ಕೆ.ಎನ್.ನಾಗೇಶ್
ಇಂದು ಭಾನುವಾರ. ಬೆಳಿಗ್ಗೆ ತಡವಾಗಿ ಎದ್ದು ಮನೇಲಿ ತುಂಬಿಕೊಂಡಿರುವ ಅನಗತ್ಯ ವಸ್ತುಗಳ ಬಗ್ಗೆ ನಾನು ಆಶಾ ಕಿರಿಕಿರಿ (ಸ್ವಗತ) ಮಾಡಿಕೊಳ್ಳುತ್ತಾ ಒಂದಷ್ಟು ವಸ್ತುಗಳನ್ನು ಊರಿಗೆ ಸಾಗಿಸುವ ಮಾತನಾಡಿಕೊಂಡೆವು. ಮುಂದಿನ ವಾರ ಕಳುಹಿಸುವ ವಿಚಾರವಾಗಿ ಗೆಳೆಯ ಮಲ್ಲಿಗೆ ಹೇಳಿ ಅವನ ಸ್ಟುಡಿಯೋ ಹುಡುಗರನ್ನು ಕಳುಹಿಸಲೂ ಕೋರಿದ್ದಾಯಿತು. ಇಷ್ಟಾದ ಮೇಲೆ ತಡವಾಗಿ ತಿಂಡಿ ತಿಂದು ಮನೆಯಿಂದ ಹೊರಡುವ ಮುನ್ನ ಲಂಕೇಶರ ಸಮಗ್ರ ಕಥಾ ಸಂಕಲನ ಬ್ಯಾಗಿಗೇರಿಸಿಕೊಂಡು ಹೊರಟೆ.
ಕ್ಲಬ್ಬಿಗೆ ಹೋಗುವ ಮಾರ್ಗಮಧ್ಯೆ ರವೀಂದ್ರ ಸಿರಿವರ ಅವರ ಮೆಸೇಜ್ “ ಜನ್ನಿ ಬಂದಿದ್ದಾರೆ ಇಂದು ನಾವು ಸಿಗಬಹುದೇ”? ಹೌದೆಂದೆ. ಸಂಜೆ ವೇಳೆಗೆ ಎಲ್ಲರೂ ಸೇರಿದೆವು. ಇಂದು ಜನ್ನಿ ಹಾಗೂ ಸಿರಿವರ ಇಬ್ಬರದ್ದೂ ಹುಟ್ಟಿದ ದಿನ. ಆ ಬಗ್ಗೆ ಬೆಳಿಗ್ಗೆಯೇ ಸಮುದಾಯದ ಗುಂಡಣ್ಣ ಸಾಮಾಜಿಕ ಜಾಲತಾಣಗಳಲ್ಲಿ ಬರೆದಿದ್ದರು. ಹಾಗಾಗಿ ಸಂಜೆ ವೇಳೆಗೆ ಇಬ್ಬರ ಹೆಸರಿನಲ್ಲೂ ಒಂದು ಕೇಕ್ ತರಿಸಿ ಹುಟ್ಟಿದ ದಿನವನ್ನು ಪ್ರೆಸ್ ಕ್ಲಬ್ಬಿನಲ್ಲಿ ಆಚರಿಸಿದೆವು.
ಗೆಳೆಯ ಸುಧಾಕರ ಶಾಸ್ತ್ರಿ ಇಂಥಃ ಸನ್ನಿವೇಶಗಳನ್ನು ಅತ್ಯಂತ ಆತ್ಮೀಯವಾಗಿಯೂ ಆಪ್ಯಾಯಮಾನವಾಗಿಯೂ ಮಾಡಬಲ್ಲ. ಅವ ಜೊತೆಗಿದ್ದ ಕಾರಣ ಇವರೀರ್ವರ ಜನ್ಮದಿನಾಚರಣೆ ಸೊಗಸಾಗಿಯೇ ನಡೆಯಿತು.
ಮುಂದಿನ ಕೆಲವು ಗಂಟೆಗಳ ಸಮುದಾಯ, ಚಳವಳಿ ಇತ್ಯಾದಿ ವಿಚಾರಗಳು ಪ್ರಸ್ತಾಪವಾದವು. ಜನ್ನಿ ತಮ್ಮ ಎಂದಿನ ಬದ್ಧತೆ ಹಾಗೂ ಅವರದ್ದೇ ವಿಶಿಷ್ಟ ದಾಟಿಯಲ್ಲಿ ಮಾತನಾಡಿದರು. ಎಲ್ಲವೂ ಲೋಕಾರೂಢಿಯಂತೆ ನಡೆಯುತ್ತಿರುವ ಹೊತ್ತಿನಲ್ಲೇ ಜನ್ನಿ ಅವರ ಅಂತರಾಳ ಮತ್ತೊಂದು ದಿಕ್ಕಿನತ್ತ ನಮಗಾರಿಗೂ ಅರಿವಿಲ್ಲದೇ ಚಲಿಸಿತ್ತು. ಹಾಗೆ ಅವರು ಚಲಿಸಿದ ದಿಕ್ಕು ನಮಗೆ ಅರ್ಥವಾಗಿದ್ದು ಅವರದ್ದೇ ಮಾತಿನಿಂದ. ಆ ಮಾತು ಹೀಗಿದೆ. “ ನಾವಿನ್ನೂ ಹುಟ್ಟೇ ಇಲ್ಲ ಇವನು ನಾಗೇಶ ನಮ್ಮ ಹುಟ್ಟಿದ ಹಬ್ಬ ಮಾಡ್ತಾನೆ” ಅಂದರು. ಹಾಗೆ ಹೇಳುವಾಗ ಅವರ ಕಣ್ತುಂಬಿತ್ತು, ಮಾತು ಬಿಕ್ಕಳಿಸಿತ್ತು. ನಾನೂ ಕ್ಷಣ ಕಾಲ ಮೂಕನಾದೆ.
“ನಾವಿನ್ನೂ ಹುಟ್ಟೇ ಇಲ್ಲ” ಎಂಬ ಜನ್ನಿ ಅವರ ಮಾತು ನನ್ನನ್ನು ಇನ್ನಿಲ್ಲದಂತೆ ಕಾಡುತ್ತಿದೆ…