆಲ್ಲಾ ಮಾದರಿ. ಆದರೆ ಅವನಂತೆ ನಾವಿರಲು ಸಾಧ್ಯವಿಲ್ಲ.