ತಿಪಟೂರು ಸತೀಶನಿಗೆ ಒಲಿದ ಮೈಸೂರು ರಂಗಾಯಣ

ತಿಪಟೂರು ಸತೀಶನಿಗೆ ಒಲಿದ ಮೈಸೂರು ರಂಗಾಯಣ
Spread the love

ತಿಪಟೂರು ಮಾರ್ಗವಾಗಿ ಓಡಾಡುವಾಗ ನಮ್ಮದೇ ಮನೆಯೇನೋ ಅನ್ನುವಷ್ಟರ ಮಟ್ಟಿಗೆ, ಯಾವುದೇ ಅಳುಕಿಲ್ಲದೆ ಸುಮ್ಮನೆ ಹೋಗಿ ಸತೀಶನ ಮನೆಯಲ್ಲಿ ಉಳಿದುಬಿಡುತ್ತಿದ್ದ ನಮಗೆ ಅವನ ಸಂಗಾತಿ ವಾಣಿಯಾಗಲೀ, ಅವನ ಹಿರಿಯ ಮಗಳಂತಿದ್ದ ಜಾಯಿದಾ ಕೊಡಗು ಆಗಲಿ, ಪುಟ್ಟವೆರಡು ಕೂಸುಗಳಾಗಲಿ, ಸ್ವಾತಂತ್ರ ಹೋರಾಟಗಾರರಾದ ಅವರ ತಂದೆಯಾಗಲಿ ಯಾರೂ ನಮ್ಮನ್ನು ಅಪರಿಚಿತರಂತೆ ನೋಡಿದವರಲ್ಲ.  ಹಾಗಾಗಿ ದಿನಕಳೆದಂತೆ ಸತೀಶನ ಮನೆ ನಮಗೆಲ್ಲರಿಗೂ ನಮ್ಮದೇ ಮನೆಯಷ್ಟು ಆಪ್ತವಾಯಿತು. ಇಂಥ ಸಂಬಂಧದ ಮುಂದುವರಿಕೆಯ ಭಾಗವಾಗಿ ಸತೀಶ, ವಾಣಿ ಮತ್ತು ಸತೀಶನ ಅಕ್ಕ ನಡೆಸಿದುತ್ತಿದ್ದ ಅನೇಕ ಶಿಬಿರಗಳು, ರಂಗಚಟುವಟಿಕೆಗಳಲ್ಲಿ ಆಗಾಗ ನಾವೂ ಭಾಗಿಯಾಗುತ್ತಿದ್ದೆವು. ಒಂದು ತಾಲ್ಲೂಕು ಹೆಡ್ ಕ್ವಾರ್ಟರ್ ನಲ್ಲಿದ್ದುಕೊಂಡು ರೈತ ಹೋರಾಟ, ದಲಿತ ಚಳುವಳಿ, ರಂಗ ಚಟುವಟಿಕೆಗಳು, ಸಾಂಸ್ಕೃತಿಕ ಹಾಗೂ ಸಾಹಿತ್ಯಕ ಕಾರ್ಯಕ್ರಮಗಳನ್ನು ಜನ-ಮನದಲ್ಲಿ ಬಿತ್ತಿದ ಮೆಲುಮಾತಿನ ಸಾಧಕನಿವನು. ಇದೀಗ ಸತೀಶನಿಗೆ ಮೈಸೂರು ರಂಗಾಯಣದಂತಃ ಮಹತ್ವದ ಸಂಸ್ಥೆಯ ನಿರ್ದೇಶಕ ಸ್ಥಾನ ಒಲಿದು ಬಂದಿದೆ. ಹೊಸ ಕನಸುಗಳನ್ನು ಕಟ್ಟಬಲ್ಲ, ಸಾಮಾಜಿಕ ನ್ಯಾಯಕ್ಕಾಗಿ ಸದಾ ತನ್ನನ್ನು ತೊಡಗಿಸಿಕೊಳ್ಳಬಲ್ಲ ಸತೀಶನಿಗೆ ಅಭಿನಂದನೆಗಳು.

ಮೈಸೂರಿನ ಬಹಳ ಪ್ರಸಿದ್ಧ ಹಿರಿಯ ರಂಗಕರ್ಮಿಗಳು, ಪ್ರಜಾಸತ್ತತ್ಮಕವಾಗಿ ಯೋಚಿಸಬಲ್ಲ ಮನಸ್ಸುಗಳು, ಸಾಂಸ್ಕೃತಿಕ ನಾಯಕರು, ಹೋರಾಟಗಾರರು, ಹೀಗೆ ಸಾಮಾಜಿಕ-ಸಾಹಿತ್ಯಕ-ರಂಗ ಚಿಂತಕರು ಎಲ್ಲರೂ ಸತೀಶನನ್ನು ಅತ್ಯಂತ ಅಭಿಮಾನದಿಂದ ತಮ್ಮ ಮಡಿಲಿಗೆ ಹಾಕಿಕೊಳ್ಳುತ್ತಾರೆಂಬ ಸದಾಶಯವನ್ನು ಹೊಂದಿದ್ದೇನೆ.

ಸತೀಶನ ಕಿರುಪರಿಚಯ

ರಂಗ ನಿರ್ದೇಶಕರಾದ ಸತೀಶ್ ತಿಪಟೂರು ಅವರು ಮೈಸೂರು ರಂಗಾಯಣದ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಪ್ರಗತಿಪರ ಹಾಗೂ ಸಮಾಜವಾದಿ ಚಳುವಳಿಗಳ ಹಿನ್ನೆಲೆಯಿಂದ ಬಂದ ಇವರ ಕಿರು ಪರಿಚಯ ಇಲ್ಲಿದೆ.

25 ವರ್ಷಗಳಿಂದ ರಂಗಭೂಮಿ ಕಾಯಕದಲ್ಲಿ ಸತೀಶ್

ತುಮಕೂರು ಜಿಲ್ಲೆ ತಿಪ ಟೂರಿನ ಕಲಾ ಕುಟುಂಬದಲ್ಲಿ 29 ಜನವರಿ 1971ರಂದು ಜನಿಸಿದ ಸತೀಶ್ ಕಲ್ಪತರು ತಾಂತ್ರಿಕ ವಿದ್ಯಾಲಯದಲ್ಲಿ ಕಂಪ್ಯೂಟರ್ ಸೈನ್ಸ್ ಪಡೆದಿದ್ದಾರೆ. ನಂತರ ರಂಗ ಭೂಮಿಯ ಆಸಕ್ತಿಯಿಂದಾಗಿ ಬೆಂಗಳೂರಿನ ‘ಅಭಿನಯ ತರಂಗ’ ಕಲಾಶಾಲೆಯಲ್ಲಿ ಒಂದು ವರ್ಷದ ರಂಗ ತರಬೇತಿ, ಹೆಗ್ಗೋಡಿನ ನೀನಾಸಂನಲ್ಲಿ ‘ಡಿಪ್ಲೊಮಾ ಇನ್ ಥಿಯೇಟರ್ ಆರ್ಟ್ಸ್’ ಪದವಿ ಗಳಿಸಿದ್ದಾರೆ.

ಕಳೆದ 25 ವರ್ಷಗಳಿಂದ ತಿಪಟೂರನ್ನು ಕೇಂದ್ರವಾಗಿರಿಸಿಕೊಂಡು ತಮ್ಮ ‘ಭೂಮಿ ಥಿಯೇಟರ್’ ಸಂಸ್ಥೆಯ ಮೂಲಕ ನಟನೆ, ನಿರ್ದೇಶನ, ಶಿಕ್ಷಣ, ಸಂಘಟನೆ ಮುಂತಾಗಿ ರಂಗ ಕಾಯಕ ಮಾಡುತ್ತಿದ್ದಾರೆ. ‘ಮಣ್ಣಿನ ಬಂಡಿಯಲ್ಲಿ ಪುಕುವೋಕಾ’ -ರಂಗಕೃಷಿಯ ಆತ್ಮಾವಲೋಕನ, ‘ಮಣ್ಣಿನ ಮನೆ’ ನಾಟಕ ಪ್ರಕಟ ವಾಗಿದೆ. ‘ನಮ್ಮೂರಿನ ಸ್ಮೃತಿ ಕಥನಗಳಲ್ಲಿ ರಂಗಭೂಮಿಯ ವಿಕಾಸದ ನೆಲೆಗಳು’ ಸಂಶೋಧನಾ ಪ್ರಬಂಧಕ್ಕೆ ನಾಟಕ ಅಕಾ ಡೆಮಿಯ ಫೆಲೋಷಿಪ್ ದೊರೆತಿದೆ.

ಇದೇ ಅವಧಿಯಲ್ಲಿ ಭೂಮಿ ಥಿಯೇಟರ್ ಸೇರಿದಂತೆ ರಂಗಾಯಣ, ನೀನಾಸಂ, ಆದಿಮ, ಕಿನ್ನರಮೇಳ, ಮೂಡಲಪಾಯ ಯಕ್ಷಗಾನಕೇಂದ್ರ, ಥಿಯೇಟರ್ ಸಮುರಾಯ್ಸ್ ಮುಂತಾದ ಕರ್ನಾಟಕದ ಹಲವಾರು ರಂಗಸಂಸ್ಥೆಗಳಿಗೆ ನಾಟಕಗಳ ನಿರ್ದೇಶನ ಸೇರಿದಂತೆ ರಂಗ ಶಿಕ್ಷಣ, ತರಬೇತಿ ಶಿಬಿರ, ನಾಟಕೋತ್ಸವ, ಯಕೋತ್ಸವ, ವಿಚಾರ ಸಂಕಿರಣ, ಮಕ್ಕಳ ಶಿಬಿರ ಮುಂತಾದ ಹಲವಾರು ಕಾರ್ಯಕ್ರಮಗಳನ್ನು ಆಯೋ ಜನೆ ಮಾಡಿದ್ದಾರೆ. ಬೆಂಗಳೂರು ವಲಯದ ಜಿಲ್ಲೆಗಳಲ್ಲಿ ಆಯ್ದ ಮಕ್ಕಳಿಗಾಗಿ ಒಂದು ವರ್ಷ ಕಾಲ ನಡೆದ ಮಕ್ಕಳ ನಾಟಕ ರಚನಾ ಶಿಬಿರದ ನಿರ್ದೇಶಕರಾಗಿ, ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.

ಹಗ್ಗದಕೊನೆ, ಆಶಾಢಭೂತಿ,ಬೆಕ್ಕುಬಾವಿ,ಸಾಂಬಶಿವ ಪ್ರಹಸನ,ಒಂದು ಪಯಣದಕಥೆ,ಸಾಹೇಬರು ಬರತ್ತಾರೆ,ಭಟ್ಟರ ಮಗಳು, ಮಾಸತಿ,ಅಹಲ್ಯೆ,ಕಿಂಗ್ ಲಿಯರ್,ಮೃಚ್ಛಕಟಿಕ, ಈ ನರಕ ಈ ಪುಲಕ ಇವರು ಅಭಿನಯಿಸಿದ ಕೆಲವು ಮುಖ್ಯ ನಾಟಕಗಳು..

ಚಮ್ಮಾರನ ಹೆಂಡತಿ, ಚಿತ್ರದ ಬೆನ್ನು, ಗೋಡೆಗಳು,ಸಾಹೇಬರು ಬರುತ್ತಾರೆ,ಆಮನಿ,ನೀಲಿ ಕುದುರೆ, ಹಕ್ಕಿ ಹಾಡು,ಪಂಜರ ಶಾಲೆ,ಮಣ್ಣಿನ ಮನೆ ಮುಂತಾದವು ಇವರು ನಿರ್ದೇಶಿಸಿದ ಕೆಲವು ಮುಖ್ಯ ನಾಟಕಗಳು..


Spread the love