ನಾಗೇಶ್ ಕೆ.ಎನ್.
ಪ್ರೊ ಎಂಡಿಎನ್ ಅವರು ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ಸಿಗಬೇಕು ಎಂಬ ಹಕ್ಕೋತ್ತಾಯವನ್ನು ತಮ್ಮ ಜೀವಮಾನದುದ್ದಕ್ಕೂ ಪ್ರತಿಪಾದಿಸಿದವರು. ಅದಕ್ಕಾಗಿ ಅವರು ಗ್ರಾಮ ಮಟ್ಟದಿಂದ ವಿಶ್ವವಾಣಿಜ್ಯ ಒಪ್ಪಂದದ ವರೆಗೆ ಹಲವು ಬಗೆಯ ಹೋರಾಟಗಳನ್ನು ರೂಪಿಸಿದರು. ಗುರಿ ಸ್ಪಷ್ಟವಾಗಿದ್ದಾಗ ಆ ಗುರಿ ತಲುಪಲು ಅನೇಕ ಹೊಸ ಮಾರ್ಗಗಗಳೂ ಹೊಳೆಯುತ್ತವೆ. ಹಾಗೆ ಹೊಳೆದ ಅನೇಕ ಮಾರ್ಗಗಗಳಲ್ಲಿ ರೈತರು ಬೆಳೆದ ಬೆಳೆಯನ್ನು ನೇರ ಗ್ರಾಹಕರಿಗೆ ಮಾರಾಟ ಮಾಡುವುದೂ ಒಂದು. ಅದಕ್ಕವರು “ನಮ್ದು” ಎಂದು ಹೆಸರಿಟ್ಟಿದ್ದರು. ನಮ್ದು ಬಗೆಗೆ ದೀರ್ಘವಾಗಿ ಇನ್ನೊಮ್ಮೆ ಬರೆಯುವೆ.
ಇದೀಗ ಎಂಡಿಎನ್ ಅವರ ಸುಪುತ್ರಿ ರೈತ ಹೋರಾಟಗಾರರಾದ ಚುಕ್ಕಿ ನಂಜುಂಡಸ್ವಾಮಿ ರಾಜ್ಯದಾದ್ಯಂತ ರೈತರನ್ನು ಸಂಘಟಿಸಿ “ನೇರ ಮಾರಾಟ-ನಮ್ಮ ಹೋರಾಟ”, “ನಮ್ಮ ಬೆಳೆ-ನಮ್ಮ ಬೆಲೆ” ಶೀರ್ಷಿಕೆಯಡಿ ರೈತ ಸಂತೆ ಮಾಡುತ್ತಿದ್ದಾರೆ. ಪ್ರತಿ ಹದಿನೈದು ದಿನಕ್ಕೊಮ್ಮೆ ಎರಡು ದಿನಗಳ ಕಾಲ ರಾಜರಾಜೇಶ್ವರಿ ನಗರದ ಮುನಿವೆಂಕಟಯ್ಯ ಮೆಮೋರಿಯಲ್ ಓಪನ್ ಏರ್ ಥೀಯೇಟರ್ ನಲ್ಲಿ ರೈತರ ಸಂತೆ ಸಂಘಟಿಸುತ್ತಿದ್ದಾರೆ. ಇಂದು ಮತ್ತು ನಾಳೆ (೨೪,೨೫ ಮೇ )ನಾಡೆಯುತ್ತಿರುವ ಈ ಸಂತೆ ನಾಲ್ಕನೆಯದು.
ಮೊದಲೆರಡು ಹಾಗೂ ಇಂದಿನ ನಾಲ್ಕನೆಯ ಸಂತೆಗೆ ಹೋಗಿದ್ದೆ. ಮೂರನೆಯ ಸಂತೆಗೆ ಪ್ರವಾಸದಲ್ಲಿದ್ದ ಕಾರಣ ಹೋಗಲಾಗಲಿಲ್ಲ. ಅದಿರಲಿ. ಈ ಮೂರೂ ಸಂತೆಗಳಲ್ಲಿ ಅಡ್ಡಾಡುವಾಗ ಕೇಳಿಸಿಕೊಂಡ ಕೆಲವು ಮಾತುಗಳನ್ನು ಹಂಚಿಕೊಳ್ಳಬೇಕು. ಎರಡನೆಯ ಸಂತೆಗೆ ದೂರದ ಕಾಕ್ಸ್ ಟೌನ್ ನಿಂದ ನಾಲ್ಕೈದು ಮಂದಿ ಬಂದಿದ್ದರು. ಅವರಲ್ಲಿಗೆ ಬಂದಿದ್ದಕ್ಕೆ ಒಂದು ಪರ್ಪಸ್ ಇತ್ತು. ನೇರ ಮಾರಾಟದ ಚಳುವಳಿಗೆ ಬೆಂಬಲವಾಗಿ ಅವರಲ್ಲಿದ್ದರು. ಅಂತೆಯೇ ತರಕಾರಿ ಬೆಲೆ ಕೇಳಿದ ಸ್ಥಳೀಯ ಮಹಿಳೆಯರು ಅಯ್ಯೋ ಇಷ್ಟು ಕಡಿಮೆ ಕೊಡಬೇಡಿ, ಇಲ್ಲಿ ಅಂಗಡಿಗಳಲ್ಲಿ ಏನು ಬೆಲೆ ಇದೆ ತಿಳ್ಕೊಂಡು ಒಂದೆರಡು ರೂಪಾಯಿ ಅಥವ ಐದಾರು ರೂಪಾಯಿ ಕಡಿಮೆ ಕೊಡಿ ಎಂದು ರೈತರಿಗೆ ಹೇಳುತ್ತಿದ್ದದ್ದು ಕಂಡೆ.
ಇಂದು ಹುರುಳಿಕಾಯಿ ಮಾರುತ್ತಿದ್ದ ರೈತರ ಬಳಿ ಹೋದೆ. ಅಣ್ಣ ಒಂದರ್ಧ ಕೆಜಿ ಹಾಕು ಎಂದೆ. ರೂಢಿಯಂತೆ ನಾನು ಬೆಲೆ ಕೇಳಲಿಲ್ಲ. ಅವರು ಅರ್ಧ ಕೇ.ಜಿ ಎಂದರೆ ಕೊಂಚ ಹೆಚ್ಚೇ ತೂಗಿ ನಲವತ್ತು ರೂಪಾಯಿ ಪಡೆದರು. ಬೆಂಗಳೂರಿನ ಯಾವುದೇ ಬಡಾವಣೆಯಲ್ಲಿ ಹುರುಳಿಕಾಯಿ ಬೆಲೆ ಇಂದು ನೂರಿಪ್ಪತ್ತು ರೂಪಾಯಿ ಇದೆ. ಅದೂ ಕುಯ್ದು ಐದಾರು ದಿನಗಳ ಮಾಲು. ರೈತರ ಸಂತೆಯಲ್ಲಿ ಕೆಜಿಯೊಂದಕ್ಕೆ ನಲವತ್ತು ರೂಪಾಯಿ ಕಡಿಮೆ ಮತ್ತು ಫ್ರೆಶ್ ಹುರುಳಿಕಾಯಿ. ಎಷ್ಟು ತಂದಿದ್ರಿ ಎಂದು ನಾನು ಕೇಳುವ ಮುನ್ನವೇ ಎರಡು ಚೀಲ ತಂದಿದ್ದೆ ಇಷ್ಟೇ ಉಳಿದಿರೋದು ಎಂದು (ಮದ್ಯಾನ್ಹ ೧೨ ಗಂಟೆಗೆ) ಒಂದೆರಡು ಕೇಜಿಯಷ್ಟು ಉಳಿದಿದ್ದನ್ನು ತೋರಿದರು. ಸಂತೋಷವಾಯಿತು.
ಇತ್ತ ಬಿಜಾಪುರದಿಂದ ಐದು ಮಂದಿ ಮಹಿಳೆಯರು ಖಡಕ್ ರೊಟ್ಟಿ, ಎಳ್ಳೊಬ್ಬಟ್ಟು ಇತ್ಯಾದಿ ತಿನಿಸುಗಳ ಮಳಿಗೆ ಇಟ್ಟುಕೊಂಡಿದ್ದರು. ಅಲ್ಲದೆ ಅಲ್ಲಿಯೇ ಬಿಸಿ ಬಿಸಿ ರೊಟ್ಟಿ ಎಣ್ಣೆಗಾಯಿ, ಚಟ್ನಿಪುಡಿ ಕೂಡಾ ಮಾಡಿ ಬಡಿಸುತ್ತಿದ್ದರು. ಅವರೊಂದಿಗೆ ಮಾತಿಗೆ ಕೂತು ಮದ್ಯಾನ್ಹದ ಊಟ ಅಲ್ಲಿಯೇ ಮುಗಿಸಿದೆ. ಮಾತಿನ ಮಧ್ಯೆ ಅವರ ವ್ಯಾಪಾರದ ಬಗ್ಗೆ ಕೇಳಿದೆ. ವ್ಯಾಪಾರ ಲಾಭವಾಗಿರುವ ಬಗ್ಗೆ ಅವರ ಲವಲವಿಕೆ ಹಾಗೂ ಮಾತುಗಳಲ್ಲೇ ಸ್ಪಷ್ಟವಾಗಿತ್ತು. ಇಲ್ಲಿ ಅಂಕಿ ಅಂಶಗಳು ಅಪ್ರಸ್ತುತ.
ಬಿಜಾಪುರದಿಂದ ಇಲ್ಲಿಗೆ ಬರಲು ಸರ್ಕಾರದ ಗ್ಯಾರಂಟಿ ಸ್ಕೀಂಗಳಲ್ಲಿ ಒಂದಾದ “ಶಕ್ತಿ” ಬಸ್. ಬೆಂಗಳೂರು ಬಸ್ ನಿಲ್ದಾಣದಿಂದ ರಾಜರಾಜೇಶ್ವರಿ ನಗರಕ್ಕೆ ಮತ್ತೆ ಬಿಎಂಟಿಸಿ ಶಕ್ತಿ ಬಸ್. ಉಳಿಯಲು ಚುಕ್ಕಿ ನಂಜುಂಡಸ್ವಾಮಿ ಅವರ ಆಶ್ರಯ. ಅವರ ಊಟ ತಿಂಡಿಗೆ “ರೊಟ್ಟಿ ಬುತ್ತಿ”. ಇನ್ನು ರೊಟ್ಟಿ ಪಲ್ಯ ಮಾರಾಟ ಮಾಡಲು ಬದನೆ, ಬೆಂಡಿ, ಚಟ್ನಿಪುಡಿ, ಜೋಳ ಎಲ್ಲವೂ ಅವರೇ ಬೆಳೆದದ್ದು. ಪ್ರತಿ ಹದಿನೈದು ದಿನಕ್ಕೊಮ್ಮೆ ಕೈತುಂಬಾ.., ಅಲ್ಲದಿದ್ದರೂ ಅವರಿಗೆ ಖುಷಿ ಕೊಡುವಷ್ಟು ಹಣ ಸಂಪಾದನೆ ಆಗುತ್ತಿರುವುದು, ಮತ್ತದಕ್ಕೆ ಒಂದು ಎಕೋಸಿಸ್ಟಮ್ ರೂಪಿಸಿರುವ ಚುಕ್ಕಿ ನಂಜುಂಡಸ್ವಾಮಿ ಮತ್ತವರ ತಂಡ ಅಭಿನಂದನಾರ್ಹರು.
ಅಂದಹಾಗೆ ಈ ಸಂತೆ ನಡೆಯಲು ಉಚಿತವಾಗಿ ಜಾಗ ಕೊಟ್ಟಿರುವ ಸ್ಥಳೀಯ ಮುಖಂಡರಾದ ರಾಜ್ ಕುಮಾರ್ ಅವರಿಗೆ ಇಡೀ ಸಂತೆಯ ಪರವಾಗಿ ಕೃಷಿ ಸಮಯ ಕೃತಜ್ಞತೆ ಸಲ್ಲಿಸುತ್ತದೆ. ನಿಮ್ಮಂಥವರ ಸಂತಾನ ದುಪ್ಪಟ್ಟಾಗಲಿ ಸರ್…
