www.knnkrushisamaya.com DESK
ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯಕ್ಕೀಗ (ಜಿ.ಕೆ.ವಿ.ಕೆ) 60 ರ ಸಂಭ್ರಮ. ವಿ.ವಿಯ ಸಂಸ್ಥಾಪನಾ ದಿನಾಚರಣೆಯನ್ನು ದಿನಾಂಕ:01-10-2024 ನೇ ಮಂಗಳವಾರ ಜಿಕೆವಿಕೆ ಆವರಣದಲ್ಲಿರುವ ಡಾ: ಬಾಬು ರಾಜೇಂದ್ರ ಪ್ರಸಾದ್ ಅಂತಾರಾಷ್ಟ್ರೀಯ ಸಮಾವೇಶ ಭವನದಲ್ಲಿ ಆಯೋಜಿಸಲಾಗಿದೆ. ಸಂಭ್ರಮಾಚರಣೆಯ ಉದ್ಘಾಟನೆಯನ್ನು ಸನ್ಮಾನ್ಯ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ನೆರವೇರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ದೆಹಲಿಯ ಭಾರತೀಯ ಕೃಷಿ ಅನುಸಂಧಾನ ಪರಿಷತ್ ನ ಪಶು ವಿಜ್ಞಾನ ವಿಭಾಗದ ಉಪಮಹಾನಿರ್ದೇಶಕರು ಡಾ: ರಾಘವೇಂದ್ರ ಭಟ್ಟ ಉಪಸ್ಥಿತರಿರುತ್ತಾರೆ. ವಿವಿಯ ಕುಲಪತಿಗಳಾದ ಡಾ: ಎಸ್.ವಿ. ಸುರೇಶ ಅಧ್ಯಕ್ಷತೆವಹಿಸಲಿದ್ದಾರೆ.
ಇತಿಹಾಸ
ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ರಾಜ್ಯದ ಕೃಷಿ ಮತ್ತು ಕೃಷಿ ಸಂಬಂಧಿತ ವಿಶ್ವವಿದ್ಯಾನಿಲಯಗಳ ಮಾತೃ ಸಂಸ್ಥೆ. 1899 ರಲ್ಲಿ ಅಂದಿನ ಮೈಸೂರು ಸಂಸ್ಥಾನದ ಮಹಾರಾಣಿ ಕೆಂಪ ನಂಜಮ್ಮಣ್ಣಿಯವರು ಹೆಬ್ಬಾಳದಲ್ಲಿ ಕೊಡುಗೆಯಾಗಿ ನೀಡಿದ 30 ಎಕರೆ ಜಮೀನಿನಲ್ಲಿ ಪ್ರಾಯೋಗಿಕ ಕೃಷಿ ಕ್ಷೇತ್ರವಾಗಿ ಪ್ರಾರಂಭವಾಗಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಯದ ಉದಯಕ್ಕೆ ನಾಂದಿಯಾಯಿತು. ನಂತರ 1913 ರಲ್ಲಿ ಕೃಷಿ ಕಾಲೇಜಾಗಿ ರೂಪುಗೊಂಡಿತು. ತದನಂತರ 1946 ರಲ್ಲಿ ಅಂದಿನ ಮೈಸೂರು ಸಂಸ್ಥಾನದ ದಿವಾನರಾಗಿದ್ದ ಸರ್. ಎಂ.ವಿಶ್ವೇಶ್ವರಯ್ಯನವರ ಮುಂದಾಳತ್ವದಲ್ಲಿ ಹೆಬ್ಬಾಳದಲ್ಲಿ 202 ಎಕರೆ ಪ್ರದೇಶದಲ್ಲಿ ಮೈಸೂರು ಕೃಷಿ ಕಾಲೇಜು ಸ್ಥಾಪಿನೆಯಾಯಿತು. 1964 ರಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯವಾಯಿತು. ಹೀಗೆ ಬೆಳೆದು ಬಂದ ಕೃಷಿ ವಿ.ವಿ. ಪ್ರಸ್ತುತ ದಕ್ಷಿಣ ಕರ್ನಾಟಕದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಹಾಸನ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ರಾಮನಗರ, ಕೋಲಾರ ಮತ್ತು ತುಮಕೂರು ಹೀಗೆ 10 ಜಿಲ್ಲೆಗಳಲ್ಲಿ ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸಿಕೊಂಡಿದೆ. ಕೃಷಿಯಲ್ಲಿ ಶಿಕ್ಷಣ, ಸಂಶೋಧನೆ ಮತ್ತು ವಿಸ್ತರಣೆ ವಿಶ್ವವಿದ್ಯಾನಿಲಯದ ಧ್ಯೇಯೋದ್ದೇಶಗಳಾಗಿವೆ.
ಬೋಧನೆ
ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ನಾಲ್ಕು ವರ್ಷಗಳ ಅವಧಿಯ ಆಂಗ್ಲ ಮಾಧ್ಯಮ ಮತ್ತು ಸೆಮಿಸ್ಟರ್ ಪದ್ಧತಿಯಲ್ಲಿ ಆರು ವೃತ್ತಿಪರ ತಾಂತ್ರಿಕ ಸ್ನಾತಕ ಪದವಿಗಳು (ಬಿ.ಎಸ್‌ಸಿ. (ಆನರ್ಸ್) ಕೃಷಿ, ಕೃಷಿ ಮಾರುಕಟ್ಟೆ ಮತ್ತು ಸಹಕಾರ, ಬಿ.ಟೆಕ್. (ಕೃಷಿ ಇಂಜಿನಿಯರಿಂಗ್), ಬಿ.ಟೆಕ್ (ಜೈವಿಕ ತಂತ್ರಜ್ಞಾನ), ಬಿ.ಟೆಕ್ (ಆಹಾರ ತಂತ್ರಜ್ಞಾನ) ಮತ್ತು ಬಿ.ಎಸ್‌ಸಿ. (ಆನರ್ಸ್) ರೇಷ್ಮೆ ಕೃಷಿ ಎರಡು ವರ್ಷಗಳ ಅವಧಿಯ 23 ವಿಷಯಗಳಲ್ಲಿ ಮಾಸ್ಟರ್ಸ್ ಪದವಿಗಳು ಮತ್ತು 16 ವಿಷಯಗಳಲ್ಲಿ ಮೂರು ವರ್ಷಗಳ ಅವಧಿಯ ಡಾಕ್ಟೋರಲ್ ಪದವಿ ಶಿಕ್ಷಣವನ್ನೂ ಬೆಂಗಳೂರಿನ ಜಿ.ಕೆ.ವಿ.ಕೆ, ಮಂಡ್ಯದ ವಿ.ಸಿ.ಫಾರಂ, ಹಾಸನದ ಕಾರೆಕೆರೆ, ಚಿಕ್ಕಬಳ್ಳಾಪುದ ಚಿಂತಾಮಣಿಯ ಕುರುಬೂರು ಮತ್ತು ಚಾಮರಾಜನಗರದ ಹರದನಹಳ್ಳಿಯಲ್ಲಿ ನೀಡಲಾಗುತ್ತಿದೆ.
ಸಂಶೋಧನೆ
ವಿಶ್ವವಿದ್ಯಾಲಯವು ರೈತ ಸಮುದಾಯ ಎದುರಿಸುತ್ತಿರುವ ಕೃಷಿ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರಗಳನ್ನು ನೀಡಲು ನಿರಂತರವಾಗಿ ಸಂಶೋಧನೆಗಳನ್ನು ಕೈಗೊಳ್ಳುತ್ತಿದೆ. ಪ್ರಗತಿಪರ ರೈತರು, ಅಭಿವೃದ್ಧಿ ಇಲಾಖೆಗಳ ಆಧಿಕಾರಿಗಳು, ವಿಜ್ಞಾನಿಗಳು, ವಿಸ್ತರಣಾ ಕಾರ್ಯಕರ್ತರು ಹಾಗೂ ಕೃಷಿ ಕೈಗಾರಿಕೋದ್ಯಮಿಗಳನ್ನೊಳಗೊಂಡ ಸಂಶೋಧನಾ ಸಭೆಯಲ್ಲಿ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುತ್ತಾರೆ. ಜಿಕೆವಿಕೆ, ಬೆಂಗಳೂರು ಮತ್ತು ವಿ.ಸಿ.ಫಾರಂ, ಮಂಡ್ಯದಲ್ಲಿ ವಲಯ ಕೃಷಿ ಸಂಶೋಧನಾ ಕೇಂದ್ರಗಳು, ಹಾಸನದ ಅರಸೀಕೆರೆ, ತುಮಕೂರಿನ ಕುಣಿಗಲ್ ಮತ್ತು ಪಾವಗಡ, ಚಿಕ್ಕಬಳ್ಳಾಪುರದ ಚಿಂತಾಮಣಿ ಮತ್ತು ಬಲಜಿಗಪಡೆ, ಮೈಸೂರಿನ ನಾಗನಹಳ್ಳಿ, ಹಾಸನದ ಮಡೆನೂರು ಮತ್ತು ಹೊಳೆನರಸೀಪುರದ ಗುಂಜೇವಿನಲ್ಲಿ ಕೃಷಿ ಸಂಶೋಧನಾ ಕೇಂದ್ರಗಳು ಮತ್ತು ಅಖಿಲ ಭಾರತ ಸುಸಂಘಟಿತ ಸಂಶೋದನಾ ಪ್ರಾಯೋಜನೆಗಳು ನಿರಂತರವಾಗಿ ಕೃಷಿ ಸಂಶೋಧನೆಯಲ್ಲಿ ತೊಡಗಿಸಿಕೊಂಡಿವೆ.
ವಿಸ್ತರಣೆ
ವಿಸ್ತರಣಾ ನಿರ್ದೇಶನಾಲಯವು ರೈತರಿಗೆ, ರೈತ ಮಹಿಳೆಯರಿಗೆ, ಯುವಕರಿಗೆ, ವಿಸ್ತರಣಾ ಕಾರ್ಯಕರ್ತರಿಗೆ ಮತ್ತು ಕೃಷಿ ಆಸಕ್ತರಿಗೆ ಕೃಷಿ ಮಾಹಿತಿ ಮತ್ತು ಕೃಷಿ ಪರಿಕರಗಳನ್ನು ಸಕಾಲದಲ್ಲಿ ಒದಗಿಸುತ್ತಿದೆ. ಅಭಿವೃದ್ಧಿ ಇಲಾಖೆಗಳ ಸಹಕಾರದೊಂದಿಗೆ ತಂತ್ರಜ್ಞಾನ ವರ್ಗಾವಣೆಯನ್ನು ವಿವಿಧ ವಿಸ್ತರಣಾ ಪದ್ಧತಿಗಳ ಮೂಲಕ ರೈತರ ಜಮೀನಿಗೆ ತಲುಪಿಸುತ್ತಿದೆ. ಏಳು ಕೃಷಿ ವಿಜ್ಞಾನ ಕೇಂದ್ರಗಳು (ದೊಡ್ಡಬಳ್ಳಾಪುರದ ಹಾಡೋನಹಳ್ಳಿ, ಚಿಂತಾಮಣಿಯ ಕುರುಬೂರು ಫಾರಂ, ಮಾಗಡಿಯ ಚಂದುರಾಯನಹಳ್ಳಿ, ತಿಪಟೂರಿನ ಕೊನೇಹಳ್ಳಿ, ಮಂಡ್ಯದ ವಿ.ಸಿ.ಫಾರಂ, ಹಾಸನದ ಕಂದಲಿ ಮತ್ತು ಚಾಮರಾಜನಗರದ ಹರದನಹಳ್ಳಿ), ಎರಡು ವಿಸ್ತರಣಾ ಶಿಕ್ಷಣ ಘಟಕಗಳು (ಮೈಸೂರಿನ ನಾಗನಹಳ್ಳಿ ಮತ್ತು ಕೋಲಾರ), ಎರಡು ರಾಷ್ಟ್ರೀಯ ಕೃಷಿ ವಿಸ್ತರಣಾ ಪ್ರಾಯೋಜನೆ (ಜಿ.ಕೆ.ವಿ.ಕೆ. ಮತ್ತು ಮಂಡ್ಯದ ವಿ.ಸಿ.ಫಾರಂ) ಮತ್ತು ಬೆಂಗಳೂರಿನ ಜಿ.ಕೆ.ವಿ.ಕೆ ಆವರಣದಲ್ಲಿ ಸಿಬ್ಬಂದಿ ತರಬೇತಿ ಘಟಕ, ಬೇಕಿಂಗ್ ತಂತ್ರಜ್ಞಾನ ಮತ್ತು ಮೌಲ್ಯವರ್ಧನಾ ಸಂಸ್ಥೆ, ರೈತ ತರಬೇತಿ ಸಂಸ್ಥೆ, ಕೃಷಿ ಮಾಹಿತಿ ಘಟಕ, ದೂರ ಶಿಕ್ಷಣ ಘಟಕ, ಕೃಷಿ ತಂತ್ರಜ್ಞಾನ ಮಾಹಿತಿ ಕೇಂದ್ರ, ಕೃಷಿ ವಿಜ್ಞಾನ ವಸ್ತು ಸಂಗ್ರಹಾಲಯ ಕಾರ್ಯನಿರ್ವಹಿಸುತ್ತಿವೆ.
ಪ್ರಗತಿಯ ಪಥದಲ್ಲಿ ಕೃ.ವಿ.ವಿ, ಬೆಂಗಳೂರು
ಇದುವರೆಗೆ ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರಿನಿಂದ 26,603 ಸ್ನಾತಕ ಪದವಿದರರು, 10,716 ಮಾಸ್ಟರ್ಸ್ ಪದವಿ ಮತ್ತು 2,495 ಡಾಕ್ಟೊರಲ್ ಪದವಿಯನ್ನು ಪಡೆದಿರುತ್ತಾರೆ. ಕೃವಿವಿ, ಬೆಂಗಳೂರು ಅಭಿವೃದ್ಧಿಪಡಿಸಿರುವ ಪ್ರಭೇದಗಳ/ ಸಂಕರಣ ತಳಿಗಳನ್ನು ಬೆಳೆದ ಕಾರಣ ಕಳೆದ 5 ದಶಕಗಳಲ್ಲಿ ಧಾನ್ಯಗಳ ಉತ್ಪಾದಕತೆಯನ್ನು ಶೇ.132 ರಷ್ಟು ಹಾಗು ಎಣ್ಣೆಕಾಳುಗಳ ಉತ್ಪಾದಕತೆಯನ್ನು ಶೇ.80 ರಷ್ಟು ಹೆಚ್ಚಿಸಿದ್ದು ಇದರ ಜೊತೆಗೆ ದ್ವಿದಳ ಧಾನ್ಯಗಳ ಉತ್ಪಾದಕತೆಯನ್ನು ದ್ವಿಗುಣಗೊಳಿಸಿದೆ. ವಿಶ್ವವಿದ್ಯಾನಿಲಯದಿಂದ ಅಭಿವೃದ್ಧಿಪಡಿಸಲಾದ ಪ್ರಭೇದಗಳ/ ಸಂಕರಣ ತಳಿಗಳನ್ನು ಬೆಳೆದುದರಿಂದ ಕಳೆದ ಐದು ವರ್ಷಗಳಲ್ಲಿ ಏಕದಳ ಧಾನ್ಯಗಳ ಉತ್ಪಾದಕತೆಯನ್ನು ಶೇ.20 ರಷ್ಟು ಹಾಗು ಎಣ್ಣೆಕಾಳುಗಳ ಮತ್ತು ಬೇಳೆಕಾಳುಗಳು ಉತ್ಪಾದಕತೆಯನ್ನು ಶೇ.25 ರಷ್ಟು ಹೆಚ್ಚಾಗಿದೆ.
ಪ್ರಪಂಚದಲ್ಲೇ ಮೊಟ್ಟ ಮೊದಲ ಬಾರಿಗೆ ಹತ್ತಿ ಬೆಳೆಯ ಅಂತರ-ನಿರ್ದಿಷ್ಟ ಸಂಕರಣ ತಳಿಯನ್ನು ಹಾಗು ದೇಶದಲ್ಲೇ ಮೊದಲ ಬಾರಿಗೆ ಭತ್ತದಲ್ಲಿ (ಕೆಆರ್‌ಹೆಚ್-1) ಹಾಗೂ ಸಿಎಂಎಸ್ ಆಧಾರಿತ ಸೂರ್ಯಕಾಂತಿ (ಬಿಎಸ್‌ಹೆಚ್-1) ಸಂಕರಣ ತಳಿಯನ್ನು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವು ಅಭಿವೃದ್ಧಿಪಡಿಸಿದೆ. ಇಲ್ಲಿಯವರೆಗೆ 289 ಹೆಚ್ಚು ಇಳುವರಿ ನೀಡುವ ತಳಿಗಳನ್ನು ಬಿಡುಗಡೆ ಮಾಡಿದೆ. ಕೃಷಿ ವಿಶ್ವವಿದ್ಯಾನಿಲಯದ ಸಂಶೋಧನೆಗೆ ಒಟ್ಟಾರೆ 20 ಹಕ್ಕು ಸ್ವಾಮ್ಯಪತ್ರಗಳನ್ನು ಪಡೆದಿದ್ದು, ಅದರಲ್ಲಿ ಭಾರತ ಸರ್ಕಾರದ ಉದ್ಯಮ ಮತ್ತು ಅಂತಾರಾಷ್ಟ್ರೀಯ ವ್ಯಾಪಾರದ ಪ್ರಚಾರ ಇಲಾಖೆಯಿಂದ 15, ಆಸ್ಟ್ರೇಲಿಯಾ ಸರ್ಕಾರದಿಂದ ನಾಲ್ಕು ಮತ್ತು ಜರ್ಮನಿ ಸರ್ಕಾರದಿಂದ ಒಂದು ಹಕ್ಕು ಸ್ವಾಮ್ಯಪತ್ರಗಳನ್ನು ಪಡೆದಿರುತ್ತದೆ. ವಿಶ್ವದಲ್ಲೇ ಮೊಟ್ಟ ಮೊದಲ ಬಾರಿಯಾಗಿ ರಾಗಿ (ಎಂಎಲ್-365) ಮತ್ತು ಹುರಳಿಕಾಯಿ (ಪಿಹೆಚ್‌ಜಿ-9) ತಳಿಯ ಇಡೀ ವಂಶವಾಹಿಯ ಸರದಿಗಳನ್ನು ಪ್ರಭೇದಿಸಿ ವಂಶವಾಹಿ ಮಾಹಿತಿ ಬಂಡಾರದ ಕರಡನ್ನು ಸರಣಿ ಮಾಡಲಾಗಿದೆ. ಊದಲು ಮತ್ತು ನವಣೆ ಬೆಳೆಗಳಲ್ಲಿ ರೋಗವನ್ನುಂಟುಮಾಡುವ ಮ್ಯಾಗ್ನಾಪೋರ್ಥೆ ಶಿಲೀಂಧ್ರ ಪ್ರತ್ಯೇಕತೆಗಳ ಸಂಪೂರ್ಣ ವಂಶಾವಾಹಿಯ ಸರದಿಗಳನ್ನು ಇಲ್ಯುಮಿನಾ ಹೈಸೆಕ್ ಉಚ್ಛಾಸನ ಜೋಡಿ-ಅಂತ್ಯ ವಿಧಾನವನ್ನು ಬಳಸಿ ವಿಶ್ವದಲ್ಲೇ ಮೊಟ್ಟ ಮೊದಲ ಬಾರಿಯಾಗಿ ಪ್ರಭೇದಿಸಲಾಗಿದೆ ಹಾಗೂ ಭಾರತದಲ್ಲೇ ಮೊದಲ ಬಾರಿ ಭತ್ತ, ರಾಗಿ ಹಾಗೂ ಮೇವು ಬೆಳೆಯ ರೋಗಕ್ಕೆ ಕಾರಣವಾದ ಮ್ಯಾಗ್ನಾಪೋರ್ಥೆ ಶಿಲೀಂದ್ರದ ವಂಶವಾಹಿ ಮಾಹಿತಿಯ ಬಂಡಾರವನ್ನು ಸರಣಿಗೊಳಿಸಲಾಗಿದೆ
ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಪ್ರತಿ ವರ್ಷ ನವೆಂಬರ್ ತಿಂಗಳಲ್ಲಿ ಆಯೋಜಿಸುವ ಕೃಷಿಮೇಳ ರಾಜ್ಯ, ರಾಷ್ಟ್ರಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಗಳಿಸಿದೆ. ನಾಲ್ಕು ದಿನಗಳ ಅವಧಿಯ ಈ ರೈತರ ಜಾತ್ರೆಯಲ್ಲಿ ಸುಮಾರು 15 ಲಕ್ಷಕಿಂತಲೂ ಅಧಿಕ ಸಂಖ್ಯೆಯ ರೈತರು ಮತ್ತು ಸಾರ್ವಜನಿಕರು ಭಾಗವಹಿಸುತ್ತಾರೆ. ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರಿನ ಅಧಿಕೃತ ಯೂಟೂಬ್ ಚಾನಲ್‌ಗೆ 10,800 ಚಂದಾದಾರಗಿರುತ್ತಾರೆ. ಕೋವಿಡ್-19 ಸಮಯದಲ್ಲಿ ಅಗ್ರಿವಾರ್ ಘಟಕವನ್ನು ಪ್ರಾರಂಭಿಸಿ ರೈತರಿಗೆ ತಾಂತ್ರಿಕ ಮಾಹಿತಿ ನೀಡುವುದರ ಜೊತೆಗೆ ರೈತರು ಬೆಳೆದ ಉತ್ಪ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆಯನ್ನು ಸಹ ಕಲ್ಪಿಸಲಾಯಿತು. ಸುಧಾರಿತ ಕೃಷಿ ಬೆಳೆಗಳ ಬೇಸಾಯ ಪದ್ಧತಿಗಳ ಪುಸ್ತಕದ ಪಿ.ಡಿ.ಎಫ್. ಪ್ರತಿಯನ್ನು 2,85,510 ರೈತರ ಮೊಬೈಲ್‌ಗಳಿಗೆ ರವಾನಿಸಲಾಗಿದೆ.
ಸಂದ ಪ್ರಶಸ್ತಿಗಳು ಮತ್ತು ಗೌರವಗಳು
ವಿಶ್ವವಿದ್ಯಾನಿಲಯವು ತನ್ನ ಅತ್ಯುನ್ನತ ಸೇವೆಗಾಗಿ ಅನೇಕ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಪ್ರಶಸ್ತಿಗಳಿಗೆ ಭಾಜನವಾಗಿದೆ. ಅವುಗಳಲ್ಲಿ ಮುಖ್ಯವಾಗಿ ನವದೆಹಲಿಯ ಭಾರತೀಯ ಕೃಷಿ ಅನುಸಂಧಾನ ಪರಿಷತ್ ನೀಡುವ ಸರ್ದಾರ್ ಪಟೇಲ್ ಅತ್ಯುತ್ತಮ ಐ.ಸಿ.ಎ.ಅರ್. ಪ್ರಶಸ್ತಿಯನ್ನು 2001 ಮತ್ತು 2012 ರಲ್ಲಿ ತನ್ನದಾಗಿಸಿಕೊಂಡಿದೆ. ಅಖಿಲ ಭಾರತ ಜೆ.ಆರ್.ಎಫ್ ಪರೀಕ್ಷೆಯಲ್ಲಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಆರು ಭಾರಿ ಪ್ರಥಮ ಸ್ಥಾನ, ಮೂರು ಭಾರಿ ದ್ವಿತೀಯ ಸ್ಥಾನ ಮತ್ತು ಒಂದು ಸಲ ತೃತೀಯ ಸ್ಥಾನ ಗಳಿಸಿದ್ದಾರೆ. ವಿಶ್ವವಿದ್ಯಾಲಯವು ಆರು ಭಾರಿ ಅಖಿಲ ಭಾರತ ಅಂತರ ಕೃಷಿ ವಿಶ್ವವಿದ್ಯಾಲಯಗಳ ಕ್ರೀಡಾಕೂಟ ಚಾಂಪಿಯನ್ ಆಗಿದೆ ಹಾಗೂ ಎರಡು ಭಾರಿ ಅಖಿಲ ಭಾರತ ಅಂತರ ಕೃಷಿ ವಿಶ್ವವಿದ್ಯಾಲಯಗಳ ಯುವ ಜನೋತ್ಸವ ಚಾಂಪಿಯನ್ ಪ್ರಶಸ್ತಿಯನ್ನು ಪಡೆದಿದೆ. ಇದಲ್ಲದೆ ಮಿಟ್ಟೇಮರಿ ಮಾದರಿ ಜಲಾನಯನಕ್ಕೆ 1987 ರಲ್ಲಿ, ಕಬ್ಬಾಳನಾಳ ಮಾದರಿ ಜಲಾನಯನಕ್ಕೆ 1989ರಲ್ಲಿ, ಕಲ್ಯಾಣಕೆರೆ, ಮಾವತ್ತೂರು ಕೆರೆ ಜಲಾನಯನಕ್ಕೆ 1993 ರಲ್ಲಿ ಮತ್ತು ಬೇಕರಿ ತರಬೇತಿ ಘಟಕಕ್ಕೆ 2007 ರಲ್ಲಿ ರಾಷ್ಟ್ರೀಯ ಉತ್ಪಾದಕತೆ ಪರಿಷತ್ ಪ್ರಶಸ್ತಿ ಗಳಿಸಿವೆ. ರಾಷ್ಟ್ರಮಟ್ಟದ ಭಾರತೀಯ ಕೃಷಿ ಅನುಸಂಧಾನ ಪರಿಷತ್ ನೀಡುವ ಅತ್ಯುತ್ತಮ ಕೃಷಿ ವಿಜ್ಞಾನ ಕೇಂದ್ರ ಪ್ರಶಸ್ತಿಯನ್ನು ಕೃಷಿ ವಿಜ್ಞಾನ ಕೇಂದ್ರ, ಹಾಸನ 2002 ರಲ್ಲಿ, ಕೃಷಿ ವಿಜ್ಞಾನ ಕೇಂದ್ರ ಬೆಂಗಳೂರು ಗ್ರಾಮಾಂತರ 2014 ರಲ್ಲಿ ಮತ್ತು ಕೃಷಿ ವಿಜ್ಞಾನ ಕೇಂದ್ರ, ರಾಮನಗರ 2021 ರಲ್ಲಿ ಪಡೆದಿವೆ.
ರೈತರ ಜೀವನಾಡಿಯಾಗಿರುವ ವಿಶ್ವವಿದ್ಯಾಲಯವು ತನ್ನ ನಿರಂತರ ಸೇವೆಯಿಂದ ಈ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ವಿಶ್ವವಿದ್ಯಾಲಯದ ಪದವೀಧರರು ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತ್ಯುನ್ನತ ಸ್ಥಾನಗಳನ್ನು ಅಲಂಕರಿಸಿದ್ದಾರೆ. ಕೃಷಿಯಲ್ಲಿ ಶಿಕ್ಷಣ, ಸಂಶೋಧನೆ ಮತ್ತು ವಿಸ್ತರಣೆಯಲ್ಲಿ ಅತ್ಯುನ್ನತ ಪ್ರಗತಿ ಸಾಧಿಸುತ್ತಾ ವಿಶ್ವವಿದ್ಯಾಲಯ ಇಂದು ದೇಶದ ಅತ್ಯುನ್ನತ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿದೆ ಎಂದು ವಿವಿಯ ವಿಸ್ತಾರಣಾ ನಿರ್ದೇಶಕರಾದ ವಿ.ಎಲ್. ಮಧುಪ್ರಸಾದ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.