ಕೃಷಿ ಸಮಯ ಡೆಸ್ಕ್
ನುಡಿದಂತೆ ನಡೆದಿದ್ದೇವೆ: ಮುಖ್ಯಮಂತ್ರಿ ಸಿದ್ದರಾಮಯ್ಯ
ಚುನಾವಣಾ ವೇಳೆ ಜನರಿಗೆ ನೀಡಿದ್ದ ಎಲ್ಲಾ ಭರವಸೆಗಳನ್ನು ಈಡೇರಿಸಿ ನಮ್ಮ ಕಾಂಗ್ರೇಸ್ ಸರ್ಕಾರ ನುಡಿದಂತೆ ನಡೆದಿದೆ. ಪಂಚ ಗ್ಯಾರಂಟೆ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತರಲಾಗಿದೆ. ಇದರ ಜೊತೆ ಇಂದು ಆರನೇ ಗ್ಯಾರಂಟಿಯನ್ನು ಜಾರಿಗೊಳಿಸುತ್ತಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.
ಸರ್ಕಾರವು ಯಶಸ್ವಿಯಾಗಿ ಎರಡು ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಹೊಸಪೇಟೆಯ ಸರ್ಕಾರಿ ಜಿಲ್ಲಾ ಕ್ರೀಡಾಂಗಣದಲ್ಲಿ ೨೦-೫- ೨೦೨೫ ರಂದು ಹಮ್ಮಿಕೊಳ್ಳಲಾದ “ಸಾಧನಾ ಸಮಾವೇಶ” ಸಮಾರಂಭದಲ್ಲಿ ಉಕ್ಕಿನ ಮಹಿಳೆ ಇಂದಿರಾ ಗಾಂಧಿಯವರ ಪ್ರತಿಮೆಯನ್ನು ಲೋಕಾರ್ಪಣೆಗೊಳಿಸಿ ನಂತರ ಮಾತನಾಡಿದ ಮುಖ್ಯಮಂತ್ರಿಗಳು ಚುನಾವಣೆಯ ಸಮಯದಲ್ಲಿ ಪ್ರಣಾಳಿಕೆಯಲ್ಲಿ ನಾವು ಕೊಟ್ಟ ಭರವಸೆಗಳಲ್ಲಿ 142 ಭರವಸೆಗಳನ್ನು ಎರಡು ವರ್ಷದಲ್ಲಿ ಪೂರೈಸಿದ್ದೇವೆ, ಉಳಿದವುಗಳನ್ನು ಮುಂದಿನ ಮೂರು ವರ್ಷದಲ್ಲಿ ಈಡೇರಿಸುತ್ತೇವೆ. ಈಗ ಐದು ಗ್ಯಾರಂಟೆಗಳ ಜೊತೆ ಆರನೇ ಗ್ಯಾರಂಟಿಯಾಗಿ ಭೂ ಮಾಲಿಕತ್ವ ನೀಡುವ ಗ್ಯಾರಂಟಿಯನ್ನು ಜಾರಿಗೆ ತರಲಾಗಿದೆ. ಅದರ ನಿದರ್ಶನವಾಗಿ ಇಂದು 1,11,111 ಕುಟುಂಬಗಳಿಗೆ ಒಂದೇ ದಿನ ಹಕ್ಕುಪತ್ರ ವಿತರಿಸಲಾಗಿದೆ. ಮುಂದಿನ ಮೂರು ವರ್ಷಗಳಲ್ಲಿ ಉಳಿದ ಭರವಸೆ ಈಡೇರಿಸುತ್ತೇವೆ ಎಂದು ತಿಳಿಸಿದರು.
ಮೊದಲ ಬಾರಿ ಮುಖ್ಯಮಂತ್ರಿಯಾಗಿ ನಾವು ನೀಡಿದ್ದ 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಿದ್ದಲ್ಲದೆ, ಪ್ರಣಾಳಿಕೆಯಲ್ಲಿ ಘೋಷಿಸದ ಹೊಸದಾದ 30 ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೊಳಿಸಿದ್ದೇವೆ ಎಂದ ಸಿ.ಎಂ ಸಿದ್ದರಾಮಯ್ಯ ಅವರು ಬಿಜೆಪಿ ಏಕೆ ತಾನು ಕೊಟ್ಟಿದ್ದ ಭರವಸೆಗಳನ್ನು ಈಡೇರಿಸದೆ, ಜನರ ಎದುರು ಸುಳ್ಳು ಹೇಳಿಕೊಂಡು ತಿರುಗುತ್ತಿದೆ ಎಂದು ಪ್ರಶ್ನಿಸಿದರು.
ನಮ್ಮ ರಾಜ್ಯ ಸರ್ವ ಜನಾಂಗದ ಶಾಂತಿಯ ತೋಟ. ಸರ್ವರನ್ನೂ ಸಮಾನವಾಗಿ ಗೌರವಿಸುವ ರಾಜ್ಯ. ಸಂವಿಧಾನದ ಅಡಿಯಲ್ಲಿ ಸರ್ವ ಧರ್ಮಗಳನ್ನೂ ಸಮಾನವಾಗಿ ಕಾಣಬೇಕು. ನಾವು ಇದೇ ಮೌಲ್ಯವನ್ನು ಪಾಲಿಸುತ್ತಿದ್ದೇವೆ ಎಂದರು.
ಕೇಂದ್ರ ಸರ್ಕಾರದಿಂದ ಪ್ರತೀ ವರ್ಷ ನಮಗೆ ನಷ್ಟ ಆಗುತ್ತಿದೆ. ನಾವು ಪ್ರತೀ ವರ್ಷ 4.5 ಲಕ್ಷ ಕೋಟಿ ತೆರಿಗೆ ರೂಪದಲ್ಲಿ ಕೊಟ್ಟರೆ ನಮಗೆ ವಾಪಾಸ್ ಬರುವುದು ಒಂದು ರೂಪಾಯಿಗೆ 14 ಪೈಸೆ ಮಾತ್ರ. ಇದರಿಂದ ಒಕ್ಕೂಟ ವ್ಯವಸ್ಥೆಯ ಘನತೆ ಹಾಳು ಮಾಡುತ್ತಿದ್ದಾರೆ ಎಂದರು.
ಕೇಂದ್ರ ಪ್ರಾಯೋಜಿತ ಯೋಜನೆಗಳಿಗೂ ಕೇಂದ್ರದಿಂದ ಪೂರ್ತಿ ಅನುದಾನ ಬಂದೇ ಇಲ್ಲ. ಕೇಂದ್ರದ ಯೋಜನೆಗಳಿಗೆ ರಾಜ್ಯ ಸರ್ಕಾರ ರಾಜ್ಯದ ಪಾಲನ್ನು ಪೂರ್ತಿ ಕೊಟ್ಟಿದೆ. ಆದರೆ ಕೇಂದ್ರ ಸರ್ಕಾರ ತಮ್ಮ ಪಾಲನ್ನು ಕೊಡದೆ ಉಳಿಸಿಕೊಂಡು ಅನ್ಯಾಯ ಮಾಡುತ್ತಿದೆ. 15 ನೇ ಹಣಕಾಸು ಯೋಜನೆಯಲ್ಲಿ ರಾಜ್ಯಕ್ಕೆ ಕೇಂದ್ರ ಮಾಡಿರುವ ಅನ್ಯಾಯ ನಿಮಗೆಲ್ಲಾ ಗೊತ್ತೇ ಇದೆ. ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಿಸಿದ್ದ 5300 ಕೋಟಿ ಹಣದಲ್ಲಿ ಬಿಡಿಗಾಸನ್ನೂ ಬಿಡುಗಡೆ ಮಾಡಲಿಲ್ಲ. ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸುವುದಾಗಿ ಭರವಸೆ ನೀಡಿದರು.
ಹಿಂದಿನ ಬಿಜೆಪಿ ಸರ್ಕಾರದ ಮೇಲೆ 40% ಕಮಿಷನ್ ಆರೋಪ ಇತ್ತು. ನಾವು ಇದರ ವಿರುದ್ಧ ಹೋರಾಟ ಮಾಡಿದೆವು, ಅಧಿಕಾರಕ್ಕೆ ಬಂದ ಬಳಿಕ ತನಿಖೆಗೆ ನಾಗಮೋಹನ್ ದಾಸ್ ಸಮಿತಿ ರಚಿಸಿದೆವು. ಸಮಿತಿ ಕೊಟ್ಟಿರುವ ವರದಿಯಲ್ಲಿ ಕಮಿಷನ್ ವ್ಯವಹಾರ ಸಾಬೀತಾಗಿದೆ ಎಂದರು.
1.22 ಕೋಟಿ ಕುಟುಂಬಗಳ ಯಜಮಾನಿಯರಿಗೆ ಗೃಹಲಕ್ಷ್ಮಿ ಯೋಜನೆಯಡಿ 2000 ರೂಪಾಯಿ ಕೊಡುತ್ತಿದ್ದೇವೆ. 1.30 ಕೋಟಿ ಕುಟುಂಬಗಳಿಗೆ ಗೃಹ ಜ್ಯೋತಿ ಯೋಜನೆಯಡಿ ಅನುಕೂಲ ಒದಗಿಸಿದ್ದೇವೆ. ಜೊತೆಗೆ ಇಡೀ ರಾಜ್ಯದ ಮಹಿಳೆಯ ರಿಗೆ ಶಕ್ತಿ ಯೋಜನೆಯಡಿ ಉಚಿತ ಪ್ರಯಾಣದ ವ್ಯವಸ್ಥೆ ಮಾಡಿದ್ದೇವೆ ಎಂದರು.
2014 ರಲ್ಲಿ 10000 ಇದ್ದ ಚಿನ್ನದ ಬೆಲೆ ಈಗ ಲಕ್ಷ ಆಗಿದೆ. ಗ್ಯಾಸ್ ಬೆಲೆ 400 ಇದ್ದದ್ದು ಈಗ 850 ಆಗಿದೆ. ಡೀಸೆಲ್, ಪೆಟ್ರೋಲ್, ಎಣ್ಣೆ, ಕಾಳು, ಬೇಳೆ, ರಸಗೊಬ್ಬರ ಎಲ್ಲದರ ಬೆಲೆಯನ್ನೂ ಆಕಾಶಕ್ಕೆ ಏರಿಸಿರುವ ಕೇಂದ್ರ ಸರ್ಕಾರದ ವಿರುದ್ಧ ಜನಾಕ್ರೋಶ ಇದೆ. ನಮ್ಮ ಸರ್ಕಾರದ ಪರವಾಗಿ ಜನಾಭಿಪ್ರಾಯ ಇದೆ ಎಂದರು.
ರಾಜ್ಯದ ಜನತೆ ನಮ್ಮ ಮಾಲೀಕರು. ನಮ್ಮ ಮಾಲೀಕರಿಗೆ ನಾವು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ. ನಿಮ್ಮ ಆಶೀರ್ವಾದ ಇರುವವರೆಗೂ ಬಿಜೆಪಿಯ ಸುಳ್ಳಿನ ರಾಶಿಗೆ ನಾವು ಹೆದರುವ, ಅಂಜುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಕಾಂಗ್ರೆಸ್ ಅಧಿಕಾರದಲ್ಲಿರುವವರೆಗೂ ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲ – ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್.
ಹೊಸಪೇಟೆಯ ಸರ್ಕಾರಿ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾದ “ಸಾಧನಾ ಸಮಾವೇಶ” ಸಮಾರಂಭದಲ್ಲಿ ಮಾತನಾಡಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನಮಗೆ ಅಧಿಕಾರ ನೀಡಿ ರಾಜ್ಯದ ಸೇವೆ ಮಾಡಲು ಆಶೀರ್ವಾದ ಮಾಡಿದ ಜನರ ಋಣ ತೀರಿಸಲು ನಮ್ಮ ಸರ್ಕಾರ ಆರನೆಯದಾಗಿ ಭೂ ಗ್ಯಾರಂಟಿ ಯೋಜನೆ ನೀಡುತ್ತಿದೆ. ಎಐಸಿಸಿ ಅಧ್ಯಕ್ಷರ ನಿರ್ದೇಶನದಂತೆ ಕಾಂಗ್ರೆಸ್ ಅಧಿಕಾರದಲ್ಲಿರುವವರೆಗೂ ಗ್ಯಾರಂಟಿ ಯೋಜನೆಗಳು ನಿಲ್ಲಿಸುವುದಿಲ್ಲ” ಎಂದು ತಿಳಿಸಿದರು.
“ನಾವಿಂದು ಎರಡು ವರ್ಷಗಳ ಸಂಭ್ರಮಾಚರಣೆ ಮಾಡಲು ಇಲ್ಲಿಗೆ ಬಂದಿಲ್ಲ. ಕರ್ನಾಟಕ ರಾಜ್ಯದ ಜನರ ಋಣ ತೀರಿಸಲು ಸಮರ್ಪಣೆಯ ಸಂಕಲ್ಪ ಕಾರ್ಯಕ್ರಮ ಮಾಡುತ್ತಿದ್ದೇವೆ. ಮಲ್ಲಿಕಾರ್ಜುನ ಖರ್ಗೆ ಅವರ ಅಧ್ಯಕ್ಷತೆಯಲ್ಲಿ ರಾಹುಲ್ ಗಾಂಧಿ ಅವರ ನಾಯಕತ್ವದಲ್ಲಿ 136 ಕ್ಷೇತ್ರಗಳಲ್ಲಿ ಶಾಸಕರನ್ನು ಆಯ್ಕೆ ಮಾಡಿ ನಮಗೆ ಆಶೀರ್ವಾದ ಮಾಡಿದಿರಿ. ನಿಮ್ಮ ಋಣ ತೀರಿಸಲು ಕೊಟ್ಟ ಮಾತಿನಂತೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿ, ಆರನೇ ಗ್ಯಾರಂಟಿಯಾಗಿ ಭೂ ಗ್ಯಾರಂಟಿ ಯೋಜನೆ ನೀಡುವ ಮೂಲಕ ನಮ್ಮ ಸರ್ಕಾರ ಇತಿಹಾಸ ಬರೆಯುತ್ತಿದೆ” ಎಂದು ತಿಳಿಸಿದರು.
“ಗ್ರಾಮೀಣ ಪ್ರದೇಶದ ಬಡ ಜನರು, ಕಳೆದ ಐವತ್ತು ವರ್ಷಗಳಿಂದ ಪಟ್ಟಾ ಖಾತೆ ಇಲ್ಲದವರಿಗೆ ಇಂದು ಈ ಯೋಜನೆ ಮೂಲಕ ದಾಖಲಾತಿ ನೀಡುತ್ತಿದ್ದೇವೆ. ಇಂತಹ ಐತಿಹಾಸಿಕ ಯೋಜನೆ ನೀಡಿರುವ ಕಂದಾಯ ಸಚಿವರಾದ ಕೃಷ್ಣ ಭೈರೇಗೌಡ ಹಾಗೂ ಅವರ ಅಧಿಕಾರಿಗಳ ಕಾರ್ಯಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ನಗರ ಪ್ರದೇಶಗಳಲ್ಲಿ ನಾನು, ಭೈರತಿ ಸುರೇಶ್, ರಹೀಂ ಖಾನ್ ಅವರು ಸೇರಿ ಎಲ್ಲಾ ಆಸ್ತಿಗಳನ್ನು ಡಿಜಿಟಲೀಕರಣಗೊಳಿಸಿ ಖಾತೆಗಳನ್ನು ಸರಿಪಡಿಸಿ ಜನರಿಗೆ ನೀಡುವ ಏಳನೇ ಗ್ಯಾರಂಟಿಯನ್ನು ಘೋಷಣೆ ಮಾಡುತ್ತಿದ್ದೇವೆ. ಕಾಂಗ್ರೆಸ್ ಶಕ್ತಿ, ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲಾ ವರ್ಗದವರು ಅಧಿಕಾರಕ್ಕೆ ಬಂದಂತೆ” ಎಂದು ಹೇಳಿದರು.
ನಮ್ಮ ಸರ್ಕಾರದ ಎರಡು ವರ್ಷಗಳ ಅವಧಿಯಲ್ಲಿ ಭ್ರಷ್ಟಾಚಾರಕ್ಕೆ ಬೇಡಿ ಹಾಕಿದೆ. ಇಂದಿರಾ ಗಾಂಧಿ ಅವರು ಈ ಜಿಲ್ಲೆಯಲ್ಲಿ ವಿಜಯನಗರ ಸ್ಟೀಲ್ ಆರಂಭಿಸಿದರು. ಸೋನಿಯಾ ಗಾಂಧಿ ಅವರು ಇಲ್ಲಿ ಬಂದು ವಿದ್ಯುತ್ ಶಕ್ತಿಯ ಆರ್ ಟಿಪಿಎಸ್ ಆರಂಭಿಸಿದರು. ರಾಹುಲ್ ಗಾಂಧಿ ಅವರು ನಮ್ಮ ರಾಜ್ಯದಲ್ಲಿ ಭಾರತ ಜೋಡೋ ಯಾತ್ರೆ ಮಾಡಿದ ಬಹುತೇಕ ಎಲ್ಲಾ ಕಡೆಗಳಲ್ಲಿ ಕಾಂಗ್ರೆಸ್ ಪಕ್ಷ ಗೆದ್ದಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ 6 ಸಂಸದರನ್ನು ಆಯ್ಕೆ ಮಾಡಿದ್ದೀರಿ. ನಮ್ಮ ಸರ್ಕಾರ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ವರ್ಷಕ್ಕೆ 5 ಸಾವಿರ ಕೋಟಿ ನೀಡುತ್ತಿದ್ದೇವೆ ಎಂದರು.
ವಿರೋಧ ಪಕ್ಷಗಳು ನಮ್ಮ ವಿರುದ್ಧ ಟೀಕೆಗಳನ್ನು ಮಾಡುತ್ತಿವೆ. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ. ಅದಕ್ಕೆ ನಮ್ಮ ಯೋಜನೆಗಳೇ ಸಾಕ್ಷಿ. ರೈತರ ಬವಣೆ ನೀಗಿಸಲು ರಾಜ್ಯದ ಕೆರೆಗಳನ್ನು ತುಂಬಿಸಲು ಕಾರ್ಯಕ್ರಮ ರೂಪಿಸಲಾಗಿದೆ. ನವಲಿ ಅಣೆಕಟ್ಟು ಯೋಜನೆ ಮಾಡಲು ಚರ್ಚೆ ಮಾಡುತ್ತಿರುವ ಹೊತ್ತಿನಲ್ಲಿಯೇ. ನಮ್ಮ ಪಾಲಿನ 24 ಟಿಎಂಸಿ ನೀರನ್ನು ಏತ ನೀರಾವರಿ ಮೂಲಕ ಕೆರೆಗಳಿಗೆ ತುಂಬಿಸುವ ಕಾರ್ಯಕ್ರಮ ರೂಪಿಸಲಾಗಿದೆ. ಈ ವಿಚಾರವಾಗಿ ಆಂಧ್ರ ಪ್ರದೇಶ ರಾಜ್ಯದ ಜತೆ ಚರ್ಚೆ ಮಾಡಬೇಕಿದೆ. ಈ ಯೋಜನೆ ಮೂಲಕ ನಿಮ್ಮ ರಕ್ಷಣೆ ಮಾಡಲು ನಾವು ಬದ್ಧ ಎಂದು ಭರವಸೆ ನೀಡಿದರು.
ನಮ್ಮ ಸರ್ಕಾರದ ಆಡಳಿತದಲ್ಲಿ ರಾಜ್ಯದಲ್ಲಿ 10 ಲಕ್ಷ ಕೋಟಿ ಬಂಡವಾಳ ಹೂಡಿಕೆಗೆ ಉದ್ಯಮಿಗಳು ಮುಂದಾಗಿದ್ದಾರೆ. ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಲಾಗಿದೆ. ಗ್ರಾಮೀಣಾಭಿವೃದ್ಧಿ ಇಲಾಖೆಯ ಮೂಲಕ ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಗೆ ಕಲ್ಯಾಣ ಪಥ ಯೋಜನೆ ರೂಪಿಸಲಾಗಿದೆ. ಇದರ ಜತೆಗೆ ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆಗಳಲ್ಲಿ ನಮ್ಮ ಸಚಿವರು ಹೊಸ ಯೋಜನೆ ತಂದು ಜನರ ಸೇವೆ ಮಾಡುತ್ತಿದ್ದಾರೆ.
ನಮ್ಮ ಸರ್ಕಾರ ಬಸವಣ್ಣನವರ ಮಾರ್ಗದರ್ಶನದಂತೆ ನಾವು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ. ನಮ್ಮ ಸರ್ಕಾರದ ಕಾರ್ಯ ಸಾಧನೆಯನ್ನು ವಿರೋಧ ಪಕ್ಷಗಳು ಕಣ್ಣಲ್ಲಿ ನೋಡಲಾಗದೇ, ಟೀಕೆ ಮಾಡುತ್ತಿದ್ದಾರೆ. ಅವರು ಟೀಕೆ ಮಾಡುತ್ತಿರಲಿ, ನಾವು ಜನರ ಬದುಕು ಉಳಿಸುವ ಕೆಲಸ ಮಾಡಿಕೊಂಡು ಹೋಗುತ್ತೇವೆ ಎಂದು ತಿಳಿಸಿದರು.
500 ನೂತನ ಕಂದಾಯ ಗ್ರಾಮಗಳನ್ನು ಘೋಷಣೆ ಮಾಡುವುದು ನಮ್ಮ ಸಂಕಲ್ಪ – ರಾಹುಲ್ ಗಾಂಧಿ
ಕರ್ನಾಟಕ ಸರ್ಕಾರ ಯಶಸ್ವಿಯಾಗಿ ಎರಡು ವರ್ಷವನ್ನು ಪೂರೈಸಿದೆ. ನಮ್ಮ ಕಾಂಗ್ರೆಸ್ ಸರ್ಕಾರ ನಿಮ್ಮ ಹಣವನ್ನು ಮರಳಿ ನಿಮಗೆ ನೀಡುತ್ತಿದೆ. ನೀವು ಕಟ್ಟುವ ತೆರಿಗೆಯ ಹಣ ಮರಳಿ ನಿಮಗೆ ಸೇರಬೇಕು ಎಂಬುದು ನಮ್ಮ ಉದ್ದೇಶವಾಗಿತ್ತು. ಅದು ಯಶಸ್ವಿಯಾಗಿ ಈಡೇರಿದೆ.
ಐದು ಗ್ಯಾರಂಟಿಗಳನ್ನು ಯಶಸ್ವಿಯಾಗಿ ಅನುಷ್ಟಾನಕ್ಕೆ ತಂದ ನಂತರ ಈ ವಿಚಾರವಾಗಿ ಚರ್ಚೆ ಮಾಡುವ ವೇಳೆ ಕರ್ನಾಟಕದ ಜನರ ಭೂ ಮಾಲಿಕತ್ವದ ಬಗ್ಗೆ ಮಾತನಾಡಿದೆ. ಇಲ್ಲಿ ಹೆಚ್ಚು ಜನ ಭೂಮಿ ಹೊಂದಿದ್ದಾರೆ. ಆದರೆ ಮಾಲಿಕತ್ವ ಹೊಂದಿಲ್ಲ ಎಂಬುದು ನನಗೆ ಮನವರಿಕೆಯಾಗಿತ್ತು. ಪರಿಶಿಷ್ಟ, ಬುಡಕಟ್ಟು ಜನಾಂಗದವರು ವಾಸಿಸುವ ಅನೇಕ ಕಂದಾಯ ಗ್ರಾಮಗಳು ಗ್ರಾಮಗಳೇ ಎಂದು ಘೋಷಣೆಯಾಗಿರಲಿಲ್ಲ. ಇಲ್ಲಿನ ವಾಸಿಗಳಿಗೆ ಸರ್ಕಾರದ ಅನೇಕ ಸೌಲಭ್ಯಗಳು ಸೇರಿದಂತೆ ಅನೇಕ ಅನುಕೂಲಗಳು ನಿಮಗೆ ಈಗ ದೊರೆಯುತ್ತವೆ ಎಂದು ಲೋಕಸಭೆಯ ವಿರೋಧಪಕ್ಷದ ನಾಯಕ ರಾಹುಲ್ ಗಾಂಧಿ ತಿಳಿಸಿದರು.
ಈ ವಿಚಾರಗಳನ್ನು ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಅವರು ಸೇರಿದಂತೆ ಅನೇಕ ನಾಯಕರ ಬಳಿ ಚರ್ಚೆ ಮಾಡಿದೆ. ಈಗ ನಾನು ಆಲೋಚನೆ ಮಾಡಿದ ಯೋಜನೆ ಜಾರಿಗೆ ಬಂದಿದೆ. ಈ ದೇಶದ ಜನಸಾಮಾನ್ಯರ ಹೆಸರಿನಲ್ಲಿ ಭೂಮಿಯ ಮಾಲಿಕತ್ವ ಬರುತಿದೆ. ಇದು ನಮ್ಮ ಆರನೇ ಭೂ ಗ್ಯಾರಂಟಿ. ಇನ್ನೂ 500 ನೂತನ ಕಂದಾಯ ಗ್ರಾಮಗಳನ್ನು ಘೋಷಣೆ ಮಾಡುವುದು ನಮ್ಮ ಸಂಕಲ್ಪ. ಕರ್ನಾಟಕದಲ್ಲಿ ಯಾರೂ ಸಹ ಭೂಮಿಯ ಮಾಲಿಕತ್ವ ಇಲ್ಲದೇ ಇರಬಾರದು ಎಂಬುದು ನಮ್ಮ ಆಶಯ. ಪ್ರತಿ ಊರಿನಲ್ಲಿ ಇರುವ ಗ್ಯಾರಂಟಿ ಸಮಿತಿಗಳು ಇಂತಹ ಭೂ ಮಾಲಿಕತ್ವ ಇಲ್ಲದ ಕುಟುಂಬಗಳಿಗೆ ಅವರ ಹಕ್ಕನ್ನು ಕೊಡಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.
ಭೂ ಒಡೆತನದಲ್ಲಿ ಕರ್ನಾಟಕ ಇಡೀ ದೇಶದಲ್ಲಿ ಮೊಟ್ಟ ಮೊದಲ ರಾಜ್ಯವಾಗಿ ನಿಲ್ಲಲಿದೆ. ಯಾರಿಗೆ ಜಮಿನೀನ ಹಕ್ಕು ಇಲ್ಲವೋ ಅದನ್ನು ನೀಡುವುದು ನಮ್ಮ ಗುರಿ. ಈ ಮೂಲಕ ಆರನೇ ಗ್ಯಾರಂಟಿ ನೀಡುತ್ತಿದ್ದೇವೆ. ಇದು ಕರ್ನಾಟಕದ ಉತ್ತಮ ಭವಿಷ್ಯಕ್ಕೆ ನಾಂದಿ ಹಾಡಲಿದೆ.
ಈ ದೇಶದ ಕೆಲವೇ ಕುಟುಂಬಗಳಿಗೆ ಮಾತ್ರ ನಿಮ್ಮ ತೆರಿಗೆ ಹಣ, ದೇಶದ ಸಂಪತ್ತು ಹೋಗಬೇಕು ಎನ್ನುವುದು ಬಿಜೆಪಿಯ ಧೋರಣೆ. ಆದರೆ ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ, ಪಂಗಡ, ಆದಿವಾಸಿ ಹೀಗೆ ಎಲ್ಲಾ ವರ್ಗದ ಬಡವರ ಜೇಬಿಗೆ ನೇರವಾಗಿ ಹಣ ಹೋಗುತ್ತಿದೆ. ನಿಮಗೆ ನೀಡಿದ ಹಣ ನೇರವಾಗಿ ಮಾರುಕಟ್ಟೆಗೆ ಹೋಗುತ್ತದೆ, ಮರಳಿ ಸರ್ಕಾರಕ್ಕೆ ಬರುತ್ತದೆ. ಹಳ್ಳಿ, ಹಳ್ಳಿಗಳಲ್ಲಿ ಹಣದ ಚಲಾವಣೆ ನಡೆಯುತ್ತದೆ. ಇದು ಕರ್ನಾಟಕದ ಆರ್ಥಿಕತೆಯ ಸಬಲತೆಗೆ ಪುಷ್ಟಿ ನೀಡುತ್ತದೆ ಎಂದು ರಾಹುಲ್ ಗಾಂಧಿ ತಿಳಿಸಿದರು.
ಬಿಜೆಪಿ ಒಂದೆರಡು ಜನರಿಗೆ ಲಾಭ ಮಾಡಿ ನೀಡುವ ಹಣ ಈ ದೇಶದ ಒಳಗೆ ಖರ್ಚಾಗುವುದಿಲ್ಲ. ಬದಲಾಗಿ ಲಂಡನ್, ನ್ಯೂಯಾರ್ಕ್ ಹೀಗೆ ಬೇರೆ, ಬೇರೆ ದೇಶಗಳಲ್ಲಿ ಖರ್ಚು ಮಾಡಿ ಅಲ್ಲಿ ಆಸ್ತಿ ಖರೀದಿ ಮಾಡುತ್ತಾರೆ. ನಮ್ಮ ಕಾಂಗ್ರೆಸ್ ಯೋಜನೆಗಳಿಂದ ಉದ್ಯೋಗ ಸೃಷ್ಟಿಯಾಗುತ್ತದೆ. ಅವರಿಂದ ಉದ್ಯೋಗಗಳು ಮಾಯವಾಗುತ್ತವೆ. ಏನಾದರೂ ಆರ್ಥಿಕವಾಗಿ ಸಂಕಷ್ಟ ಎದುರಾದರೆ ಬಿಜೆಪಿ ಮಾಡೆಲ್ ಇಂದ ನಷ್ಟವೇ ಹೆಚ್ಚು. ನಮ್ಮ ಗ್ಯಾರಂಟಿ ಮಾಡೆಲ್ ನಿಂದ ನಿಮ್ಮ ಜೇಬಿನಲ್ಲಿ ಇರುವ ಹಣದಿಂದ ನೀವು ಜೀವನ ಸಾಗಿಸಬಹುದು. ನಿಮ್ಮ ಸಂಕಷ್ಟ ಕಾಲದಲ್ಲಿ ನಾವು ನಿಮಗೆ ಹಣ ನೀಡುತ್ತೇವೆ. ಅವರ ಮಾಡೆಲ್ ಅಲ್ಲಿ ಲಕ್ಷಾಂತರ ರೂಪಾಯಿ ಫೀ ಭರ್ತಿ ಮಾಡಿ ಖಾಸಗಿ ವಿಶ್ವವಿದ್ಯಾಲಯ, ಶಾಲೆಗಳಲ್ಲಿ ಓದಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ.
ನಾವು ಚುನಾವಣೆ ಸಮಯದಲ್ಲಿ ಐದು ಗ್ಯಾರಂಟಿಗಳನ್ನು ನಿಮಗಾಗಿ ನೀಡುತ್ತೇವೆ ಎಂದು ಭರವಸೆ ನೀಡಿದ್ದೆವು. ಆಗ ಪ್ರಧಾನಮಂತ್ರಿಗಳೂ ಸೇರಿದಂತೆ ಬಿಜೆಪಿಯವರು ಈ ಭರವಸೆಗಳನ್ನು ಕಾಂಗ್ರೆಸ್ ಎಂದಿಗೂ ಈಡೇರಿಸಲು ಸಾಧ್ಯವಿಲ್ಲ ಎನ್ನುವ ಮಾತುಗಳನ್ನಾಡಿದ್ದರು. ಆದರೆ ನಾವು ಇಂದು ಕರ್ನಾಟಕದ ಬಡ ಜನರ ಕುಟುಂಬಗಳ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಹಾಕುತ್ತಿದ್ದೇವೆ. ಸಾವಿರಾರು ಕೋಟಿ ಹಣ ನಿಮ್ಮ ಕೈ ಸೇರುತ್ತಿದೆ.
ಮೊದಲ ಭರವಸೆಯಾಗಿ ಒಂದು ಕೋಟಿಗೂ ಹೆಚ್ಚು ಮಹಿಳೆಯರಿಗೆ ತಿಂಗಳಿಗೆ 2 ಸಾವಿರ ನೀಡುವ ಗೃಹಲಕ್ಷ್ಮೀ ಯೋಜನೆ ಜಾರಿಗೆ ತಂದೆವು. ಕರ್ನಾಟಕದ ಮಹಿಳೆಯರ ಖಾತೆಗೆ ನಮ್ಮ ಸರ್ಕಾರ ನೇರವಾಗಿ ಹಣ ನೀಡುತ್ತಿದೆ. ಗೃಹಜ್ಯೋತಿ, ಶಕ್ತಿ ಯೋಜನೆ ಮೂಲಕ 3.5 ಕೋಟಿಯಷ್ಟಿರುವ ಮಹಿಳೆಯರು 500 ಕೋಟಿ ಟ್ರಿಪ್ ಪ್ರಯಾಣ ಮಾಡಿದ್ದಾರೆ. ಅನ್ನಭಾಗ್ಯದ ಮೂಲಕ 4 ಕೋಟಿಗೂ ಹೆಚ್ಚು ಜನರು 10 ಕೆಜಿ ಅಕ್ಕಿ ಪಡೆಯುತ್ತಿದ್ದಾರೆ. ಯುವನಿಧಿ ಹೀಗೆ ಸರ್ಕಾರ ಕೊಟ್ಟ ಮಾತಿನಂತೆ ಎಲ್ಲಾ ಗ್ಯಾರಂಟಿಗಳನ್ನು ಜಾರಿಗೆ ತರಲಾಗಿದೆ ಎಂದು ತಿಳಿಸಿದರು.
ಎಲ್ಲಾ ಗ್ಯಾರಂಟಿಗಳನ್ನು ಈಡೇರಿಸಿದ ಕಾಂಗ್ರೇಸ್ ಸರ್ಕಾರಕ್ಕೆ ಅಭಿನಂದನೆಗಳು – ಎ.ಐ.ಸಿ.ಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ
ಎರಡು ವರ್ಷದ ಆಡಳಿತ ಅವಧಿಯಲ್ಲಿ ಚುನಾವಣೆಗೆ ಮೊದಲು ಕೊಟ್ಟಂತಹ ಎಲ್ಲಾ ಗ್ಯಾರಂಟಿಗಳನ್ನು ಈಡೇರಿಸಿ ರಾಜ್ಯದ ಅಭಿವೃದ್ಧಿ ಮಾಡುತ್ತಿರುವ ನಮ್ಮ ಕಾಂಗ್ರೆಸ್ ಸರ್ಕಾರಕ್ಕೆ ಕೋಟಿ ಅಭಿನಂದನೆಗಳು. ಗ್ಯಾರಂಟಿಗಳನ್ನು ನೀಡಬೇಕು ಜೊತೆಗೆ ರಾಜ್ಯದ ಅಭಿವೃದ್ಧಿಯನ್ನೂ ಮಾಡಬೇಕು. ಇದು ನಮ್ಮ ಕಾಂಗ್ರೆಸ್ ಸರ್ಕಾರದ ಮುಂದಿದ್ದ ಸವಾಲು. ಇದನ್ನು ಯಶಸ್ವಿಯಾಗಿ ಕಾಂಗ್ರೆಸ್ ಸರ್ಕಾರ ನೆರವೇರಿಸಿದೆ ಎಂದು ಎ.ಐ.ಸಿ.ಸಿ ಅಧ್ಯಕ್ಷರು ಹಾಗೂ ರಾಜ್ಯಸಭೆಯ ವಿರೋಧಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.
ದೇಶದ ಪ್ರಧಾನಿಗಳು ಸಹ 20 ಗ್ಯಾರಂಟಿಗಳನ್ನು ನೀಡುತ್ತೇವೆ ಎಂದು ಹೇಳಿದರು. ಅವರು ಎಂತಹ ಗ್ಯಾರಂಟಿಗಳನ್ನು ನೀಡಿದ್ದಾರೆ ಎಂಬುದು ನಮಗೆಲ್ಲಾ ತಿಳಿದಿದೆ. ವಿದೇಶದಲ್ಲಿ ಇರುವ ಕಪ್ಪು ಹಣ ತರುತ್ತೇವೆ ಎಂದರು ಅದನ್ನು ತಂದರೇ? ಯವ ಜನರಿಗೆ ನೌಕರಿ ಕೊಡುತ್ತೇವೆ ಎಂದರು ಇದು ಸಾಧ್ಯವಾಯಿತೇ? ನೋಟ್ ಬ್ಯಾನ್ ಮಾಡಿ ಬಡವರ ಸಂಸಾರಗಳನ್ನು ಹಾಳು ಮಾಡಿದರು. ಆದರೆ ನಾವು ಮಾತು ಕೊಟ್ಟ ಎಲ್ಲಾ ಭರವಸೆಗಳನ್ನು ಈಡೇರಿಸಿದ್ದೇವೆ.
ಕೇಂದ್ರ ಸರ್ಕಾರ ಭದ್ರತೆ ನೀಡದೇ ಇರುವ ಕಾರಣಕ್ಕೆ ಪೆಹಲ್ಗಾಮ್ ನಲ್ಲಿ ಭಾರತದ 26 ಅಮಾಯಕ ನಾಗರೀಕರ ಹತ್ಯೆಯಾಯಿತು. ಪ್ರವಾಸಿಗರಿಗೆ ಪೆÇಲೀಸ್, ಗಡಿ ಭದ್ರತಾ ಪಡೆಯ ರಕ್ಷಣೆ ನೀಡದೆ ಜೀವ ತೆಗೆದಿದ್ದು ಕೇಂದ್ರ ಸರ್ಕಾರ. ಆದರೂ ದೇಶದ ಪ್ರಧಾನಿಗಳು ಇದರ ಬಗ್ಗೆ ಒಂದು ಮಾತು ಆಡಲಿಲ್ಲ. ಕೇವಲ ತಮಗೆ ತೋಚಿದ್ದನ್ನು ಹೇಳಿಕೊಂಡು ಹೋದರು. ನಾನು ಕೇಳಿದ ಒಂದೇ ಒಂದು ಪ್ರಶ್ನೆಗೆ ಇದುವರೆಗೂ ಉತ್ತರ ನೀಡಿಲ್ಲ ಎಂದು ತಿಳಿಸಿದರು.
ಏಪ್ರಿಲ್ 17 ರಂದು ಕಾಶ್ಮೀರಕ್ಕೆ ಪ್ರಧಾನ ಮಂತ್ರಿಗಳು ಹೋಗಬೇಕಿತ್ತು. ಆದರೆ ಅಲ್ಲಿನ ಗುಪ್ತಚರ ಇಲಾಖೆ ನೀವು ಬರುವ ಸಮಯದಲ್ಲಿ ಇಲ್ಲಿ ಗಲಾಟೆಯಾಗುತ್ತದೆ ಎಂದು ತಿಳಿಸಿದರು. ಈ ಕಾರಣಕ್ಕೆ ಅವರು ಅಲ್ಲಿಗೆ ಹೋಗುವುದನ್ನು ರದ್ದು ಮಾಡಿದರು. ಇದೇ ಮಾತನ್ನು ನೀವು ಏಕೆ ಪ್ರವಾಸಿಗರಿಗೆ ಹೇಳಲಿಲ್ಲ. ಇದಕ್ಕೆ ಪ್ರಧಾನಿಗಳು ಉತ್ತರ ನೀಡಬೇಕು. ಅಂದು ಎಚ್ಚರಿಕೆ ನೀಡಿದ್ದರೆ ಜನರು ಸಾಯುತ್ತಿರಲಿಲ್ಲ. ಗಡಿಯಲ್ಲಿ ಘರ್ಷಣೆ ಉಂಟಾಗುತ್ತಿರಲಿಲ್ಲ.
ಈ ಪಾಕಿಸ್ತಾನದ ಕೆಲಸ ಸದಾ ಭಾರತದ ಮೇಲೆ ಗೂಬೆ ಕೂರಿಸುವುದೇ ಆಗಿದೆ. ಅವರಿಗೆ ಶಕ್ತಿಯಿಲ್ಲ ಎಂದರೂ ಚೀನಾದವರಿಂದ ಬೆಂಬಲ ಪಡೆದು ನಮ್ಮ ಮೇಲೆ ದಾಳಿ ಮಾಡಿ ಪ್ರಚೋದನೆ ನೀಡುತ್ತಿದ್ದಾರೆ. ಇದನ್ನು ಎಂದಿಗೂ ಸಹ ನಮ್ಮ ದೇಶ ಸಹಿಸುವುದಿಲ್ಲ. ನಾವು ಒಗ್ಗಟ್ಟಿನಿಂದ ಇದ್ದೇವೆ.
ಇಂತಹ ಹೊತ್ತಿನಲ್ಲಿ ದೇಶ ಮುಖ್ಯವಾಗಬೇಕಿತ್ತು ಆದರೆ ಪ್ರಧಾನ ಮಂತ್ರಿಗಳು ಮುಖ್ಯವಾಗಿದ್ದಾರೆ. ದೇಶಕ್ಕಾಗಿ ಹೋರಾಡುವ ಗುತ್ತಿಗೆಯನ್ನು ಬಿಜೆಪಿಯವರು ಮಾತ್ರ ತೆಗೆದುಕೊಂಡಿಲ್ಲ. ನಾವು ಸಹ ದೇಶಕ್ಕಾಗಿ ಹೋರಾಟ ಮಾಡಿದವರೇ. ಮಹಾತ್ಮ ಗಾಂಧಿ, ಇಂದಿರಾಗಾಂಧಿ, ರಾಜೀವ್ ಗಾಂಧಿ ಅವರು ಈ ದೇಶಕ್ಕಾಗಿ ಪ್ರಾಣ ಕೊಟ್ಟಿದ್ದಾರೆ. ಇಂತಹ ದೊಡ್ಡ ಇತಿಹಾಸ ಕಾಂಗ್ರೆಸ್ ಪಕ್ಷಕ್ಕಿದೆ. ಇಂತಹ ಪಕ್ಷದ ಮೇಲೆ ನೀವು ಯಾವುದೇ ಕಾರಣಕ್ಕೂ ಗೂಬೆ ಕೂರಿಸಲು ಸಾಧ್ಯವಿಲ್ಲ.
ಕಾಂಗ್ರೇಸಿಗರ ಮೇಲೆ ಇಡಿ ಅಧಿಕಾರಿಗಳನ್ನು ಛೂ ಬಿಟ್ಟಿದ್ದೀರಿ, ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಮೇಲೆ ದಾಳಿ ಮಾಡಿಸಿದ್ದೀರಿ. ನಮ್ಮ ಮೇಲೆ ದಾಳಿ ಮಾಡಿಸಿ ಮಣಿಸಬೇಕು ಎನ್ನುವ ಉದ್ದೇಶ ಬಿಜೆಪಿಯವರಿಗೆ ಇದ್ದರೆ ಅದು ಅವರ ಹುಂಬತನ. ಕಾಂಗ್ರೆಸ್ ಪಕ್ಷ ಎಂದಿಗೂ ಯಾರಿಗೂ ಮಣಿಯುವುದಿಲ್ಲ, ಬಗ್ಗುವುದಿಲ್ಲ. ಕಾಂಗ್ರೆಸ್ ಪಕ್ಷದ ಜೊತೆ ಚರ್ಚೆ ನಡೆಸದೇ ನಮ್ಮ ದೇಶದ ನಿಯೋಗವನ್ನು ಭಯೋತ್ಪಾದಕ ದಾಳಿಯ ಬಗ್ಗೆ ಒಂದಷ್ಟು ದೇಶಗಳಿಗೆ ತಿಳಿಸಲು ಕಳುಹಿಸುತ್ತಿದ್ದಾರೆ. ನಮಗೆ ದೇಶ ಮುಖ್ಯ. ಈ ದೇಶಕ್ಕೆ ಸಂವಿಧಾನ ನೀಡಿದ ಪಕ್ಷ ನಮ್ಮದು.
ಬಿಜೆಪಿಯದ್ದು ಬರೀ ಸುಳ್ಳು ಹೇಳುವುದೇ ಕೆಲಸ. ನಾವು ದೇಶದ ಬಗ್ಗೆ ಮಾತನಾಡೋಕೆ ಸಭೆ ಸೇರಿದರೆ ಅವರು ಬಿಹಾರದಲ್ಲಿ ಚುನಾವಣೆ ಭಾಷಣ ಮಾಡಿಕೊಂಡು ಓಡಾಡುತ್ತಿದ್ದರು. ಎರಡು ಸಲ ಸರ್ವ ಪಕ್ಷ ಸಭೆ ಕರೆದರೂ ಪ್ರಧಾನ ಮಂತ್ರಿಗಳು ಬರಲಿಲ್ಲ. ಅವರಿಗೆ ದೇಶಪ್ರೇಮ ಇದ್ದಿದ್ದರೆ ಏಕೆ ಸರ್ವ ಪಕ್ಷ ಸಭೆಗೆ ಬರಲಿಲ್ಲ. ನಾವುಗಳು ಏನಾದರೂ ಒಂದೇ ಒಂದು ಸಭೆಗೆ ಬರದೇ ಇದ್ದರೆ ದೇಶದ್ರೋಹಿಗಳು ಎಂದು ಹಣೆಪಟ್ಟಿ ಕಟ್ಟುತ್ತಾರೆ.
ಕೇವಲ ಭಾಷಣ ಮಾಡುವವರಿಂದ, ಬೊಗಳೆ ಮಾತುಗಳಿಂದ ದೇಶ ಉದ್ದಾರವಾಗುವುದಿಲ್ಲ. ಸೊಫಿಯಾ ಖುರೇಶಿ ಎನ್ನುವ ಮಿಲಿಟರಿಯ ವಕ್ತಾರೆ ಮಾತನಾಡಿದ ಮೇಲೆ ಬಿಜೆಪಿಯ ಶಾಸಕನೊಬ್ಬ ಆಕೆಗೆ ಪಾಕಿಸ್ತಾನದ ನಂಟಿದೆ ಎಂದು ಹೇಳುತ್ತಾನೆ. ಇಂತಹ ಜನರಿಗೆ ಯಾವ ಶಿಕ್ಷೆ ನೀಡಬೇಕು ಎಂಬುದನ್ನು ಜನರೇ ಹೇಳಬೇಕು. ಸೈನ್ಯದ ವಿರುದ್ಧ ಮಾತನಾಡಿದ ಆತನನ್ನು ಪಕ್ಷದಿಂದ ಕಿತ್ತು ಹಾಕಿ. ಏಕೆ ಇನ್ನೂ ಇಟ್ಟುಕೊಂಡು ಕುಳಿತಿದ್ದೀರಿ? ಬಿಜೆಪಿಯಲ್ಲಿ ಇರುವ ದೇಶದ್ರೋಹಿಗಳನ್ನು ಮೊದಲು ಪಕ್ಷದಿಂದ ತೆಗೆದುಹಾಕಿ. ಆಕೆಯ ಹೆಸರು ಖುರೇಶಿ ಎಂದು ಇರುವ ಕಾರಣಕ್ಕೆ ಸೈನ್ಯದಲ್ಲಿ ಇರುವವರಿಗೆ ಹೀಯಾಳಿಸುವಿರಾ ಎಂದರು.
ಜಾತಿಗಣತಿ ಬಗ್ಗೆ ರಾಹುಲ್ ಗಾಂಧಿ ಅವರು ಮೊದಲು ಮಾತನಾಡಿದಾಗ ಟೀಕೆ ಮಾಡಿದರು. ಆದರೆ ಈಗ ಅವರೇ ಜಾತಿ ಗಣತಿ ಪರವಾಗಿದ್ದಾರೆ. ರಾಹುಲ್ ಗಾಂಧಿ ಅವರ ಮಾತಿಗೆ ಮಣಿದ ಪ್ರಧಾನ ಮಂತ್ರಿಗಳು ಕ್ಯಾಬಿನೆಟ್ ಸಭೆ ಮಾಡಿ ಜಾತಿ ಗಣತಿಗೆ ಒಪ್ಪಿಗೆ ನೀಡಿದ್ದಾರೆ.
ರಾಜ್ಯದಲ್ಲಿ ಜಾತಿಗಣತಿ ಅನುಷ್ಟಾನ ಅಚ್ಚುಕಟ್ಟಾಗಿ ನಡೆಯಬೇಕು. ಜಾತಿ ಗಣತಿ ಅನುಷ್ಟಾನದಿಂದ ಯಾವುದೇ ಕಾರಣಕ್ಕೂ ರಾಹುಲ್ ಗಾಂಧಿ ಅವರಿಗೆ ಕೆಟ್ಟ ಹೆಸರು ಬರುವಂತೆ ಕೆಲಸ ಮಾಡಬಾರದು. ಒಳಮೀಸಲಾತಿಯ ವಿರೋಧಿ ನಾನು ಎಂದಿಗೂ ಅಲ್ಲ. ಆದರೆ ಬೇಡ ಜಂಗಮಜಾತಿಗೆ ಏಕೆ ಒಳ ಮೀಸಲಾತಿ ಪಟ್ಟಿಯಲ್ಲಿ ಸ್ಥಾನ ನೀಡಲಾಗಿದೆ. ಬಡ ಲಿಂಗಾಯತರಿಗೆ ಸರ್ಕಾರ ಅನುಕೂಲ ಮಾಡಿಕೊಡಲಿ. ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಕೇವಲ 500 ಜನ ಇದ್ದ ಜನಸಂಖ್ಯೆ ಹೇಗೆ 4 ರಿಂದ 5 ಲಕ್ಷಕ್ಕೆ ಏರಿಕೆಯಾಗಿದೆ. ಅವರನ್ನು ಏಕೆ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ಸೇರಿಸಲಾಗಿದೆ. ಪರಿಶಿಷ್ಟರಿಗೆ ಸಹಾಯ ಮಾಡಬೇಕು ಎಂಬುದು ನಿಮ್ಮ ಉದ್ದೇಶವೋ ಅಥವಾ ಅವಕಾಶಗಳನ್ನು ಕಿತ್ತುಕೊಳ್ಳಬೇಕು ಎಂಬುದೋ? ಬೇಡ ಜಂಗಮ ಎಂದು ಯಾರು ನಕಲಿ ಪತ್ರ ನೀಡುವವರಿಗೆ ಶಿಕ್ಷೆ ನೀಡಬೇಕು. ಈ ಅನ್ಯಾಯ ತಡೆಯಬೇಕು ಎಂದು ಸರ್ಕಾರದ ಬಳಿ ಕೈ ಮುಗಿದು ಕೇಳುತ್ತೇನೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಸದರಾದ ರಣದೀಪ್ ಸಿಂಗ್ ಸುರ್ಜೇವಾಲಾ, ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಪ್ರವಾಸೋದ್ಯಮ ಸಚಿವರಾದ ಹೆಚ್.ಕೆ.ಪಾಟೀಲ್, ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ, ವಸತಿ ಮತ್ತು ವಕ್ಫ್ ಸಚಿವರು ಹಾಗೂ ವಿಜಯನಗರ ಜಿಲ್ಲೆಯ ಉಸ್ತುವಾರಿ ಸಚಿವರಾದ ಬಿ.ಝಡ್. ಜಮೀರ್ ಅಹಮದ್ ಖಾನ್, ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವರಾದ ಬಿ.ಎಸ್.ಸುರೇಶ್, ಪೌರಾಡಳಿತ ಮತ್ತು ಹಜ್ ಸಚಿವರಾದ ರಹೀಂ ಖಾನ್, ಕರ್ನಾಟಕ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾದ ಆರ್.ವಿ.ದೇಶಪಾಂಡೆ, ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಡಾ.ಶಾಲಿನಿ ರಜನೀಶ್, ಸರ್ಕಾರದ ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್ ಸೇರಿದಂತೆ ಸರ್ಕಾರದ ಸಚಿವರು, ವಿಧಾನಪರಿಷತ್ ಸದಸ್ಯರು, ಶಾಸಕರು, ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
