ನಮ್ಮ ನಾಡು-ನಮ್ಮ ಆಳ್ವಿಕೆ ಚಿಂತನೆಗೆ ಸಾರ್ವಜನಿಕ ಬೆಂಬಲ

ನಮ್ಮ ನಾಡು-ನಮ್ಮ ಆಳ್ವಿಕೆ ಚಿಂತನೆಗೆ ಸಾರ್ವಜನಿಕ ಬೆಂಬಲ
Spread the love

ನಾಗೇಶ್ ಕೆ.ಎನ್.

ಇತ್ತೀಚೆಗೆ ಪತ್ರಕರ್ತ ಗೆಳೆಯ ಶ್ಯಾಮ್ ಪ್ರಸಾದ್ ಒಂದು ವಾಟ್ಸಪ್ ಮೆಸೇಜ್ ಕಳುಹಿಸಿದ್ದರು. ಅದರ ಒಕ್ಕಣೆ “ನಮ್ಮ ನಾಡು ನಮ್ಮ ಆಳ್ವಿಕೆ- ಇಂದಲ್ಲದಿದ್ದರೆ ಇನ್ನೆಂದು” ಎಂಬುದಾಗಿತ್ತು. ಶ್ಯಾಮ್ ಸಂದೇಶಗಳು ಫಾರ್ವಾರ್ಡ್ ಮೆಸೇಜುಗಳಾಗಿರುವುದಿಲ್ಲ. ಹಾಗಾಗಿ ಕುತೂಹಲದಿಂದ ಫೋನ್ ಮಾಡಿದೆ. ಸ್ಥಳೀಯ ಪಕ್ಷದ ಅನಿವಾರ್ಯತೆಯ ಕುರಿತಾಗಿ ಮಾತನಾಡಿದರು. ಸರಿ ಎನಿಸಿತು. ಇದರ ಸಾಧಕ ಬಾಧಕಗಳ ಬಗ್ಗೆ  ಮಾತನಾಡಿ ಉತ್ಸಾಹ ಕುಂದಿಸುವ ಪೈಕಿ ನಾನಲ್ಲ. (ಕೆಲವೊಮ್ಮೆ ಮಾಡುತ್ತೇನೆ ಕೂಡಾ) ಆದರೆ ಈ ಬಾರಿ ನನಗನಿಸಿದ್ದು ಎಲ್ಲವೂ ಒಂದು ಬಿಂದುವಿನಿಂದ ಆರಂಭವಾಗಿ ಸಾಗರದಷ್ಟು ವಿಶಾಲವಾಗುವುದು ತಾನೇ ಎಂದು ! ಅಂತದ್ದೇ ಹುಮ್ಮಸ್ಸಿನಿಂದ ಈ ಯೋಚನೆ-ಯೋಜನೆಯನ್ನೂ ಅಭಿಮಾನದಿಂದ ಸ್ವೀಕರಿಸಿದೆ. ಕಾರ್ಯಕ್ರಮಕ್ಕೆ ಬರುವುದಾಗಿ ಹೇಳಿದೆ. ಅಂತೆಯೇ ಇಂದು ಬಸವ ಸಮಿತಿ ಸಭಾಂಗಣಕ್ಕೆ ಹೋದೆ. ಇಡೀ ಆಡಿಟೋರಿಯಂ ತುಂಬಿತ್ತು. ಕೆಲವರು ಮೆಟ್ಟಿಲುಗಳ ಮೇಲೆ ಕುಳಿತಿದ್ದರು. ಸಂಘಟಕರು ನನಗೆ ಸೀಟು ತೋರಿದಾಗಲೂ ಬೇಡವೆಂದು ನಾನೂ ಮೆಟ್ಟಿಲ ಮೇಲೆಯೇ ಕುಳಿತೆ.

ನಾನು ಸಭಾಂಗಣಕ್ಕೆ ಹೋದ ಸಮಯದಲ್ಲಿ ರಾಜ್ಯದ ಯಾ ಕನ್ನಡಿಗರ (ರಾಜ ಮಹಾರಾಜರ) ಕುರಿತಾಗಿ ಪಾಠ ನಡೆಡಿತ್ತು. ಒಂದು ಘಳಿಗೆ ಕೂರುವಷ್ಟರಲ್ಲಿ ದೂರದ ಗೆಳೆಯನೊಬ್ಬನ ಫೋನ್, ಬೆಂಗಳೂರಿಗೆ ಬಂದಿರುವುದಾಗಿ ಭೇಟಿ ಮಾಡಬೇಕಾಗಿ ಕೋರಿಕೆ/ಆದೇಶ. ನಾನು ಹೊರಟೆ. ಇಡೀ ಸಭೆಯಲ್ಲಿ ಕೂರಲಾಗಲಿಲ್ಲ. ಹಾಗಾಗಿ ನಾನು ಖುದ್ದು ವರದಿ ಮಾಡಲು ಸಾಧ್ಯವಾಗಲಿಲ್ಲ. So, ನನಗೆ ಸಭೆಯ ಬಗ್ಗೆ ತಲುಪಿದ ಪತ್ರಿಕಾ ವರದಿಯನ್ನೇ ಪ್ರಕಟಿಸುತ್ತಿದ್ದೇನೆ.   ಅಭಿಮಾನದಿಂದ…!

ಬೆಂಗಳೂರಿನಲ್ಲಿ ಭಾನುವಾರ ನಡೆದ ನಮ್ಮ ನಾಡು ನಮ್ಮ ಆಳ್ವಿಕೆ – ಇಂದಲ್ಲದಿದ್ದರೆ ಇನ್ನೆಂದು ಎಂಬ ಸಾರ್ವಜನಿಕ ಸಭೆಯಲ್ಲಿ ಕನ್ನಡ ಸಾಹಿತಿ ಕುಂ. ವೀರಭದ್ರಪ್ಪ ಮತ್ತು ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು.

ಹಂಸಲೇಖ ಅವರು, ಪ್ರಾದೇಶಿಕ ಪಕ್ಷಕ್ಕಾಗಿ ಕನ್ನಡಿಗರು ವರನಟ ರಾಜಕುಮಾರ್ ಅವರನ್ನು ನಾಯಕತ್ವದ ಹಾದಿಗೆ ಕರೆತರಲು ಒತ್ತಾಯಿಸಿದ್ದನ್ನು, ಆದರೆ ಅವರು ರಾಜಕಾರಣದಿಂದ ದೂರವಿರುವುದಾಗಿ ನಿರ್ಧರಿಸಿದ್ದನ್ನು ಸ್ಮರಿಸಿದರು. “ಇಂದು ಇಲ್ಲಿ ನೀವುಗಳು ಮಂಡಿಸಿದ ಕರ್ನಾಟಕ ಕೇಂದ್ರೀಕೃತ ಪ್ರಾದೇಶಿಕ ಪಕ್ಷದ ಅಗತ್ಯವನ್ನು ನಾನು ಸಂಪೂರ್ಣ ಬೆಂಬಲಿಸುತ್ತೇನೆ. ಇಂದಿನಿಂದಲೇ ನಾವು ಪಕ್ಷವನ್ನು ಘೋಷಿಸೋಣ,” ಎಂದು ಹಂಸಲೇಖ ಅವರು ಹೇಳಿ, ಪಕ್ಷವು ಮುಂದಿನ ವಿಧಾನಸಭಾ ಚುನಾವಣೆಯನ್ನು ಗುರಿಯಾಗಿಸಬೇಕು ಎಂಬ ಆಶಯವನ್ನು ವ್ಯಕ್ತಪಡಿಸಿದರು.

ಕುಂ. ವೀರಭದ್ರಪ್ಪ ಅವರು ಕನ್ನಡಿಗರ ನ್ಯಾಯಸಮ್ಮತ ಹಕ್ಕುಗಳನ್ನು ಸುರಕ್ಷಿತಗೊಳಿಸಲು ಕರ್ನಾಟಕ ಕೇಂದ್ರೀಕೃತ ಪ್ರಾದೇಶಿಕ ಪಕ್ಷವು ಸೂಕ್ತ ವೇದಿಕೆ ಎಂದು ಅಭಿಪ್ರಾಯಪಟ್ಟರು. “ಕನ್ನಡವನ್ನು ನಾವು ವಿದ್ಯಾವಂತರು ಉಳಿಸಲು ಸಾಧ್ಯವಿಲ್ಲ. ಇದು ಗ್ರಾಮೀಣ ಪ್ರದೇಶದ ಜನರು ಮತ್ತು ಇನ್ನೂ ಅಕ್ಷರ ಕಲಿತಿಲ್ಲದವರು ಉಳಿಸುತ್ತಾರೆ. ನಾವು ಇಲ್ಲಿ ನೀಡಿರುವ ಸಂದೇಶವನ್ನು ಆ ಜನರಿಗೆ ತಲುಪಿಸಬೇಕು. ಕನ್ನಡ ಕೇಂದ್ರೀಕೃತ ರಾಜಕೀಯ ಪಕ್ಷದ ಅಗತ್ಯವನ್ನು ಇಂದು ಮಂಡಿಸಿದ ಮಾಹಿತಿ ಮತ್ತು ಅಂಕಿಅಂಶಗಳು ಎಲ್ಲರಿಗೂ ಅರಿವು ಮೂಡಿಸುತ್ತವೆ” ಎಂದು ಅವರು ಹೇಳಿದರು.

ಈ ಕಾರ್ಯಕ್ರಮವನ್ನು ಪತ್ರಕರ್ತ ಎಸ್. ಶ್ಯಾಮ್ ಪ್ರಸಾದ್, ಚಲನಚಿತ್ರ ನಿರ್ದೇಶಕರುಗಳಾದ ಬಿ. ಎಂ. ಗಿರಿರಾಜ್ ಮತ್ತು ಕವಿರಾಜ್, ವಕೀಲ ಸಿ. ಎಸ್. ಹರಿಪ್ರಸಾದ್, ಸಾಫ್ಟ್‌ವೇರ್ ಇಂಜಿನಿಯರ್‌ಗಳು ಅರುಣ್ ಜಾವಗಲ್, ಶಿವಣ್ಣ ಗುಂಡನವರ, ಸಜಿತ್, ಭುವನೇಶ ಕದಿರಯ್ಯ, ಶೃತಿ ಮರಳಪ್ಪ, ರವಿ ಆಳದಮರ, ಸಾರಿಕಾ ಶೋಭಾ ವಿನಾಯಕ, ಮತ್ತು ಸುಷ್ಮಾ ಪ್ರಕಾಶ್ ಸೇರಿ  ಆಯೋಜಿಸಿದ್ದರು.

ಹಿರಿಯ ಪತ್ರಕರ್ತ ಬಿ. ಎಂ. ಹನೀಫ್ ಮತ್ತು ಬನವಾಸಿ ಬಳಗದ ಕನ್ನಡ ಹೋರಾಟಗಾರ ಆನಂದ ಗುರು ಅವರವರ ದೃಷ್ಟಿಕೋನವನ್ನು ಹಂಚಿಕೊಂಡರು. ಕರ್ನಾಟಕಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು, ಮುಂಬರುವ ಲೋಕಸಭಾ ಕ್ಷೇತ್ರ ಪುನರ್ವಿಂಗಡನೆ ಹಾಗೂ ಅದು ಕರ್ನಾಟಕ ಮತ್ತು ಇತರ ದಕ್ಷಿಣ ರಾಜ್ಯಗಳಿಗೆ ಹೇಗೆ ಹಾನಿ ಮಾಡುವುದೆಂಬುದನ್ನು ಮುಖ್ಯವಾಗಿಸಬೇಕು ಮತ್ತು ಪಕ್ಷವನ್ನು ಮುನ್ನಡೆಸಲು ಅದನ್ನು ಹೋರಾಟದ ಅಸ್ತ್ರವಾಗಿ ರೂಪಿಸಬೇಕು ಎಂದು ಹನೀಫ್ ಒತ್ತಾಯಿಸಿದರು. ಆನಂದ ಗುರು, ಕನ್ನಡಿಗರ ಜನಸಂಖ್ಯೆಯ ಕುಸಿತ ಮತ್ತು ಕರ್ನಾಟಕ-ಆಧಾರಿತ ಪಕ್ಷವು ತನ್ನ ಜನರ ಹಿತಾಸಕ್ತಿಗಳನ್ನು ಹೇಗೆ ಕಾಪಾಡಬಹುದು ಎಂಬುದರ ಬಗ್ಗೆ ಮಾತನಾಡಿದರು.

ಚಾಲುಕ್ಯ ವೃತ್ತದ ಬಸವ ಭವನದಲ್ಲಿ 500 ಕ್ಕೂ ಹೆಚ್ಚು ಜನರು ಹೊಸ ಪಕ್ಷದ ರಚನೆಗೆ ಬೆಂಬಲ ವ್ಯಕ್ತಪಡಿಸಿದರು. ಈ ಸಭೆಯನ್ನು ಕಳೆದ ಕೆಲ ದಿನಗಳಿಂದ ಸೋಷಿಯಲ್ ಮೀಡಿಯಾ ತಾಣಗಳಲ್ಲಿ ಮಾತ್ರ ಪ್ರಚಾರ ಮಾಡಲಾಗಿತ್ತು, ಆದರೂ ಕರ್ನಾಟಕದ ವಿವಿಧ ಭಾಗಗಳಿಂದ ಉತ್ಸಾಹಿಗಳು ಸಭೆಗೆ ಬಂದಿದ್ದರು.

 


Spread the love