ಕೆ.ಎನ್.ನಾಗೇಶ್
ಲಂಕೇಶ್ ಬಳಗದ ಬಹುಮುಖ್ಯರಾದ ಬಸವರಾಜು, ಟಿ.ಕೆ. ತ್ಯಾಗರಾಜ್, ಈಚಂ, ಸಿ.ಎಸ್. ದ್ವಾರಕನಾಥ್, ಎನ್.ಎಸ್. ಶಂಕರ್ ಮುಂತಾದ ಅನೇಕ ಹಿರಿಯರನ್ನು ನಿನ್ನೆ ಒಂದೇ ದಿನ ಭೇಟಿಯಾಗುವ ಅವಕಾಶ ಪ್ರೆಸ್ ಕ್ಲಬ್ ಚುನಾವಣೆ ನೆಪದಲ್ಲಿ ಒದಗಿ ಬಂತು. ಇವರೆಲ್ಲರ ನಡುವೆ ಅಪರೂಪದ ಅತಿಥಿ ಲಂಕೇಶ್ ಮೇಷ್ಟ್ರ ಸಹಾಯಕ ಗಿರಿ ಅವರು ಒಂದು ಮರದಡಿ ಬಸಣ್ಣನ ಜೊತೆ ಹಗುರವಾಗಿ ಕುಳಿತಿದ್ದರು. ಬಸಣ್ಣ ಇವರ್ಯಾರು ಗೊತ್ತಾ… ಗಿರಿ ಎಂದಿ ಪರಿಚಯಿಸಿದರು. ನನಗೆ ಯಾವ ಗಿರಿ ಎಂಬ ಪ್ರಶ್ನೆ ಉದ್ಬವಿಸಲೇ ಇಲ್ಲ. ಕಾರಣ ಲಂಕೇಶ್ ಕಚೇರಿಯ ಗಿರಿ ಎಂಬ ಹೆಸರು ಯಾವುದೋ ಅವಾರ್ಡ್ ಸಿನೆಮಾದ ಕ್ಯಾರೆಕ್ಟರ್ ನಂತೆ, ಮತ್ತಾವುದೋ ಸಂಗ್ರಾಮದ ಪಾತ್ರದಂತೆ ಸದಾ ನನ್ನೊಳಗೆ ಇದ್ದೇ ಇತ್ತು. ಅರೆರೆ ನಮಸ್ಕಾರ ಗಿರಿಯಣ್ಣ ಎಂದು ಮಾತನಾಡಿಸಿದೆ. ನಿಧಾನಕ್ಕೆ ಯಾವೂರು ಅಂದರು, ಮಧುಗಿರಿ ತಾಲ್ಲೂಕು ಕಾಳೇನಹಳ್ಳಿ ಎಂದೆ. ನಮ್ಮದು ಅಲ್ಲೇ ಶಿರಾ ಎಂದು ಊರಿನ ಬಾಂಧವ್ಯ ಬೆಸೆದರು.
ಕ್ಷಣ ಕಾಲದ ನಂತರ ಟಿ.ಕೆ. ತ್ಯಾಗರಾಜ್ ಟೇಬಲ್ ನತ್ತ ಬಂದವರು ಗಿರೀಈಈಈಈಈ… ಎಂದು ಬಾಚಿ ತಬ್ಬಿದರು. ಈಚಂ ಕೂಡಾ ಗಿರೀಈಈಈಈ… ಎಂದು ತಬ್ಬಿದರು. ಇವೆರಡು ಸನ್ನಿವೇಶಗಳು ಅತ್ಯಂತ ಭಾವುಕವಾಗಿದ್ದವು. ಇವರ ನಡುವಿನ ನಿಜ ಪ್ರೀತಿಯ ಪೋರ್ಟ್ರೇಟ್ ನನ್ನ ಕಣ್ಣುಗಳು ಸೆರೆ ಹಿಡಿದು ಮನದೊಳಗೆ ಅಚ್ಚುಮೂಡಿಸಿವೆ.
ಕ್ಲಬ್ಬಿನ ಆವರಣದಲ್ಲಿ ಎಲ್ಲಾ ಹೊಸ ಮುಖಗಳನ್ನು ಕಂಡು ಅಪರಿಚಿತರೇ ಹೆಚ್ಚಿದ್ದ ಕಾರಣ ಮಳೆ ಕಾಣದ ಕೃಷಿ ಭೂಮಿಯಂತೆ ಬಣಗುಡುತ್ತಿದ್ದ ಟಿ.ಕೆ. ತ್ಯಾಗರಾಜ್ ಮತ್ತು ಈಚಂ ಅವರ ಮುಖಗಳು ಗಿರಿ ಕಂಡ ಕೂಡಾಲೇ ಮುಂಗಾರಿನ ಮಳೆಗೆ ನಳನಳಿಸುವ ಗಿಡಮರಗಳಂತೆ ಪ್ರಫುಲ್ಲವಾಗಿದ್ದು ಕಂಡೆನು. ಇವೆಲ್ಲವನ್ನೂ ತದೇಕಚಿತ್ತದಿಂದ ನೋಡುತ್ತಾ ಒಮ್ಮೊಮ್ಮೆ ಹೊರಗಿನವರಿಗೆ ಕಾಣುವಂತೆ ಇನ್ನುಳಿದಂತೆ ಯಾರಿಗೂ ಕಾಣದಂತೆ ನಗುವಿನ-ಸಂತೋಷದ ಕಡಲಲ್ಲಿ ತೇಲುತ್ತಲೇ ಇದ್ದ ಬಸವರಾಜ್ ಅವರನ್ನೂ ಕಣ್ತುಂಬಿಕೊಂಡೆ.
ಅಲ್ಲಿಂದಾಚೆಗೆ ಸುಮಾರು ಮೂರ್ನಾಲ್ಕು ಗಂಟೆ ಲಂಕೇಶರ ಕಚೇರಿಯ ಅವರ ಅನುಭವಗಳನ್ನು ಮಾತನಾಡುತ್ತಾ ಇದ್ದರು. ನಾನು ಮತ್ತು ನನ್ನ ವಾರಗೆಯ ತೊಗರ್ಸಿಗೆ ಕುತೂಹಲದಿಂದ ಕೇಳಿಸಿಕೊಳ್ಳುತ್ತಿದ್ದೆವು. ಲಂಕೇಶರೊಂದಿಗೆ ಅವರು ಕಲಿತದ್ದು, ಆ ವಯಸ್ಸಿನಲ್ಲಿ ವಯೋಸಹಜವಾದ ಇವರ ಕೀಟಲೆಗಳಿಂದ ಲಂಕೇಶರಿಂದ ಬೈಸಿಕೊಳ್ಳುತ್ತಿದ್ದದ್ದು. ಇವರುಗಳು ಮಾಡುವ ತಪ್ಪಿಗೆ ಗಿರಿ ಪೇಚಿಗೆ ಸಿಲುಕಿತ್ತಿದ್ದದ್ದು, ದೂರ್ವಾಸನಂಥಃ ಮೇಷ್ಟ್ರ ಸಿಟ್ಟಿಗೆ ಇವರಾರೂ ಬಲಿಯಾಗದಂತೆ ಪ್ರೊಟೆಕ್ಟೀವ್ ಆಗಿ ಅಮ್ಮನಂತೆ ಕಾಪಾಡುತ್ತಿದ್ದ ಗಿರಿಯ ಪ್ರೀತಿಯ ಬಗೆಗೆ ಮಾತನಾಡುತ್ತಾ ಎಲ್ಲರೂ ಮೂರ್ನಾಲ್ಕು ದಶಕ ಹಿಂದಕ್ಕೋಗಿ ಮೈಮರೆತಿದ್ದರು. ನಮಗೂ ಅದೊಂದು ಸುಂದರ ಪ್ರಯಾಣದಂತೆ ಭಾಸವಾಯಿತು.
ಆ ಕಾಲದ ಮೆಸ್ಸಿನ ಊಟ, ವಿದ್ಯಾರ್ಥಿ ಭವನದ ತಿಂಡಿ, ರಾತ್ರಿ ಮೇಷ್ಟು ಹೋದ ಮೇಲೆ ಮೆಲ್ಲಗೆ ಗಿರಿ ಅವರ ಫ್ರಿಜ಼್ ನಲ್ಲಿದ್ದ ವಿಸ್ಕಿ ಬಿಯರ್ ತಂದು ಇವರಿಗೆ ಕೊಡುತ್ತಿದ್ದದ್ದು, ಕಚೇರಿಯಲ್ಲೊಂದು ರೌಂಡ್ ಕುಡಿದು ಮತ್ತೆಲ್ಲೋ ಹೋಗಿ ವೈನ್ ಸ್ಟೋರ್ ಮೆಟ್ಟಿಲುಗಳ ಮೇಲೆ ಕುಳಿತು ಮತ್ತೊಂದಷ್ಟು ಮಾತು ಚರ್ಚೆ ಗುಂಡು ಹೀಗೆ ತಡರಾತ್ರಿಯವರೆಗೆ ಕಾಲ ಕಳೆಯುತ್ತಿದ್ದದ್ದ (ಕ್ವಾಲಿಟಿ ಟೈಂ) ಬಗ್ಗೆ ಮೆಲುಕುಹಾಕಿದರು.
ಗಿರಿ ಸಮಯಕ್ಕೆ ಸರಿಯಾಗಿ ಇವರೆಲ್ಲರ ಊಟ ತಿಂಡಿಗಳನ್ನು ನೋಡಿಕೊಳ್ಳುತ್ತಿದ್ದದ್ದನ್ನು ನೆನೆದು ಎಲ್ಲರೂ ತಾಯಿಯಂತ ಗಿರಿಯನ್ನು ಕೊಂಡಾಡಿದರು. ಆದರೆ ಗಿರಿ ಮಾತ್ರ ಆಗಾಗ ಬಾಯ್ತುಂಬಾ ನಗುವುದು, ಉಳಿದಂತೆ ಸಣ್ಣಗೆ ಮುಖ ಸ್ಕ್ವೀಜ಼್ ಮಾಡಿಕೊಂಡು ಎಲ್ಲರನ್ನೂ ದಿಟ್ಟಿಸುವ ಕೆಲಸ ಮಾಡುತ್ತಿದ್ದರು.
ಗಿರಿಗೆ ಇಬ್ಬರು ಹೆಣ್ಣುಮಕ್ಕಳಂತೆ, ಇಬ್ಬರಿಗೂ ಮದುವೆ ಮಾಡಿದ್ದಾರಂತೆ, ಮಾಗಡಿ ರಸ್ತೆಯ ಹೇರೋಹಳ್ಳಿಯಲ್ಲಿ ವಾಸವಿದ್ದಾರಂತೆ. ಇವರೆಲ್ಲರ ಮಾತುಗಳ ನಡುವೆಯೂ ಅದೇ ತಾನೇ ಪರಿಚಯವಾಗಿದ್ದ ನನಗೆ ಇಷ್ಟು ಹೇಳಿ ನನ್ನ ಮನೆ ಸ್ವಂತದ್ದೋ ಬಾಡಿಗೆಯದ್ದೋ ಎಂದೂ ವಿಚಾರಿಸಿಕೊಂಡರು. ಅಂತೆಯೇ ನನ್ನ ಫೋನ್ ನಂಬರ್ ಕೇಳಿದರು. ಕೊಟ್ಟೆ. ಅವರ ನಂಬರ್ ಪಡೆಯುವುದು ಮರೆತೆ.
ನನ್ನ ಪೀಳಿಗೆಯವರಿಗೆ ಲಂಕೇಶ್ ಬಳಗದ ಒಡನಾಟ ಕೊಟ್ಟಷ್ಟು ಸುಖ ಇನ್ನಾವುದೂ ಕೊಡುವುದಿಲ್ಲ. ಹೀಗೆ ನಿನ್ನೆ ನನ್ನ ದಿನ ಸಂಪನ್ನವಾಯಿತು. ಈ ಕ್ಲಬ್ ನವರು ಮೂರು ತಿಂಗಳಿಗೊಂದು ಚುನಾವಣೆ ಮಾಡಬಾರ್ದಾ ಅನ್ನಿಸಿತು…!
ReplyForward |