ಪಾರಂಪರಿಕ ಬೀಜೋತ್ಸವ
ಸ್ಥಳ: ಅನ್ಮೊಲ್ ಶಾಲೆ, ಶಿರಮಗೊಂಡನಹಳ್ಳಿ, ದಾವಣಗೆರೆ
ಶನಿವಾರ ಮತ್ತು ಭಾನುವಾರ
10-11ನೇ, ಮೇ 2025.
ಸಮಯ: ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ರವರೆಗೆ.
ಬೀಜ ಎಂಬುದು ಬರೀ ಬಿತ್ತನೆ ವಸ್ತುವಲ್ಲ. ಅದು ಕೃಷಿಯ ಜೀವನಾಡಿ. ಸಾವಿರಾರು ವರ್ಷಗಳಿಂದ ಬೀಜ, ಕೃಷಿ ಬದುಕಿನ ಭಾಗವಾಗಿ, ಸಂಸ್ಕೃತಿಯ ಜೊತೆಯಾಗಿ ಬೆಸೆದುಕೊಂಡು ಬಂದಿದೆ. ರೈತರು ತಳಿ ವೈವಿಧ್ಯವನ್ನು ಅಭಿವೃದ್ಧಿಗೊಳಿಸಿ, ಕಾಪಾಡಿ, ಪೀಳಿಗೆಯಿಂದ ಪೀಳಿಗೆಗೆ ಹಸ್ತಾಂತರಿಸಿ ತಂದಿದ್ದಾರೆ. ಅಕ್ಕಡಿ ಸಾಲು, ಮಿಶ್ರ ಬೆಳೆ, ಹಂಚಿನ ಬೆಳೆ, ನವಧಾನ್ಯದಂಥ ಹಲವು ವಿಶೇಷ ಪದ್ಧತಿಗಳ ಮೂಲಕ ಬೀಜ ವೈವಿಧ್ಯವನ್ನು ಜೀವಂತವಾಗಿ ಇರಿಸಿದ್ದಾರೆ.
ಒಕ್ಕಲು ಮಕ್ಕಳ ಜೀವಾಳವಾಗಿರುವ ಬೀಜ ವೈವಿಧ್ಯಕ್ಕೆ ಧಕ್ಕೆ ಬಂದೊದಗಿದ್ದು, ಪ್ರಸ್ತುತ ಎದುರಾಗಿರುವ ಕೃಷಿ ಬಿಕ್ಕಟ್ಟನ್ನು ಎದುರಿಸಲು ಸಾಂಪ್ರದಾಯಿಕ ತಳಿಗಳಿಗೆ ಆದ್ಯತೆ ನೀಡಬೇಕಿದೆ. ದೇಸಿಯ ಬೀಜ ವೈವಿಧ್ಯದ ಮಹತ್ವದ ಬಗ್ಗೆ ರೈತರು ಮತ್ತು ಗ್ರಾಹಕರಿಗೆ ಅರಿವು ಮೂಡಿಸುವ ಉದ್ದೇಶದಿಂದ ಐಕಾಂತಿಕ ಸಮುದಾಯ, ಅನ್ಮೊಲ್ ಶಾಲೆ ಮತ್ತು ಸಹಜ ಸಮೃದ್ಧ ಸಹಯೋಗದಲ್ಲಿ ದಾವಣಗೆರೆಯ ಅನ್ಮೊಲ್ ಶಾಲೆ, ಶಿರಮಗೊಂಡನಹಳ್ಳಿ ಆವರಣದಲ್ಲಿ ‘ಪಾರಂಪರಿಕ ಬೀಜೋತ್ಸವ’ ವನ್ನು ಆಯೋಜಿಸಲಾಗಿದೆ.
ಪಾರಂಪರಿಕ ಬೀಜೋತ್ಸವವು, ನಮ್ಮ ಬೀಜ ಪರಂಪರೆಯ ವೈಭವವನ್ನು ತೋರುವ ಕಾರ್ಯಕ್ರಮವಾಗಿದೆ. ಸ್ಥಳೀಯ ಆಹಾರ ಸಂಸ್ಕೃತಿಗಳ ಪರಿಚಯ ಮಾಡಿಕೊಡುವ ಉದ್ದೇಶ ಹೊಂದಿದೆ.
ಕರ್ನಾಟಕ ರಾಜ್ಯ ಬೀಜ ವೈವಿಧ್ಯದ ತಾಣ. ರತ್ನಚೂಡಿ, ರಾಜಮುಡಿ, ಆಲೂರು ಸಣ್ಣ, ಗಂಧಸಾಲೆಯಂತ ದೇಸಿ ಭತ್ತ, ಕರಿ ಕಡ್ಡಿ ರಾಗಿ, ಉಂಡೆ ರಾಗಿ, ಮಜ್ಜಿಗೆ ರಾಗಿ, ಕೆಂಪು ನವಣೆ, ಮಲ್ಲಿಗೆ ಸಾವೆ, ಕೊರಲೆನಂಥ ನೂರಾರು ಸಿರಿಧಾನ್ಯಗಳು, ಮಟ್ಟುಗುಳ್ಳ, ಈರಂಗೆರೆ ಬದನೆಗಳು, ಬ್ಯಾಡಗಿ ಮೆಣಸಿನಕಾಯಿ, ತಂಬೂರಿ ಸೋರೆ, ಮಂತು ಕುಂಬಳ, ಕಾಶಿ ಟೊಮೊಟೋದಂತ ತರಕಾರಿ, ಕೆಂಪು ಹಲಸು, ದೇವನಹಳ್ಳಿ ಚಕ್ಕೋತ, ಏಲಕ್ಕಿ ಬಾಳೆ, ರಸಬಾಳೆಯಂಥ ಹಣ್ಣಿನ ತಳಿಗಳು ಕನ್ನಡ ನಾಡಿನಲ್ಲಿ ನೆಲೆಯಾಗಿವೆ. ಕನ್ನಡ ನಾಡಿನ ಬೀಜ ವೈವಿಧ್ಯ ಎಣಿಕೆಗೆ ದಕ್ಕದಷ್ಟು ಅಗಾಧವಾಗಿದೆ.
ವಾಣಿಜ್ಯ ಬೆಳೆಗಳ ಹಾವಳಿಯಿಂದ ಇಂಥ ಅಪರೂಪದ ಬೀಜ ವೈವಿಧ್ಯ ಕಣ್ಮರೆಯಾಗುತ್ತಿದೆ. ಪಂಡರಾಪುರ ಹತ್ತಿ, ಬ್ಯಾಡಗಿ ಕಡ್ಡಿ ಮೆಣಸು, ಹಾಲುಬ್ಬಲು, ಜೇನುಗೂಡು ರಾಗಿ, ಮರ ಸಜ್ಜೆಯಂಥ ನೂರಾರು ತಳಿಗಳು ನಾಶದ ಅಂಚಿನಲ್ಲಿವೆ. ಪೋಷಕಾಂಶಗಳ ಆಗರವಾದ, ಸ್ಥಳೀಯ ವಾತಾವರಣಕ್ಕೆ ಹೊಂದಿಕೊಳ್ಳುವ, ಮಳೆ ವೈಪರಿತ್ಯವನ್ನು ಎದುರಿಸಿ ನಿಲ್ಲುವ ದೇಸಿ ತಳಿಗಳನ್ನು ಉಳಿಸಿ, ಬೆಳೆಸುವ ಅಗತ್ಯತೆ ಇದೆ.
ಎರಡು ದಿನದ ಬೀಜ ಉತ್ಸವದಲ್ಲಿ ದೇಶದ ವಿವಿಧ ಭಾಗಗಳಿಂದ ೩೦ಕ್ಕೂ ಹೆಚ್ಚಿನ ಬೀಜ ಸಂರಕ್ಷಕರ ಗುಂಪುಗಳು ಪಾಲ್ಗೊಳ್ಳಲಿವೆ. ವಿವಿಧ ದೇಸಿ ತಳಿಗಳನ್ನು ಬೀಜ ಮೇಳದಲ್ಲಿ ಪ್ರದರ್ಶಿಸಲಾಗುತ್ತಿದ್ದು, ೧,೦೦೦ ಕ್ಕೂ ಹೆಚ್ಚಿನ ದೇಸಿ ಧಾನ್ಯ, ತರಕಾರಿ, ಕಾಳು, ಗೆಡ್ಡೆ ಗೆಣಸು, ಸೊಪ್ಪು ಮತ್ತು ಹಣ್ಣಿನ ತಳಿಗಳು ಪ್ರದರ್ಶನಕ್ಕೆ ಬರುತ್ತಿವೆ. ಗುಣ ಮಟ್ಟದ ಭತ್ತ, ಸಿರಿಧಾನ್ಯ ಮತ್ತು ತರಕಾರಿ ಬೀಜಗಳು ಮಾರಾಟಕ್ಕೆ ಸಿಗಲಿವೆ. ಹಣ್ಣಿನ ಗಿಡಗಳು ಮಾರಾಟಕ್ಕೆ ಲಭ್ಯವಿರುತ್ತವೆ. ರೈತ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ ಭತ್ತದ ತಳಿಗಳ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.
ರಾಜ್ಯೋತ್ಸವ ಪ್ರಶಸ್ತಿ ವಿಜೇತೆ ಕೋಲಾರದ ಬೀಜಮಾತೆ ಶ್ರೀಮತಿ.ಪಾಪಮ್ಮ ಅವರು ಶ್ರೀ.ಮಹಿಮಾ ಪಾಟೀಲ್, ಸಹಜ ಸಮೃದ್ಧ ದ ಶ್ರೀ.ಕೃಷ್ಣ ಪ್ರಸಾದ್, ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಶ್ರೀ.ದೇವರಾಜ್.ಟಿ.ಎನ್, ಅನ್ಮೊಲ್ ಶಾಲೆಯ ಶ್ರೀ.ದಿನೇಶ್.ಸಿ.ಜಿ, ‘ಪಾರಂಪರಿಕ ಬೀಜೋತ್ಸವ’ ವನ್ನು ಉದ್ಘಾಟಿಸಲಿದ್ದಾರೆ.
ಮಹಿಳಾ ಸಂಘಗಳು ಮೌಲ್ಯವರ್ಧಿತ ಪದಾರ್ಥಗಳನ್ನು ಮಾರಾಟಕ್ಕೆ ತರಲಿವೆ. ದಾವಣಗೆರೆಯ ಜನತೆಗೆ ದೇಸೀ ಸೊಗಡಿನ ಆಹಾರಗಳನ್ನು ಪರಿಚಯಿಸಲು ಮಹಿಳಾ ಸಂಘದ ಸದಸ್ಯರು ಸಾಂಪ್ರದಾಯಿಕ ಅಡುಗೆಗಳ ಜೊತೆ ಬರಲಿದ್ದಾರೆ.
ವಿವಿಧ ಸಾವಯವ ಮಳಿಗೆಗಳು, ರೈತ ಉತ್ಪಾದಕರ ಗುಂಪುಗಳು ಬೇಳೆ ಕಾಳುಗಳು, ಹಣ್ಣು ಹಂಪಲು ಮಾರಾಟಕ್ಕೆ ತರಲಿವೆ. ಅಪರೂಪದ ಬೀಜ, ಹಣ್ಣು, ಕಾಯಿ ಸೇರಿದಂತೆ ಕೃಷಿ ವೈವಿಧ್ಯದ ಉತ್ಪನ್ನಗಳು ಪ್ರದರ್ಶನಕ್ಕೆ ಬರಲಿವೆ. ನೈಸರ್ಗಿಕವಾಗಿ ಬೆಳೆದ ಮಾವು, ಬಾಳೆ, ಕಲ್ಲಂಗಡಿ, ಹಳಸು ಮಾರಾಟಕ್ಕೆ ಬರುತ್ತಿದೆ.
ತೆನೆ ತೋರಣ, ಕೃಷಿ ಆಚರಣೆಗಳ ಪ್ರದರ್ಶನ ಮತ್ತು ರೈತ ವಿಜ್ಞಾನಿಗಳ ಅನುಭವ ಹಂಚಿಕೆ ಇರುತ್ತದೆ.
ವಿಚಾರ ಗೋಷ್ಠಿಗಳು:
ಸಹಜ ಕೃಷಿ ಮತ್ತು ಸಹಜ ಜೀವನದ ಮುಖ್ಯವಾದ ಮತ್ತು ಆಸಕ್ತಿದಾಯಕ ವಿಷಯಗಳ ಕುರಿತು ವಿಚಾರ ಗೋಷ್ಠಿಗಳು ಆಯೋಜಿಸಲಾಗಿದೆ.
ನಮ್ಮ ಮಣ್ಣು ನಮ್ಮ ಆಹಾರ ನಮ್ಮ ಜೀವನೋಪಾಯ
ನಮ್ಮ ಮಣ್ಣು, ನಮ್ಮ ಆಹಾರ ಮತ್ತು ನಮ್ಮ ಜೀವನದ ನಡುವಿನ ಸಂಪರ್ಕವು ಪರಸ್ಪರ ಸಂಬಂಧ ಹೊಂದಿದೆ ಮತ್ತು ಇದು ಜೀವ ಜಾಲದ ಆಧಾರವಾಗಿದೆ. ಎಲ್ಲಾ ಜೀವಿಗಳು ಪರಸ್ಪರ ಅವಲಂಬಿತವಾಗಿವೆ. ಪ್ರಕೃತಿ ಕಾರ್ಯನಿರ್ವಹಿಸುವ ವಿಧಾನದ ಈ ಪರಸ್ಪರ ಸಂಬಂಧವನ್ನು ನಾವು ಆಳವಾಗಿ ತಿಳಿದುಕೊಳ್ಳಬಹುದು. ಈ ಆಳವಾದ ವಿಷಯಗಳನ್ನು ‘ಸಾಯಿಲ್ ವಾಸು’ ಎಂದೇ ಹೆಸರಾದ ಶ್ರೀ.ಶ್ರೀನಿವಾಸು ಅವರಿಂದ ಅರ್ಥಮಾಡಿಕೊಳ್ಳಲು ‘ಪಾರಂಪರಿಕ ಬೀಜೋತ್ಸವ’ ಕಾರ್ಯಕ್ರಮದಲ್ಲಿ ಸಾಧ್ಯವಾಗಲಿದೆ.
‘ಪ್ರಜ್ಞಾಪೂರ್ವಕ ಉಡುಪು’
ಉಡುಪು ನಮ್ಮ ಎರಡನೇ ಚರ್ಮ ಮತ್ತು ನಮ್ಮ ಸ್ವಂತ ಸಂಸ್ಕೃತಿಯನ್ನು ಪ್ರದರ್ಶಿಸುವ ಮತ್ತು ನಮ್ಮ ವ್ಯಕ್ತಿತ್ವಗಳನ್ನು ಪ್ರತಿಬಿಂಬಿಸುವ ನಮ್ಮ ಜೀವನಶೈಲಿಯ ಅವಿಭಾಜ್ಯ ಅಂಗವಾಗಿದೆ. ನಾವು ಸ್ವತಃ ಪ್ರಜ್ಞಾಪೂರ್ವಕ ರೀತಿಯಲ್ಲಿ ಉಡುಗೆ ತೊಡುವುದನ್ನು, ನೈಸರ್ಗಿಕ ನಾರಿನ ಬಟ್ಟೆಗಳಿಂದ ನಮ್ಮಚರ್ಮ ಅನುಭವಿಸುವ ಸೂರ್ಯನ ಬೆಚ್ಚನೆಯ ಉಷ್ಣತೆ, ಉಸಿರಾಟದ ಸಾಮರ್ಥ್ಯ ಮತ್ತು ಸೌಕರ್ಯ ಅರ್ಥಮಾಡಿಕೊಳ್ಳೋಣ. ಇದೆಲ್ಲವನ್ನೂ ಉಡುಪಿ ಸೀರೆಗೆ ಮರುಜೀವ ಕೊಟ್ಟ ಕದಿಕೆ ಟ್ರಸ್ಟ್ ನ ಶ್ರೀಮತಿ.ಮಮತಾ ರೈ ಅವರು ಪ್ರಸ್ತುತಪಡಿಸಲಿದ್ದಾರೆ.
‘ಶೂನ್ಯ ತ್ಯಾಜ್ಯ ಜೀವನಶೈಲಿ’
ನಮಗೆ ವಾಸಿಸಲು ಒಂದೇ ಒಂದು ಗ್ರಹ ಭೂಮಿ ಇರುವುದು ಮತ್ತು ನಾವೇ ನಮ್ಮ ಆವಾಸಸ್ಥಾನ ಮತ್ತು ನಮ್ಮ ಜೀವನವನ್ನು ಕಲುಷಿತಗೊಳಿಸುತ್ತಿದ್ದೇವೆ. ನಾವು ನಮ್ಮನ್ನು ನಾವೇ ಗುಲಾಮರನ್ನಾಗಿ ಮಾಡಿಕೊಳ್ಳುತ್ತಿದ್ದೇವೆ, ನಮಗಾಗಿ ಶೋಚನೀಯ ಜೀವನವನ್ನು ನಡೆಸುತ್ತಿದ್ದೇವೆ ಮತ್ತು ಕೆಲವೇ ಜನರಿಗೆ ಪರಿಸರ ವೆಚ್ಚ ಮತ್ತು ಆರ್ಥಿಕ ವೆಚ್ಚವನ್ನು ಒಳಗೊಂಡಂತೆ ದೇಶದಲ್ಲಿ ಅತ್ಯಂತ ದುಬಾರಿಯಾಗಿರುವ ಆಡಂಬರದ ಮದುವೆ ಮತ್ತು ಇತರ ಪ್ರದರ್ಶನ ಕಾರ್ಯಕ್ರಮಗಳನ್ನು ನಡೆಸಲು ದಾರಿ ಮಾಡಿಕೊಡುತ್ತಿದ್ದೇವೆ. ನಾವು ಇದನ್ನು ಅರಿತುಕೊಳ್ಳಬಹುದು ಮತ್ತು ಶೂನ್ಯ ತ್ಯಾಜ್ಯ ಜೀವನಶೈಲಿಯೊಂದಿಗೆ ಹಂತ ಹಂತವಾಗಿ ಪ್ರಕೃತಿಗೆ ಹೋಂದಿಕೊಂಡು ಹಿಂದೆ ಹೋಗುವ ತಿರುವು ಆರಾಮವಾಗಿ ಮತ್ತು ಸುಲಭವಾಗಿ ಪಡೆಯಬಹುದು. ಇದನ್ನು ಪರಿವರ್ತನ ವೇದಿಕೆಯ ತಂಡದವರು ತಿಳಿಸಿಕೊಡಲಿದ್ದಾರೆ.
‘ನಮ್ಮ ತಾರಸಿಯಿಂದ ನಮ್ಮ ತರಕಾರಿಗಳು’
ಮಾರುಕಟ್ಟೆಯಲ್ಲಿ ಸುಲಭವಾಗಿ ಲಭ್ಯವಿರುವ ಅನುಕೂಲಕರ ವಿಷಕಾರಿ ಕಸದ ಆಹಾರವನ್ನು ಆರಿಸಿಕೊಳ್ಳುವುದಾ ಅಥವಾ ಪಾರಂಪರಿಕ ತರಕಾರಿ ಬೀಜ ಪ್ರಭೇದಗಳ ನಿಜವಾದ ರುಚಿ, ಸ್ವಾದ ಮತ್ತು ಸುವಾಸನೆಗಳನ್ನು ಆನಂದಿಸಲು ನಮ್ಮದೇ ಆದ ನಿಜವಾದ ಆಹಾರವನ್ನು ಬೆಳೆಸುವ ಮೂಲಕ ನಾವು ತಿನ್ನುವ ಆಹಾರವನ್ನು ಆಯ್ಕೆ ಮಾಡಿಕೊಳ್ಳುವ ಆಯ್ಕೆಯನ್ನು ನಾವು ಹೊಂದಿದ್ದೇವೆ.
“ಆಹಾರ ಪದ್ಧತಿ ಮತ್ತು ಶಿಸ್ತು”
ಈ ವಿಚಾರ ಗೊಷ್ಠಿಯನ್ನು ನಮ್ಮ ಐಕಾಂತಿಕ ಸಮುದಾಯದ ಸದಸ್ಯರಾದ ಶ್ರೀ.ರಂಗರಾಜನ್ ಅವರು ನಡೆಸಿಕೊಡುವವರು. ಅವರು ಆಹಾರ ಮತ್ತು ಆರೋಗ್ಯದ ನಡುವಿನ ನೇರ ಸಂಬಂಧದ ಬಗ್ಗೆ ಆಳವಾದ ತಿಳುವಳಿಕೆಯನ್ನು ಹೊಂದಿದ್ದಾರೆ. ‘ಆಹಾರವೇ ಔಷಧ’ ಎಂಬ ಪ್ರಸಿದ್ಧ ಹೇಳಿಕೆಯಂತೆ, ನಮ್ಮ ಆಹಾರದ ಬಗ್ಗೆ ಮತ್ತು ಅದನ್ನು ಸೇವಿಸುವ ವಿಧಾನ ಮತ್ತು ಅದು ನಮ್ಮ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಕುರಿತು ಇಲ್ಲಿ ತಿಳಿದುಕೊಳ್ಳಬಹುದು.
‘ಸ್ವಶಿಕ್ಷಣ’ ಶಿಕ್ಷಣದ ಸಹಜ ವಿಧಾನ
ಕಲಿಕೆ ಎಲ್ಲಾ ಜೀವಿಗಳಲ್ಲಿ ಕಂಡುಬರುವ ಸಹಜ ಪ್ರವೃತ್ತಿಯಾಗಿದೆ ಮತ್ತು ನಾವು ಇದರಿಂದ ಹೊರತು ಏನು ಅಲ್ಲ. ಕಲಿಕೆಯು ನಮ್ಮ ಸಹಜ ಜೀವನದ ಒಂದು ಭಾಗವಾಗಿದ್ದು, ಅದು ಸ್ವಾಭಾವಿಕವಾಗಿ ನಡೆಯುತ್ತದೆ. ಐಕಾಂತಿಕಾ ಸಮುದಾಯ ಈ ವಿಷಯದ ಬಗ್ಗೆ ಪರಿಣತಿ ಮತ್ತು ಆಳವಾದ ಜ್ಞಾನದೊಂದಿಗೆ ಅನುಭವ ಹಂಚಿಕೊಳ್ಳಲಿದೆ. ಈ ವಿಚಾರ ಗೋಷ್ಠಿಯಲ್ಲಿ, ಅನುಭವಿ ಪೋಷಕರು ಮತ್ತು ಮಕ್ಕಳೊಂದಿಗೆ ನೇರವಾಗಿ ಸಂವಹನ ನಡೆಸುವ ಅವಕಾಶ ಇಲ್ಲಿ ಸಿಗಲಿದೆ.
‘ಚೌಕಾ ಬಾರಾ’ ಪರಿಣಾಮಕಾರಿ ಮತ್ತು ಸುಲಭ ತರಕಾರಿ ಬೆಳೆಯುವ ಒಂದು ನವೀನ ವಿಧಾನ
ಪ್ರತಿಯೊಬ್ಬ ರೈತನು ತನ್ನ ಮನೆಯಲ್ಲಿ ಸೇವಿಸುವ ಆಹಾರದಲ್ಲಿ, ವಿಶೇಷವಾಗಿ ಸ್ವಾವಲಂಬಿಯಾಗಿರಲು ಪ್ರಯತ್ನಿಸಬೇಕು. ಈ ದಿಕ್ಕಿನಲ್ಲಿ ಮೊದಲ ಹೆಜ್ಜೆ ತನ್ನದೇ ಆದ ತರಕಾರಿಗಳನ್ನು ಬೆಳೆಯುವುದು. ಸಾಮಾನ್ಯವಾಗಿ, ತರಕಾರಿಗಳನ್ನು ಬೆಳೆಯಲು ಸಾಮಾನ್ಯವಾಗಿ ಕೃಷಿಯಲ್ಲಿ ಸಾಕಷ್ಟು ಶ್ರಮ ಬೇಕಾಗುತ್ತದೆ. ಸರಳ ತಂತ್ರಗಳನ್ನು ಅನುಸರಿಸುವ ಮೂಲಕ ತರಕಾರಿಗಳನ್ನು ಬೆಳೆಯುವ ವಿಶಿಷ್ಟ ಸನ್ನಿವೇಶವನ್ನು ಸುಲಭವಾಗಿ ಬದಲಾಯಿಸಬಹುದು. ಐಕಾಂತಿಕಾ ಸಮುದಾಯದ ಮುಂಚೂಣಿಯಲ್ಲಿರುವ ಯುವ ರೈತನಿಂದ ಇವುಗಳನ್ನು ತಿಳಿದುಕೊಳ್ಳಲು ಅನುಭವಿ ಕಲಿಕೆಯ ಫೋಟೋಗಳು ಮತ್ತು ವೀಡಿಯೋಗಳು ಇರುವ PPT ಯೊಂದಿಗೆ ಬರುತ್ತಿದ್ದಾರೆ ಶಿವಮೊಗ್ಗ ಜಿಲ್ಲೆಯ ಶ್ರೀ.ಸಂತೋಷ್ ಅವರು .
‘ಸಹಜ ಕೃಷಿ ಮತ್ತು ಕೃಷಿ ವಿನ್ಯಾಸ’
ಸಹಜ ಕೃಷಿಯು ಪ್ರಕೃತಿಯ ಲಯಗಳಿಗೆ ಅನುಗುಣವಾಗಿ ಕೃಷಿಯ ಅತ್ಯುನ್ನತ ಮತ್ತು ಸರಳ ರೂಪವಾಗಿದೆ. ಪ್ರಕೃತಿಯೊಂದಿಗೆ ಸಹಜೀವನ ಮತ್ತು ಹೊಂದಿಕೊಂಡು ನಾವು ನಮ್ಮ ಹೊಲಗಳನ್ನು ನಾವೇ ವಿನ್ಯಾಸಗೊಳಿಸಬಹುದು. ಸಹಜ ಕೃಷಿಯನ್ನು ಸ್ಥಾಪಿಸುವಲ್ಲಿ ಒಳಗೊಂಡಿರುವ ಈ ಸರಳ ವಿವರಗಳನ್ನು ಹೆಸರಾಂತ ಐಕಾಂತಿಕ ಸಮುದಾಯದ ಶ್ರೀ.ರಾಘವ ಮತ್ತು ಶ್ರೀ.ಪಾಂಡುರಂಗ ಅವರಿಂದ ನೇರವಾಗಿ ಅರ್ಥಮಾಡಿಕೊಳ್ಳಲು ಅವಕಾಶವಾಗಲಿದೆ.
‘ಸಹಜ ಜೀವನಶೈಲಿಗಾಗಿ ಸಹಜ ಕಟ್ಟಡ’
ನಮ್ಮ ಮನೆ ನಮ್ಮ ಜೀವಿತಾವಧಿಯ ಬಹುಪಾಲು ಕಾಲ ವಾಸಿಸುವ ಸ್ಥಳವಾಗಿದೆ. ನಾವು ನಮ್ಮ ಮನೆಗಳನ್ನು ನೈಸರ್ಗಿಕ ರೀತಿಯಲ್ಲಿ ನಿರ್ಮಿಸಬಹುದು. ನೈಸರ್ಗಿಕ ಕಟ್ಟಡಗಳು ಸುಸ್ಥಿರವಾದ, ಕಾಲಾತೀತ ಮನೆಗಳಾಗಿದ್ದು, ಅವು ಉಸಿರಾಡುವ, ನಾವೇ ದುರಸ್ತಿ ಮಾಡಬಹುದಾದ ಮತ್ತು ಎಲ್ಲಾ ಹವಾಮಾನ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಬಲ್ಲವು. ನೈಸರ್ಗಿಕ ಕಟ್ಟಡಗಳಲ್ಲಿನ ಗಟ್ಟಿತನ ಮತ್ತು ಬಾಳಿಕೆ ಮತ್ತು ಇನ್ನೂ ಹೆಚ್ಚಿನ ಮುಖ್ಯ ಕಾಳಜಿಗಳ ಬಗ್ಗೆ ಸತ್ಯವನ್ನು ತಿಳಿಯಲು ನಾವೆಲ್ಲರೂ ಒಟ್ಟಾಗಿ ಆಳವಾದ ಸಂವಾದಗಳನ್ನು ನಡೆಸಿಕೊಡುವವರು ಐಕಾಂತಿಕ ಸಮುದಾಯದ ಶ್ರೀ.ಸಂದೀಪ್ ಅವರು. ವಾಸ್ತವವಾಗಿ ನಾವು ನಮ್ಮ ಮನೆಗಳನ್ನು ನಾವೇ ನಿರ್ಮಿಸಬಹುದು.
‘ಸಹಜ ಕೃಷಿಕರ ಅನುಭವಗಳು’ – ಸಾಕ್ಷ್ಯಚಿತ್ರ ಪ್ರದರ್ಶನ
ಸಹಜ ಕೃಷಿ ಸರಳ ಕೃಷಿ ತಂತ್ರವಾಗಿದ್ದರೂ, ಅರ್ಥಮಾಡಿಕೊಳ್ಳುವುದು ಕಠಿಣವೆಂದು ತೋರುತ್ತದೆ ಆದ್ದರಿಂದ ನಾವು ಸಹಜ ಕೃಷಿ ಮಾಡುತ್ತಿರುವವರ ಸಾಕ್ಷ್ಯಚಿತ್ರವನ್ನು ನೋಡುವ ಮೂಲಕ ನೇರವಾಗಿ ಅನುಭವಗಳನ್ನು ಅರ್ಥಮಾಡಿಕೊಳ್ಳಲು ಮತ್ತು ತಿಳಿದುಕೊಳ್ಳಲು ಮತ್ತು ನಿಜವಾದ ಸಹಜ ಕೃಷಿಯ ಹೀರೋಯಿನ್ ಗಳು ಮತ್ತು ಹೀರೋಗಳೊಂದಿಗೆ ಸಂವಹನ ನಡೆಸುವ ಅವಕಾಶವನ್ನು ‘ಪಾರಂಪರಿಕ ಬೀಜೋತ್ಸವ’ ದಲ್ಲಿ ಪಡೆಯಬಹುದು.
ಉತ್ಸವದ ವಿಷೇಷತೆಗಳು:
• ಪಾರಂಪರಿಕ ಬೀಜಗಳ ಸಂರಕ್ಷಣೆಯ ರಂಗದಲ್ಲಿ ನಮ್ಮ ದೇಶದಲ್ಲೆ ಹೆಸರಾದ ‘ಸಹಜ ಸಮೃದ್ಧ’ ಸಂಸ್ಥೆಯ ಮುಖ್ಯಸ್ಥರಾದ ಶ್ರೀ.ಕೃಷ್ಣಪ್ರಸಾದ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
• ನಮ್ಮ ದೇಶದ ಹೆಸರಾಂತ ಸಹಜ ಕೃಷಿಕರಾದ ‘ಐಕಾಂತಿಕ’ ದ ಶ್ರೀ.ರಾಘವ ಅವರುಗಳು ಈ ಕಾರ್ಯಕ್ರಮದಲ್ಲಿ ತಮ್ಮ ಅನುಭವದ ಜ್ಞಾನ ಅಂಚಿಕೊಳ್ಳಲಿದ್ದಾರೆ.
•ಹೆಸರಾಂತ ಸಾಹಿತಿ ಡಿವಿಜಿ (ಶ್ರೀ.ಡಿ.ವಿ.ಗುಂಡಪ್ಪ) ಅವರ ಮೊಮ್ಮಗ ಮತ್ತು ಹೆಸರಾಂತ ಮಣ್ಣಿನ ತಜ್ಞರಾದ ಸಾಯಿಲ್ ವಾಸು (ಶ್ರೀ.ಶ್ರೀನಿವಾಸ್) ಅವರು ಬರಲಿದ್ದಾರೆ.
• ಸಾಂಪ್ರದಾಯಿಕ ನೇಯ್ಗೆ ಮಾದರಿಯ ಉಡುಪಿ ಸೀರೆಗೆ ಮರುಜೀವ ಕೊಟ್ಟ ಕದಿಕೆ ಟ್ರಸ್ಟ್ ನ ಶ್ರೀಮತಿ.ಮಮತಾ ರೈ ಮತ್ತು ಶ್ರೀ.ಬಿ.ಸಿ.ಶೆಟ್ಟಿ ಅವರು ತಮ್ಮ ಜಾಗೃತ ಪ್ರಜ್ಞೆಯ ಜ್ಞಾನದಿಂದ ಉಪಸ್ಥಿತಿ ಇರುವವರು.
• ಪ್ರಾಮಾಣಿಕ ಪ್ರಜ್ಞೆಗೆ ಉತ್ತುಂಗ ಉದಾಹರಣೆಯ ವ್ಯಕ್ತಿಗಳಾದ ರಾಜಕೀಯ ರಂಗದ ಶ್ರೀ.ಮಹಿಮಾ ಪಟೇಲ್, ನಮ್ಮ ದೇಶದ ಅತ್ಯುತ್ತಮ ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ಒಂದಾದ ‘ತರಳಬಾಳು ಕೃಷಿ ವಿಜ್ಞಾನ ಕೇಂದ್ರ’ ವನ್ನು ಮುಂದೆ ನಡೆಸುತ್ತಿರುವ ಶ್ರೀ.ದೇವರಾಜ್ ಮತ್ತು ಶಿಕ್ಷಣ ರಂಗದ ಅನ್ಮೊಲ್ ಶಾಲೆಯ ಹೆಸರಾಂತ ಶ್ರೀ.ದಿನೇಶ್ ಅವರು ಉಪಸ್ಥಿತಿ ಇರುವವರು.
• ನಿರ್ಲಕ್ಷ್ಯಕ್ಕೆ ಒಳಗಾದ ಗೆಡ್ಡೆ ಗೆಣಸಿನಂಥ ಅಪರೂಪದ ಬೆಳೆಗಳ ಪ್ರದರ್ಶನ
• ವಿವಿಧ ರೀತಿಯ ಸಿರಿಧಾನ್ಯಗಳು, ಸಾಂಪ್ರದಾಯಿಕ ತರಕಾರಿಗಳು, ಹಣ್ಣುಗಳು ಮತ್ತು ವಿವಿಧ ಭತ್ತದ ತಳಿಗಳ ಪ್ರದರ್ಶನ
• ಹರಿಯಾಣ, ತಮಿಳು ನಾಡು, ಕರ್ನಾಟಕ ಮತ್ತು ಇತರ ರಾಜ್ಯಗಳಿಂದ ಬೀಜ ಸಂರಕ್ಷಕರ ಗುಂಪುಗಳು ಭಾಗವಹಿಸಲಿವೆ.
• ಸುಮಾರು ೨೫೦ ವಿವಿಧ ರೀತಿಯ ತರಕಾರಿ ತಳಿಗಳು, ಅಕ್ಕಿ ಹಾಗೂ ಸಿರಿಧಾನ್ಯಗಳ ಮಾರಾಟ ನಡೆಯಲಿದೆ
• ‘ಬೀಜ ವಿನಿಮಯ’ ಕಾರ್ಯಕ್ರಮವಿರುತ್ತದೆ. ಆಸಕ್ತರು ಬೀಜ ಮತ್ತು ಗಿಡಗಳನ್ನು ವಿನಿಮಯಕ್ಕೆ ತರಬಹುದು.
• ಅಪಾರವಾದ ಪಾರಂಪರಿಕ ಮತ್ತು ಅಪರೂಪದ ಬೀಜ ವೈವಿದ್ಯತೆ ಬರಲಿದ್ದು, ಕೈತೋಟ ಪ್ರಿಯರು ಮತ್ತು ರೈತರು ತಮಗೆ ಬೇಕಾದ ಅಗತ್ಯ ಬೀಜಗಳನ್ನು ಮತ್ತು ಅಪರೂಪದ ತಳಿಗಳನ್ನು ಇಲ್ಲಿ ಖರೀದಿಸಲು ಅವಕಾಶ ಇರುತ್ತದೆ.
•ಸುಸ್ಥಿರ ಜೀವನಶೈಲಿಯ ಉತ್ಪನ್ನಗಳಲಾದ ತಾಳೆ ಗರಿಯ ಕರಕುಶಲಗಳು, ಅರಿಶಿನ ಎಣ್ಣೆಯ ಸೋಪ್ ಮತ್ತು ಫೇಸ್ ವಾಶ್, ತೆಂಗಿನ ಎಣ್ಣೆಯ ಸೋಪ್, ಬೇವಿನ ಸೋಪ್, ಕಿತ್ತಲೆ ಹಣ್ಣಿನ ಫೇಸ್ ವಾಶ್, ಬೀಟ್ರೂಟ್ ಲಿಪ್ ಬಾಮ್, ಅಲೋವೆರಾ ಫೇಸ್ ವಾಶ್, ದಾಸವಾಳ ಹೂವಿನ ಹೇರ್ ಕಂಡೀಷನರ್, ಮಣ್ಣಿನ ಮಡಿಕೆಗಳು, ಮಕ್ಕಳಿಗೆ ಮಣ್ಣಿನ ಆಟಿಕೆಗಳು ಬರುತ್ತಿವೆ.
•ವಿಷಮುಕ್ತ ಕೃಷಿ ಉತ್ಪನ್ನಗಳಾದ ಬಿದಿರು ಅಕ್ಕಿ, ಕಂದು ಅಕ್ಕಿ, ಕಪ್ಪು ಅಕ್ಕಿ, ದೇಸಿ ಬಾಸ್ಮತಿ ಅಕ್ಕಿ, ಸಿರಿಧಾನ್ಯಗಳು, ಶೇಂಗಾ, ಸಾಂಬಾರ್ ಪದಾರ್ಥಗಳು, ಬೆಳ್ಳುಳ್ಳಿ, ಈರುಳ್ಳಿ, ಗೋಧಿ, ಬೇಳೆ ಕಾಳುಗಳು, ಬೆಲ್ಲ, ಜೇನುತುಪ್ಪ, ಸಿರಿಧಾನ್ಯಗಳ ಅವಲಕ್ಕಿ, ಕಪ್ಪು ಹೆಸರುಕಾಳು, ಕಪ್ಪು ಹುರುಳಿಕಾಳು, ಕಪ್ಪು ಕಡ್ಲೆಕಾಳು ಮತ್ತು ಇತರೆ.
• ಆರೋಗ್ಯಕರ ಆಹಾರ ಉತ್ಪನ್ನಗಳಾದ ನುಗ್ಗೆ ಸೊಪ್ಪಿನ ಹಪ್ಪಳ, ಬಾಳೆದಿಂಡಿನ ಹಪ್ಪಳ, ಗೆಣಸಿನ ಹಪ್ಪಳ, ಕರಿಬೇವಿನ ಚಟ್ನಿಪುಡಿ, ಒಂದೆಲಗ ಚಟ್ನಿಪುಡಿ, ಬಿದಿರು ಕಳಲೆ ಉಪ್ಪಿನಕಾಯಿ, ಬಾಳೆದಿಂಡಿನ ಉಪ್ಪಿನಕಾಯಿ, ಗಜನಿಂಬೆ ಉಪ್ಪಿನಕಾಯಿ, ಬಾಳೆ ಹೂವಿನ ತೊಕ್ಕು, ಹುಣಸೆ ಕಾಯಿ ತೊಕ್ಕು, ನಿಪ್ಪಟ್ಟು, ಕಜ್ಜಾಯ, ಕೆಂಪು ಅಕ್ಕಿಯ ಚಕ್ಕುಲಿ, ಬೇಲದ ಹಣ್ಣಿನ ಹಲ್ವ, ಬೇಲದ ಹಣ್ಣಿನ ಜಾಮ್, ಗೋಧಿ ಹಿಟ್ಟು ಬೆಲ್ಲದ ಕೇಕ್ ಮತ್ತು ಬಿಸ್ಕತ್, ಸಿರಿಧಾನ್ಯಗಳ ಚಕ್ಕುಲಿ, ಶೇಂಗಾ ಚಿಕ್ಕಿ, ಡ್ರೈ ಫ್ರೂಟ್ಸ್ ಲಾಡು, ನೇರಳೆ ಹಣ್ಣಿನ ಜ್ಯೂಸ್, ಹಲಸಿನ ಹಣ್ಣಿನ ಜ್ಯೂಸ್ ಮತ್ತಿತರ ದೇಸೀ ಆಹಾರ ಉತ್ಪನ್ನಗಳು ಬಾಯಿ ಚಪ್ಪರಿಸಲು ಸಿಗಲಿವೆ.
ವಿವರಗಳಿಗೆ ಸಂಪರ್ಕಿಸಿ:
8970419456, 9900015758, 9844809966
