ನಾಗೇಶ್ ಕೆ.ಎನ್.
ತುಮಕೂರಿನ ಟೌನ್ ಹಾಲ್ ಸರ್ಕಲ್ ಮೂಲೆಯಲ್ಲಿ ನೈಟ್ ಹೋಟೆಲ್ ನಡೆಸುತ್ತಿದ್ದ ದಾಸೋಹಿ ಕುಮಾರ್ ತೀರಿಹೋಗಿದ್ದಾರೆಂಬ ಸುದ್ಧಿ ಕೇಳಿದೆ. ಅದೆಷ್ಟು ಕಾಲ ಅರ್ಧ ರಾತ್ರಿಯಲ್ಲಿ ಎಳ್ಳೀಕಾಯಿ ಚಿತ್ರನ್ನ (ನಮಗೆ ಗೊಜ್ಜು ಬೇರೆ ಹೆಚ್ಚಿಗೆ ಹಾಕಿ ಶಾಖವಾಗಿ ಮತ್ತೊಂದು ಸಾರಿ ಕಲಿಸಿ ಕೊಡ್ತಿದ್ದ ಕುಮಾರಣ್ಣ) ಬಿಸಿ ಬಿಸಿ ಇಡ್ಲಿ ಮಾಡಿ ಕೊಡುತ್ತಿದ್ದರು.
ಕುಮಾರು.. ಅಂದ್ರೆ ಅಣ್ಣಾ ಬಾ… ಏನ್ ಕೊಡ್ಲಿ, ಜಗಣ್ಣ ಎಲ್ಲಿ ಎಂಬುದು ಆರಂಭಿಕ ಮಾತು. ಈ ಜಗಣ್ಣ ನೆಂಬ ಜಗದೀಶ ತನ್ನ ಜೀವನ ಅರ್ಧ ಭಾಗ ಟೌನ್ ಹಾಲ್ ಸರ್ಕಲ್ ನಲ್ಲಿಯೇ ಕಳೆದ ಕಾರಣ ಅಲ್ಲಿ ಎಲ್ಲರಿಗೂ ಚಿರಪರಿಚಿತ. ಇವನಿಂದಲೇ ನನಗೂ ಕುಮಾರ್ ಪರಿಚಯ.
ನಾನೊಮ್ಮೆ ಕುಮಾರೂ… ಇಷ್ಟು ರಷ್ ಇರುತ್ತಲ್ಲಾ., ಎಲ್ಲರೂ ಸರಿಯಾಗಿ ದುಡ್ ಕೊಡ್ತಾರಾ ಅಂದೆ. ಅಯ್ಯಾ ಹೊಟ್ತುಂಬಾ ತಿಂದು ಹೋಗ್ಲಿ ಬಿಡು ಇವತ್ತಲ್ದೆ ಇದ್ರೆ ಇನ್ನೊಂದ್ಸತ್ತಿ ಬಂದಾಗ ಕೊಡ್ತಾರೆ ಎಂದು ಹೇಳುತ್ತಲೇ ಬಿರಿ ಬಿರಿ ಪಾರ್ಸಲ್ ಕಟ್ಟುವ ಕೆಲಸವನ್ನೂ ಮಾಡುತ್ತಿದ್ದರು ಕುಮಾರ್.
ನಾನು, ಉಗಮ, ದೇವರಾಜ್, ಜಗದೀಶ, ಹಾಲ್ಕುರಿಕೆ ಶಿವಶಂಕರ ಹೀಗೆ ಹತ್ತಾರು ಮಂದಿ ತಡರಾತ್ರಿಯವರೆಗೆ ನಮ್ಮ ಗುಂಡ್ ಪಾರ್ಟಿಗಳನ್ನು ಮುಗಿಸಿದ ಮೇಲೆ ಹೊಟ್ಟೆಹೊರಿಯಾಕೆ ಈ ಕುಮಾರ್ ನೈಟ್ ಹೋಟ್ಲು ನಮಗೆ ಅನ್ನಪೂರ್ಣೇಶ್ವರಿಯಂತಿತ್ತು.
ಇತ್ತಿಚೆಗೆ ಅಂದರೆ ಕಳೆದ ಹದಿನೈದು ವರ್ಷಗಳಿಂದ ಅಲ್ಲಿಗೆ ಹೋಗಿರಲಿಲ್ಲ. ಆದರೂ ಆ ರಸ್ತೆಯಲ್ಲಿ ಅಡ್ಡಾಡುವಾಗ ಕುಮಾರಣ್ಣನ ಹೋಟೆಲ್ ಕಡೆ ತಿರುಗಿ ನೋಡಿ ಅವರನ್ನು ನೆನಪಿಸಿಕೊಂಡು ಹೋಗುವುದು ಅಪ್ರಜ್ಞಾಪೂರ್ವಕವಾಗಿ ನಡೆಯುತ್ತಲೇ ಇರುತ್ತದೆ.
ಹೋಗಿ ಬನ್ನಿ ಕುಮಾರ್. ನಿಮ್ಮ ಹೋಟೆಲು ನಮಗೆ ಕೇವಲ ಆಹಾರ ಮಾರುವ ಮಳಿಗೆಯಂತಿರಲಿಲ್ಲ. ನಮಗೆ ಅದೊಂದು ದಾಸೋಹ ಕೇಂದ್ರವಾಗಿತ್ತು…