ಜಿ.ಕೆ.ವಿ.ಕೆ – ಕೃಷಿ ಮೇಳ 2024

ಜಿ.ಕೆ.ವಿ.ಕೆ – ಕೃಷಿ ಮೇಳ 2024
Spread the love

ಕೆ ಎನ್ ಎನ್ ಕೃಷಿ ಸಮಯ ಡೆಸ್ಕ್

ಬೆಂಗಳೂರು ಕೃಷಿ ವಿಶ್ವವಿದ್ಯಾಲಯ (ಜಿ.ಕೆ.ವಿ.ಕೆ) ದಲ್ಲಿ ಎಂದಿನಂತೆ ಕೃಷಿ ಮೇಳಕ್ಕೆ ಭರ್ಜರಿ ಸಿದ್ಧತೆ ನಡೆದಿದೆ. 2024 ನವೆಂಬರ್ 14 ರಿಂದ 17 ರ ವರೆಗೆ ನಾಲ್ಕು ದಿನಗಳ ಕಾಲ ನಡೆಯುವ ಮೇಳದಲ್ಲಿ ಈ ವರ್ಷ ನಾಲ್ಕು ಹೊಸ ತಳಿಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಜೊತೆಗೆ 19 ನೂತನ ತಾಂತ್ರಿಕತೆಗಳು/ತಂತ್ರಜ್ಞಾನಗಳನ್ನೂ ಕೂಡಾ ರೈತರಿಗೆ ಪರಿಚಯಿಸಲಾಗುತ್ತಿದೆ. ಅವುಗಳ ವಿವರ ರೈತ ಬಾಂಧವರ ಅನುಕೂಲಕ್ಕಾಗಿ ಇಲ್ಲಿ ನೀಡಲಾಗಿದೆ.

ಹೊಸ ತಳಿಗಳು

ಮುಸುಕಿನಜೋಳ ಸಂಕರಣ ತಳಿ: ಎಂ.ಎ.ಹೆಚ್.15-84

ಎಂಎಹೆಚ್ 15-84 ಏಕ ಸಂಕರಣ ತಳಿಯು ಮಧ್ಯಮಾವಧಿಯದ್ದಾಗಿದ್ದು (120-125 ದಿನಗಳು), ಈ ಸಂಕರಣ ತಳಿಯು ಎಂಎಹೆಚ್14-5 (81-85 ಕ್ವಿಂ/ಹೆ) ಗಿಂತ ಶೇ.14.2 ರಷ್ಟು ಅಧಿಕ ಇಳುವರಿ (92-95 ಕ್ವಿಂ/ಹೆ)  ನೀಡುತ್ತದೆ. ಎಲೆ ಅಂಗಮಾರಿ ರೋಗಕ್ಕೆ ನಿರೋಧಕತೆ ಹಾಗೂ ಕೇದಿಗೆ ರೋಗಕ್ಕೆ ಸಾಧಾರಣ ಸಹಿಷ್ಣುತೆ ಹೊಂದಿದೆ. ಆಕರ್ಷಕ ಕಾಳಿನ ಕಿತ್ತಳೆ ಬಣ್ಣದ ಕಾಳಿನಿಂದ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಪಡೆಯಬಹುದಾಗಿದೆ. ಹೆಣ್ಣು ಪೋಷಕದಲ್ಲಿ ಉತ್ತಮ ಬೀಜೋತ್ಪಾದನಾ ಸಾಮರ್ಥ್ಯ ಹಾಗೂ ಗಂಡು ಪೋಷಕದಲ್ಲಿ ಉತ್ತಮ ಪರಾಗ ಸಾಮರ್ಥ್ಯ ಹೊಂದಿವೆ. ವಲಯ 5 ಮತ್ತು ವಲಯ 6 ಕ್ಕೆ ಶಿಫಾರಸ್ಸುಮಾಡಲಾಗಿದೆ.

ಅಲಸಂದೆ ತಳಿ ಕೆ.ಬಿ.ಸಿ-12

ಕೆಬಿಸಿ-12 ತಳಿಯು ಜುಲೈ-ಆಗಸ್ಟ್-ಸೆಪ್ಟೆಂಬರ್ ಮತ್ತು ಜನವರಿ-ಫೆಬ್ರವರಿ ಬಿತ್ತನೆಗೆ ಸೂಕ್ತವಾಗಿರುವ 80-85 ದಿನಗಳ ಅವಧಿಯ ತಳಿಯಾಗಿದ್ದು ಹೆಕ್ಟೇರಿಗೆ 13-14 ಕ್ವಿಂಟಾಲ್ ಇಳುವರಿಯನ್ನು ನೀಡುತ್ತದೆ. ನೇರವಾಗಿರುವ ಸಸ್ಯ ಪ್ರಕಾರವಿದ್ದು ದಪ್ಪ ಮತ್ತು ಹಸಿರು ಬಣ್ಣದ ಕಾಯಿಗಳು ಹಾಗು ಮಧ್ಯಮ ದಪ್ಪ ಮತ್ತು ತಿಳಿ ಕಂದು ಬಣ್ಣದ ಬೀಜಗಳನ್ನೊಂಡಿರುತ್ತದೆ. ದುಂಡಾಣು ಎಲೆ ಅಂಗಮಾರಿ ರೋಗ, ನಂಜಾಣು ರೋಗ ಹಾಗೂ ಒಣ ಬೇರು ಕೊಳೆ ರೋಗಕ್ಕೆ ನಿರೋಧಕ ಶಕ್ತಿ ಹೊಂದಿದೆ. ವಲಯ 5 ಮತ್ತು ವಲಯ 6ಕ್ಕೆ ಶಿಫಾರಸ್ಸುಮಾಡಲಾಗಿದೆ.

ಸೂರ್ಯಕಾಂತಿ ಸಂಕರಣ ತಳಿ: ಕೆ.ಬಿ.ಎಸ್.ಹೆಚ್-90

ಪ್ರಸ್ತಾಪಿತ ಸಂಕರಣ ತಳಿಯ 80-82 ದಿನಗಳ ಅಲ್ಪಾವಧಿ ತಳಿಯಾಗಿದ್ದು ಮಧ್ಯಮ ಎತ್ತರವನ್ನು ಹೊಂದಿದೆ. ಈ ಸಂಕರಣ ತಳಿಯು ಕೆಬಿಎಸ್‌ಹೆಚ್-78 ತಳಿಗಿಂತ ಶೇ.21ರಷ್ಟು ಅಧಿಕ ಬೀಜದ ಇಳುವರಿ (23-24 ಕ್ವಿಂ/ಹೆ) ಹಾಗು ಶೇ.26 ರಷ್ಟು ಅಧಿಕ ತೈಲದ ಇಳುವರಿಯನ್ನು (9.0-9.4 ಕ್ವಿಂ/ಹೆ) ನೀಡುತ್ತದೆ. ವಲಯ 5 ಮತ್ತು ವಲಯ 6ಕ್ಕೆ ಶಿಫಾರಸ್ಸುಮಾಡಲಾಗಿದೆ.

ಬಾಜ್ರ ನೇಪಿಯರ್ ಸಂಕರಣ ತಳಿ : ಪಿಬಿಎನ್-342

ಈ ಸಂಕರಣ ತಳಿಯು ಬಿಎನ್‌ಹೆಚ್-10 (1313.6 ಕ್ವಿಂ/ಹೆ) ತಳಿಗಿಂತ ಶೇ. 14 ರಷ್ಟು ಹೆಚ್ಚಿನ ಹಸಿರು ಮೇವಿನ ಇಳುವರಿ (1497.8 ಕ್ವಿಂ/ಹೆ) ನೀಡಿರುತ್ತದೆ. ಈ ಸಂಕರಣ ತಳಿಯು ಹೆಚ್ಚಿನ ಒಣಮೇವಿನ ಇಳುವರಿ (204.7 ಕ್ವಿಂ/ಹೆ), ಹೆಚ್ಚಿನ ಎಲೆಕಾಂಡ ಅನುಪಾತ (0.74) ಹಾಗೂ ಹೆಚ್ಚಿನ ಕಚ್ಚಾಸಸಾರಜನಕದ ಇಳುವರಿ (9.7 ಕ್ವಿಂ/ಹೆ) ಹಾಗೂ ಉತ್ತಮ ಗುಣಮಟ್ಟದ ಪೌಷ್ಠಿಕಾಂಶವನ್ನು ದಾಖಲಿಸಿದೆ. ವಲಯ 6 ಕ್ಕೆ ಅನುಮೋದಿಸಲಾಗಿದೆ.

ನೂತನ ತಂತ್ರಜ್ಞಾನಗಳು

ಬೆಳೆ ಅಭಿವೃದ್ಧಿ

ಭತ್ತದಲ್ಲಿ ಫ್ರೇಮಿಂಗ್ ತಂತ್ರಜ್ಞಾನ: ಬಿತ್ತನೆ ಬೀಜವನ್ನು 30 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ ಒಂದು ದಿನ ಒಣಗಿಸ ನಂತರ 15 ಗ್ರಾಂ ಪ್ರತಿ ಕೆ.ಜಿ ಬೀಜಕ್ಕೆ ಟ್ರೈಕೋಡರ್ಮಾ ಹಾರ್ಜಿಯಾನಮ್ ನೊಂದಿಗೆ ಎಲ್ಲಾ ಬೀಜಗಳನ್ನು ಸಮವಾಗಿ ಲೇಪಿಸಿ, 30 ನಿಮಿಷಗಳ ಕಾಲ ಒಣಗಿಸಿ ಬಿತ್ತನೆ ಮಾಡುವುದರಿಂದ ಕಾರ್ಬೆಂಡಜಿಂನೊಂದಿಗೆ ಹೋಲಿಸಿದರೆ ಸಸ್ಯದ ಸಂಖ್ಯೆ 85.25% ಬೀಜದ ಇಳುವರಿ 43.07 ಕ್ಟಿಂ/ಹೆ ಮತ್ತು ಲಾಭದ ವೆಚ್ಚದ ಅನುಪಾತ 1:1.31 ರಷ್ಟು ಇರುತ್ತದೆ.

ಬೆಳೆ ಉತ್ಪಾದನೆ

ಹವಾಮಾನ ವೈಪರೀತ್ಯದಿಂದಾದ ತಡವಾದ ಮುಂಗಾರಿನಲ್ಲಿ ನಾಟಿ ಭತ್ತದ ಬಿತ್ತನೆ ದಿನಾಂಕ ಮತ್ತು ಅಲ್ಪಾವಧಿ ತಳಿಗಳ ಪುನ: ಮೌಲೀಕರಣ

ನಾಟಿ ಭತ್ತದಲ್ಲಿ ಹವಾಮಾನ ವೈಪರೀತ್ಯದಿಂದಾದ ತಡವಾದ ಮುಂಗಾರಿನಲ್ಲಿ ಐ.ಆರ್-64, ಎಂ.ಟಿ.ಯು-1010 ಮತ್ತು ಜ್ಯೋತಿ ತಳಿಗಳನ್ನು 30 ದಿನಗಳು ತಡವಾಗಿ ಒಟ್ಲು ಪಾತಿಯಲ್ಲಿ ಬಿತ್ತನೆ ಮಾಡಿದಾಗ ದಾಖಲಾದ ಧಾನ್ಯದ ಇಳುವರಿಯು (4296 ರಿಂದ 5928 ಕೆ.ಜಿ./ಹೆ.) ಅನುಕ್ರಮವಾಗಿ ಶಿಫಾರಸ್ಸು ಮಾಡಿದ ತಳಿಗಳ ಸಾಮಾನ್ಯ ಬಿತ್ತನೆ ಮಾಡಿದ ದಿನಾಂಕಕ್ಕೆ ಹೋಲಿಕೆ ಮಾಡಿದಾಗ ಸಂಖ್ಯಾಶಾಸ್ತ್ರೀಯವಾಗಿ ಸರಿಸಮಾನವಾಗಿರುತ್ತದೆ. ಅದೇರೀತಿ ರಕ್ಷಾ, ತೆಲ್ಲ ಹಂಸ, ರಾಶಿ ಮತ್ತು ಕೆ.ಎಂ.ಪಿ-175 ಭತ್ತದ ತಳಿಗಳನ್ನು 15 ದಿನಗಳು ತಡವಾಗಿ ಒಟ್ಲು ಪಾತಿಯಲ್ಲಿ ಬಿತ್ತನೆ ಮಾಡಿದಾಗ ದಾಖಲಾದ ಧಾನ್ಯದ ಇಳುವರಿಯು (4943 ರಿಂದ 5858ಕೆ.ಜಿ./ಹೆ.) ಅನುಕ್ರಮವಾಗಿ ಶಿಫಾರಸ್ಸು ಮಾಡಿದ ತಳಿಗಳ ಸಾಮಾನ್ಯ ಬಿತ್ತನೆ ಮಾಡಿದ ದಿನಾಂಕಕ್ಕೆ ಹೋಲಿಕೆ ಮಾಡಿದಾಗ ಸಂಖ್ಯಾಶಾಸ್ತ್ರೀಯವಾಗಿ ಸರಿಸಮಾನವಾಗಿರುತ್ತದೆ.

ನಾಟಿ ಭತ್ತದಲ್ಲಿ ಜೈವಿಕ ಗೊಬ್ಬರಗಳ ಬಳಕೆಯ ಮರುಮೌಲೀಕರಣ

ನಾಟಿ ಭತ್ತದಲ್ಲಿ ಜೈವಿಕ ಒಕ್ಕೂಟದ ಸೂಕ್ಷ್ಮಜೀವಿ  ಗೊಬ್ಬರವನ್ನು (ಅಜೋಸ್ಪಿರಿಲಮ್ + ಬ್ಯಾಸಿಲಸ್ + ಸ್ಯೂಡೋಮೊನಾಸ್ + ಟ್ರೈಕೋಡರ್ಮಾ) ಪ್ರತಿ ಹೆಕ್ಟೇರ್‌ಗೆ 5 ಕೆಜಿ ಯಂತೆ ಕೊಟ್ಟಿಗೆ ಗೊಬ್ಬರದಲ್ಲಿ (25 ಕೆಜಿ) ಮಿಶ್ರಣ ಮಾಡಿಕೊಂಡು ಮುಖ್ಯ ಭೂಮಿಗೆ ನಾಟಿಯಾದ 10  ದಿನಗಳಲ್ಲಿ ಬಳಸುವುದರಿಂದ ಶೇ.19.5 ರಷ್ಟು ಅಧಿಕ ಧಾನ್ಯದ ಇಳುವರಿ (6.36 ಟನ್/ಹೆ) ಮತು ಆದಾಯ:ವೆಚ್ಚ ಅನುಪಾತ (1.99:1) ಗಳನ್ನು ಜೈವಿಕ ಒಕ್ಕೂಟ ರಹಿತ ಉಪಚಾರಕ್ಕೆ (ಶಿಫಾರಸ್ಸು ಮಾಡಿದ ರಸಗೊಬ್ಬರ ಮಾತ್ರ) ಹೋಲಿಕೆ ಮಾಡಿದಾಗ ದಾಖಲಾಗಿರುತ್ತದೆ.

ಉದಯೋತ್ತರ ಕಳೆನಾಶಕವಾದ ಟ್ರೈಅಫಾಮೋನ್ + ಎಥಾಕ್ಸಿಸಲ್ಪುರಾನ್ ಅನ್ನು ಬಳಸಿ ನೇರ ಬಿತ್ತನೆ ಭತ್ತದಲ್ಲಿ ಕಳೆ ನಿರ್ವಹಣೆ

ಉದಯೋತ್ತರ ಕಳೆನಾಶಕವಾಗಿ ಟ್ರೈಅಫಾಮೋನ್ + ಎಥಾಕ್ಸಿಸಲ್ಪುರಾನ್ ಶೇ 30 ಡಬ್ಲ್ಯೂ.ಜಿ (ಆರ್‌ಎಂ)ನ್ನು 80 ಗ್ರಾ/ಎಕರೆಗೆ 200 ಲೀಟರ್ ನೀರಿನಲ್ಲಿ ಬೆರೆಸಿ ನೇರ ಬಿತ್ತನೆ ಭತ್ತ ಬಿತ್ತಿದ 15 ದಿನಗಳಲ್ಲಿ ಸಿಂಪಡಿಸುವುದು. ನಂತರ ಭತ್ತವನ್ನು ಬಿತ್ತಿದ 35 ದಿನಗಳಲ್ಲಿ ಸೈಕಲ್ ವೀಡರ್ ಹಾಯಿಸಿ, ಕೈಕಳೆ ಮಾಡುವುದು. ಕಳೆನಾಶಕವನ್ನು ಉಪಯೋಗಿಸುವ ಮುಂಚೆ ಗದ್ದೆಗೆ ನೀರು ಹಾಯಿಸಿ ಬಸಿಯುವುದು. ಬಸಿದ ನಂತರ ಕಳೆನಾಶಕವನ್ನು ಎರಚುವುದು. ಎರಚಿದ 48 ಗಂಟೆಗಳ ನಂತರ ನೀರು ಹಾಯಿಸಿ ಬಸಿಯುವುದರಿಂದ ಹೆಚ್ಚಿನ ಕಾಳಿನ ಇಳುವರಿ (39.8 ಕ್ವಿ/ಹೆ.), ನಿವ್ವಳ ಆದಾಯ (ರೂ. 35,226), ಲಾಭ:ವೆಚ್ಚ ಅನುಪಾತವು (2.54:1) ಮತ್ತು ಸಿಂಪಡಣೆ ಮಾಡಿದ 30 (25.9 ಪ್ರತಿ ಚದರ ಮೀಟರ್‌ಗೆ) ಮತ್ತು 45 (28.6 ಪ್ರತಿ ಚದರ ಮೀಟರ್‌ಗೆ) ದಿನಗಳಲ್ಲಿ ಕಡಿಮೆ ಒಟ್ಟು ಕಳೆಗಳ ಸಂಖ್ಯೆ ದಾಖಲಾಗಿರುತ್ತದೆ.

ಉದಯೋತ್ತರ ಕಳೆನಾಶಕವಾದ ಟೋಪ್ರಮೆಜೋನ್ ಅನ್ನು ಬಳಸಿ ಮುಸುಕಿನ ಜೋಳದಲ್ಲಿ ಕಳೆ ನಿರ್ವಹಣೆ

ಉದಯೋತ್ತರ ಕಳೆನಾಶಕವಾದ ಟೋಪ್ರಮೆಜೋನ್ 33.6% ಎಸ್.ಸಿ. @ 100 ಎಂ.ಎಲ್./ಹೆ. ಸಿಂಪಡಣೆ ಮಾಡಿದಲ್ಲಿ ಹೆಚ್ಚಿನ ಕಾಳಿನ ಇಳುವರಿ (78.93 ಕ್ವಿ/ಹೆ.), ನಿವ್ವಳ ಆದಾಯ (ರೂ. 88,753), ಲಾಭ:ವೆಚ್ಚ ಅನುಪಾತವು (2.55:1) ಮತ್ತು ಸಿಂಪಡಣೆ ಮಾಡಿದ 30 (2.64 ಪ್ರತಿ ಚದರ ಮೀಟರ್‌ಗೆ) ಮತ್ತು 45 (4.28 ಪ್ರತಿ ಚದರ ಮೀಟರ್‌ಗೆ) ದಿನಗಳಲ್ಲಿ ಕಡಿಮೆ ಒಟ್ಟು ಕಳೆಗಳ ಸಂಖ್ಯೆ ದಾಖಲಾಗಿರುತ್ತದೆ ಹಾಗೂ ಈ ಉಪಚಾರವು ಎರಡು ಬಾರಿ ಕೈ ಕಳೆ ತೆಗೆಯುವ ಉಪಚಾರಕ್ಕೆ ಸಂಖ್ಯಾಶಾಸ್ತ್ರೀಯವಾಗಿ (80.28 ಕ್ವಿ/ಹೆ.) ಸರಿಸಮವಾಗಿದೆ.

ಲಘುಪೋಷಕಾಂಶಗಳ ಸಿಂಪಡಣೆಯಿಂದ ಮುಸುಕಿನ ಜೋಳದ ಬೆಳೆವಣಿಗೆ ಮತ್ತು ಇಳುವರಿ ಮೇಲಾಗುವ ಪರಿಣಾಮ

ಶಿಫಾರಸ್ಸು ಮಾಡಿದ ರಸಗೊಬ್ಬರಗಳ ಉಪಚಾರದ ಜೊತೆಗೆ ಲಘುಪೋಷಕಾಂಶಗಳ ಮಿಶ್ರಣವನ್ನು 50 ದಿನಕ್ಕೆ ಎಲೆಗಳ ಮೇಲೆ ಸಿಂಪಡಿಸುವುದರಿಂದ ಬೆಳೆಯ ಗುಣಮಟ್ಟ ವ್ರದ್ಧಿಸುವುದರ ಜೊತೆಗೆ ಹೆಚ್ಚಿನ ಧಾನ್ಯದ ಇಳುವರಿ (8691 ಕೆಜಿ/ಹೆ), ಮೇವಿನ ಇಳುವರಿ (11877 ಕೆಜಿ/ಹೆ), ಒಟ್ಟು ಆದಾಯ (ರೂ. 1,74,313), ನಿವ್ವಳ ಆದಾಯ (ರೂ. 1,06,052) ಮತ್ತು ಲಾಭ-ವೆಚ್ಚ ಅನುಪಾತವು (2.55:1) ದಾಖಲಾಗಿರುತ್ತದೆ.

ರಾಗಿ ಬೆಳೆಯಲ್ಲಿ ದ್ರವ ಜೈವಿಕಗೊಬ್ಬರದ ಪರಿಣಾಮಗಳು

ಬಿತ್ತನೆ ಸಮಯದಲ್ಲಿ ದ್ರವರೂಪದ ಸೂಕ್ಷ್ಮ ಜೀವಿಗಳ ಸಮೂಹವನ್ನು ಭೂಮಿಗೆ ಒದಗಿಸುವುದು(ಒಂದು ಹೆಕ್ಟೇರ್ ಪ್ರದೇಶಕ್ಕೆ 6.25 ಲೀ. ನಂತೆ 500 ಕೆ.ಜಿ. ಕೊಟ್ಟಿಗೆ ಗೊಬ್ಬರದೊಂದಿಗೆ ಮಿಶ್ರಣ ಮಾಡಿ ಬಿತ್ತನೆಯ ಸಮಯದಲ್ಲಿ ಸಾಲಿನಲ್ಲಿ ಬೆರೆಸಿ ಬಿತ್ತನೆ ಕಾರ್ಯವನ್ನು ಕೈಗೊಳ್ಳುವುದು) ಧಾನ್ಯದ ಇಳುವರಿಯಲ್ಲಿ ಶೇ. 15.32 (29.04 ಕ್ವಿಂ./ಹೆ.) ಹಾಗೂ ಮೇವಿನ ಇಳುವರಿಯಲ್ಲಿ ಶೇ. 14.86 ರಷ್ಟು (62.77 ಕ್ವಿಂ./ಹೆ.) ಹೆಚ್ಚಳ ದಾಖಲಿಸಿ 2.53:1 ಲಾಭ ವೆಚ್ಚ ಅನುಪಾತವನ್ನು ಕೃ.ವಿ.ವಿ. ಶಿಫಾರಿತ ಪದ್ಧತಿಗೆ (7.5 ಟನ್/ಹೆ ಕೊಟ್ಟಿಗೆ ಗೊಬ್ಬರ ಮತ್ತು 50:40:37.5 ಕೆ.ಜಿ. ಸಾರಜನಕ: ರಂಜಕ: ಪೂಟ್ಯಾಶ್/ಹೆ.; ಧಾನ್ಯದ ಇಳುವರಿ: 25.18 ಕ್ವಿಂ./ಹೆ. ಮತ್ತು ಮೇವಿನ ಇಳುವರಿ: 54.65 ಕ್ವಿಂ./ಹೆ.) ಹೋಲಿಸಿದಾಗ ನೀಡಿರುತ್ತದೆ.

ಗುಳಿ ವಿಧಾನದಲ್ಲಿ ರಾಗಿ ಬೆಳವಣಿಗೆ ಮತ್ತು ಇಳುವರಿ ಮೇಲೆ ಬೆಳೆ ಅಂತರ ಮಟ್ಟ, ಕೊಟ್ಟಿಗೆ ಗೊಬ್ಬರ ಮತ್ತು ಹಲಗೆ ಹಾಯಿಸುವುದರ ಪರಿಣಾಮ

ಗುಳಿ ವಿಧಾನ (ಹೆಕ್ಟೇರ್‌ಗೆ 12.5 ಟನ್ ಕೊಟ್ಟಿಗೆ ಗೊಬ್ಬರವನ್ನು ಎಲ್ಲಾ ಗುಳಿಗಳಿಗೂ ಸಮಾನವಾಗಿ ಬೆರೆಸಿ 30 ಸೆಂ. ಮೀ. x 30  ಸೆಂ. ಮೀ. ಅಂತರದಲ್ಲಿ ನಾಟಿ ಮಾಡುವುದು ಹಾಗೂ ನಾಟಿ ಮಾಡಿದ 20 ಮತ್ತು 40 ದಿನಗಳಲ್ಲಿ ಹಲಗೆ ಹಾಯಿಸುವುದು) ಪದ್ಧತಿಯು ಧಾನ್ಯದ ಇಳುವರಿಯಲ್ಲಿ ಶೇ.23 (31.6 ಕ್ವಿಂ./ಹೆ.) ಹಾಗೂ ಮೇವಿನ ಇಳುವರಿಯಲ್ಲಿ ಶೇ. 18.8 ರಷ್ಟು (61.5 ಕ್ವಿಂ./ಹೆ.) ಹೆಚ್ಚಳ ಸಾಧಿಸಿದೆ ಮತ್ತು 2.99:1 ಲಾಭ:ವೆಚ್ಚ ಅನುಪಾತವನ್ನು ಕೃ.ವಿ.ವಿ. ಶಿಫಾರಿತ ಪದ್ಧತಿಗೆ (ಹೆಕ್ಟೇರ್‌ಗೆ 7.5 ಟನ್ ಕೊಟ್ಟಿಗೆ ಗೊಬ್ಬರ ಒದಗಿಸುವುದು ಮತ್ತು ನಾಟಿ ಮಾಡುವುದು; ಧಾನ್ಯದ ಇಳುವರಿ: 25.6 ಕ್ವಿಂ./ಹೆ. ಮತ್ತು ಮೇವಿನ ಇಳುವರಿ: 51.71 ಕ್ವಿಂ./ಹೆ.) ಹೋಲಿಸಿದರೆ ನೀಡಿರುತ್ತದೆ.

ಅಲಸಂದೆಯಲ್ಲಿ ನೀರಿನಲ್ಲಿ ಕರಗುವ ಪೋಷಕಾಂಶಗಳನ್ನು ಎಲೆ ಮೂಲಕ ಸಿಂಪಡನೆ ಮಾಡುವ ಮುಖಾಂತರ ಇಳುವರಿ ಹೆಚ್ಚಿಸುವುದು

ಅಲಸಂದೆ ಬೆಳೆಯಲ್ಲಿ ಇಳುವರಿಯನ್ನು ಹೆಚ್ಚಿಸಲು ಶಿಫಾರಸು ಮಾಡಿದ ರಸಗೊಬ್ಬರಗಳ ಜೊತೆಗೆ (25:50:25 ಕೆ.ಜಿ. ಸಾರಜನಕ: ರಂಜಕ: ಪೂಟ್ಯಾಶ್/ಹೆ.) ನೀರಿನಲ್ಲಿ ಕರಗುವ 19:19:19 ರ ರಸಗೊಬ್ಬರವನ್ನು ಪ್ರತಿ ಲೀಟರ್ ನೀರಿಗೆ 10 ಗ್ರಾಂ ನಂತೆ ಬೆರಿಸಿ ಹೂ ಬಿಡುವ ಮತ್ತು ಕಾಯಿ ಕಟ್ಟುವ ಹಂತದಲ್ಲಿ ಸಿಂಪಡಣೆ ಮಾಡುವುದರಿಂದ ಶೇ. 17 ಅಧಿಕ ಬೀಜದ ಇಳುವರಿ (1520 ಕೆಜಿ/ಹೆ), ನಿವ್ವಳ ಆದಾಯ (53,027 ರೂ/ಹೆ) ಹಾಗೂ ಆದಾಯ : ವೆಚ್ಚ ಅನುಪಾತ (3.14) ಪಡೆಯಬಹುದು ಮತ್ತು ಇದು ಯಾವುದೇ ಉಪಚಾರ ಮಾಡದಂತ ಶಿಫಾರಸು ಮಾಡಿದ ರಸಗೊಬ್ಬರಗಳ ಪ್ರಯೋಗಕ್ಕೆ [ಇಳುವರಿ: 1290 ಕೆಜಿ/ಹೆ, ನಿವ್ವಳ ಆದಾಯ: 44,399 ರೂ/ಹೆ ಮತ್ತು ಲಾಭ:ವೆಚ್ಚ ಅನುಪಾತ – 3.14:1] ಹೋಲಿಸಿದರೆ ಅಧಿಕವಾಗಿರುತ್ತದೆ.

ತೇಗದಲ್ಲಿ ಅಂತರ ಬೆಳೆಗಳಾಗಿ ಮೇವಿನ ಹುಲ್ಲುಗಳು

ತೇಗದಲ್ಲಿ (12 ಮೀ.x 3 ಮೀ.) ಅಂತರ ಬೆಳೆಯಾಗಿ ಕೋ-5 ನೇಪಿಯರ್ ಹುಲ್ಲನ್ನು ಬೆಳೆಯುವುದರಿಂದ ಹೆಚ್ಚಿನ ಇಳುವರಿ (132.52 ಟನ್/ಹೆ), ಒಟ್ಟು ಆದಾಯ (ರೂ. 1,32,519 ಪ್ರತಿ ಹೆಕ್ಟೇರ್‌ಗೆ), ನಿವ್ವಳ ಆದಾಯ (ರೂ. 75,719 ಪ್ರತಿ ಹೆಕ್ಟೇರ್‌ಗೆ) ಮತ್ತು ಲಾಭ:ವೆಚ್ಚ ಅನುಪಾತವನ್ನು (2.3:1) ಪಡೆಯಬಹುದು.

ನೇಪಿಯರ್ ಹುಲ್ಲಿನಲ್ಲಿ ಹೆಡ್ಜ್ ಲೂಸರ್ನ್ ಬೆಳೆಯನ್ನು ಅಂತರ ಬೆಳೆಯಾಗಿ ಬೆಳೆದಾಗ ಹೆಚ್ಚಿನ ಇಳುವರಿಯನ್ನು ಪಡೆಯಬಹುದು

ನೇಪಿಯರ್ ಪೂರ್ಣ ಬೆಳೆಗೆ [ಹಸಿರು ಮೇವು (1548.2 ಕ್ವಿಂ/ಹೆ) ಹಾಗೂ ಒಣ ಪದಾರ್ಥದ ಇಳುವರಿ (301.1ಕ್ವಿಂ/ಹೆ), ಕಚ್ಚಾ ಸಸಾರಜನಕದ ಇಳುವರಿ (27.8 ಕ್ವಿಂ/ಹೆ), ನಿವ್ವಳ ಆದಾಯ (1,43,534 ರೂ./ಹೆ) ಮತು ಆದಾಯ:ವೆಚ್ಚ ಅನುಪಾತ ಅನುಪಾತ (2.6 2:1)] ಹೋಲಿಸಿದರೆ ಜೋಡಿ ಸಾಲು ಪದ್ದತಿಯ ನೇಪಿಯರ್ ಹುಲ್ಲಿನಲ್ಲಿ ಹೆಡ್ಜ್ ಲೂಸರ್ನ್ ಬೆಳೆಯನ್ನು ಅಂತರ ಬೆಳೆಯಾಗಿ 5 ಸಾಲು (2:5) ಬೆಳೆಯುವುದರಿಂದ ಅಧಿಕ ಹಸಿರು ಮೇವು (1873.0ಕ್ವಿ/ಹೆ) ಹಾಗೂ ಒಣ ಪದಾರ್ಥದ ಇಳುವರಿ (368.5ಕ್ವಿಂ/ಹೆ), ಕಚ್ಚಾ ಸಸಾರಜನಕದ ಇಳುವರಿ (11.2 ಕ್ವಿಂ/ಹೆ), ನಿವ್ವಳ ಆದಾಯ (2,05,875 ರೂ./ಹೆ) ಮತು ಅಧಿಕ ಆದಾಯ:ವೆಚ್ಚ ಅನುಪಾತ (3.18:1) ಪಡೆಯಬಹುದು. ಪೂರ್ಣ ಬೆಳೆಗೆ ಹೋಲಿಸಿದಾಗ ಶೇ. 21 ರಷ್ಟು ಅಧಿಕ ಹಸಿರು ಮೇವಿನ ಇಳುವರಿ ಕಂಡುಬಂದಿದೆ.

ಬೆಳೆ ಸಂರಕ್ಷಣೆ

ಸಾವಯವ/ನೈಸರ್ಗಿಕ ಕೃಷಿ ಪದ್ಧತಿಯಲ್ಲಿ ಇಲಿಗಳ ನಿರ್ವಹಣೆ

ಸಾವಯವ/ ನೈಸರ್ಗಿಕ ಕೃಷಿ ಪದ್ಧತಿಯಲ್ಲಿ (ಶೇಂಗಾ ಬೆಳೆಯಲ್ಲಿ) ಇಲಿಗಳನ್ನು ನಿಯಂತ್ರಿಸಲು ಬೀಜ ಬಿತ್ತುವ ಮೊದಲು ಆಳವಾಗಿ ಉಳುಮೆ ಮಾಡಿ ಕಾಲಕಾಲಕ್ಕೆ ಕಳೆಗಳನ್ನು ಕೀಳುತ್ತಿರಬೇಕು ಹಾಗೂ ಹುಟ್ಟಿದ 40 ದಿವಸಗಳ ನಂತರ ಸಸ್ಯಜನ್ಯ ಇಲಿ ನಿವಾರಕಗಳನ್ನು ಸಿಂಪಡಿಸುವುದು ಹಾಗೂ ಕಾಯಿ ಕಟ್ಟುವ ಸಮಯದಲ್ಲಿ ಹೆಕ್ಟೇರಿಗೆ 50 ರಂತೆ ಮೂರು ದಿವಸಗಳ ಕಾಲ ಇಲಿ ಕತ್ತರಿಗಳನ್ನು ಹೊಲದಲ್ಲಿ ಇಡಬೇಕು. ವಿಧಾನ: ಐದುನೂರು ಗ್ರಾಂ ಬೇವಿನ ಎಲೆ, 500 ಗ್ರಾಂ. ಗೊಬ್ಬರದ ಗಿಡದ ಎಲೆ, 250 ಗ್ರಾಂ. ಬೆಳ್ಳುಳ್ಳಿಯನ್ನು 10 ಲೀ ನೀರಿನಲ್ಲಿ 30 ನಿಮಿಷಗಳವರೆಗೆ ಕುದಿಸಿ, ಸೋಸಿ, ಸೋಸಿದ ನೀರಿಗೆ 250ಗ್ರಾಂ ಒಣ ಮೆಣಸಿನ ಪುಡಿ ಹಾಗು 2ಲೀ ಗೋಮೂತ್ರವನ್ನು ಬೆರಸಿ ಸಸ್ಯಜನ್ಯ ಇಲಿ ನಿವಾರಕಗಳನ್ನು ತಯಾರಿಸಬೇಕು ಹಾಗು ಮೂರು ದಿವಸಗಳವರೆಗೆ ನೆನೆಸಿ ಆ ದ್ರಾವಣವನ್ನು ಶೇ 20 ಪ್ರಮಾಣದಲ್ಲಿ ನೀರಿನೊಂದಿಗೆ ಸಿಂಪಡಿಸಬೇಕು. ಇದರಿಂದ ಇಲಿಗಳ ಸಾಂದ್ರತೆಯು ಶೇ70.79 ರಷ್ಟು ಕಡಿಮೆಯಾಗಿ ಇದರ ಖರ್ಚು ಮತ್ತು ಲಾಭದ ಅನುಪಾತವು 1:4.40 ಇರುತ್ತದೆ. ಈ ಇಲಿ ನಿಯಂತ್ರಣಾ ಕ್ರಮವನ್ನು ಇತರೇ ಬೆಳೆಗಳಿಗೂ ಉಪಯೋಗಿಸಬಹುದು. ಹೊಲದಲ್ಲಿ ಜೀವಂತ ಬಿಲಗಳ ಸಂಖ್ಯೆ ಹೆಕ್ಟೇರಿಗೆ 50 ಕ್ಕಿಂತ ಹೆಚ್ಚಿದ್ದಲ್ಲಿ ಮಾತ್ರ ಸಸ್ಯಜನ್ಯ ಇಲಿ ನಿವಾರಕ ಉಪಯೋಗಿಸಬೇಕು.

ಹತ್ತಿ ಬೆಳೆಯಲ್ಲಿ ಗುಲಾಬಿ (ನಸುಗೆಂಪು) ಕಾಯಿಕೊರಕದ ನಿರ್ವಹಣೆ

ಸ್ಪೈನೊಟೆರಮ್ 11.7 ಎಸ್.ಸಿ ಅನ್ನು ಕಾಯಿ ಕಟ್ಟುವ ಹಂತದಲ್ಲಿ ಪ್ರತಿ ಲೀಟರ್ ನೀರಿಗೆ 0.75  ಮಿ.ಲೀ ಬೆರೆಸಿ ಸಿಂಪಡಿಸುವುದರಿಂದ ಮರಿಹುಳುಗಳ ಸಂಖ್ಯೆ (95.23%), ಹಸಿರು ಕಾಯಿಗಳಿಗೆ ಬಾಧೆ (98. 03%), ಕಟಾವಿನ ಸಮಯದಲ್ಲಿ ಕಾಯಿಕೊರಕದ ತೆರೆದ ಕಾಯಿಗಳ (89.8%) ಮತ್ತು ತೊಳೆಗಳ ಬಾಧೆಯು ಕಡಿಮೆಯಾಗಿದ್ದು ಶೇ.15 ರಷ್ಟು ಅಧಿಕ ಇಳುವರಿ (20.71ಕ್ವಿಂ/ಹೆ) ಹಾಗೂ ಉತ್ತಮ ಆದಾಯ:ವೆಚ್ಚದ ಅನುಪಾತ (3.45:1) ಪಡೆಯಬಹುದಾಗಿದೆ.

ಭತ್ತಬೀಜ ಸಂಗ್ರಹಣೆಯಲ್ಲಿ ಮೂತಿ ಹುಳುವಿನ ಹತೋಟಿ

ಭತ್ತದ ಬೀಜಗಳನ್ನು ಒಣಗಿಸಿ (ಶೇ.10 ಕ್ಕಿಂತ ಕಡಿಮೆ ತೇವಾಂಶ), ಪ್ರತಿ ಕೆಜಿ ಬೀಜವನ್ನು ಅಜಾಡಿರೆಕ್ವಿನ್ 10000 ಪಿಪಿಎಮ್ @ 7.50 ಮಿಲಿ ರಲ್ಲಿ ಬೀಜೋಪಚಾರ ಮಾಡಿ 4 ಗಂಟೆಗಳ ಕಾಲ ನೆರಳಿನಲ್ಲಿ ಒಣಗಿಸಿ, ಗೋಣಿ ಚೀಲದಲ್ಲಿ ಶೇಖರಿಸಿಡುವುದರಿಂದ ಮೂತಿ ಹುಳುವಿನ ಬಾಧೆಯಿಂದ ಭತ್ತದ ಬೀಜವನ್ನು 6 ತಿಂಗಳುಗಳ ಕಾಲ ಕಾಪಾಡಬಹುದು ಹಾಗೂ ಮೊಳಕೆಯ ಪ್ರಮಾಣದಲ್ಲೂ ಸಹ ವ್ಯತ್ಯಾಸವಾಗದಂತೆ (ಶೇಕಡವಾರು ಮೊಳಕೆ ಪ್ರಮಾಣ: 3 ತಿಂಗಳ ನಂತರ: 96% ಹಾಗು 6 ತಿಂಗಳ ನಂತರ: 92%) ನಿರ್ವಹಿಸಿ ಉತ್ತಮ ಆದಾಯ:ವೆಚ್ಚದ ಅನುಪಾತವನ್ನು (5.5:1) ಪಡೆಯಬಹುದಾಗಿದೆ.

ಮುಸುಕಿನ ಜೋಳದಲ್ಲಿ ಮೇಡಿಸ್ ಎಲೆ ಅಂಗಮಾರಿ ರೋಗದ ನಿರ್ವಹಣೆ

ಅಜೊಕ್ಸಿಸ್ಟೋಬಿನ್ ಶೇ.18.2 + ಡೈಫೆನೊಕೊನೊಜೋಲ್ ಶೇ.11.4 ಡಬ್ಲ್ಯೂ/ಡಬ್ಲ್ಯೂ ಎಸ್.ಸಿ ಶಿಲೀಂಧ್ರನಾಶಕವನ್ನು ಸಿಂಪಡಿಸುವುದರಿಂದ ಯಾವುದೇ ಶಿಲೀಂಧ್ರನಾಶಕದ ಉಪಚಾರವಿಲ್ಲದ ಉಪಚಾರಕ್ಕೆ ಹೋಲಿಸಿದಾಗ ಶೇ.82.4 ರಷ್ಟು ರೋಗದ ತೀವ್ರತೆಯನ್ನು ಕಡಿಮೆಗೊಳಿಸಿ ಶೇ.102.8 ರಷ್ಟು ಹೆಚ್ಚಿನ ಇಳುವರಿ ಹಾಗು 2:1 ಲಾಭ:ವೆಚ್ಚದ ಅನುಪಾತವನ್ನು ಪಡೆಯಬಹುದಾಗಿದೆ.

ದಾಳಿಂಬೆ ಬೆಳೆ ಪರಾಗಸ್ಪರ್ಶಕ್ಕಾಗಿ ತುಡುವೆ ಜೇನು ಕುಟುಂಬಗಳ ಬಳಕೆ

ದಾಳಿಂಬೆ ಬೆಳೆಯ ಹೂ ಬಿಡುವ ಹಂತದಲ್ಲಿ ಪ್ರತಿ ಹೆಕ್ಟೇರಿಗೆ 4 ಜೇನುಕುಟುಂಬಗಳನ್ನು ಇಡುವುದರಿಂದ ಹಣ್ಣಿನ ಇಳುವರಿಯು 38.38% ನಷ್ಟು ಜಾಸ್ತಿ ಮಾಡಬಹುದು.

ತುಡುವೆ ಜೇನು ಕುಟುಂಬಕ್ಕೆ ತಗಲುವ ಥೈ ಸಾಕ್ ಬ್ರೂಡ್ ರೋಗದ ನಿರ್ವಹಣೆಗೆ ಗಿಡಮೂಲಿಕೆಗಳ ಬಳಕೆ: ವಾರಕ್ಕೆ 2-3 ಬಾರಿ ಜೇನು ಕುಟುಂಬಗಳಿಗೆ ಸಕ್ಕರೆ ದ್ರಾವಣದಲ್ಲಿ (250ಮಿ.ಲೀ.), ನೆಲನೆಲ್ಲಿ ಪುಡಿ (2 ಗ್ರಾಂ.), ಅರಿಶಿಣ (0.5 ಗ್ರಾಂ.) ಮತ್ತು ತುಳಸಿ (0.5 ಗ್ರಾಂ.) ಯನ್ನು ಕರಗಿಸಿ ನೀಡುವುದರಿಂದ ಶೇ.41.7ರಷ್ಟು ರೋಗವನ್ನು ಹತೋಟಿಗೆ ತರಬಹುದು.

ಕೃಷಿ ಇಂಜಿನೀಯರಿಂಗ್

ಕೈಚಾಲಿತ ರಾಗಿ ಹಾಗೂ ಗೊಬ್ಬರದ ಸಂಯುಕ್ತ ಕೂರಿಗೆ ಸಾಧನ

ಕೈ ಚಾಲಿತ ರಾಗಿ ಹಾಗೂ ಗೊಬ್ಬರದ ಸಂಯುಕ್ತ ಕೂರಿಗೆ ಸಾದನವು ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಅನುಕೂಲಕರವಾಗಿರುತ್ತದೆ. ಈ ಸಾಧನವನ್ನು ಉಪಯೋಗಿಸಿ ಇಬ್ಬರ ಕೃಷಿ ಕಾರ್ಮಿಕರ ಸಹಾಯದಿಂದ ಒಂದು ದಿನಕ್ಕೆ 1.5 ಎಕರೆ ಪ್ರದೇಶ ಬಿತ್ತನೆಗೊಳಿಸಬಹುದಾಗಿದೆ. ಇದಕ್ಕೆ ತಗಲುವ ಬಿತ್ತನೆ ಬೀಜದ ಪ್ರಮಾಣವು ಒಂದು ಹೆಕ್ಟೇರಿಗೆ ಸುಮಾರು 19.5 ಕೆ.ಜಿ ಹಾಗೂ ಗೊಬ್ಬರವು 28 ಕೆ.ಜಿ ರಷ್ಟು ಪೂರೈಸಬಹುದಾಗಿದೆ. ಈ ಸಾದನದ ಸಹಾಯದಿಂದ ಸಾಲಿನಿಂದ ಸಾಲಿಗೆ 30 ಸೆಂ.ಮೀ ಅಂತರ ಕೊಡಬಹುದಲ್ಲದೆ ಒಂದು ಹೆಕ್ಟೇರಿಗೆ ಸರಾಸರಿ ರೂ. 1000 ರಷ್ಟು ಬೇಸಾಯ ವೆಚ್ಚ ಕಡಿತಗೊಳಿಸಬಹುದಾಗಿದೆ ಹಾಗು ಕೃಷಿ ಕಾರ್ಮಿಕರಿಗೆ ತಗಲುವ ವೆಚ್ಚ ಮತ್ತು ಅವಲಂಬನೆ ಕಡಿತಗೊಳಿಸಬಹುದಾಗಿದೆ.

ಬಹು-ಬೆಳೆ ಸಂಸ್ಕರಣಾ ಯಂತ್ರ

ಈ ಯಂತ್ರವು 1 ಹೆಚ್‌ಪಿ ಸಿಂಗಲ್‌ಫೇಸ್ ಎಲೆಕ್ಟ್ರಿಕ್ ಮೋಟಾರ್‌ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಈ ಯಂತ್ರದ ದಕ್ಷತೆಯು ಶೇ.98 ಕಂಡುಬಂದಿದ್ದು, ಯಂತ್ರವು ಸಾಂದ್ರವಾಗಿರುತ್ತದೆ ಮತ್ತು ಕನಿಷ್ಟ ಕೌಶಲ್ಯದೊಂದಿಗೆ ಕಾರ್ಯನಿರ್ವಹಿಸಲು ಸುಲಭವಾಗಿದೆ. ಈ ಯಂತ್ರವು ಪ್ರತಿ ಗಂಟೆಗೆ 40-50 ಕೆಜಿ ನೆಲಗಡಲೆಗಳನ್ನು ನೆಲಗಡಲೆ ಬೆಳೆಯಿಂದ ಬೇರ್ಪಡಿಸುತ್ತದೆ, ನೆಲಗಡಲೆ 110-115ಕೆಜಿ ಬೀಜಗಳನ್ನು ಕಡಲೆಕಾಯಿಗಳಿಂದ ಬೇರ್ಪಡಿಸುತ್ತದೆ, 216-234 ಸೂರ್ಯಕಾಂತಿ ತೆನೆಗಳಿಂದ ಬೀಜಗಳನ್ನು ಬೇರ್ಪಡಿಸುತ್ತದೆ, 217-223 ಮೆಕ್ಕೆಜೋಳ ತೆನೆಗಳಿಂದ ಬೀಜಗಳನ್ನು ಬೇರ್ಪಡಿಸುತ್ತದೆ ಹಾಗೂ ಬೇರ್ಪಡಿಸುವಾಗ ಶೇ.4ಕ್ಕಿಂತ ಕಡಿಮೆ ಒಡೆದಿರುವ ಬೀಜಗಳ ಪ್ರಮಾಣ ಮತ್ತು ಶೇ.95ಕ್ಕಿಂತ ಹೆಚ್ಚಿನ ಮೊಳಕೆಯೊಡೆಯುವಿಕೆ ಪ್ರಮಾಣ ಕಂಡುಬಂದಿರುತ್ತದೆ. ನೆಲಗಡಲೆಯಿಂದ ಬೀಜಗಳನ್ನು ಬೇರ್ಪಡಿಸಲು ಸೂರ್ಯಕಾಂತಿ ತೆನೆಯಿಂದ ಬೀಜಗಳನ್ನು ಬೇರ್ಪಡಿಸಲು ಮತ್ತು ಮೆಕ್ಕೆಜೋಳದಿಂದ ಬೀಜಗಳನ್ನು ಬೇರ್ಪಡಿಸಲು ಅಗತ್ಯವಿರುವ ನಾಲ್ಕು ಪ್ರತ್ಯೇಕ ಯಂತ್ರಗಳ ಒಟ್ಟು ವೆಚ್ಚಕ್ಕೆ ಹೋಲಿಸಿದರೆ ಈ ಯಂತ್ರದ ವೆಚ್ಚವು 3-4 ಪಟ್ಟು ಕಡೆಮೆಯಾಗಿದೆ. ಸಣ್ಣ ಮತ್ತು ಮಧ್ಯಮ ಪ್ರಮಾಣದ ರೈತರು/ಸಂಸ್ಕಾರಕರು, ಆರಂಭಿಕ ಉದ್ಯಮಿಗಳು ಮತ್ತು ಗುಡಿ ಕೈಗಾರಿಕೆಗಳಿಗೆ ಸೂಕ್ತವಾಗಿದೆ.


Spread the love