ನಮ್ಮ ಬೆಳೆ-ನಮ್ಮ ಬೆಲೆ : ರೈತರಿಂದ ಗ್ರಾಹಕರಿಗೆ ನೇರ ಮಾರಾಟ- ಒಂದು ಪ್ರಾಯೋಗಿಕ ಚಳುವಳಿ
oplus_262146
Spread the love

ನಾಗೇಶ್ ಕೆ.ಎನ್.

ಏಪ್ರಿಲ್ ೧೨,೧೩ ಮತ್ತು ೧೪ ರಂದು ಬೆಂಗಳೂರು ನಗರದ ರಾಜರಾಜೇಶ್ವರಿ ನಗರದ ಮುನಿವೆಂಕಟಯ್ಯ ಸ್ಮಾರಕ ಬಯಲು ರಂಗಮಂದಿರದಲ್ಲಿ ಮೂರು ದಿನಗಳ ಕಾಲ ರೈತರಿಂದ ನೇರ ಗ್ರಾಹಕರಿಗೆ ವಿವಿಧ ಧಾನ್ಯಗಳು, ಹಣ್ಣು ತರಕಾರಿಗಳನ್ನು ಪ್ರಾಯೋಗಿಕವಾಗಿ “ ನಮ್ಮ ಬೆಳೆ-ನಮ್ಮ ಬೆಲೆ” ಘೋಷಣೆಯಡಿ ಮಾರಾಟ ಮಾಡುವ ಮೇಳವನ್ನು ಆಯೋಜಿಸಲಾಗಿದೆ ಎಂದು ರೈತ ಮುಖಂಡರಾದ ಚುಕ್ಕಿ ನಂಜುಂಡಸ್ವಾಮಿ ತಿಳಿಸಿದ್ದಾರೆ.

ಕಳೆದ ೨ ತಿಂಗಳಿನಿಂದ ತರಕಾರಿ ಬೆಲೆ ನೆಲ ಕಚ್ಚಿದೆ. ಇದೇನೂ ಹೊಸ ವಿದ್ಯಮಾನವಲ್ಲ. ಇದೀಗ ಎಲೆ ಕೋಸು ಬೆಳೆದ ರೈತರಿಗೆ ಕೆ.ಜಿ. ಒಂದಕ್ಕೆ ೫೦ ಪೈಸೆ ಸಿಗ್ತಿದೆ. ಆ ರೈತ ಹೇಗೆ ಬದುಕಬೇಕು. ಗ್ರಾಮೀಣ ಪ್ರದೇಶದಲ್ಲಿ ಭೂಮಿಯನ್ನೇ ನಂಬಿ ಬದುಕುತ್ತಿರುವ ರೈತರು ಸಂಕಷ್ಟದಲ್ಲಿದ್ದಾರೆ. ನ್ಯಾಷನಲ್ ಕ್ರೈಂ ರೆಕಾರ್ಡ್ ಬ್ಯೂರೋ ವರದಿಯೇ ಹೇಳುವಂತೆ ದೇಶದಲ್ಲಿ ಪ್ರತಿ ಗಂಟೆಗೆ ಒಬ್ಬ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ. ಆದರೂ ಈ ಸಮಾಜಕ್ಕೆ ಏನೂ ಅನ್ನಿಸ್ತಿಲ್ಲ ಅಂದ್ರೆ ಆ ಬಗ್ಗೆ ಜನ ಸಾಮಾನ್ಯರಿಗೆ ಅರಿವಿಲ್ಲವಾ ಅನ್ನೋ ಅನುಮಾನವೂ ಬರುತ್ತೆ ಎಂದರು.

ನಾವು ನಿತ್ಯ ರೈತರೊಂದಿಗೆ ಮಾತನಾಡ್ತಿದ್ದೀವಿ. ರೈತರು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ ಗುಳೆ ಹೋಗ್ತಿರೋದು, ನಿರುದ್ಯೋಗ ಸೃಷ್ಟಿ ಆಗಿರೋದು ಹಾಗೆಯೇ ಕೈಮೀರಿದ ಪರಿಸ್ಥಿತಿಗಳಲ್ಲಿ ಆತ್ಮಹತ್ಯೆಗೆ ಶರಣಾಗ್ತಿರೋದನ್ನು ನೋಡ್ತಾ ಇದ್ದೀವಿ. ಈ ಬಗ್ಗೆ ಬಂದು ಹೋಗುವ ಎಲ್ಲಾ ಸರ್ಕಾರಗಳಿಗೆ ರೈತರು ಬೆಳೆದ ಬೆಳೆಗಳಿಗೆ ನ್ಯಾಯಯುತ ಬೆಲೆ ಸಿಗುವುದನ್ನು ಖಾತ್ರಿ ಮಾಡಬೇಕೆಂಬ ನಮ್ಮ ಒತ್ತಾಯವನ್ನು ಮಾಡುತ್ತಲೇ ಬರುತ್ತಿದ್ದೇವೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಎಲ್ಲ ಪಕ್ಷಗಳೂ ಬಂಡವಾಳಶಾಯಿಗಳ ಪರವಾಗಿಯೇ ನಿಲ್ಲುತ್ತವೆ. ರೈತರ ಸಮಸ್ಯೆಗಳು ಇವರಾರಿಗೂ ಬೇಕಿಲ್ಲ ಎಂದರು.

ಈ ಹಿನ್ನೆಲೆಯಲ್ಲಿ ಇದೀಗ ರೈತ ಮತ್ತು ಗ್ರಾಹಕರ ನಡುವೆ ಇರುವ ಅಂತರವನ್ನು ಕಡಿಮೆ ಮಾಡುವ, ನಗರ ಮತ್ತು ಹಳ್ಳಿಗಳ ನಡುವೆ ಸೇತುವೆ ನಿರ್ಮಿಸುವ ಕೆಲಸವನ್ನು “ಸಂತೆ” ಮಾಡುವ ಮೂಲಕ ಮಾಡುತ್ತಿದ್ದೇವೆ. ಇದಕ್ಕೆ ನಗರವಾಸಿಗಳ/ಗ್ರಾಹಕರ ಸಹಕಾರ ಮುಖ್ಯ ಎಂದು ತಿಳಿಸಿದರು.

ನಾಳೆಯಿಂದ ಮೂರು ದಿನಗಳ ಕಾಲ ನಡೆಯುವ ಈ ಸಂತೆಯಲ್ಲಿ ಹಾಸನ, ಚಿಕ್ಕಬಳ್ಳಾಪುರ, ಕೋಲಾರ, ಮೈಸೂರು, ಚಾಮರಾಜನಗರ ಇನ್ನಿತರ ಜಿಲ್ಲೆಗಳಿಂದ ರೈತರು ಬರಲಿದ್ದಾರೆ. ಅವರು ಬೆಳೆದಿರುವ ಎಲ್ಲಾ ಬೆಳೆಗಳನ್ನೂ ತರಲಿದ್ದಾರೆ ಎಂದರು. ಈ ಪ್ರಾಯೋಗಿಕ ಸಂತೆಗೆ ಚಲನಚಿತ್ರ ನಟರಾದ ರಂಗಾಯಣ ರಘು, ಡಾಲಿ ಧನಂಜಯ, ಕಿಶೋರ್, ಅಧಿತಿ ಪ್ರಭುದೇವ್ ಸೇರಿದಂತೆ ಅನೇಕ ಪ್ರಮುಖರು ಬೆಂಬಲ ವ್ಯಕ್ತಪಡಿಸಿದ್ದಾರೆ. ಅವರಿಗೆಲ್ಲಾ ನಾವು ಆಭಾರಿಯಾಗಿದ್ದೇವೆ ಎಂದರು.

ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದ ರೈತ ಸಂಘದ ಹಿರಿಯ ಮುಖಂಡರಾದ ಕೆ.ಟಿ. ಗಂಗಾಧರ್ “ಈಗ ರೈತರ ಬೆಳೆದ ತರಕಾರಿ ಬೆಳೆಗಳ ಬೆಲೆ ಕುಸಿದಿದೆ. ಟೊಮ್ಯಾಟೋ, ಕಾಯಿ-ಪಲ್ಯೆ ಬೀದಿಗೆ ಎಸೆಯುವ ಸ್ಥಿತಿ ಎದುರಾಗಿದೆ. ಇದರರ್ಥ ಏನೆಂದರೆ ರೈತ discourage ಆಗಿದಾನೆ. ಮುಂದಿನ ದಿನಗಳಲ್ಲಿ ಬೆಳೆ ಬೆಳೆಯಬಾರದೆಂಬ ತೀರ್ಮಾನಕ್ಕೆ ಬರಲಿದ್ದಾನೆ. ಅಂಥ ದಿನಗಳು ಬಂದಾಗ ಅದರ ಲಾಭವನ್ನೂ ಮದ್ಯವರ್ಥಿಗಳೇ ಪಡೆದುಕೊಳ್ಳುವುದು.

ಈ ದೇಶದಲ್ಲಿ ಕೃಷಿ ಉದ್ಯೋಗ ಖಾತ್ರಿಯನ್ನೂ ಒದಗಿಸುತ್ತದೆ, ದೇಶದ ಆಹಾರ ಭದ್ರತೆಯನ್ನೂ ಒದಗಿಸುತ್ತದೆ. ಈ ಹಿನ್ನೆಲೆಯಲ್ಲಿ consumer awareness ಕೂಡಾ ಬಹಳ ಮುಖ್ಯ. ಗ್ರಾಹಕ ಉತ್ತಮ ಗುಣಮಟ್ಟದ ಬೆಳೆಗೆ ಬೇಡಿಕೆ ಇಟ್ಟರೆ ರೈತರು ರಸಾಯನಿಕ ಮುಕ್ತವಾದ ಅತ್ಯುತ್ತಮ ಬೆಳೆಯನ್ನೇ ಬೆಳೆಯುತ್ತಾನೆ. ಹಾಗಾಗಿ ನಗರವಾಸಿಗಳು ನಿಮ್ಮ ನಿಮ್ಮ ಮೊಹಲ್ಲಾಗಳಲ್ಲಿ ರೈತರನ್ನು ಬರಮಾಡಿಕೊಂಡು ಅತ್ಯುತ್ತಮ ಆಹಾರ ಪದಾರ್ಥಗಳನ್ನು ನೇರವಾಗಿ ಕೊಂಡು ಪ್ರೋತ್ಸಾಹಿಸಿ ಎಂದು ತಾಕೀತು ಮಾಡಿದರು.
ಪತ್ರಿಕಾ ಗೋಷ್ಟಿಯಲ್ಲಿದ್ದ ರಾಜರಾಜೇಶ್ವರಿ ನಗರದ ನಿವಾಸಿಗಳ ಸಂಘದ ಪ್ರತಿನಿಧಿ ಗಾಯತ್ರಿ ಮಾತನಾಡಿ “ ರೈತ ಸಂಘದ ಈ ಯೋಜನೆಯನ್ನು ಸ್ವಾಗತಿಸಿದರು. ಬಡಾವಣೆಯ ಎಲ್ಲಾ ಕುಟುಂಬಳಿಗೂ ಈ ವಿಚಾರವನ್ನು ತಿಳಿಸುವ, ವಾಟ್ಸಪ್ ಸಂದೇಶಗಳನ್ನು ಕಳುಹಿಸಿ ಸಂತೆ ಯಶಸ್ವಿಗೆ ಕೆಲಸ ಮಾಡುವುದಾಗಿ ಅಭಿಮಾನದಿಂದ ಹೇಳಿದರಲ್ಲದೆ ಈ ಸಂತೆಯಲ್ಲಿ ನಮ್ಮ ಮಕ್ಕಳಿಗೂ ಒಳ್ಳೆಯ ಆಹಾರ ಸಿಕ್ಕಂತಾಗುತ್ತೆ, ನಮ್ಮಿಂದ ಇದೊಂದು ಸಣ್ಣ ಸೇವೆಯಷ್ಟೇ ಎಂದರು.

ಬಡಾವಣೆಯ ಸಂಘದ ಮತ್ತೊಬ್ಬ ಪದಾಧಿಕಾರಿ ರಷ್ಮಿ ಹರಿಹರನ್ ಮಾತನಾಡಿ ಇದೊಂದು ಬಹಳ ಒಳ್ಳೆಯ ಕೆಲಸ. ನಾವೆಲ್ಲಾ ಇದರ ಬೆಂಬಲಕ್ಕಿದ್ದೇವೆ ಎಂದರಲ್ಲದೆ ಬೆಂಡೆಕಾಯಿ ಬೆಳೆದ ರೈತನಿಗೆ ಕೆ.ಜಿ ಒಂದಕ್ಕೆ ಕೇವಲ ಹದಿನೈದು ರೂಪಾಯಿ ಸಿಗ್ತಿದೆ, ಗ್ರಾಹಕರಿಗೆ ೬೦ ರೂಪಾಯಿ. ಇದೆಂತಾ ಅನ್ಯಾಯ ಎಂದರು. ಅಷ್ಟೇ ಅಲ್ಲದೆ ಮಣ್ಣಿನ ಕುರಿತಾಗಿ ಅವರು ಮಾತನಾಡಿದ ವಿಷಯ ಅತ್ಯಂತ ಮಾರ್ಮಿಕವಾಗಿಯೂ ಭಾವನಾತ್ಮಕವಾಗಿಯೂ ಇತ್ತು. ಆ ಮಾತು ಹೀಗಿದೆ “ ಹಿಂದೆ ನಾವು ಚಿಕ್ಕವಿರಿದ್ದಾಗ ಬಿದ್ದು ಗಾಯ ಮಾಡಿಕೊಂಡಾಗ ಮಣ್ಣು ಮೆತ್ತಿದರೆ ಗಾಯ ವಾಸಿ ಆಗ್ತಿತ್ತು. ಈಗ ಮಣ್ಣು ಮೆತ್ತಿದರೆ ಕೀವು ತುಂಬುತ್ತೆ, ಅದರರ್ಥ ಮಣ್ಣನ್ನು ರಾಸಾಯನಿಕಗಳಿಂದ ಕುಲಗೆಡಿಸಲಾಗಿದೆ ಎಂದರು.

ರೈತ ಸಂಘದ ಕಾರ್ಯದರ್ಶಿ ಮಂಜು ಕಿರಣ್ ಮಾತನಾಡಿ “ ಸಾಮಾನ್ಯವಾಗಿ ಎಲ್ಲರೂ ಮನೆ ಕಟ್ಟಲು, ಕಾರು ಕೊಳ್ಳಲು ಅಥವಾ ತಮಗೆ ಬೇಕಾದ ಏನನ್ನೋ ಖರೀದಿಸಲು ಸಾಲ ಮಾಡುತ್ತಾರೆ. ರೈತ ಮಾತ್ರ ಈ ದೇಶಕ್ಕೆ ಆಹಾರ ಬೆಳೆದುಕೊಡಲು ಸಾಲ ಮಾಡುತ್ತಿರುವುದು, ಇದು ವಿಪರ್ಯಾಸ ಎಂದರು. ಜೊತೆಗೆ ನಾವಿಂದು ಚಂದ್ರಗ್ರಹಕ್ಕೆ ಹೋಗಲು ಸಾಧ್ಯವಾಗಿದೆ ಆದರೆ ರೈತರು ಬೆಳೆದ ಬೆಳೆಗೆ ನ್ಯಾಯವಾದ ಬೆಲೆ ಕೊಡಲು ಸಾಧ್ಯವಾಗಿಲ್ಲ ಎಂದರು.

ಇದೀಗ ಪರಿಸರ ಸಂರಕ್ಷಣೆ, ನೀರಿನ ಸಂರಕ್ಷರಣೆಯ ಬಗ್ಗೆ ಮಾತನಾಡುತ್ತಿದ್ದೇವೆ. ಮುಂದೊಂದು ದಿನ ರೈತರ ಸಂರಕ್ಷಣೆ ಬಗ್ಗೆ ಮಾತನಾಡಬೇಕಾದೀತು. ಆ ದಿನಗಳು ಬಾರದಂತೆ ಎಚ್ಚರವಹಿಸಬೇಕು ಎಂಬ ಎಚ್ಚರಿಕೆಯ ಮಾತುಗಳನ್ನಾಡಿದರು.


Spread the love

Leave a Reply

Your email address will not be published. Required fields are marked *