ವೇಣು
ದೇಶದ ಸ್ವಾತಂತ್ರ ಹೋರಾಟದಲ್ಲಿ ಹೆಸರೇ ಹೇಳದೆ ಯಾವ ಅಪೇಕ್ಷೆ ಇಲ್ಲದೆ ಹೋರಾಟ ಮಾಡಿದ ಸಾವಿರಾರು ಮಹಿಳೆಯರು ನಿಜವಾದ ಸ್ವಾತಂತ್ರ ಹೋರಾಟಗಾರರು ಅವರು ಹೆಸರಿಗೂ ಹೋರಾಡಲಿಲ್ಲ ಪಿಂಚನಿಗೂ ಹೋರಾಡಲಿಲ್ಲ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊಫೆಸರ್ ಪುರುಷೋತ್ತಮ ಬಿಳಿಮಲೆ ಅಭಿಪ್ರಾಯ ವ್ಯಕ್ತಪಡಿಸಿದರು.
ಬೆಂಗಳೂರಿನ ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ರಂಗ ವಿಜಯ ಟ್ರಸ್ಟ್ ಹಾಗೂ ಸುವ್ವಿ ಪ್ರಕಾಶನ ಇವರ ಸಂಯುಕ್ತ ಆಶ್ರಯದಲ್ಲಿ ಡಾಕ್ಟರ್ ಟಿ ಲಕ್ಷ್ಮಿನಾರಾಯಣ್ ರಚಿಸಿರುವ ‘ಸ್ವಾತಂತ್ರ್ಯ ಸಮರ ಕರುನಾಡು ಅಮರ’ ಹಾಗೂ ಐದು ನಾಟಕಗಳ ಪುಸ್ತಕ ಲೋಕಾರ್ಪಣೆ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು. ಸ್ವಾತಂತ್ರ ಹೋರಾಟದ ಸಂದರ್ಭದಲ್ಲಿ ಬ್ರಿಟಿಷರ ದಾಳಿ ಸಂದರ್ಭದಲ್ಲಿ ಅವರಿಂದ ತಪ್ಪಿಸಿಕೊಳ್ಳಲು ಪುರುಷ ಹೋರಾಟಗಾರರು ತಲೆಮರೆಸಿಕೊಂಡು ಕಾಡಿಗೋ ಅಥವಾ ಮತ್ತೆಲ್ಲಿಗೋ ಹೊರಟು ಬಿಡುತ್ತಿದ್ದರು. ಆಗ ಬ್ರಿಟಿಷರ ದಾಳಿಯನ್ನು ಎದುರಿಸಿದ್ದು ಆ ಹೋರಾಟಗಾರರ ಪತ್ನಿಯರು. ನಿಜವಾದ ಸ್ವಾತಂತ್ರ್ಯ ಹೋರಾಟಗಾರರು ಅದೆಷ್ಟು ದಾಖಲೆಗಳಿಲ್ಲದ ಹೆಸರು ತಿಳಿಯದ ಮಹಿಳಾ ಮಣಿಗಳು ಸ್ವಾತಂತ್ರ್ಯಕ್ಕಾಗಿ ದುಡಿದಿದ್ದಾರೆ. ಅದರಿಂದ ನಾವೀಗ ನೆಮ್ಮದಿಯಿಂದ ಬದುಕುತ್ತಿದ್ದೇವೆ ಎಂದರು.
ಪುಸ್ತಕ ಕುರಿತು ಮಾತನಾಡಿದ ದ್ರಾವಿಡ ವಿಶ್ವವಿದ್ಯಾನಿಲಯದ ಡೀನ್ ಎಂ.ಎನ್.ವೆಂಕಟೇಶ್ ಕರ್ನಾಟಕದ ಹೆಸರೇ ತಿಳಿಯದ ಅನೇಕ ಸ್ವಾತಂತ್ರ್ಯ ಹೋರಾಟಗಾರರನ್ನು ನಮ್ಮ ಕಣ್ಣು ಮುಂದೆ ನಿಲ್ಲಿಸುವಲ್ಲಿ ಈ ಐದು ನಾಟಕಗಳು ಯಶಸ್ವಿಯಾಗಿದೆ ಎಂದರು.
ಮಹಿಳಾಪರ ಹೋರಾಟಗಾರ್ತಿ ಲೀಲಾ ಸಂಪಿಗೆ ಮಾತನಾಡಿ ಸ್ವಾತಂತ್ರ ಹೋರಾಟಕ್ಕೆ ಮನೆಮನೆಯಲ್ಲೂ ಸಣ್ಣ ಹಣತೆಯಂತೆ ಬೆಳಗಿದ ಸಾವಿರಾರು ಹೆಣ್ಣು ಮಕ್ಕಳು ಹೋರಾಡಿದ್ದಾರೆ ಪ್ರತಿ ಹೋರಾಟಕ್ಕೂ ಪುರುಷರು ಎಷ್ಟು ತಮ್ಮ ಕೊಡುಗೆಯನ್ನು ನೀಡಿದ್ದಾರೆಯೋ ಅದಕ್ಕಿಂತ ಹೆಚ್ಚಿನ ಹೋರಾಟ ಮಹಿಳೆಯರದ್ದಾಗಿದೆ, ಆದರೆ ದಾಖಲೆಗಳಲ್ಲಿ ಅವರ ಹೆಸರುಗಳೇ ಪ್ರಸ್ತಾಪವಾಗಿಲ್ಲ ಅದಕ್ಕೆ ಅವರನ್ನು ಸ್ಮರಿಸಲು ಸಾಧ್ಯವಾಗುತ್ತಿಲ್ಲ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಪೊಲೀಸ್ ಅಧಿಕಾರಿ ಬಿ ಕೆ ಶಿವರಾಮ್ ಮಾತನಾಡಿ ಸ್ವಾತಂತ್ರ್ಯ ಪೂರ್ವದಲ್ಲಿ ಸ್ವಾತಂತ್ರ ನಡೆಯುವುದಕ್ಕಾಗಿ ಹೋರಾಟ ನಡೆದರೆ ಸ್ವಾತಂತ್ರ್ಯದ ನಂತರದಲ್ಲಿ ಅದರ ಉಳಿವಿಗಾಗಿ ಹೋರಾಟ ಮಾಡಬೇಕಿದೆ ಅದರ ಅಸ್ತಿತ್ವಕ್ಕಾಗಿ ಹೋರಾಟ ಮಾಡಬೇಕಿದೆ ಬದುಕಿಗಾಗಿ ಸಾಮಾಜಿಕ ಬದ್ಧತೆಗಾಗಿ ಹೋರಾಟ ನಿರಂತರವಾಗಿರಬೇಕು ಎಂದರು.
ಸ್ವಾತಂತ್ರ ಹೋರಾಟಗಾರರಾದ ಬಿ.ಪಾರ್ಥಸಾರಥಿಯವರ ಪುತ್ರಿ ನಿರ್ಮಲ ಅನಂತರಾಮ್ ಪುಸ್ತಕ ಬಿಡುಗಡೆ ಮಾಡಿದರು. ಸುವ್ವಿ ಪ್ರಕಾಶನದ ಪ್ರಕಾಶಕರಾದ ಸುನಿಲ್ ಕುಮಾರ್, ಶಿವಮೊಗ್ಗ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಕನ್ನಡ ಸಹ ಪ್ರಾಧ್ಯಾಪಕ ಎಸ್.ಎಂ ಮುತ್ತಯ್ಯ ಸಹ ಮಾತನಾಡಿದರು. ಫಿಲಂ ಫೇರ್ ಪ್ರಶಸ್ತಿ ಪುರಸ್ಕೃತರಾದ ಪೃಥ್ವಿ ಕೋಣನೂರು ಮಾತನಾಡಿ ಯುವ ಜನತೆಯ ಮನಸ್ಸಿಗೆ ನಾಟುವಂತೆ ಚಿತ್ರಗಳನ್ನು ಮಾಡಬೇಕಿದೆ ಅದರಲ್ಲೂ ಸ್ವಾತಂತ್ರ ಹೋರಾಟದ ಕಿಚ್ಚು ಹಬ್ಬಿಸುವ ಚಿತ್ರಗಳ ಅವಶ್ಯಕತೆ ಇದೆ ಎಂದರು.
ಈ ಕಾರ್ಯಕ್ರಮವನ್ನು ರಂಗ ವಿಜಯದ ಅಧ್ಯಕ್ಷ ಮಾಲೂರು ವಿಜಿ ನಿರ್ವಹಣೆ ಮಾಡಿದರು. ಲೇಖಕರಾದ ಟಿ.ಲಕ್ಷ್ಮೀನಾರಾಯಣ ಅವರಿಗೆ ಗೌರವ ಸಮರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಎಂ.. ವೆಂಕಟೇಶ, ಡಾ.ಟಿ.ಎಸ್.ನರಸಿಂಹ ಪ್ರಸಾದ್, ತಿಪಟೂರು ತಿಮ್ಮೇಗೌಡ ಚಲನಚಿತ್ರ ನಟಿ ಗೀತಾ ಕೋಲಾರ ಮತ್ತೊಬ್ಬ ನಟಿ ಲಕ್ಷ್ಮಿ ಮತ್ತಿತರರು ಉಪಸ್ಥಿತರಿದ್ದರು.